varthabharthi


ಸಂಪಾದಕೀಯ

ಸಂಸತ್ತಿನ ಮುಂಗಾರು ಅಧಿವೇಶನ: ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕದಿರಿ

ವಾರ್ತಾ ಭಾರತಿ : 16 Sep, 2020

ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ರೈತರಿಗೆ ಸಂಬಂಧಿಸಿದ ಮೂರು ವಿಧೇಯಕಗಳ ಕುರಿತು ಪ್ರತಿಪಕ್ಷಗಳ ಪ್ರತಿಭಟನೆಯೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದೆ. ಸಂಸತ್ತಿನ ಉಭಯ ಸದನಗಳ ಅಧಿವೇಶನ ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಇದಾಗಿ ಆರು ತಿಂಗಳ ನಂತರ ಮತ್ತೆ ಸಂಸತ್ ಅಧಿವೇಶನ ಕರೆಯಲೇಬೇಕು. ಇಲ್ಲವಾದರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಸರಕಾರ ಅನಿವಾರ್ಯವಾಗಿ ಮುಂಗಾರು ಅಧಿವೇಶನ ಕರೆದಿದೆ ಎಂದರೆ ತಪ್ಪಲ್ಲ. ಪ್ರಶ್ನೋತ್ತರ ಕಲಾಪಗಳಿಗೆ ಅವಕಾಶವಿಲ್ಲದ, ಶೂನ್ಯ ಸಮಯವನ್ನು ಮೊಟಕುಗೊಳಿಸಿರುವ ಈ ಅಧಿವೇಶನದಲ್ಲಿ ಜನಸಾಮಾನ್ಯರನ್ನು ಬಾಧಿಸುತ್ತಿರುವ ಜ್ವಲಂತ ಪ್ರಶ್ನೆಗಳಿಗೆ ಎಷ್ಟರ ಮಟ್ಟಿಗೆ ಅವಕಾಶ ದೊರಕುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

 ಕೋವಿಡ್-19 ಬರುವ ಮುಂಚೆಯೇ ದೇಶದ ಆರ್ಥಿಕತೆ ಬಿಕ್ಕಟ್ಟಿನ ಸುಳಿಗೆ ಸಿಲುಕಿತ್ತು. ನೋಟು ಅಮಾನ್ಯೀಕರಣ, ಜಿಎಸ್‌ಟಿ, ನಿರುದ್ಯೋಗದಂತಹ ಸಮಸ್ಯೆಗಳು ಜನಸಾಮಾನ್ಯರನ್ನು ಹಿಂಡಿ ಹಿಪ್ಪೆಮಾಡಿದ್ದವು. ಕಳೆದ ಮಾರ್ಚ್‌ನಲ್ಲಿ ಕೋವಿಡ್ ವೈರಾಣು ಹಬ್ಬತೊಡಗಿದ ನಂತರ ಪ್ರಧಾನ ಮಂತ್ರಿಗಳು ತರಾತುರಿಯಲ್ಲಿ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದರು. ಒಂದೆರೆಡು ದಿನಗಳ ಕಾಲಾವಕಾಶವನ್ನೂ ನೀಡದೆ ಘೋಷಿಸಲಾದ ಅವೈಜ್ಞಾನಿಕವಾದ ದಿಗ್ಬಂಧನದ ಪರಿಣಾಮವಾಗಿ ದೇಶದ ನಾನಾ ನಗರಗಳಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ಹೋಗಿದ್ದ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ತೆರಳಿದರು. ಅವರಲ್ಲಿ ಅನೇಕರು ಹಸಿವು ಮತ್ತು ಹಲವಾರು ಕಾರಣಗಳಿಂದ ಅಸು ನೀಗಿದರು. ಇನ್ನೊಂದೆಡೆ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾದರು. ಶಾಲಾ-ಕಾಲೇಜುಗಳು ಮುಚ್ಚಿದವು. ಹೀಗಾಗಿ ಗ್ರಾಮೀಣ ಕೃಷಿ ಆರ್ಥಿಕತೆ ಮೇಲೆ ಹೆಚ್ಚಿನ ಒತ್ತಡ ಬಿತ್ತು. ಎಷ್ಟೇ ಸಂಕಟ ಅನುಭವಿಸಿದರೂ ದೇಶದ ಜನರು ಕೋವಿಡ್ ಎದುರಿಸಲು ಸರಕಾರಕ್ಕೆ ಸಹಕಾರ ನೀಡಿದರು.

