varthabharthi


ವಿಶೇಷ-ವರದಿಗಳು

ರಾಜಕೀಯ ಅವಕಾಶವಾದಿಗಳ ಕೇಸರಿ ದುರ್ಬಳಕೆ ವಿರುದ್ಧ ಹೋರಾಡಿದ್ದ ಸ್ವಾಮಿ ಅಗ್ನಿವೇಶ್

ವಾರ್ತಾ ಭಾರತಿ : 13 Sep, 2020
ಜಾನ್ ದಯಾಳ್, ಹಿರಿಯ ಪತ್ರಕರ್ತ ಹಾಗೂ ಮಾನವಹಕ್ಕುಗಳ ಕಾರ್ಯಕರ್ತ

ಸ್ವಾಮಿ ಅಗ್ನಿವೇಶ್ ನಾನು ನನ್ನ ಜೀವನದಲ್ಲಿ ಭೇಟಿಯಾದ ಅತ್ಯಂತ ವರ್ಚಸ್ವಿ ಮತ್ತು ಧೈರ್ಯಶಾಲಿ ವ್ಯಕ್ತಿಯಾಗಿದ್ದರು. ಶಂಕರಾಚಾರ್ಯರಿಂದ ಹಿಡಿದು ತಾನು ಭಾರತವನ್ನು ರಕ್ಷಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಕೈಯಲ್ಲಿ ಚೂರಿ ಹಿಡಿದಿದ್ದ ಠಕ್ಕನವರೆಗೆ ಪ್ರತಿಯೊಬ್ಬರೊಂದಿಗೆ ವಾದಿಸಿ ತಿರುಗೇಟು ನೀಡುವ ಸಾಮರ್ಥ್ಯವನ್ನು ಅವರು ಹೊಂದಿದ್ದರು.


ವೇಪ ಶ್ಯಾಮರಾವ್ ಅಲಿಯಾಸ್ ಸ್ವಾಮಿ ಅಗ್ನಿವೇಶ್ ಅವರು ಶುಕ್ರವಾರ ಇಹಲೋಕವನ್ನು ತೊರೆದಿದ್ದಾರೆ. ಎರಡು ವರ್ಷಗಳ ಹಿಂದೆ ಜಾರ್ಖಂಡ್‌ನಲ್ಲಿ ಸಶಸ್ತ್ರ ಹಲ್ಲೆಕೋರರ ಗುಂಪಿನಿಂದ ದಾಳಿಗೊಳಗಾಗಿದ್ದು, ಆ ಸಂದರ್ಭದಲ್ಲಿ ಆಗಿದ್ದ ಗಾಯಗಳ ದೀರ್ಘಕಾಲೀನ ಪರಿಣಾಮಗಳಿಂದಾಗಿ ತನ್ನ 81ನೇ ಹುಟ್ಟುಹಬ್ಬಕ್ಕೆ ಕೇವಲ 10 ದಿನಗಳಿರುವಾಗ ದಿಲ್ಲಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಕೊನೆಯುಸಿರೆಳೆದಿದ್ದಾರೆ.

ವೃತ್ತಪತ್ರಿಕೆಗಳನ್ನು ಓದದ, ಟಿವಿಯನ್ನು ನೋಡದ ವ್ಯಕ್ತಿಗಳಿಗೂ ಅಗ್ನಿವೇಶ್‌ರನ್ನು ಗುರುತಿಸುವುದು ಕಷ್ಟವಾಗುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರ ಚಿತ್ರವಿರುವ ಕ್ಯಾಲೆಂಡರ್‌ನ್ನು ನೋಡಿದ ಯಾರೇ ಆದರೂ ಬಣ್ಣ, ಬಟ್ಟೆಗಳು ಮತ್ತು ನಿಲುವಿನಿಂದ ಅಗ್ನಿವೇಶ್‌ರನ್ನು ಸುಲಭವಾಗಿ ಗುರುತಿಸುತ್ತಾರೆ.

