varthabharthi


ಸಂಪಾದಕೀಯ

ಅತಿವೃಷ್ಟಿ, ಪ್ರವಾಹ: ನಿರ್ಲಕ್ಷ್ಯ ಬೇಡ

ವಾರ್ತಾ ಭಾರತಿ : 12 Sep, 2020

ರಾಜ್ಯದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಹಾಗೂ ಈಗಲೂ ಅಲ್ಲಲ್ಲಿ ಬೀಳುತ್ತಿರುವ ಮಳೆಗೆ ಕೆಲ ಪ್ರದೇಶಗಳು ತತ್ತರಿಸಿ ಹೋಗಿವೆ. 21 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಮತ್ತು ಅತಿವೃಷ್ಟಿ ಪೀಡಿತ ಪ್ರದೇಶಗಳೆಂದು ಕಂದಾಯ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಮಹಾಮಳೆ ಮಾತ್ರವಲ್ಲದೆ, ಮಹಾರಾಷ್ಟ್ರದ ಕೃಷ್ಣಾ ಕಣಿವೆ ಜಲಾಶಯಗಳು ಕೂಡ ತುಂಬಿ ಹರಿದಿವೆ. ಒಟ್ಟಾರೆಯಾಗಿ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಕರ್ನಾಟಕದ 130 ತಾಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮನೆ ಮಾರುಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಲ್ಲಿ ಜೀವ ಹಾನಿಯೂ ಆಗಿದೆ. ಮೂಲ ಸೌಕರ್ಯಗಳಿಗೂ ಅಪಾರ ನಷ್ಟವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಿರೀಕ್ಷೆ ಮೀರಿ ಮಳೆ ಸುರಿದ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಕೈಗೆ ಬರಬೇಕಾದ ಹೆಸರು, ಉದ್ದು, ತೊಗರಿ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿವೆ. ಈ ಭಾಗದಲ್ಲಿ ಮಳೆಯಾಗುವುದೇ ಅಪರೂಪ. ಮಳೆಯಾದರೆ ಈ ರೀತಿಯಲ್ಲಿ ಸಿಕ್ಕಾಪಟ್ಟೆ ಸುರಿದು ಭಾರೀ ನಷ್ಟ ಉಂಟಾಗುತ್ತದೆ. ಹೀಗಾಗಿ ಅನಾವೃಷ್ಟಿ, ಅತಿವೃಷ್ಟಿ ಎರಡೂ ಈ ಭಾಗದ ರೈತಾಪಿ ಜನರನ್ನು ತುಂಬಾ ತೊಂದರೆಗೀಡು ಮಾಡುತ್ತವೆ. ಕಂದಾಯ ಇಲಾಖೆಯೇನೋ ಎಂದಿನಂತೆ ಸಮೀಕ್ಷೆ ನಡೆಸಿ ಅಂಕಿಅಂಶಗಳನ್ನು ಪ್ರಕಟಿಸಿದೆ. ಕೇಂದ್ರದ ತಂಡವೂ ಅಲ್ಲಲ್ಲಿ ಕಾಟಾಚಾರದ ಭೇಟಿ ನೀಡಿ ಹೋಗಿದೆ.ಆದರೆ ಪರಿಹಾರ ಇನ್ನೂ ಕನಸಿನ ಗಂಟಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇನೋ ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿ ಹಾಗೂ ನಷ್ಟದ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡುವುದಕ್ಕಾಗಿ, 3-4 ದಿನಗಳೊಳಗೆ ದಿಲ್ಲಿಗೆ ಹೋಗುವುದಾಗಿ ತಿಳಿಸಿದ್ದಾರೆ.

 ಆದರೆ ಕಳೆದ ವರ್ಷದ ಅತಿವೃಷ್ಟಿ ಮತ್ತು ಪ್ರವಾಹದಿಂದ ನೆಲೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿ ನೆಲೆ ಕಲ್ಪಿಸಲಾಗಿಲ್ಲ. ಕೇಂದ್ರದಿಂದ ರಾಜ್ಯಸರಕಾರ ಕೇಳಿದಷ್ಟು ಪರಿಹಾರ ಬರಲಿಲ್ಲ. ಈಗ ಜಿಎಸ್‌ಟಿ ಪಾಲಿನ ಹಣವೂ ಕೈ ತಪ್ಪಿದಂತಾಗಿದೆ. ಹೀಗಾಗಿ ಕೇಂದ್ರದ ನೆರವು ಕನ್ನಡಿಯಲ್ಲಿನ ಗಂಟಾಗಿದೆ.

