varthabharthi


ಸಂಪಾದಕೀಯ

ಪ್ರಜಾಸತ್ತೆಯ ಬಂಧನ!

ವಾರ್ತಾ ಭಾರತಿ : 15 Sep, 2020

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ಕತ್ತರಿಸಿದವರು, ಶಂಭೂಕನ ತಲೆ ಕತ್ತರಿಸಿದ ಮನಸ್ಥಿತಿ ಮತ್ತು ಭಗತ್ ಸಿಂಗ್‌ನಂತಹ ಯುವ ವಿದ್ಯಾರ್ಥಿಗಳನ್ನು ನೇಣಿಗೇರಿಸಿದ ಮನಸ್ಥಿತಿ ಜಂಟಿಯಾಗಿ ದೇಶವನ್ನು ಆಳತೊಡಗಿವೆ. ಪರಿಣಾಮವಾಗಿ, ದೇಶದ ಭವಿಷ್ಯದ ಸೊತ್ತಾಗಿರುವ ವಿದ್ಯಾರ್ಥಿಗಳು ಹೆಬ್ಬೆರನ್ನು ಮಾತ್ರವಲ್ಲ, ಕೊರಳನ್ನೇ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿದು ಪ್ರತಿಭಟಿಸಿದ, ಈ ದೇಶದ ಜಾತ್ಯತೀತ ವೌಲ್ಯಗಳ ಪರವಾಗಿ ಧ್ವನಿಯೆತ್ತಿದ ಯುವಕರು ‘ದೇಶದ್ರೋಹಿ’ಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದ ಮೇಲೆ, ಈ ದೇಶವನ್ನು ಪ್ರಜಾಸತ್ತಾತ್ಮಕವಾದ ವ್ಯವಸ್ಥೆ ಆಳುತ್ತಿದೆ ಎಂದು ನಂಬುವುದಾದರೂ ಹೇಗೆ? ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ಗಳನ್ನು ಗುರುತಿಸುವ ಪೊಲೀಸ್ ಇಲಾಖೆಯ ಅಮೋಘ ತನಿಖಾ ಕಾರ್ಯಾಚರಣೆ ಮುಂದುವರಿದಿದ್ದು, ಇದೀಗ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಮಧ್ಯ ರಾತ್ರಿ ಬಂಧಿಸಲಾಗಿದೆ. ಆ ಮೂಲಕ ದಿಲ್ಲಿ ಗಲಭೆಗೆ ಸಂಬಂಧಿಸಿ ಇಡೀ ದೇಶವನ್ನೇ ಪೊಲೀಸರು ಜೈಲಾಗಿ ಪರಿವರ್ತಿಸಲು ಹೊರಟಿದ್ದಾರೆ. ದೇಶಾದ್ಯಂತ ಯಾರೆಲ್ಲ ಸಿಎಎ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದಾರೆಯೋ ಅವರನ್ನೆಲ್ಲ ದಿಲ್ಲಿ ಗಲಭೆಯ ಸಂಚುಕೋರರಾಗಿ ಪೊಲೀಸರು ಗುರುತಿಸುತ್ತಿದ್ದಾರೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಈ ದೇಶವನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಚಿಂತಕರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ.