ಆಂಧ್ರಪ್ರದೇಶದ ಶ್ರೀಕಾಕುಳಂ ಮೂಲದ, ಆರ್ಯ ಸಮಾಜದ ಪ್ರತ್ಯೇಕ ಬಣದ ಜಾಗತಿಕ ಮುಖ್ಯಸ್ಥರಾಗಿದ್ದ ಅಗ್ನಿವೇಶ್ ಭಗವಾ ಅಥವಾ ಸಾಧುಸಂತರ ಕಾವಿಬಣ್ಣದ ಪಾವಿತ್ರ ಮತ್ತು ಗೌರವವನ್ನು ಢೋಂಗಿ ಧಾರ್ಮಿಕ ನಾಯಕರು ಮತ್ತು ರಾಜಕೀಯ ಅವಕಾಶವಾದಿಗಳಿಂದ ಮರಳಿ ಕಿತ್ತುಕೊಳ್ಳಲು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರಯತ್ನಿಸಿದ್ದರು. ಈ ಜನರು ಧಾರ್ಮಿಕ ರಾಷ್ಟ್ರೀಯವಾದವನ್ನು ಅಧಿಕಾರದ ಗದ್ದುಗೆಗೇರಿಸಲು ಇದೇ ಭಗವಾ ಅಥವಾ ಕಾವಿಬಣ್ಣವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದರು. ಈ ಮಾತನ್ನು ಅಗ್ನಿವೇಶ್ ಅವರೇ ನನಗೆ ಹೇಳಿದ್ದರು.

ಇಂತಹ ಜನರನ್ನು ಅವರದೇ ಅಖಾಡಾದಲ್ಲಿ ಅಗ್ನಿವೇಶ್ ಎದುರಿಸಿದ್ದರು ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅವರನ್ನು ಮಣಿಸಿದ್ದರು. ಅಗ್ನಿವೇಶರನ್ನು ಮುಖಾಮುಖಿಯಾಗಿ ಎದುರಿಸುವುದು ಕಷ್ಟ ಎನ್ನುವುದನ್ನು ಈ ರಾಜಕೀಯ ಅವಕಾಶವಾದಿಗಳು ಕಲಿತುಕೊಂಡಿದ್ದರಾದರೂ ಆಗಾಗ ಅವರ ಬೆನ್ನು ಬೀಳುವುದನ್ನು ಬಿಟ್ಟಿರಲಿಲ್ಲ ಮತ್ತು ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಟ್ರೋಲ್ ದಾಳಿಗಳನ್ನು ನಡೆಸುತ್ತಿದ್ದರು.

ವಿದ್ವಾಂಸ ಮತ್ತು ಆತ್ಮಸಾಕ್ಷಿಯುಳ್ಳ ವ್ಯಕ್ತಿಯಾಗಿದ್ದರು
ಪ್ರಾಯಶಃ ಓರ್ವ ಯುವ ಮ್ಯಾನೇಜ್‌ಮೆಂಟ್ ಪದವೀಧರನಾಗಿ ಏನನ್ನು ಸಾಧಿಸಲು ಅಗ್ನಿವೇಶ್ ನಿರ್ಧರಿಸಿದ್ದರೋ ಅದನ್ನು ಕೊನೆಯಲ್ಲಿ ಕಳೆದುಕೊಂಡಿದ್ದರು ಎಂದು ಹೇಳಬಹುದಾಗಿದೆ. ಕಾನೂನು ಮತ್ತು ವಾಣಿಜ್ಯಗಳಲ್ಲಿ ಪದವಿಗಳನ್ನು ಗಳಿಸಿದ್ದ ಅಗ್ನಿವೇಶ್ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸಿದ್ದರು ಮತ್ತು ಕೊನೆಗೊಂದು ದಿನ ಮಾನವ ಹಕ್ಕುಗಳ ಹೋರಾಟನಾಗಲು ಮತ್ತು ಕ್ರೈಸ್ತ ವ್ಯಕ್ತಿಯ ಹಿಂದೂ ಆವೃತ್ತಿಯಾಗಲು ಇವೆಲ್ಲವೂಗಳನ್ನು ಬಿಟ್ಟುಕೊಟ್ಟಿದ್ದರು. ವಿದ್ಯಾವಂತ, ಆತ್ಮಸಾಕ್ಷಿಯುಳ್ಳ ವ್ಯಕ್ತಿಯಾಗಿದ್ದ ಅವರು ತನ್ನ ಗುರಿಸಾಧನೆಯ ಮಾರ್ಗದಲ್ಲಿ ಏಕಾಂಗಿಯಾಗಿ ಪಯಣಿಸಿದ್ದರು.

ಇದು ನಾನು ನನ್ನ ವರದಿಗಾರಿಕೆಯ ಆರಂಭದಲ್ಲಿ ಕಂಡಿದ್ದ ಅಗ್ನಿವೇಶ್‌ರ ಚಿತ್ರಣ ಮತ್ತು ಅವರ ಸ್ನೇಹಿತನಾಗಿ, ಸಾಂದರ್ಭಿಕ ಸಹೋದ್ಯೋಗಿಯಾಗಿ ಮತ್ತು ಹಲವೊಮ್ಮೆ ಕೋಮುವಾದದ ವಿರುದ್ಧ ಮತ್ತು ನಾಗರಿಕ ಸ್ವಾತಂತ್ರದ ರಕ್ಷಣೆಗಾಗಿ ಅವರ ಚಟುವಟಿಕೆಗಳಲ್ಲಿ ಕಾಮ್ರೇಡ್ ಆಗಿ ನಾನು ಬೆಳೆದಿದ್ದೆ.

