varthabharthi


ವಿಶೇಷ-ವರದಿಗಳು

ಇಟಲಿಯಲ್ಲಿ ಮುಸೊಲಿನಿ ಆಡಳಿತ - ಭಾರತದಲ್ಲಿ ಮೋದಿ ಆಡಳಿತ: ಸಾಮ್ಯತೆಗಳೇನು?

ವಾರ್ತಾ ಭಾರತಿ : 13 Sep, 2020
ರಾಮಚಂದ್ರ ಗುಹಾ, telegraphindia. com

ನಾನು ಬಹಳಷ್ಟು ಜೀವನ ಚರಿತ್ರೆಗಳನ್ನು ಓದುತ್ತಿರುತ್ತೇನೆ ಮತ್ತು ಈ ಪೈಕಿ ಹೆಚ್ಚಿನವು ವಿದೇಶಿಯರ ಕುರಿತಾಗಿರುತ್ತವೆ. ಕೆನಡಾದ ವಿದ್ವಾಂಸ ಫ್ಯಾಬಿಯೊ ಫರ್ನಾಂಡೊ ರಿಝಿಯ ‘ಬೆನೆಡೆಟ್ಟೊ ಕ್ರೋಸ್ ಆ್ಯಂಡ್ ಇಟಾಲಿಯನ್ ಫ್ಯಾಶಿಸಂ ’ ಪುಸ್ತಕವನ್ನು ಇತ್ತೀಚಿಗಷ್ಟೇ ಓದಿ ಮುಗಿಸಿದ್ದೇನೆ. ಇದು ಮಹಾನ್ ತತ್ತ್ವಜ್ಞಾನಿ ಬೆನೆಡೆಟ್ಟೊ ಕ್ರೋಸ್ ಅವರ ಜೀವನ ಚರಿತ್ರೆಯಾಗಿದ್ದು, ಅವರ ಕಾಲದ ಇಟಲಿಯನ್ನು ಚಿತ್ರಿಸಿದೆ.

ರಿಝಿಯ ಪುಸ್ತಕವನ್ನು ಓದುತ್ತಿರುವಾಗ 1920ರ ಇಟಲಿ ಮತ್ತು 2020ರ ಭಾರತದ ನಡುವೆ ವಿಲಕ್ಷಣ ಸಾಮ್ಯತೆಗಳು ನನಗೆ ಕಂಡು ಬಂದಿದ್ದವು. ನರೇಂದ್ರ ಮೋದಿಯ ಮಿಥ್ಯೆಗಳಂತೆ ಬೆನಿಟೊ ಮುಸೊಲಿನಿಯ ಮಿಥ್ಯೆಗಳೂ ‘ಮಹಾನ್ ನಾಯಕನ ಸ್ತುತಿಗೀತೆ ’ಗಳನ್ನು ಹಾಡಲು ಕಾತುರರಾಗಿದ್ದ ಲೇಖಕರು ಮತ್ತು ಭಟ್ಟಂಗಿಗಳಿಂದ ಸೃಷ್ಟಿಯಾಗಿದ್ದವು. ಭಟ್ಟಂಗಿಗಳು ಫ್ಯಾಶಿಸಂನ ನಾಯಕನನ್ನು ‘ಅಗಾಧ ವಿಶ್ವಾಸದ ವ್ಯಕ್ತಿ’, ‘ದೂರದೃಷ್ಟಿಯ ನಾಯಕ ’ಎಂದೆಲ್ಲ ಹೊಗಳಲಾರಂಭಿಸಿದ್ದರು. ಹೀಗೆ ಸದಾ ‘ಸರಿಯಾದ’ ನಿರ್ಧಾರಗಳನ್ನು ಕೈಗೊಳ್ಳುವ, ಇತರರು ನಗಣ್ಯರಾಗಿದ್ದ ಸ್ಥಿತಿಯಲ್ಲಿ ‘ಧೈರ್ಯವನ್ನು ’ ಪ್ರದರ್ಶಿಸುವ ಮಿಥ್ಯಾ ನಾಯಕ ಸೃಷ್ಟಿಯಾಗಿದ್ದ.