ಆದರೆ ಮೋದಿ ಸರಕಾರ ಮಾತ್ರ ಕೊರೋನ ವಿಶೇಷ ಪರಿಸ್ಥಿತಿಯನ್ನು ಬಳಸಿಕೊಂಡು ರೈಲು, ವಿಮೆ ಸೇರಿದಂತೆ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಮಾಡಲು ಮುಂದಾಯಿತು. ಭಿನ್ನಾಭಿಪ್ರಾಯ ಹೊಂದಿದ ಧ್ವನಿಗಳನ್ನು ದಮನ ಮಾಡಲು ಪೊಲೀಸ್ ಬಲವನ್ನು ಮತ್ತು ಯುಎಪಿಎ ಎಂಬ ಕರಾಳ ಕಾನೂನನ್ನು ಬಳಸಿಕೊಂಡಿತು. ಹಲವಾರು ಹೆಸರಾಂತ ಚಿಂತಕರನ್ನು ಜೈಲಿಗೆ ತಳ್ಳಿತು. ಈಗ ರೈತರ ಹಕ್ಕುಗಳು ಮತ್ತು ಆದಾಯದ ಮೇಲೆ ದಾಳಿ ಮಾಡುವ ಕರಾಳ ವಿಧೇಯಕಗಳನ್ನು ಸಂಸತ್ತಿನಲ್ಲಿ ತಂದಿದೆ. ಇದರಿಂದ ದೇಶದ ಕೃಷಿಕ್ಷೇತ್ರ ಸಂಪೂರ್ಣ ನಾಶವಾಗುತ್ತದೆ ಎಂದು ಸದನದಲ್ಲಿ ಪ್ರತಿಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿರುವುದರಲ್ಲಿ ತಪ್ಪೇನೂ ಇಲ್ಲ. ಇಂತಹ ಸಂದರ್ಭದಲ್ಲಿ ಸರಕಾರ ಸದನದಲ್ಲಿ ಸೂಕ್ತವಾದ ಸಮಜಾಯಿಷಿ ನೀಡಬೇಕು.

ಮೋದಿ ನೇತೃತ್ವದ ಬಿಜೆಪಿ ಸರಕಾರದ ಫಸಲ್ ಬಿಮಾ ಯೋಜನೆಯ ಬಗೆಗೂ ರೈತ ಸಂಘಟನೆಗಳಿಂದ ತೀವ್ರವಾದ ವಿರೋಧ ವ್ಯಕ್ತವಾಗುತ್ತಿದೆ. 2016ರ ವರೆಗೆ ಸರಕಾರದ ಅಧೀನದಲ್ಲಿದ್ದ ವಿಮಾ ಕಂಪೆನಿಗಳಿಗೆ ಬೆಳೆ ವಿಮೆ ಕಂತುಗಳನ್ನು ಪಡೆದುಕೊಳ್ಳಲು ಅವಕಾಶವಿತ್ತು. ಆದರೆ ಖಾಸಗಿ ಕಂಪೆನಿಗಳಿಗೆ ಅವಕಾಶ ನೀಡಿದ ನಂತರ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಬೆಳೆ ನಷ್ಟವಾದರೂ ಲಾಭಕೋರ ಖಾಸಗಿ ವಿಮಾ ಕಂಪೆನಿಗಳು ಕುಂಟು ನೆಪ ಹೇಳಿ ಪರಿಹಾರ ನೀಡಲು ನಿರಾಕರಿಸುತ್ತಿವೆ. ನಷ್ಟದ ಅಂದಾಜನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. 2019-20ನೇ ಸಾಲಿನ ಮುಂಗಾರು, ಹಿಂಗಾರು ಬೆಳೆ ವಿಮೆ ಹಣ ಇದುವರೆಗೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸದನದಲ್ಲಿ ಸರಕಾರ ಸ್ಪಷ್ಟೀಕರಣ ನೀಡಬೇಕಾಗಿದೆ.