ನಾವಿಬ್ಬರೂ ಭಾರತದಲ್ಲಿ ಮತ್ತು ಪಾಶ್ಚಾತ್ಯ ಜಗತ್ತಿನಲ್ಲಿ ನೂರಾರು ವೇದಿಕೆಗಳನ್ನು ಹಂಚಿಕೊಂಡಿದ್ದೆವು. ನಮ್ಮ ತಾಯಿನಾಡು ಜಾತ್ಯತೀತ, ಪ್ರಜಾಸತ್ತಾತ್ಮಕ, ಮಾನವಹಕ್ಕುಗಳನ್ನು ಗೌರವಿಸುವ ಮತ್ತು ಸಾಧ್ಯವಾದರೆ ವಿಶ್ವಕ್ಕೆ ಮಾದರಿಯಾಗಬಲ್ಲ ದೇಶವಾಗುವುದು ಕೇವಲ ಭಾರತೀಯ ಪ್ರಜೆಗಳಿಗೆ ಮಾತ್ರವಲ್ಲ, ಜಗತ್ತಿಗೆ ಮತ್ತು ಅದರ ಶಾಂತಿಗೆ ಹೇಗೆ ಮುಖ್ಯವಾಗಿದೆ ಎಂದು ನಮ್ಮ ವಾದಗಳನ್ನು ನಾವು ಈ ವೇದಿಕೆಗಳಲ್ಲಿ ಮಂಡಿಸುತ್ತಿದ್ದೆವು. ಪ್ರಖರ ವಾಗ್ಮಿಯಾಗಿದ್ದ ಅಗ್ನಿವೇಶ್‌ರನ್ನು ಅಂತರ್‌ರಾಷ್ಟ್ರೀಯ ಮಾಧ್ಯಮಗಳು, ವಿಶ್ವನಾಯಕರು ಮತ್ತು ಅನುಯಾಯಿಗಳು ಬಹುವಾಗಿ ಇಷ್ಟಪಡುತ್ತಿದ್ದರು.

ಹರ್ಯಾಣದಲ್ಲಿ ತನ್ನದೇ ಪ್ರಾಬಲ್ಯ ಹೊಂದಿದ್ದ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮಂತ್ರಿಯೂ ಆಗಿದ್ದರು. ಆದರೆ ಹೆಚ್ಚು ಸಮಯ ಅವರು ಸಚಿವ ಹುದ್ದೆಯಲ್ಲಿರಲಿಲ್ಲ, ಆದರೆ ಅದು ಭಾರತದಲ್ಲಿ ರಾಜಕೀಯದ ಆಟ ಹೇಗೆ ನಡೆಯುತ್ತದೆ ಎನ್ನುವುದರ ಒಳನೋಟವನ್ನು ಅವರಿಗೆ ನೀಡಿತ್ತು.
ಹರ್ಯಾಣದಲ್ಲಿ ಪ್ರಚಲಿತವಿದ್ದ ಆಧುನಿಕ ಗುಲಾಮಗಿರಿಯಾಗಿದ್ದ ಜೀತದಾಳು ಪದ್ಧತಿಯ ವಿರುದ್ಧ ಹೋರಾಟಕ್ಕಾಗಿ ಸ್ವಾಮಿ ತನ್ನ ಜೀವನವನ್ನೇ ಅರ್ಪಿಸಿದ್ದರು. ಭಾರತದಲ್ಲಿ ಹಲವಾರು ಸಭೆಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಜೀತದಾಳು ಪದ್ಧತಿಯನ್ನು ಬಯಲುಗೊಳಿಸುತ್ತಿದ್ದ ಅವರು ತನ್ನ ಅನುಯಾಯಿಗಳೊಂದಿಗೆ ಇಟ್ಟಿಗೆ ಭಟ್ಟಿಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಅದೆಷ್ಟೋ ಜನರನ್ನು ಅದರಿಂದ ವಿಮೋಚನೆಗೊಳಿಸಿದ್ದರು. ಇದಕ್ಕಾಗಿ ಅವರು ಬೀದಿಗಿಳಿದು ಹೋರಾಟವನ್ನು ನಡೆಸಿದ್ದರು.