1925,ಡಿಸೆಂಬರ್‌ನಲ್ಲಿ ಇಟಲಿ ಸರಕಾರವು ತಂದಿದ್ದ ಕಾನೂನು ಮಾಧ್ಯಮಗಳು ಮತ್ತು ಅವುಗಳ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿತ್ತು. ಈ ಕಾನೂನಿನ ಪರಿಣಾಮವಾಗಿ ಕೆಲವೇ ತಿಂಗಳುಗಳಲ್ಲಿ ಹೆಚ್ಚಿನ ಪ್ರಮುಖ ವೃತ್ತಪತ್ರಿಕೆಗಳು ಒಂದೊಂದಾಗಿ ಫ್ಯಾಶಿಸಂನ ನಿಯತ್ರಣಕ್ಕೊಳಪಟ್ಟಿದ್ದವು. ಕೆಲವು ಮಾಲಕರು ಆರ್ಥಿಕ ಮತ್ತು ರಾಜಕೀಯ ಒತ್ತಡದಡಿ ಅನಿವಾರ್ಯವಾಗಿ ತಮ್ಮ ಪತ್ರಿಕೆಗಳನ್ನು ಮಾರಾಟ ಮಾಡಿದ್ದರು. ಎಲ್ಲ ಉದಾರವಾದಿ ಸಂಪಾದಕರನ್ನು ವಜಾಗೊಳಿಸಿ ಅವರ ಸ್ಥಾನದಲ್ಲಿ ಮುಸೊಲಿನಿಯನ್ನು ಓಲೈಸುವ ಭಟ್ಟಂಗಿಗಳನ್ನು ಕೂರಿಸಲಾಗಿತ್ತು.

ಕಾನೂನುಗಳ ಬಗ್ಗೆ ಪೂಜ್ಯ ಭಾವನೆ

ಅದೇ ವರ್ಷ ಕ್ರೋಸ್ ಅವರು ಆಡಳಿತ ಪಕ್ಷ ಮತ್ತು ಮುಸೊಲಿನಿಯ ಸಿದ್ಧಾಂತವನ್ನು, ‘ಅಧಿಕಾರಿಗಳು ಮತ್ತು ಪುಢಾರಿಗಳಿಗೆ ಮೊರೆಯಿಡುವ, ಕಾನೂನುಗಳ ಬಗ್ಗೆ ಪೂಜ್ಯ ಭಾವನೆಯನ್ನು ಪ್ರದರ್ಶಿಸುತ್ತಲೇ ಅವುಗಳನ್ನು ಉಲ್ಲಂಘಿಸುವ, ಆಧುನಿಕ ಪರಿಕಲ್ಪನೆಗಳು,ಕೆಲಸಕ್ಕೆ ಬಾರದ ಹಳೆಯ ತ್ಯಾಜ್ಯಗಳು, ಸಂಸ್ಕೃತಿಯ ಬಗ್ಗೆ ಜಿಗುಪ್ಸೆ ಮತ್ತು ಹೊಸ ಸಂಸ್ಕೃತಿಯನ್ನು ಸೃಷ್ಟಿಸುವ ಬರಡು ಪ್ರಯತ್ನಗಳ ವಿಲಕ್ಷಣ ಮಿಶ್ರಣ ’ಎಂದು ನಿರೂಪಿಸಿದ್ದರು. ಈ ವಿಚಾರದಲ್ಲಿ 1920ರ ದಶಕದ ಇಟಲಿ ಸರಕಾರವು ಇಂದಿನ ಮೋದಿ ಆಡಳಿತದೊಂದಿಗೆ ಎದ್ದುಕಾಣುವ ಹೋಲಿಕೆಗಳನ್ನು ಹೊಂದಿದೆ. ಮೋದಿ ಸರಕಾರವೂ ಸಂವಿಧಾನದ ಕುರಿತು ಗೌರವಪೂರ್ವಕವಾಗಿ ಮಾತನಾಡುತ್ತಲೇ ಅದನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿದೆ, ಪ್ರಾಚೀನ ಜ್ಞಾನವನ್ನು ಪ್ರತಿಪಾದಿಸುತ್ತಲೇ ಆಧುನಿಕ ವಿಜ್ಞಾನವನ್ನು ಹೀಗಳೆಯುತ್ತಿದೆ, ಪ್ರಾಚೀನ ಸಂಸ್ಕೃತಿಯನ್ನು ಮತ್ತೆ ಘನತೆಗೇರಿಸುತ್ತೇನೆ ಎಂದು ಹೇಳುತ್ತಲೇ ಆಚರಣೆಯಲ್ಲಿ ಅಪ್ಪಟ ನಿರ್ಲಕ್ಷವನ್ನು ಪ್ರದರ್ಶಿಸುತ್ತಿದೆ.