ಈಗ ಕೊರೋನದ ಜೊತೆಗೆ ವಿಪರೀತ ಮಳೆ ಮತ್ತು ನೆರೆ ಹಾವಳಿಯೂ ಸೇರಿ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಹಣದ ಕೊರತೆಯಿಲ್ಲ ಎಂದು ಕಂದಾಯ ಸಚಿವರೇನೋ ಹೇಳುತ್ತಿದ್ದಾರೆ. ಆದರೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ಅವರ ಹೇಳಿಕೆ ಸಾಕಾರಗೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ ಉತ್ತರ ಕರ್ನಾಟಕ ಮತ್ತು ಕೊಡಗಿನ ಜನರ ಪಾಲಿಗೆ ಮಳೆ ಎಂಬುದು ಶಾಪವಾಗಿ ಪರಿಣಮಿಸಿದೆ. ಇದು ಗೊತ್ತಿದ್ದೂ ಸರಕಾರ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ ನಂತರವೂ ಬಹುತೇಕ ಮಂತ್ರಿಗಳು ರಾಜಧಾನಿ ಬೆಂಗಳೂರನ್ನು ಬಿಟ್ಟು ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರವಾಹ ಪರಿಹಾರ ಕಾರ್ಯ ಬರೀ ಸರಕಾರಿ ಅಧಿಕಾರಿಗಳು ಮತ್ತು ನೌಕರರ ಕಾಟಾಚಾರದ ಉಸ್ತುವಾರಿಯಲ್ಲಿ ಬೇಕಾಬಿಟ್ಟಿಯಾಗಿ ನಡೆದಿದೆ. ಅತಿವೃಷ್ಟಿಯ ಆರಂಭದ ದಿನಗಳಲ್ಲಿ ಮುಖ್ಯಮಂತ್ರಿಗಳು ಕೋವಿಡ್‌ನಿಂದಾಗಿ ಆಸ್ಪತ್ರೆ ಸೇರಿದರು. ಕೆಲ ಮಂತ್ರಿಗಳೂ ಕ್ವಾರಂಟೈನ್‌ನಲ್ಲಿದ್ದರು. ಆದರೆ ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಈಗಲಾದರೂ ಪರಿಹಾರ ಕಾರ್ಯ ಚುರುಕಾಗಿ ನಡೆಯಬೇಕು. ಇಲ್ಲಸಲ್ಲದ ನೆಪವನ್ನು ಹೇಳಬಾರದು.

ಕಳೆದ ಸಲದ ಪ್ರವಾಹದ ಪಡಿಪಾಟಲು ನಮ್ಮ ಕಣ್ಣ ಮುಂದಿದೆ. ಆಗ ಪ್ರವಾಹ ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರದ ಹಣ ಬರಲಿಲ್ಲ. ಮನೆ ಮಾರು ಕಳೆದುಕೊಂಡ ವರಿಗೆ ಮನೆ ಕಟ್ಟಿಕೊಳ್ಳಲು ನೀಡಿದ ನೆರವಿನಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಆಗಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರಗಳಿವೆ.ಆದರೂ ಕರ್ನಾಟಕದ ನೋವಿಗೆ ಕೇಂದ್ರ ಸ್ಪಂದಿಸಲಿಲ್ಲ. ಸಕಾಲದಲ್ಲಿ ಕೇಂದ್ರದ ನೆರವು ಬರಲಿಲ್ಲ. ಇದನ್ನು ರಾಜ್ಯದ ಬಿಜೆಪಿ ಸರಕಾರ ಮೌನವಾಗಿ ಸಹಿಸಿತು. ಜೋರಾಗಿ ಕೇಳಿದರೆ ಎಲ್ಲಿ ದಿಲ್ಲಿ ದೊರೆಗಳು ಕೋಪ ಮಾಡಿಕೊಳ್ಳುತ್ತಾರೋ ಎಂದು ಹೇಳಲೂ ಆಗದೆ ಸುಮ್ಮನಿರಲೂ ಆಗದೆ ಪರದಾಡಿತು. ಕೊನೆಗೆ ಪ್ರಧಾನ ಮಂತ್ರಿಗಳು ತುಮಕೂರಿಗೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪಬಹಿರಂಗ ಸಭೆಯಲ್ಲಿ ಅವರ ಸಮ್ಮುಖದಲ್ಲಿ ಹೇಳಿಯೇ ಬಿಟ್ಟರು.

