varthabharthi


ಅನುಗಾಲ

ಸಂಬಂಧಗಳ ಬೆನ್ನೇರಿ ಬಂತು...

ವಾರ್ತಾ ಭಾರತಿ : 17 Sep, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೋವಿಡ್-19ರಂತಹ ಮಾರಕ ಸೋಂಕು ಜೀವವನ್ನೂ ಜೀವನವಿಧಾನವನ್ನೂ ಬೆದರಿಸಿದೆ. ನಾವುಳಿದರೆ ಸಾಕು ನಮ್ಮ ಜೀವನ ಅದು ಹೇಗೋ ಸಾಗುತ್ತದೆ ಎಂಬ ಭಯ, ಆತಂಕ ಸಾಮಾಜಿಕ ದರ್ಶನವನ್ನೇ ಕುಲಗೆಡಿಸಿದೆ. ರಾಜಕೀಯ ಹೇಗೂ ಇರಲಿ, ಸರಳವಾದ ಬದುಕು ಕಂಗೆಟ್ಟಿದೆ. ಹೆಣಗಳನ್ನು, ಗಾಯಾಳುಗಳನ್ನು ಲೆಕ್ಕಿಸದೆ ಮುಂದುವರಿಯುವ ಯುದ್ಧದಂತೆ, ಜನಜಂಗುಳಿಯ ಜಾತ್ರೆಯಲ್ಲಿ ಅಡಿಗೆ ಬಿದ್ದವರನ್ನು ಅಭಯ ನೀಡಿ ಒಯ್ಯುವ ರಕ್ಷಕರಿಲ್ಲದ ರಥೋತ್ಸವದಂತೆ, ಈಗ ಅಲ್ಲೋಲಕಲ್ಲೋಲದ ಕ್ಷೋಭೆ ಅಡರಿದೆ.

ಮೊನ್ನೆ ಸೋಮವಾರ (ಸೆಪ್ಟೆಂಬರ್ 14, 2020) ನನ್ನ ದೊಡ್ಡಕ್ಕ 70ಕ್ಕೆ ಸಮೀಪದ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ತನ್ನ ಮಗಳ ಮನೆಯಲ್ಲಿ ತೀರಿಕೊಂಡಳು. ಕೋವಿಡ್-19ರ ನಡುವೆ ಸಹಜ ಅನಾರೋಗ್ಯಕ್ಕೆ ತುತ್ತಾದಳು. ಅವಳ ಮಗ, ಮಗಳು, ಇಬ್ಬರು ತಮ್ಮ ಸಂಸಾರದೊಂದಿಗೆ ಬೆಂಗಳೂರಿನಲ್ಲೇ ಇದ್ದರು. ಹೀಗಾಗಿ ತನ್ನವರು ಬಳಿಯಿಲ್ಲವೆಂಬ ಕೊರಗು ಅವಳನ್ನು ಬಾಧಿಸಿರಲಾರದು. ನಮ್ಮದು ಇಂದಿನ ಕಾಲಕ್ಕೆ ದೊಡ್ಡದೇ ಎಂಬ ಸಂಸಾರ. ನಾವು ನಮ್ಮ ಅಪ್ಪ-ಅಮ್ಮನಿಗೆ ಏಳು