ಹೆಚ್ಚಿನ ಸ್ವತಂತ್ರ ಮನೋಭಾವದ ಇಟಾಲಿಯನ್ ಬುದ್ಧಿಜೀವಿಗಳು ಬಲವಂತದಿಂದ ದೇಶಭ್ರಷ್ಟರಾದರೆ ಕ್ರೋಸ್ ತನ್ನ ತಾಯಿನಾಡಿನಲ್ಲಿಯೇ ಇದ್ದುಕೊಂಡು ಫ್ಯಾಶಿಸಂಗೆ ಬೌದ್ಧಿಕ ಮತ್ತು ನೈತಿಕ ಪ್ರತಿರೋಧವನ್ನು ಒಡ್ಡಿದ್ದರು. ಅವರ ಜೀವನ ಚರಿತ್ರೆಕಾರ ಹೇಳುವಂತೆ ಮುಸೊಲಿನಿಯ ಪಂಥವನ್ನು ಬೆಳೆಸಲು ಮತ್ತು ಹೊಸ ತಲೆಮಾರುಗಳನ್ನು ಆಡಳಿತಕ್ಕೆ ವಿಧೇಯವಾಗಿಸಲು ಮತ್ತು ಯಾವುದೇ ಪ್ರಶ್ನೆಗಳನ್ನೆತ್ತದೆ ನಾಯಕನಿಗೆ ಜೈಕಾರ ಹಾಕಲು ಆಡಳಿತವು ಸಮೂಹ ಮಾಧ್ಯಮಗಳು ಮತ್ತು ಶಿಕ್ಷಣ ವ್ಯವಸ್ಥೆಯನ್ನು ನಿಯೋಜಿಸಿತ್ತು. ಬದಲಾಗಿ ಕ್ರೋಸ್ ಪ್ರಜೆಗಳ ಎದುರು ಉದಾರ ಮೌಲ್ಯಗಳನ್ನಿಟ್ಟಿದ್ದರು, ಸ್ವಾತಂತ್ರ್ಯವನ್ನು ಬೋಧಿಸಿದ್ದರು, ಮಾನವ ಘನತೆಯನ್ನು ಪ್ರತಿಪಾದಿಸಿದ್ದರು ಮತ್ತು ವ್ಯಕ್ತಿಗತ ನಿರ್ಧಾರ ಮತ್ತು ವೈಯಕ್ತಿಕ ಹೊಣೆಗಾರಿಕೆಗಳಿಗೆ ಆಗ್ರಹಿಸಿದ್ದರು.

ರಿಝಿಯ ಪುಸ್ತಕದಲ್ಲಿ ಬರೆದಿರುವಂತೆ 1926ರ ಅಂತ್ಯದ ವೇಳೆಗೆ ಉದಾರವಾದಿ ಇಟಲಿಯು ಸತ್ತುಹೋಗಿತ್ತು. ಮುಸೊಲಿನಿ ತನ್ನ ಅಧಿಕಾರವನ್ನು ಸುಭದ್ರಗೊಳಿಸಿಕೊಂಡಿದ್ದ ಮತ್ತು ತನ್ನ ಸರ್ವಾಧಿಕಾರದ ಮುಂದುವರಿಕೆಗಾಗಿ ಕಾನೂನು ಮಾರ್ಗಗಳನ್ನು ಸೃಷ್ಟಿಸಿಕೊಂಡಿದ್ದ. ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಗಿತ್ತು ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ಹೇಳಹೆಸರಿಲ್ಲದಂತೆ ಮಾಡಲಾಗಿತ್ತು. ಪ್ರತಿಪಕ್ಷವು ನಿರಾಯುಧವಾಗಿತ್ತು ಮತ್ತು ಸಂಸತ್ತನ್ನು ಶಿಖಂಡಿಯ ಮಟ್ಟಕ್ಕೆ ಇಳಿಸಲಾಗಿತ್ತು. 1927ರ ವೇಳೆಗೆ ಯಾವುದೇ ರಾಜಕೀಯ ಕ್ರಮವನ್ನು ಕೈಗೊಳ್ಳುವುದು ಹೆಚ್ಚುಕಡಿಮೆ ಅಸಾಧ್ಯವಾಗಿಬಿಟ್ಟಿತ್ತು. ಖಾಸಗಿಯಾಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಟೀಕಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಹ ಅಪಾಯಕಾರಿಯಾಗಿತ್ತು. ಸರಕಾರದ ನೀತಿಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಸರಕಾರಿ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಸ್ಥಿತಿಯಿತ್ತು.