ಭಾರತದಲ್ಲಿಯ ಅಸಮಾನತೆಗಳ ವಿರುದ್ಧ ಹೋರಾಟ
ಜಾತಿ ಅಸಮಾನತೆ ಸೇರಿದಂತೆ ಈಗಲೂ ಭಾರತದಲ್ಲಿರುವ ಹಲವಾರು ಅಸಮಾನತೆಗಳ ವಿರುದ್ಧ ಹೋರಾಡಿದ್ದ ಸ್ವಾಮಿ ಈ ಬಗ್ಗೆ ವಿಶ್ವಕ್ಕೆ ಅರಿವು ಮೂಡಿಸಿದ್ದರು. ಅತ್ಯಂತ ಕೀಳು ಜಾತೀಯತೆಯನ್ನು ಬೆಟ್ಟು ಮಾಡುವ ಮ್ಯಾನ್ಯುವಲ್ ಸ್ಕಾವೆಂಜರ್ ಅಥವಾ ಮಲಗುಂಡಿಯನ್ನು ಸ್ವಚ್ಛಗೊಳಿಸುವ ವೃತ್ತಿಯ ವಿರುದ್ಧದ ಆಂದೋಲನಗಳಲ್ಲಿ ನಾವು ಭಾಗಿಯಾಗಿದ್ದೆವು. ಒಮ್ಮೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಹುಟ್ಟೂರು ಮಧ್ಯಪ್ರದೇಶದ ಮಹುನಲ್ಲಿ ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ಪಾದಗಳನ್ನು ತೊಳೆಯುವ ಅವಕಾಶ ನಮಗೆ ಲಭಿಸಿತ್ತು. ಅವರ ಪೈಕಿ ಓರ್ವ ಮಹಿಳೆ ಈ ಹೇಯ ವೃತ್ತಿಗೆ ತಿಲಾಂಜಲಿ ನೀಡಲು ಮತ್ತು ಇತರರನ್ನೂ ಈ ವೃತ್ತಿಯಿಂದ ಬಿಡಿಸಲು ಪಣ ತೊಟ್ಟಿದ್ದಳು. ಆಕೆಯ ಪುತ್ರಿ ಕಾನೂನು ವಿದ್ಯಾರ್ಥಿನಿಯಾಗಿದ್ದಳು. ಈ ಮಹಿಳೆಯ ಕಥೆ ಕೇಳಿದ ಸ್ವಾಮಿ ಕಣ್ಣೀರಾಗಿದ್ದರು. ನಮಗೂ ಕಂಬನಿಗಳನ್ನು ತಡೆಯಲು ಸಾಧ್ಯವಾಗಿರಲಿಲ್ಲ.

ಅದೊಮ್ಮೆ ಚಿಕಾಗೋದಲ್ಲಿ ವಿಶ್ವ ಧರ್ಮ ಸಂಸತ್‌ನಲ್ಲಿ ಪಾಲ್ಗೊಂಡಿದ್ದ ಅಗ್ನಿವೇಶ್ ಸ್ವಾಮಿ ವಿವೇಕಾನಂದರು ತನ್ನ ಅದ್ಭುತ ಭಾಷಣದಿಂದ ಅಮೆರಿಕವನ್ನೇ ದಂಗು ಬಡಿಸಿದ್ದ ವೇದಿಕೆಯಲ್ಲಿ ನಿಂತು ಕೋಮುವಾದವು ಭಾರತೀಯ ಪ್ರಜಾಪ್ರಭುತ್ವದ ಮೂಲಸ್ವರೂಪವನ್ನೇ ಕಿತ್ತುಕೊಂಡರೆ ಅಂದು ವಿವೇಕಾನಂದರು ನುಡಿದಿದ್ದ ಮಾತುಗಳು ಅರ್ಥ ಕಳೆದುಕೊಳ್ಳಲಿವೆ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಜನರು ಎದ್ದು ನಿಂತು ಅವರ ಭಾಷಣಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು.