‘ಗೋಲಿ ಮಾರೋ ಸಾಲೋಂಕೋ’ ಎಂದು ಬಹಿರಂಗವಾಗಿ ಘೋಷಣೆಕೂಗಿದ, ಸಿಎಎ ವಿರೋಧಿಗಳನ್ನು ಕೊಂದು ಹಾಕಲು ಸಾರ್ವಜನಿಕವಾಗಿ ಕರೆಕೊಟ್ಟ, ಸಾರ್ವಜನಿಕವಾಗಿ ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಿದ, ವಿಶ್ವ ವಿದ್ಯಾನಿಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಬರ್ಬರ ಹಲ್ಲೆ ನಡೆಸಿದ ಗೂಂಡಾಗಳು ಇಂದು ‘ದೇಶಕಟ್ಟು’ವವರೆಂಬಂತೆ ಬಿಂಬಿತರಾಗುತ್ತಿದ್ದಾರೆ. ಈ ದೇಶಕ್ಕೆ ನೂರಾರು ಪ್ರತಿಭಾವಂತರನ್ನು ಕೊಟ್ಟ, ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಜಾಮಿಯಾ, ಜೆಎನ್‌ಯುನಂತಹ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳನ್ನು ಸರಕಾರ ‘ಕ್ರಿಮಿನಲ್’ಗಳಾಗಿ, ‘ದೇಶದ್ರೋಹಿ’ಗಳಾಗಿ ಗುರುತಿಸುತ್ತಿದೆ. ಒಂದು ಕಾಲವಿತ್ತು, ಕಾಶ್ಮೀರ ಮತ್ತು ಈಶಾನ್ಯ ಭಾರತದ ಉಗ್ರವಾದಿಗಳನ್ನು ‘ಮುಖ್ಯವಾಹಿನಿಗೆ ಬಂದು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಿ’ ಎಂದು ಸರಕಾರಗಳು ಆಹ್ವಾನ ನೀಡುತ್ತಿದ್ದವು. ‘ಕೋವಿಯನ್ನು ಕೆಳಗಿಟ್ಟು ಮಾತುಕತೆಗೆ ಬನ್ನಿ’ ಎಂದು ಕರೆ ನೀಡಿ, ಪ್ರಜಾಸತ್ತಾತ್ಮಕ ದಾರಿಯಲ್ಲಿ ಸರಕಾರವನ್ನು ಪ್ರಶ್ನಿಸುವುದಕ್ಕೆ ಅವರನ್ನು ಮನವೊಲಿಸುತ್ತಿತ್ತು. ಯಾವಾಗ ಪ್ರಜಾಸತ್ತಾತ್ಮಕ ಹೋರಾಟಕ್ಕೆ ವ್ಯವಸ್ಥೆ ಮಣಿಯುವುದಿಲ್ಲವೋ ಅಥವಾ ಅದನ್ನು ದಮನಿಸುವುದಕ್ಕೆಯತ್ನಿಸುತ್ತದೆಯೋ ಆಗ ಜನರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಹಿಂಸಾತ್ಮಕ ಪ್ರತಿಭಟನೆಗೆ ಇಳಿಯುತ್ತಾರೆ. ಈಶಾನ್ಯ ಭಾರತದಲ್ಲಿ ನಕ್ಸಲ್ ಚಳವಳಿ ಬೆಳೆಯುವುದರ ಹಿಂದೆ ವ್ಯವಸ್ಥೆಯ ದಮನಕಾರಿ ನೀತಿ ಸಾಕಷ್ಟು ಕೆಲಸ ಮಾಡಿದೆ.