ಆಂತರಿಕ ಸಚಿವಾಲಯದಲ್ಲಿ ಶಕ್ತಿಶಾಲಿ ಪೊಲೀಸ್ ವಿಭಾಗವಲ್ಲದೆ, ಫ್ಯಾಶಿಸಂ ಅನ್ನು ವಿರೋಧಿಸುವ ಯಾವುದೇ ಲಕ್ಷಣಗಳನ್ನು ದಮನಿಸುವ ಮತ್ತು ಭಿನ್ನಾಭಿಪ್ರಾಯದ ಯಾವುದೇ ಅಭಿವ್ಯಕ್ತಿಯನ್ನು ನಿಯಂತ್ರಿಸುವ ಉದ್ದೇಶದೊಂದಿಗೆ OVRA ಎಂಬ ನಿಗೂಢ ಹೆಸರಿನ ಹೊಸ ಮತ್ತು ದಕ್ಷ ರಹಸ್ಯ ಪೊಲೀಸ್ ಘಟಕವನ್ನು ಸೃಷ್ಟಿಸಲಾಗಿತ್ತು. ಅಸ್ತಿತ್ವಕ್ಕೆ ಬಂದ ಸ್ವಲ್ಪವೇ ಸಮಯದಲ್ಲಿ ಅದು ಫ್ಯಾಶಿಸ್ಟ್ ನಾಯಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಜನರ ಕುರಿತು ಕಡತಗಳನ್ನು ಸಂಗ್ರಹಿಸಿತ್ತು ಮತ್ತು ಸ್ಪೆಷಲ್ ಏಜೆಂಟ್‌ಗಳು, ಗೂಢಚಾರಿಗಳು ಮತ್ತು ಮಾಹಿತಿದಾರರ ವ್ಯಾಪಕ ಜಾಲವನ್ನು ರೂಪಿಸಿತ್ತು. ಈ ಜಾಲದ ಕಬಂಧಬಾಹುಗಳು ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲಿಯೂ ಚಾಚಿಕೊಂಡಿದ್ದವು.

ನಾನು ರಿಝಿಯ ಪುಸ್ತಕದಲ್ಲಿಯ ವಿಷಯಗಳನ್ನು ಲೇಖನರೂಪಕ್ಕಿಳಿಸುತ್ತಿರುವಾಗಲೇ ಗೃಹ ಸಚಿವಾಲಯವು ನಾಗರಿಕರ ಮೇಲೆ ‘ಕಣ್ಗಾವಲು ’ಇಡಲು ವಿತ್ತ ಸಚಿವಾಲಯದಿಂದ 50,000 ಕೋ.ರೂ.ಗಳಿಗಾಗಿ ಬೇಡಿಕೆಯನ್ನಿಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ. ರಾಜ್ಯಗಳಿಗೆ ಕೇಂದ್ರವು ನೀಡಬೇಕಾಗಿರುವ ಹಣವನ್ನು ಪಾವತಿಸಲು ನಿರಾಕರಿಸಲಾಗುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ ಮತ್ತು ಗೃಹಸಚಿವಾಲಯವು ಸ್ವತಂತ್ರ ಚಿಂತಕರು, ಸಾಮಾಜಿಕ ಹೋರಾಟಗಾರರು ಮತ್ತು ಪತ್ರಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇರುವ ಮೂಲಕ ತನ್ನ ಅಧಿಕಾರವನ್ನು ಅಪಾಯಕಾರಿಯಾಗಿ ದುರುಪಯೋಗಿಸಿಕೊಂಡಿದೆ.