ಮಕ್ಕಳು. ನಾಲ್ಕು ಹೆಣ್ಣು, ಮೂರು ಗಂಡು. ಅಗಲಿದ ಅಕ್ಕನೇ ಹಿರಿಯವಳು. ನವ್ಮೂರಿನ, ವಿದ್ಯುತ್ ಸಂಪರ್ಕವೂ ಇಲ್ಲದ, ಇಂದಿಗೂ ಮೊಬೈಲ್ ರೇಂಜ್ ಇಲ್ಲದ ಜಾಗದಲ್ಲಿರುವ ಮನೆಯಲ್ಲಿ ಒಟ್ಟಿಗೇ ಬೆಳೆದುಬಂದೆವು. ತೀರ ಹತ್ತಿರದ ಬಂಧುಗಳಲ್ಲಿಗೆ ಹೋದರೆ ವಾರಗಟ್ಟಲೆ ಅಲ್ಲೇ ಡೇರೆಯೂರುತ್ತಿದ್ದೆವು. ಅಲ್ಲಿನ ಕೆರೆ, ಹಳ್ಳ, ಗುಡ್ಡ- ಹೀಗೆ ಸುತ್ತುವುದು, ಬಿದ್ದು ಗಾಯಮಾಡಿಕೊಳ್ಳುವುದು, ಸಣ್ಣಪುಟ್ಟ ಜಗಳ, ಬಟ್ಟೆ ಹರಿದುಹೋದರೆ ಇತರರ ಬಟ್ಟೆಬರೆಯಲ್ಲಿ ಸುಧಾರಿಸಿಕೊಳ್ಳುವುದು ಇವೆಲ್ಲ ಮಾಮೂಲು. ಜ್ವರ, ಶೀತ, ಬಂದರೆ ಮನೆಮದ್ದು. ಕಂಕುಳಲ್ಲಿ ಕುರುವಾದಾಗ ನನ್ನಜ್ಜ ಕೆಂಪಗೆ ಕಾಯಿಸಿದ ಅರಿಶಿನಕೊಂಬನ್ನು ಕಂಕುಳಿಗೆ ತಿವಿದು ಗುಣಪಡಿಸಿದ್ದುಂಟು. ಕುರುವಿನ ನೋವಿಗಿಂತಲೂ ಈ ತಿವಿತವೇ ಹೆಚ್ಚು ಭಯಕಾರಣದ ವಿಚಾರವಾಗಿತ್ತು. ಹೊಳೆಯಲ್ಲಿ ನೀರು ಬಂದರೆ ಅರಗಿನಮನೆ ಸುಟ್ಟುಹೋದ ಬಳಿಕ ಸೋದರರನ್ನು, ತಾಯಿ ಕುಂತಿಯನ್ನು, ತಾನೊಬ್ಬನೇ ಹೊತ್ತ ಭೀಮಸೇನನಂತೆ ನನ್ನಜ್ಜ ನಾವು ನಾಲ್ಕೋ ಐದೋ ಪುಟ್ಟ ಮೊಮ್ಮಕ್ಕಳನ್ನು ಹಿಡಿದು ಹೊಳೆ ದಾಟಿಸುತ್ತಿದ್ದ. ಅಡಿಕೆ ಸೋಗೆ ಅಟ್ಟಿಹಾಕಲು ಮಾಡಿದ ಮಂಟಪದ ಮೇಲೆ ಆಟವಾಡಲು ಹೋಗಿ ನಾನೂ ನನ್ನ ಓರಗೆಯ ತಮ್ಮನೂ ಹತ್ತಾರು ಅಡಿ ಕೆಳಗೆ ಬಿದ್ದು ಮಣ್ಣು ಮೆತ್ತಿಕೊಂಡು ಮನೆಗೆ ಬಂದು ಮತ್ತೆ ಪೆಟ್ಟು