ಅಂತರ್‌ರಾಷ್ಟ್ರೀಯ ಮಾನ್ಯತೆಗಳು ಮತ್ತು ಗೌರವ ಹುದ್ದೆಗಳು ಅಗ್ನಿವೇಶ್‌ರನ್ನು ಹುಡುಕಿಕೊಂಡು ಬರುತ್ತಿದ್ದವು. ಅವರು ಗುಲಾಮಗಿರಿಯ ಆಧುನಿಕ ರೂಪ ಕುರಿತು ವಿಶ್ವಸಂಸ್ಥೆಯ ಸಮಿತಿಗಳ ಅಂತರ್‌ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

ಮೂರ್ತಿಗಳು ಮತ್ತು ಮೂರ್ತಿಪೂಜೆಗಳನ್ನು ನಂಬದ ಆರ್ಯ ಸಮಾಜ ಬಣದ ಅನುಯಾಯಿಯಾಗಿದ್ದ ಅಗ್ನಿವೇಶ್ ಹಲವಾರು ಬಾರಿ ತನ್ನ ಸಭಿಕರನ್ನು ಉರ್ದುವಿನಲ್ಲಿ ಮತ್ತು ತಾನು ವಿಶ್ವ ಪ್ರವಾಸದಲ್ಲಿ ಕಲಿತುಕೊಂಡಿದ್ದ ಕೆಲವು ಅರೆಬಿಕ್ ಶಬ್ದಗಳಲ್ಲಿ ಅಭಿನಂದಿಸುವ ಮೂಲಕ ಅಚ್ಚರಿಯನ್ನು ಮೂಡಿಸುತ್ತಿದ್ದರು.

ಆಗಾಗ ಮಹಾತ್ಮಾ ಗಾಂಧಿಯವರ ಮಾತುಗಳನ್ನು ಪುನರುಚ್ಚರಿಸುತ್ತ ಅವರು ತಾನು ಜೀಸಸ್‌ನನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಜೀಸಸ್‌ನ ಅನುಯಾಯಿಗಳೆಂದು ಹೇಳಿಕೊಳ್ಳುವ ಕೆಲವರನ್ನು ಅವರು ದೂರವೇ ಇಟ್ಟಿದ್ದರು. ಅವರು ಸುವಾರ್ತಾ ಬೋಧನೆ ಮತ್ತು ಮತಾಂತರಗಳಿಗೆ ವಿರುದ್ಧವಾಗಿದ್ದರು.

ವರ್ಚಸ್ವಿ, ಧೈರ್ಯಶಾಲಿ ವ್ಯಕ್ತಿ
ಸ್ವಾಮಿ ಅಗ್ನಿವೇಶ್ ನಾನು ನನ್ನ ಜೀವನದಲ್ಲಿ ಭೇಟಿಯಾದ ಅತ್ಯಂತ ವರ್ಚಸ್ವಿ ಮತ್ತು ಧೈರ್ಯಶಾಲಿ ವ್ಯಕ್ತಿಯಾಗಿದ್ದರು. ಶಂಕರಾಚಾರ್ಯರಿಂದ ಹಿಡಿದು ತಾನು ಭಾರತವನ್ನು ರಕ್ಷಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಕೈಯಲ್ಲಿ ಚೂರಿ ಹಿಡಿದಿದ್ದ ಠಕ್ಕನವರೆಗೆ ಪ್ರತಿಯೊಬ್ಬರೊಂದಿಗೆ ವಾದಿಸಿ ತಿರುಗೇಟು ನೀಡುವ ಸಾಮರ್ಥ್ಯವನ್ನು ಅವರು ಹೊಂದಿದ್ದರು.
ಅಂದ ಹಾಗೆ ಅವರು (ರಾಷ್ಟ್ರ ಮತ್ತು ಹಿಂದೂ ಧರ್ಮರಕ್ಷಕರು) ಹಲವಾರು ಬಾರಿ ಅಗ್ನಿವೇಶ್‌ರ ಮೇಲೆ ಹಲ್ಲೆ ನಡೆಸಿದ್ದರು, ಕೆಲವೊಮ್ಮೆ ತೀವ್ರವಾಗಿ ಗಾಯಗೊಳಿಸಿದ್ದರು. ಆದರೆ ತಾವು ಜೀವಮಾನವಿಡೀ ನೆನಪಿಡುವಂಥ ಸ್ವಾಮಿಯವರ ಚಾಟಿಯಂತಹ ನಾಲಿಗೆಯ ರುಚಿಯನ್ನು ಕಂಡಿದ್ದರು.
ಈ ಕೋವಿಡ್ ಕಾಲದಲ್ಲಿ ನನ್ನ ಸ್ನೇಹಿತ ಮತ್ತು ಗುರುವಿಗೆ ಖುದ್ದಾಗಿ ಅಂತಿಮ ನಮನವನ್ನು ಸಲ್ಲಿಸಲಾಗುತ್ತಿಲ್ಲವಲ್ಲ ಎಂಬ ವಿಷಾದ ನನ್ನನ್ನು ಕಾಡುತ್ತಿದೆ.

 ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)