ಮಾತೃಭೂಮಿ ಮತ್ತು ವೈಭವ

1929ರ ವೇಳೆಗೆ ಇಟಲಿಯ ಸಂಸತ್ತು ಸರಕಾರದ ನಿರ್ಧಾರಗಳಿಗೆ ರಬ್ಬರ್ ಸ್ಟ್ಯಾಂಪ್‌ನ ಮಟ್ಟಕ್ಕಿಳಿದಿತ್ತು. ಅಲ್ಲಿ ಉಳಿದುಕೊಂಡಿದ್ದ ಕೆಲವೇ ಪ್ರತಿಪಕ್ಷ ನಾಯಕರ ಭಾಷಣಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಈ ನಾಯಕರ ಭಾಷಣದ ವೇಳೆ ಸದನದಲ್ಲಿ ಮತ್ತು ಸಾರ್ವಜನಿಕ ಗ್ಯಾಲರಿಗಳಿಂದ ಧಿಕ್ಕಾರದ ಕೂಗುಗಳು ಕೇಳಿಬರುತ್ತಿದ್ದವು.

ಕ್ರೋಸ್ ಜೀವನ ಚರಿತ್ರೆಯನ್ನು ಓದಿದ ಬಳಿಕ ನಾನು ಡೇವಿಡ್ ಗಿಲ್ಮರ್‌ರ ‘ದಿ ಪರ್ಸ್ಯೂಟ್ ಆಫ್ ಇಟಲಿ ’ಪುಸ್ತಕವನ್ನು ಕೈಗೆತ್ತಿಕೊಂಡಿದ್ದೆ. ಇದು ಇಟಲಿ ದೇಶದ ಇತಿಹಾಸದ ಕುರಿತು ಓದಲೇಬೇಕಾದ ಪುಸ್ತಕವಾಗಿದೆ. 400 ಪುಟಗಳ ಈ ಪುಸ್ತಕದ 30 ಪುಟಗಳು ಮುಸೊಲಿನಿಯ ಅಧಿಕಾರಾವಧಿಯ ಕುರಿತು ಮಾತನಾಡಿವೆ. ರಿಝಿಯಂತೆ ಗಿಲ್ಮರ್ ಅಂದಿನ ಇಟಲಿಯ ಬಗ್ಗೆ ಹೇಳಿರುವುದು ನಡುಕವನ್ನು ಮೂಡಿಸುತ್ತದೆ ಮತ್ತು ನಾನು ಹಾಲಿ ನನ್ನ ದೇಶದಲ್ಲಿ ಅಂತಹುದೇ ಸ್ಥಿತಿಯನ್ನು ನೋಡುತ್ತಿದ್ದೇನೆ.

1930ರ ದಶಕದಲ್ಲಿ ಆಡಳಿತದ ಶೈಲಿಯು ಹೆಚ್ಚಿನ ಆಡಂಬರದಿಂದ ಕೂಡಿತ್ತು. ಹೆಚ್ಚು ಪರೇಡ್ ಗಳು, ಹೆಚ್ಚು ಸಮವಸ್ತ್ರಗಳು, ಹೆಚ್ಚು ಸೆನ್ಸಾರ್‌ಶಿಪ್, ಹೆಚ್ಚು ದರ್ಪ, ನಾಯಕನಿಂದ ಇನ್ನಷ್ಟು ಭಾಷಣಗಳು, ಹೆಚ್ಚಿನ ಕೂಗುಗಳು, ಬಾಲ್ಕನಿಯಿಂದ ಜನಜಂಗುಳಿಯತ್ತ ಕೈಬೀಸುವಿಕೆ ಇವೆಲ್ಲವೂ ಅಲ್ಲಿ ಮೆರೆಯುತ್ತಿದ್ದವು ಮತ್ತು ಜನಜಂಗುಳಿ ತನ್ನ ನಾಯಕನ ಪ್ರತಿಯೊಂದು ಮಾತಿಗೂ ‘ಡ್ಯೂಸ್,ಡ್ಯೂಸ್,ಡ್ಯೂಸ್(ಅಧಿಪತಿ)’ ಎಂದು ಜೈಕಾರ ಹಾಕುತ್ತಿತ್ತು ಎಂದು ಗಿಲ್ಮರ್ ಬರೆದಿದ್ದಾರೆ.