ತಿಂದದ್ದೂ ಇತ್ತು. ಹಿಡಿಯುವುದಕ್ಕೆ ಎಲ್ಲರಿಗೂ ಕೊಡೆಯಿಲ್ಲದಿದ್ದರೆ ಕರಾವಳಿಯಲ್ಲಿ ಪ್ರಚಲಿತ/ಪ್ರಸಿದ್ಧವಾಗಿದ್ದ ಕಿಡಿಂಜೊಳು ಎಂಬ ಮಳೆರಕ್ಷಕವನ್ನು, ಅದು ಇಲ್ಲದಿದ್ದರೆ ಕೊನೆಗೆ ಬಾಳೆ ಎಲೆಯೋ ಕೆಸುವಿನ ಎಲೆಯೋ ತಲೆಗೆ ಹಿಡಿದು ನಡೆದದ್ದಿತ್ತು. ಬರಿಗಾಲಿನಲ್ಲಿ ನಡೆದರೆ ಕಾಲಿಗೆ ಏನೂ ಆಗುತ್ತಿರಲಿಲ್ಲ. ಗೇರುಹಣ್ಣಿನ ಕಲೆಯಿಲ್ಲದ ಅಂಗಿಗಳೇ ಇರುತ್ತಿರಲಿಲ್ಲ. ಹಲಸಿನ ಹಣ್ಣಿನ ಋತುವಿನಲ್ಲಿ ಅದರ ಪರಿಮಳ ಸೂಸದ ಮಕ್ಕಳೇ ಇರುತ್ತಿರಲಿಲ್ಲ. ಕಾಫಿ-ಚಾಕ್ಕೆ ಹಾಲಿದ್ದರೆ ಇತ್ತು; ಇಲ್ಲದಿದ್ದರೆ ಇಲ್ಲ. ಅಡಿಕೆಗೆ ಬೆಲೆ ಕುಸಿದು ಎಲ್ಲರ ಬದುಕೂ ಮೂರಾಬಟ್ಟೆಯಾದಾಗ ಅಕ್ಕಿ ತರಲು ದುಡ್ಡಿಲ್ಲದೆ ಜೋಳವೇ ಮೂರು ಹೊತ್ತು ಭರ್ಜರಿ ಆಹಾರವಾಗಿತ್ತು. ಚಳಿ ಹೆಚ್ಚಾದಾಗ ಅಡುಗೆಮನೆಯಲ್ಲಿ ಬೆಂಕಿ ಹಾಕಿದ ಒಲೆಕಟ್ಟೆಯ ಬಳಿ ಚಾಪೆ ಹಾಕಿ ಸಾಲಲ್ಲಿ ಮಲಗುವುದೂ ಇತ್ತು. ಟಾರ್ಚ್‌ಲೈಟಿಲ್ಲದೆ ತೆಂಗಿನ ಮಡಲಿನ ಸೂಟೆಯೇ ಬೆಳಕಿನ ಸಾಧನವಾದದ್ದೂ ಇತ್ತು. ಬಸ್ ಹಿಡಿಯಬೇಕಾದರೆ ಕನಿಷ್ಠ ನಾಲ್ಕು ಮೈಲಿ, ಕೆಲವೊಮ್ಮೆ ಹತ್ತು ಮೈಲಿ ನಡೆದದ್ದೂ ಇತ್ತು. ಕೈಯ್ಯಲ್ಲಿ ಐದೋ ಹತ್ತೋ ಕಿಲೋ ಸರಕಿದ್ದರೆ ಭಾರವಾಗುತ್ತಿರಲಿಲ್ಲ. ಇಂತಹ ಸಾವಿರ ಮುಖಗಳಿದ್ದ ಬದುಕಿನಲ್ಲಿ ಅವೆಲ್ಲ ಬಡತನ ಅನ್ನಿಸಿರಲೇ ಇಲ್ಲ. ಎಲ್ಲವೂ ಬದುಕಿನ ಭಾಗವೆನಿಸಿತ್ತು.