ವಿಪರ್ಯಾಸವೆಂದರೆ, ಇದೀಗ ದಿಲ್ಲಿ ಸೇರಿದಂತೆ ದೇಶಾದ್ಯಂತ ಪ್ರಜಾಸತ್ತಾತ್ಮಕ ಮತ್ತು ಅಹಿಂಸಾತ್ಮಕವಾಗಿ ನಡೆಯುತ್ತಿರುವ ಎಲ್ಲ ಪ್ರತಿಭಟನೆಗಳನ್ನು ಪೊಲೀಸ್ ಗುಂಡು ಮತ್ತು ಲಾಠಿಗಳ ಮೂಲಕ ದಮನಿಸಲು ಸರಕಾರ ಯತ್ನಿಸುತ್ತಿದೆ. ಸರಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವುದನ್ನೇ ದೇಶದಲ್ಲಿ ನಿರಾಕರಿಸಲಾಗಿದೆ. ಸಂಸತ್‌ನಲ್ಲಿ ಪ್ರಶ್ನೋತ್ತರ ಅವಧಿಯನ್ನೇ ಕಿತ್ತು ಹಾಕಿರುವುದನ್ನು ಈ ನಿಟ್ಟಿನಲ್ಲಿ ಒಂದು ರೂಪಕವಾಗಿ ನಾವು ಪರಿಗಣಿಸಬೇಕು. ದಿಲ್ಲಿ ಹಿಂಸಾಚಾರದ ಹಿಂದೆ ಯಾರಿದ್ದಾರೆ ಎನ್ನುವುದಕ್ಕೆ ಪ್ರತ್ಯೇಕ ತನಿಖೆಯೊಂದರ ಅಗತ್ಯವೇನೂ ಇಲ್ಲ. ಈ ಹಿಂಸಾಚಾರ ನಡೆಯುವ ಕೆಲವು ದಿನಗಳ ಮೊದಲು ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಸಾರ್ವಜನಿಕವಾಗಿ ಆಡಿರುವ ಭಾಷಣಗಳು ಮತ್ತು ಹಿಂಸಾಚಾರಕ್ಕೆ ನೀಡಿರುವ ಕರೆಗಳೇ ಎಲ್ಲವನ್ನೂ ಹೇಳುತ್ತವೆೆ. ಆದರೆ ಅಂತಹ ಭಾಷಣಗಳಿಗೆ ಸಂಬಂಧಿಸಿ ಪೊಲೀಸರು ಈವರೆಗೆ ಯಾವುದೇ ಬಿಜೆಪಿಯ ನಾಯಕರನ್ನು ಬಂಧಿಸಿಲ್ಲ. ಇಷ್ಟಕ್ಕೂ ದಿಲ್ಲಿಯಲ್ಲಿ ನಡೆದಿರುವುದು ಗಲಭೆ ಅಲ್ಲವೇ ಅಲ್ಲ. ದಿಲ್ಲಿಯಲ್ಲಿ ನಡೆದಿರುವುದು ಅಮಾಯಕರ ಮೇಲೆ ಏಕಮುಖ ಹಿಂಸಾಚಾರ.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಯುವಕರು ಗುಂಪು ಗುಂಪಾಗಿ ಅಮಾಯಕರ ಮೇಲೆ ಎರಗಿ ಅವರನ್ನು ಕೊಂದು ಚರಂಡಿಗೆ ಎಸೆದಿದ್ದಾರೆ. ಮೃತರಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರೇ ಅಧಿಕವಾಗಿದ್ದಾರೆ. ಪೊಲೀಸರು ವೌನವಾಗಿ ಈ ಹಿಂಸಾಚಾರಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ. ದಿಲ್ಲಿ ಹಿಂಸಾಚಾರದಲ್ಲಿ ಪೊಲೀಸ್ ವೈಫಲ್ಯವೇ ತನಿಖೆಯಲ್ಲಿ ಆದ್ಯತೆಯನ್ನು ಪಡೆದುಕೊಳ್ಳಬೇಕಾಗಿತ್ತು. ಹಿಂಸಾಚಾರ ನಡೆಸುತ್ತಿದ್ದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಪೊಲೀಸರನ್ನು ತಡೆದು ನಿಲ್ಲಿಸಿದ ಶಕ್ತಿ ಯಾವುದು ಎನ್ನುವುದು ತನಿಖೆಯಿಂದ ಹೊರಬಂದರೆ, ದಿಲ್ಲಿ ಹಿಂಸಾಚಾರದ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ದುರದೃಷ್ಟವಶಾತ್, ಆರೋಪಿ ಸ್ಥಾನದಲ್ಲಿ ನಿಂತಿರುವ ಪೊಲೀಸರೇ ಹಿಂಸಾಚಾರದ ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ಮೂಲಕ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ ಮಾತ್ರವಲ್ಲ, ಸಂತ್ರಸ್ತರನ್ನೇ ಅಪರಾಧಿಯನ್ನಾಗಿಸುವ ಮೂಲಕ ಮತ್ತೆ ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ.

ಉಮರ್ ಖಾಲಿದ್ ಸಿಎಎ ವಿರುದ್ಧದ ಸಮಾವೇಶದಲ್ಲಿ ಎಲ್ಲೂ ದೇಶ ವಿರೋಧಿ ಅಥವಾ ಹಿಂಸಾತ್ಮಕ ಘೋಷಣೆಗಳನ್ನು ಕೂಗಿಲ್ಲ. ಅವರು ಈ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೇ ನಿಂತು ಸಿಎಎ ಹೇಗೆ ಈ ದೇಶವನ್ನು ಒಡೆಯುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ. ತನ್ನ ಮೇಲಿನ ಹುಸಿ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಇದು ದಿಲ್ಲಿಯ ಹಿಂಸಾಚಾರಕ್ಕೆ ಪ್ರೇರಣೆ ನೀಡುವುದಾದರೂ ಹೇಗೆ? ಇಂದು ಪೊಲೀಸರು ತನಿಖೆಯ ಹೆಸರಿನಲ್ಲಿ ಯಾರನ್ನೆಲ್ಲ ಬಂಧಿಸಿ ಜೈಲಿಗೆ ತಳ್ಳಿದ್ದಾರೆಯೋ ಅವರ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವ ಸಾಧ್ಯತೆಗಳೇ ಇಲ್ಲ ಎನ್ನುವುದನ್ನು ಈಗಾಗಲೇ ಹಲವು ನ್ಯಾಯವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟಿದ್ದರೂ ಯಾವುದೇ ದಾಖಲೆ, ಸಾಕ್ಷಗಳಿಲ್ಲದೆಯೇ ದಿಲ್ಲಿ ಹಿಂಸಾಚಾರವನ್ನು ಸಂತ್ರಸ್ತರ ತಲೆಗೆ ಕಟ್ಟುತ್ತಿರುವ ಪೊಲೀಸರ ಹುನ್ನಾರವೇನು ಎನ್ನುವುದು ತಿಳಿದುಕೊಳ್ಳುವುದು ಕಷ್ಟವಿಲ್ಲ.