ಇವುಗಳಲ್ಲಿ ಹೆಚ್ಚಿನವುಗಳನ್ನು ಮೋದಿಯವರ ಆಡಳಿತದಲ್ಲಿಯೂ ನೋಡಬಹುದು. ವಿಶೇಷವಾಗಿ 2019ರಲ್ಲಿ ಎರಡನೇ ಬಾರಿ ಗೆದ್ದನಂತರ ಅವರ ಪ್ರತಿಯೊಂದು ಮಾತಿಗೂ ಜನರು ‘ಮೋದಿ,ಮೋದಿ,ಮೋದಿ’ ಎಂದು ಜೈಕಾರ ಹಾಕುತ್ತಿದ್ದಾರೆ.

ಇಟಲಿಯ ನಾಯಕತ್ವ ಇಷ್ಟೊಂದು ಜನಪ್ರಿಯತೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿದ್ದು ಹೇಗೆ?, ಗಿಲ್ಮರ್ ಉತ್ತರ ಹೀಗಿದೆ: ಮುಸೊಲಿನಿ ಅಪ್ಪಟ ಇಟಾಲಿಯನ್ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದು ಆತ ಅಷ್ಟೊಂದು ಸುದೀರ್ಘ ಸಮಯ ಅಧಿಕಾರದಲ್ಲಿ ಉಳಿಯಲು ಭಾಗಶಃ ಕಾರಣವಾಗಿತ್ತು. ಆತ ಜನರಲ್ಲಿ ನಿರೀಕ್ಷೆಗಳು ಮತ್ತು ಭೀತಿಗಳನ್ನು ಮೂಡಿಸಿದ್ದ ಮತ್ತು ಇಟಲಿ ತನ್ನ ಉದಾರವಾದಿ ರಾಜಕಾರಣಿಗಳು ಮತ್ತು ಯುದ್ಧಕಾಲದ ಮಿತ್ರರಿಂದ ತನಗೆ ಸಿಗಬೇಕಾಗಿದ್ದ ಸ್ಥಾನದಿಂದ ವಂಚಿತವಾಗಿದೆ ಎಂಬ ಭಾವನೆಯನ್ನು ಅವರಲ್ಲಿ ಹುಟ್ಟಿಸಿದ್ದ.

ಇಲ್ಲಿಯೂ ಅದೇ ನಡೆಯುತ್ತಿದೆ. ಭಾರತದ ಹಿಂದಿನ ಸ್ವರ್ಣಯುಗವನ್ನು ಪ್ರತಿಪಾದಿಸುತ್ತಿರುವ ಮೋದಿ,ಆಗ ದೇಶದಲ್ಲಿ ಮತ್ತು ವಿಶ್ವದಲ್ಲಿ ಹಿಂದುಗಳು ಪರಮೋಚ್ಚರಾಗಿದ್ದರು ಮತ್ತು ಮುಸ್ಲಿಂ ಮತ್ತು ಬ್ರಿಟಿಷ್ ಆಕ್ರಮಣಕೋರರಿಂದಾಗಿ ಹಿಂದುಗಳು ಆ ಸ್ಥಾನದಿಂದ ಕೆಳಕ್ಕೆ ಜಾರಿದ್ದಾರೆ ಎಂದು ವಾದಿಸುತ್ತಿದ್ದಾರೆ ಮತ್ತು ಹಿಂದುಗಳು ಹಾಗೂ ಭಾರತವನ್ನು ಮತ್ತೆ ಅವನತಿಗೊಯ್ಯುವ ಕುತಂತ್ರಿ ಮತ್ತು ಭ್ರಷ್ಟ ಕಾಂಗ್ರೆಸ್ ರಾಜಕಾರಣಿಗಳ ವಿರುದ್ಧ ಹೋರಾಡಬಲ್ಲ ಏಕೈಕ ನಾಯಕ ಎಂದು ತನ್ನನ್ನು ಬಿಂಬಿಸಿಕೊಳ್ಳುತ್ತಿದ್ದಾರೆ.