ಬಹುತೇಕ ನಮ್ಮ ಬಂಧುಗಳಲ್ಲೂ ಹೀಗೆಯೇ: ಏಳೋ ಎಂಟೋ ಮಕ್ಕಳು; ಬಹುತೇಕ ಯಾರಲ್ಲೂ ವಾಹನಗಳಿರಲಿಲ್ಲ; ನಡೆದೇ ತೀರಬೇಕು; ವಿದ್ಯಾಭ್ಯಾಸವೆಂದರೆ ಸಾಕಷ್ಟು ಶ್ರಮದ ಕೆಲಸ. ಆದರೂ ನಮಗೆಲ್ಲ ತಕ್ಕಮಟ್ಟಿನ ಶಿಕ್ಷಣ ಕೊಡುವಲ್ಲಿ ನಮ್ಮನ್ನು ಹೆತ್ತವರು ಹೆಣಗಿ ಯಶಸ್ವಿಯಾದರು. ಎಲ್ಲರಿಗೂ ಮದುವೆಯಾಯಿತು. ಒಬ್ಬೊಬ್ಬರು ಒಂದೊಂದೆಡೆ ನೆಲೆಯಾದರು. ಆದರೂ ಇವೆಲ್ಲ ಇವತ್ತಿನ ಬೆಂಗಳೂರಿನಂತೆ ಪರಸ್ಪರರನ್ನು ಅಪರಿಚಿತಗೊಳಿಸುವಷ್ಟು ದೂರವಿರಲಿಲ್ಲ. ವೃತ್ತಿ, ಉದ್ಯೋಗಗಳಿದ್ದರೂ ಅದು ಹೇಗೋ ಬಿಡುವು ಮಾಡಿಕೊಂಡು ಆಗಾಗ ಭೇಟಿಯಾಗುವುದು, ಸಮಾರಂಭಗಳಿಗೆ ಹಾಜರಾಗುವುದು, ಪರಸ್ಪರ ಮನೆಗಳಿಗೆ ಹೋಗಿ ಒಂದೆರಡು ದಿನಗಳಾದರೂ ತಂಗುವುದು ಇವೆಲ್ಲ ಇದ್ದವು. ಮದುವೆಗಳು ಎಂಟು ದಿನ ನಡೆಯುತ್ತಿದ್ದವು. ಇಡೀ ಸಂಸಾರವೇ ಅಂತಹ ಸಮಾರಂಭಗಳಿಗೆ ವಲಸೆ ಹೋದಂತೆ ಹೋಗುತ್ತಿದ್ದೆವು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಬಹಳಷ್ಟು ಜನರು ಪರಿಚಯವಾಗುತ್ತಿದ್ದರು. ಇವರು ಮಾವ, ಇವರು ಚಿಕ್ಕಪ್ಪ, ಇವರು ಅಪ್ಪನ ಸೋದರಬಾವ, ಇವರು ಅಜ್ಜನ ತಮ್ಮನ ಮಗ, ಹೀಗೆ ಊರು, ಪರವೂರುಗಳಲ್ಲಿನ ನೆಂಟರಿಷ್ಟರನ್ನು ಮಕ್ಕಳೂ ಬಲ್ಲವರಾಗಿದ್ದರು. ಹಿರಿಯರು ಬೈದರೆ ಯಾರಿಗೂ ಅವಮಾನವಾಗುತ್ತಿರಲಿಲ್ಲ. ಪಾರಂಪರಿಕ ವಿಶ್ವಾಸ, ಸಂಬಂಧಗಳು ಗಟ್ಟಿಯಾಗಿದ್ದವು. ರಕ್ತಸಂಬಂಧ ಆತ್ಮಸಮ್ಮಾನವಾಗಿ ಬೇರೂರಿತ್ತು. ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ.. ಎಂಬಂತೆ ಕುಟುಂಬದ ಎಲ್ಲರೂ ಒಟ್ಟಾಗಿದ್ದ ಊರನ್ನು, ಮನೆಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು.