ಕಳೆದ ವರ್ಷದ ಪರಿಸ್ಥಿತಿ ಈ ವರ್ಷ ಪುನರಾವರ್ತನೆ ಆಗಬಾರದು. ಅತಿವೃಷ್ಟಿ ಪೀಡಿತ ಜನರಿಗೆ ಅದರಲ್ಲೂ ರೈತಾಪಿ ಜನರಿಗೆ ಪರಿಹಾರ ನೀಡುವಲ್ಲಿ ತಾಂತ್ರಿಕ ಅಂಶಗಳು ಅಡ್ಡಿಯಾಗಬಾರದು. ಕೊರೋನ ಮತ್ತು ಲಾಕ್‌ಡೌನ್‌ನಿಂದ ಬಳಲಿದ ಜನರು ಅತಿವೃಷ್ಟಿ ಪ್ರವಾಹ, ಭೂ ಕುಸಿತದಿಂದ ಇನ್ನಷ್ಟು ತೊಂದರೆಗೊಳಗಾಗುವುದು ಖಂಡಿತ. ಆದ್ದರಿಂದ ಸರಕಾರ ನೊಂದವರ ನೋವಿಗೆ ತಕ್ಷಣ ಸ್ಪಂದಿಸಬೇಕಾಗಿದೆ.

ಬೆಂಗಳೂರು ಸೇರಿದಂತೆ ಹಲವೆಡೆ ಮತ್ತೆ ಭಾರೀ ಮಳೆಯಾಗುತ್ತಿದೆ. ಬಿಜಾಪುರ, ಬೆಳಗಾವಿ, ಕಲಬುರಗಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಲೇ ಇದೆ. ಮತ್ತೇನು ಅನಾಹುತವಾಗುವುದೋ ಗೊತ್ತಿಲ್ಲ. ಸರಕಾರ ತಕ್ಷಣ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬರೀ ಅಧಿಕಾರಿಗಳ ಮೇಲೆ ಹೊಣೆ ಹೊರಿಸಿದರೆ ಸಾಲದು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ತಮ್ಮ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ವಹಿಸಿಕೊಳ್ಳಬೇಕು. ಈಗಾಗಲೇ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ಅನೇಕ ಕಡೆ ಮನೆಗಳು ನೆಲಸಮಗೊಂಡಿವೆ. ರಸ್ತೆಗಳು ಹಾಳಾಗಿ ವಾಹನ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಕೊರತೆ ಉಂಟಾಗಿದೆ. ಇವುಗಳ ಬಗ್ಗೆ ತಕ್ಷಣ ನಿಗಾ ವಹಿಸಬೇಕಾಗಿದೆ.

ಮತ್ತೆ ಮಳೆ ಬೀಳುತ್ತಿರುವುದರಿಂದ ಆಗಸ್ಟ್ ಮಳೆಯ ಹಿನ್ನೆಲೆಯಲ್ಲಿ ಮಾಡಿದ ಬೆಳೆ ನಷ್ಟದ ಅಂದಾಜು ಈಗ ಕೆಲಸಕ್ಕೆ ಬರುವುದಿಲ್ಲ. ಈಗ ಮತ್ತೆ ಬೆಳೆ ನಷ್ಟದ ಮರು ಅಂದಾಜು ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಾಗಿದೆ. ಜೊತೆಗೆ ಮತ್ತೆ ಬೆಳೆ ನಾಶದ ಸಮೀಕ್ಷೆಗಾಗಿ ಕೇಂದ್ರದ ತಂಡ ಕಳಿಸಲು ಮನವಿ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಕೇಂದ್ರದಿಂದ ತಕ್ಷಣ ನೆರವು ಒದಗಿಸುವಂತೆ ಒತ್ತಡ ಹೇರಬೇಕಾಗಿದೆ.
ಈ ಕುರಿತು ಸರಕಾರ ಸರ್ವಪಕ್ಷ ನಾಯಕರ ಸಭೆಯನ್ನು ಕರೆಯಬೇಕು. ವಿಧಾನ ಮಂಡಲ ಅಧಿವೇಶನ ಕರೆದು ಸದನದ ಸರ್ವಾನುಮತದ ನಿರ್ಣಯ ಅಂಗೀಕರಿಸುವುದು ಸೂಕ್ತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)