2020ರ ದಶಕದ ಭಾರತದೊಳಗೆ 1920ರ ದಶಕದ ಇಟಲಿಯ ಕುರಿತ ಪುಸ್ತಕಗಳನ್ನು ಓದುವಾಗ ಹಲವಾರು ಸಾಮ್ಯತೆಗಳು ನನ್ನನ್ನು ವಿಷಾದಕ್ಕೀಡು ಮಾಡಿದ್ದವು ನಿಜ, ಆದರೆ ಕೆಲವು ವಿಷಯಗಳು ನನಗೆ ಸಮಾಧಾನವನ್ನು ನೀಡಿವೆ. ಮುಸೊಲಿನಿಯ ಇಟಲಿಯಂತಲ್ಲದೆ ಮೋದಿಯ ಭಾರತದಲ್ಲಿ ಬಿಜೆಪಿಯು ಇತರ ಪಕ್ಷಗಳಿಂದ ರಾಜಕೀಯ ವಿರೋಧವನ್ನು ಎದುರಿಸಬೇಕಿದೆ. ಕೇಂದ್ರದಲ್ಲಿ ಪ್ರತಿಪಕ್ಷವು ತುಂಬ ದುರ್ಬಲಗೊಂಡಿದೆಯಾದರೂ ಸುಮಾರು ಅರ್ಧ ಡಝನ್ ರಾಜ್ಯಗಳಲ್ಲಿ ಈಗಲೂ ಸಾಕಷ್ಟು ಪ್ರಬಲವಾಗಿವೆ. ಮಾಧ್ಯಮಗಳಿಗೆ ಕಡಿವಾಣ ಹಾಕಲಾಗಿದೆ,ಆದರೆ ಸಂಪೂರ್ಣವಾಗಿ ದಮನಿಸಲಾಗಿಲ್ಲ. ಮುಸೊಲಿನಿಯ ಇಟಲಿಯಲ್ಲಿ ಬೆನೆಡೆಟ್ಟೊ ಕ್ರೋಸ್ ಒಬ್ಬರೇ ವಿರೋಧದ ಧ್ವನಿಯೆತ್ತಿದ್ದರೆ ಮೋದಿಯ ಭಾರತದಲ್ಲಿ ಈಗಲೂ ಪ್ರಜಾಪ್ರಭುತ್ವದ ಸ್ಥಾಪಕ ತತ್ತ್ವಗಳ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಎಲ್ಲ ಭಾಷೆಗಳಲ್ಲಿ ಧೈರ್ಯದಿಂದ ಮಾತನಾಡಬಲ್ಲ ಹಲವಾರು ಲೇಖಕರು ಮತ್ತು ಬುದ್ಧಿಜೀವಿಗಳು ಇದ್ದಾರೆ.

ತನ್ನ ಪುಸ್ತಕದಲ್ಲಿ ಮುಸೊಲಿನಿ ತನ್ನ ಅಧಿಕಾರವನ್ನು ಹೇಗೆ ಭದ್ರಪಡಿಸಿಕೊಂಡಿದ್ದ ಎನ್ನುವುದನ್ನು ಬಣ್ಣಿಸಿದ ಬಳಿಕ ಗಿಲ್ಮರ್,ಸಮೃದ್ಧಿಯನ್ನು ಒದಗಿಸಲು ವೈಫಲ್ಯದಿಂದಾಗಿ ಫ್ಯಾಶಿಸಂ ತನ್ನ ಹೊಳಪನ್ನು,ಆಕರ್ಷಣೆಯನ್ನು ಕಳೆದುಕೊಂಡಿತ್ತು. ತಮ್ಮನ್ನು ಉತ್ತಮವಾಗಿ ಆಳಲಾಗುತ್ತಿದೆ ಎಂಬ ಮೋಸದ ಭಾವನೆಗೆ ಇಟಲಿಯ ಜನರು ಪಕ್ಕಾಗಿದ್ದಿರಬಹುದು,ಆದರೆ ತಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಅವರು ತಿಳಿದುಕೊಳ್ಳುವಂತೆ ಮೋಸ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಬರೆದಿದ್ದಾರೆ. ಮುಸೊಲಿನಿ ಉದ್ಯೋಗಗಳನ್ನು ಮತ್ತು ಸಮೃದ್ಧಿಯನ್ನು ಒದಗಿಸುವಲ್ಲಿ ವಿಫಲನಾಗಿದ್ದರೆ ಮೋದಿ ಆರ್ಥಿಕ ರಂಗದಲ್ಲಿ ಅದಕ್ಕಿಂತಲೂ ಕೆಟ್ಟದ್ದನ್ನು ಮಾಡಿದ್ದಾರೆ. ಅವರ ತಪ್ಪು ಚಿಂತನೆಗಳು ಮತ್ತು ಮೂರ್ಖ ನೀತಿಗಳು ಉದಾರೀಕರಣದ ಮೂರು ದಶಕಗಳಲ್ಲಿ ಭಾರತೀಯ ಆರ್ಥಿಕತೆಯು ಸಾಧಿಸಿದ್ದ ಪ್ರಗತಿಯ ಹೆಚ್ಚಿನ ಭಾಗವನ್ನು ನಿರ್ನಾಮಗೊಳಿಸಿವೆ.