ಹೊಸ ತಲೆಮಾರು ಉದಿಸಿತು. ಜೀವನ ಕ್ರಮ ಹೊಸದಾಯಿತು. ಮಕ್ಕಳೆಲ್ಲ ದೂರದೂರುಗಳಿಗೆ, ಕೆಲವರು ವಿದೇಶಗಳಿಗೆ ಹೋಗಲಾರಂಭಿಸಿದ ಮೇಲೆ ಪ್ರಪಂಚ ದೊಡ್ಡದಾಯಿತು. ಅವರಿಗೆ ಹಿರಿಯರನ್ನು ಪರಿಚಯಿಸುವುದು ಮೊದಲಿಗಿಂತ ಕಷ್ಟವಾಗುತ್ತಿತ್ತು. ಇವರು ಅಪ್ಪನ ಸೋದರಮಾವ ಅಂತಲೋ, ಅಮ್ಮನ ಚಿಕ್ಕಮ್ಮ ಅಂತಲೋ ಇನ್ನೂ ಒಂದು ಸುತ್ತು ಹೊರಗಿನವರನ್ನಂತೂ ತೀರ ಸಂದಿಗ್ಧವಾದ ಸಂಬಂಧಗಳನ್ನು ಹೇಳಿದಂತೆ ಒಪ್ಪಿಸುವುದು ಕಷ್ಟವಾಗತೊಡಗಿತು. ಮಾವ, ಅತ್ತೆಯ ಬದಲು ಅಂಕಲ್, ಆಂಟಿ ಬಳಕೆ ಆರಂಭವಾಯಿತು. ಇನ್ನೊಂದೆಡೆ ವಿದ್ಯೆ, ಅದು ನೀಡಿದ ಉದ್ಯೋಗ ಸಂಬಂಧವಾಗಿ ಅನೇಕರ ಬಳಿ ಹಣ ಓಡಾಡತೊಡಗಿತು. ಒಂದೇ ತಲೆಮಾರಿನಲ್ಲಿ ಶ್ರೀಮಂತರಾದವರಿದ್ದರು. ತಾವಾಯಿತು ತಮ್ಮ ಉದ್ಯೋಗವಾಯಿತು ಎಂದು ಬದುಕುವವರು, ವೃತ್ತಿಸಂಬಂಧ ಬಿಡುವಿಲ್ಲದವರು, ಹಣ ಮತ್ತು ಅದರ ಮೂಲಕ ಸೌಕರ್ಯ ಸಂಪಾದನೆಯೇ ಬದುಕಿನ ಮೇರುಗುರಿಯಾದವರು, ಇವೆಲ್ಲದರ ನಡುವೆ ಸಂಬಂಧಗಳು ಶಿಥಿಲಗೊಂಡವು. ವಿಭಕ್ತ ಕುಟುಂಬಗಳು ಹೆಚ್ಚಾದವು. ಒಂದೇ ಮನೆಯಿದ್ದ ಕೆಲವು ಎಕರೆ ಪ್ರದೇಶಗಳಲ್ಲಿ ಅಷ್ಟೂ ಮಗಂದಿರು ಆಸ್ತಿ ಮತ್ತು ಮನಸ್ಸುಗಳನ್ನು ಪಾಲು ಮಾಡಿಕೊಂಡು ಪ್ರತ್ಯೇಕ ಮನೆ ಮಾಡಿದ್ದಿದೆ. ಹಾಗೆ ಪಾಲಾಗದೆ ಇದ್ದ ಕುಟುಂಬಗಳಲ್ಲೂ ಉದ್ಯೋಗ ನಿಮಿತ್ತ ನಗರ-ಮಹಾನಗರಗಳಲ್ಲಿ ನೆಲೆನಿಂತವರು ಸಾಮಾಜಿಕವಾಗಿ ಅನಾಮಿಕರಾಗುಳಿದರೂ ಆರ್ಥಿಕ ಸ್ಥಾನಮಾನಗಳನ್ನು ಗಳಿಸಿ ತನ್ನ ಮನೆಯವರಿಗಿಂತ ದೂರವಾದರೆ, ಸಾಮಾಜಿಕ ಸ್ಥಾನಮಾನಗಳನ್ನು ಗಳಿಸಿದರೂ ಆರ್ಥಿಕವಾಗಿ ಬೆಳೆಯದೆ ಊರಿನ ಸೀಮಿತ ವ್ಯಕ್ತಿತ್ವಕ್ಕೇ ತೃಪ್ತಿಹೊಂದಬೇಕಾಯಿತು. ಎತ್ತರಕ್ಕೆ ಹೋದಂತೆಲ್ಲ ನೆಲದ ಮೇಲಣ ವ್ಯಕ್ತಿ-ವಸ್ತುಗಳು ಕಿರಿದಾಗಿ ಕೊನೆಗೆ ಕಾಣದಾಗುತ್ತವೆ. ದೇಶ-ಕಾಲಗಳು