ಇದಲ್ಲದೆ ಸುಮಾರು ಹತ್ತು ಕೋಟಿ ಜನರು ನಿರುದ್ಯೋಗದ ದವಡೆಗೆ ಸಿಲುಕಿದ್ದಾರೆ.ಹಣದುಬ್ಬರ ಮಿತಿ ಮೀರಿದೆ. ಕೊರೋನ ಪೀಡಿತರಿಗೆ ಸರಕಾರದ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸರಿಯಾಗಿ ಸಂಬಳ ಪಾವತಿಯಾಗುತ್ತಿಲ್ಲ. ಪಿ.ಎಂ. ಕೇರ್ಸ್ ನಿಧಿಯ ಉತ್ತರದಾಯಿತ್ವದ ಬಗ್ಗೆ ಜನರಲ್ಲಿ ಮೂಡಿರುವ ಸಂದೇಹವನ್ನು ಸರಕಾರ ನಿವಾರಿಸಬೇಕಾಗಿದೆ. ಆದರೆ ಸರಕಾರದಿಂದ ಅಂತಹ ಸ್ಪಂದನೆ ಕಂಡುಬರುತ್ತಿಲ್ಲ.

ಮೋದಿ ನೇತೃತ್ವದ ಸರಕಾರದ ಬಗ್ಗೆ ಜನರಲ್ಲಿ ಭ್ರಮನಿರಸನವಾಗುತ್ತಿದೆ. ಅಂತಲೇ ಜನರಿಗೆ ಮತಾಂಧತೆಯ ಅನಸ್ತೇಸಿಯಾ ನೀಡಿ ಬದುಕಿನ ವಾಸ್ತವದ ಸಂಕಟಗಳು ಅರಿವೆಗೆ ಬಾರದಂತೆ ಕೋಮು ಧ್ರುವೀಕರಣ ಮಾಡಲು ಆಳುವ ಪಕ್ಷ ಹುನ್ನಾರ ನಡೆಸುತ್ತಲೇ ಇದೆ.

ಗಡಿಯಲ್ಲಿನ ಪರಿಸ್ಥಿತಿಯನ್ನು ಬಳಸಿಕೊಂಡು ಸದನದಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ಗಮನಿಸಿದರೆ ಜನ ಸಾಮಾನ್ಯರ ಜ್ವಲಂತ ಪ್ರಶ್ನೆಗಳಿಗೆ ಅವರ ಬಳಿ ಉತ್ತರಗಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿಭಟನೆಯ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಜೈಲಿಗೆ ತಳ್ಳಿ ದೇಶದ ಭದ್ರತೆಗೆ ಅವರಿಂದ ಅಪಾಯವೆಂಬ ಕತೆಯನ್ನು ಕಟ್ಟಲಾಗುತ್ತದೆ. ಆದರೆ ಇಂತಹ ಕಸರತ್ತುಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದ ದೇಶವನ್ನು ಪಾರು ಮಾಡಲು ಸಾಧ್ಯವಿಲ್ಲ ಎಂಬುದು ಚರಿತ್ರೆಯ ಪಾಠಗಳಿಂದ ಸ್ಪಷ್ಟವಾಗುತ್ತದೆ.

ಯಾವುದೇ ಪ್ರಭುತ್ವ ತನ್ನ ತಪ್ಪಿನಿಂದ ದೇಶವನ್ನು ಬಿಕ್ಕಟ್ಟಿನ ಸುಳಿಗೆ ಸಿಲುಕಿಸಿದಾಗ ಅದರಿಂದ ಪಾರಾಗಲಾಗದೆ ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕಲು ಮುಂದಾಗುತ್ತದೆ.ಈಗ ಮೋದಿ ಸರಕಾರದ ಮೇಲೂ ಇಂತಹ ಆರೋಪಗಳಿವೆ. ಈ ಸಲದ ಸಂಸತ್ ಅಧಿವೇಶನದಲ್ಲಿ ಸರಕಾರ ತನ್ನ ಮೇಲಿನ ಇಂತಹ ಆರೋಪಗಳಿಗೆ ಮತ್ತು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಬೇಕು. ಇಲ್ಲವಾದರೆ ಜನತೆ ಈ ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)