ಕೋಟ್ಯಂತರ ಯುವಜನರಿಂದು ಮತಾಂಧರಾಗಿ ಮೋದಿಯವರ ಹಿಂಬಾಲಕರಾಗಿದ್ದಾರೆ. ಮುಸೊಲಿನಿಯನ್ನು ಉನ್ಮತ್ತರಾಗಿ ಅನುಸರಿಸಿದ್ದ ಕೋಟ್ಯಂತರ ಯುವಜನರಿಗೆ ಸಂಬಂಧಿಸಿದಂತೆ ಬೆನೆಡೆಟ್ಟೊ ಕ್ರೋಸ್ ಏನನ್ನು ನಿರೀಕ್ಷಿಸಿದ್ದರೋ ಅದೇ ಭಾರತದ ಯುವಜನರು ಮತ್ತು ನಮಗಾಗಿ ಕಾಯುತ್ತಿದೆ. ಸರ್ವಾಧಿಕಾರಿ ಮುಸೊಲಿನಿಯ ನಿಧನದ ಮತ್ತು ಆತನ ಆಡಳಿತ ಅಂತಿಮವಾಗಿ ಪತನಗೊಂಡ ಬಳಿಕ ಕ್ರೋಸ್,ಯುವಜನರನ್ನು ಸರ್ವಾಧಿಕಾರಿಯ ಆಡಳಿತ ಶೋಷಿಸಿದ್ದನ್ನು ಮತ್ತು ಅಂತ್ಯದಲ್ಲಿ ಅವರನ್ನು ವಂಚಿಸಿದ್ದನ್ನು ನೋವಿನಿಂದ ಬರೆದಿದ್ದಾರೆ.

ಮುಸೊಲಿನಿ ಮತ್ತು ಆತನ ಫ್ಯಾಶಿಸ್ಟ್ ಅನುಯಾಯಿಗಳು ತಾವು ಸದಾಕಾಲ ಇಟಲಿಯನ್ನು ಆಳುತ್ತೇವೆ ಎಂದು ಭಾವಿಸಿದ್ದರು. ನರೇಂದ್ರ ಮೋದಿ ಮತ್ತು ಬಿಜೆಪಿ ಕೂಡ ಹಾಗೆಯೇ ಭಾವಿಸಿದ್ದಾರೆ. ಶಾಶ್ವತ ಅಧಿಕಾರದ ಈ ಭ್ರಮೆ ಭ್ರಮೆಯಾಗಿಯೇ ಉಳಿಯಲಿದೆ,ಆದರೆ ಈಗಿನ ಆಡಳಿತವು ಅಧಿಕಾರದಲ್ಲಿ ಇರುವವರೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ನೈತಿಕ ದೃಷ್ಟಿಗಳಿಂದ ಅದು ದೇಶಕ್ಕೆ ತುಂಬ ದುಬಾರಿಯಾಗಲಿದೆ. ಮುಸೊಲಿನಿ ಮತ್ತು ಆತನ ಪಕ್ಷವು ಮಾಡಿದ್ದ ವಿನಾಶದಿಂದ ಚೇತರಿಸಿಕೊಳ್ಳಲು ಇಟಲಿಗೆ ದಶಕಗಳೇ ಬೇಕಾದವು. ಮೋದಿ ಮತ್ತು ಅವರ ಪಕ್ಷವು ಮಾಡುತ್ತಿರುವ ವಿನಾಶದಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)