ಈ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ದೊಡ್ಡ ಜಗತ್ತಿನಲ್ಲಿ ಗೌರವ ಹೆಚ್ಚಾದಂತೆಲ್ಲ ತೀರ ಹತ್ತಿರದ ಪಾರಂಪರಿಕ ನೆಲೆ ದೂರವಾಗುವುದು ಸಹಜ. ಸ್ನೇಹಿತರೆದುರು ನೆಂಟರು ಕಾಣಿಸದೇ ಇರಬಹುದು. ಕಲೆ-ಸಾಹಿತ್ಯದಂತಹ ಪ್ರಚಾರಸ್ನೇಹಿ ವಿಚಾರಗಳೆದುರು ಇವಿಲ್ಲದ ಬಾಂಧವ್ಯದ ಮಾತುಗಳು ಅಪ್ರಸ್ತುತವಾಗಿ, ನೀರಸವಾಗಿ ತೀರಾ ಹತ್ತಿರದ ಪರಸ್ಪರರಲ್ಲೂ ಅಂತರಗಳು ಹೆಚ್ಚಾದವು. ಹೋಗಿಬರುವುದು ಕಡಿಮೆಯಾಯಿತು. ಸಮಾರಂಭಗಳಲ್ಲಷ್ಟೇ ಭೇಟಿಯಾಗುವುದು, ಕಂಡಾಗ ತೀರಾ ತೋರಿಕೆಯ (ಸಹಜವಾಗಿರಲಿಕ್ಕೂ ಸಾಕು) ಸನಿಹತೆಯನ್ನು ಕಾಣುವುದಿತ್ತು.

ದೂರವಾಣಿ ಕರೆಗೆ ಗಂಟೆಗಟ್ಟಲೆ ಕಾಯುವುದು ಕಣ್ಮರೆಯಾಗಿ ವಿದ್ಯುನ್ಮಾನ ಸವಲತ್ತು ಬಂತು. ಹಿಂದೆ ಜೀವತಾಣಗಳಾಗಿದ್ದ ಸ್ಥಿರ ದೂರವಾಣಿಗಳೇ ಈಗ ಮಾಯವಾಗತೊಡಗಿವೆ. ಹಿಂದೆಲ್ಲ ಪತ್ರ ಬರೆಯುವುದು ಮನುಷ್ಯ ಸಹಜವಾಗಿದ್ದರೆ ಈಗ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಖಾಸಗಿಯಾದರೆ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸುವುದು ಸಂವಹಿಸುವುದು ರೂಢಿಯಾಗಿದೆ. ಜಂಬೂದ್ವೀಪೇ ಭರತಖಂಡೇ ಎಂದು ಭಾರತಭೂಮಿಯನ್ನು ವೈದಿಕ ಮಂತ್ರ ವಿವರಿಸುವಾಗ ಸುತ್ತ ನೀರಿದ್ದು ನಡುವೆ ಇರುವ ಈ ಮಹಾದ್ವೀಪದಲ್ಲಿ ನಾವೆಲ್ಲ ವಾಸವಿದ್ದೇವೆಂಬ ಅನುಭವವಿತ್ತು. ನಾಗರಿಕತೆ ಬೆಳೆದಂತೆಲ್ಲ ನೀರಿಲ್ಲದೆಯೂ ನಾವು ದ್ವೀಪಗಳಲ್ಲಿ ವಾಸಮಾಡಬಹುದೆಂಬ ಅರಿವಾಗತೊಡಗಿದೆ. ಬೆಂಗಳೂರಿನಲ್ಲೇ ವಾಸವಿರುವ ಒಡಹುಟ್ಟಿದವರು ಪರಸ್ಪರರನ್ನು ಕಾಣದೆ ವರ್ಷವಾಯಿತೆಂಬ ಮಾತನ್ನು ಕೇಳಿದ್ದೇನೆ. (ಉಳಿದ ನಗರಗಳ ಕುರಿತು ನನಗಷ್ಟು ಮಾಹಿತಿಯಿಲ್ಲ. ಇದ್ದರೂ ಹೀಗೇ ಇರಬಹುದು!)