ಸಿಎಎ ಕಾಯ್ದೆಯ ವಿರುದ್ಧದ ಹೋರಾಟಗಳಲ್ಲಿ ಯಾರೆಲ್ಲ ಮುಂಚೂಣಿಯಲ್ಲಿದ್ದರೋ ಅವರನ್ನೆಲ್ಲ ದಿಲ್ಲಿಯ ಹಿಂಸಾಚಾರದಲ್ಲಿ ಸಂಬಂಧ ಕಲ್ಪಿಸಿ ದಮನಿಸುವುದು ಮುಖ್ಯ ಗುರಿ. ಜೊತೆಗೆ, ನಿಜಕ್ಕೂ ಹಿಂಸಾಚಾರದಲ್ಲಿ ಯಾರೆಲ್ಲ ಭಾಗವಹಿಸಿದ್ದರೋ ಅವರನ್ನೆಲ್ಲ ರಕ್ಷಿಸುವುದು ಕೂಡ. ಒಂದೆಡೆ ದೇಶದ ಆರ್ಥಿಕತೆ ನೆಲಕಚ್ಚಿದೆ. ಮಗದೊಂದೆಡೆ ಗಡಿಯಲ್ಲಿ ಚೀನಾ ಹೆಡೆ ಬಿಚ್ಚಿದೆ. ತನ್ನೆಲ್ಲ ವೈಫಲ್ಯಗಳನ್ನು ಮುಚ್ಚುವುದಕ್ಕಾಗಿ ಈ ದೇಶದ ವಿದ್ಯಾರ್ಥಿಗಳನ್ನು, ಪ್ರಗತಿ ಪರ ಚಿಂತಕರನ್ನು ಸುಳ್ಳು ಆರೋಪಗಳಲ್ಲಿ ಬಂಧಿಸುವ ಮೂಲಕ ಸರಕಾರ ದೇಶವನ್ನು ಒಳ ಹೊರಗೆ ಇನ್ನಷ್ಟು ದುರ್ಬಲಗೊಳಿಸುತ್ತಿದೆ. ಉಮರ್ ಖಾಲಿದ್ ಬಂಧನ ಪರೋಕ್ಷವಾಗಿ ಈ ದೇಶದ ಪ್ರಜಾಸತ್ತೆಯ ಬಂಧನವಾಗಿದೆ. ಅವರ ಬಿಡುಗಡೆಗಾಗಿ ಈ ದೇಶದ ಯುವಕರು, ವಿದ್ಯಾರ್ಥಿಗಳು ಒಂದಾಗಿ ಮತ್ತೊಮ್ಮೆ ಬೀದಿಗಿಳಿದು ಪ್ರಜಾಸತ್ತಾತ್ಮಕ, ಅಹಿಂಸಾತ್ಮಕವಾದ ಹೋರಾಟ ನಡೆಸುವುದು ಅತ್ಯಗತ್ಯವಾಗಿದೆ. ಬಿಡುಗಡೆಯಾಗಬೇಕಾಗಿರುವುದು ಕೇವಲ ಉಮರ್ ಖಾಲಿದ್ ಅಲ್ಲ, ಪ್ರಭುತ್ವದ ಕಪಿಮುಷ್ಟಿಯಲ್ಲಿ ಏದುಸಿರು ಬಿಡುತ್ತಿರುವ ಈ ದೇಶದ ಪ್ರಜಾಸತ್ತೆ ಕೂಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)