ಮಾಮೂಲು ಜಗತ್ತೇ ಹೀಗೆ ಬದಲಾಗಬೇಕಾದರೆ ಕೋವಿಡ್-19ರಂತಹ ಮಾರಕ ಸೋಂಕು ಜೀವವನ್ನೂ ಜೀವನವಿಧಾನವನ್ನೂ ಬೆದರಿಸಿದೆ. ನಾವುಳಿದರೆ ಸಾಕು ನಮ್ಮ ಜೀವನ ಅದು ಹೇಗೋ ಸಾಗುತ್ತದೆ ಎಂಬ ಭಯ, ಆತಂಕ ಸಾಮಾಜಿಕ ದರ್ಶನವನ್ನೇ ಕುಲಗೆಡಿಸಿದೆ. ರಾಜಕೀಯ ಹೇಗೂ ಇರಲಿ, ಸರಳವಾದ ಬದುಕು ಕಂಗೆಟ್ಟಿದೆ. ಹೆಣಗಳನ್ನು, ಗಾಯಾಳುಗಳನ್ನು ಲೆಕ್ಕಿಸದೆ ಮುಂದುವರಿಯುವ ಯುದ್ಧದಂತೆ, ಜನಜಂಗುಳಿಯ ಜಾತ್ರೆಯಲ್ಲಿ ಅಡಿಗೆ ಬಿದ್ದವರನ್ನು ಅಭಯ ನೀಡಿ ಒಯ್ಯುವ ರಕ್ಷಕರಿಲ್ಲದ ರಥೋತ್ಸವದಂತೆ, ಈಗ ಅಲ್ಲೋಲಕಲ್ಲೋಲದ ಕ್ಷೋಭೆ ಅಡರಿದೆ. ಶವಗಳನ್ನು ಗುರುತಿಲ್ಲದಂತೆ ಪ್ಯಾಕ್ ಮಾಡಿ ಎಸೆದ, ತಮ್ಮದಲ್ಲದ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ ಉದಾಹರಣೆಗಳೂ ವರದಿಯಾಗಿವೆ. ಕಳೆದ ಕೆಲವು ತಿಂಗಳುಗಳಿಂದ ಸತ್ತವರ ಲೆಕ್ಕ ನಿಖರವಾಗಿ ಯಾರಿಗೂ ಗೊತ್ತಿಲ್ಲ. ನೆರೆಮನೆಯವರನ್ನೇ ಮಾತನಾಡಿಸಲು ಧೈರ್ಯ ಸಾಲದು; ಧೈರ್ಯ ಬಾರದು. ನನಗೆ ಪರಿಚಿತರಾದ ಅಪಾರ್ಟ್‌ಮೆಂಟಿನ ವಾಸಿಯೊಬ್ಬರು ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ಕೋವಿಡ್ ತಗಲಿ ಯಾರಾದರೂ ಸತ್ತರೆ ಆನಂತರ ತಿಳಿದುಕೊಂಡರಾಯಿತೆಂಬ ಮನೋಭಾವ ಬಂದಿದೆಯೆಂದರು.

ಇಂತಹ ವಾತಾವರಣದಲ್ಲಿ ಯಾರು ಎಷ್ಟೇ ಸಹಜವಾಗಿ ಸತ್ತರೂ ಎಷ್ಟೇ ಹತ್ತಿರದವರಾದರೂ ಇತರರು ಬಾರದಂತಹ ಸ್ಥಿತಿ ಉದ್ಭವವಾಗಿದೆ. ಅದೂ ನಾನು ಹೇಳಿದಂತಹ ಪೇಟೆ, ಪಟ್ಟಣ-ಹಳ್ಳಿ, ಗ್ರಾಮೀಣ ಇಂತಹ ಸಂಬಂಧಗಳಿರುವಲ್ಲಿ ನಗರದ ತುರ್ತಿಗೆ ತಲುಪಿಕೊಳ್ಳಲು ದೂರದ ಹತ್ತಿರದವರಿಗೆ ಸಾಧ್ಯವಾಗದು. ದೇಹ ತಣಿಯುವ ಮೊದಲೇ ವಿದ್ಯುತ್ ಚಿತಾಗಾರಗಳಲ್ಲಿ ಕ್ಯೂ ನಿಂತು/ಮಲಗಿ ದಹಿಸಿಕೊಳ್ಳಬೇಕಾದರೆ ಅದಕ್ಕೂ ಅದೃಷ್ಟ ಬೇಕು. ಕುರುಕ್ಷೇತ್ರದ ಹದಿನೆಂಟನೆಯ ದಿನ ಗದಾದಂಡವನ್ನು ಹೊತ್ತು ನಡೆಯುವ ಕೌರವನನ್ನು ಪಿಶಾಚಿಗಳು ಅಣಕಿಸಿದವಂತೆ. ಇಂದು ಇಡೀ ಸಮಾಜವನ್ನು ಸಾವು ಎಲ್ಲಿ ನಿಮ್ಮ ಸಂಬಂಧ, ಸಂಪ್ರದಾಯ, ಪರಂಪರೆ? ಎಂದು ಅಣಕಿಸುತ್ತಿದೆ. ಶುಭ ಸಮಾರಂಭಗಳನ್ನು ವೈಭವದಿಂದ ನಡೆಸುವ ಕಾಲವೊಂದಿತ್ತು. ಇಂದು ಅಡಗಿ ವಿವಾಹಗಳು ನಡೆಯಬೇಕಾದ ಒತ್ತಡವಿದೆ. ಎಲ್ಲರೂ ಹಾಜರಾದರೆ ಯಾರಿಗೆ ಸಾವು ಯಾವಾಗ ಬರುತ್ತದೆಯೋ ಎಂಬ ಭಯದಿಂದ ಹಾಜರಾಗಬೇಕಾಗಿದೆ. ನಾವುಳಿದರೆ ಜಗವುಳಿಯುವುದು ಎಂಬ ಕೃತಕ ತರ್ಕಕ್ಕೆ ಮನುಷ್ಯನ ಮನಸ್ಸು ಸೋತಿದೆ. ಇಂಡಿಯಾವನ್ನು ಭಾರತವಾಗಿ ಮಾಡುವುದಕ್ಕೆ ಹೊರಟವರೆಲ್ಲ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಹೊರಟವರೆಲ್ಲ ಈ ಕಾಲದೋಟವನ್ನು, ಕಾಲದಾಟವನ್ನು ಗಮನಿಸಬೇಕು. ತಮ್ಮ ಅಸಹಾಯಕತೆಯನ್ನೊಪ್ಪಿಕೊಂಡು ಶಾಶ್ವತವೆಂಬ ಭ್ರಮೆಯನ್ನು ದಾಟಬೇಕು.

ಇವೆಲ್ಲ ನನ್ನ ಒಡಹುಟ್ಟಿನ ಸಾವಿನ ಆನಂತರ ಮನಸ್ಸಿಗೆ ಹೊಳೆದದ್ದು. ನಾನು ಮತ್ತು ನನ್ನ ಒಡಹುಟ್ಟಿದ ಇತರ ಯಾರೂ, ಕೊನೆಗೆ ನನ್ನ 85 ವರ್ಷ ವಯಸ್ಸಿನ ಅಮ್ಮನೂ ಕಾಣಲಾಗದ ಅಕ್ಕನ ಕೊನೆಯ ದಿನಗಳನ್ನು ನೆನಪಿಸಲೂ ಸಂದರ್ಭವಿಲ್ಲದಾಗಿದೆ. ಈ ಸಾವು ಎಲ್ಲರಿಗೂ ಏನೂ ಅಲ್ಲ. ಯಾರ ಸಾವೂ ಎಲ್ಲರನ್ನೂ ಕಾಡುವುದಿಲ್ಲ. ಕಾಡಿನಲ್ಲಿ ಒಂದು ಹೂವು ಹುಟ್ಟಿ ಸತ್ತರೆ ಅದು ಕಾಡಿನ ಲಕ್ಷಣವನ್ನೇನೂ ಅಳಿಸುವುದಿಲ್ಲ; ಬದಲಾಯಿಸುವುದಿಲ್ಲ. ಆದರೆ ಸತ್ತ ಜೀವವು ಜಗತ್ತಿಗೆ ಏನೂ ಅನಿಸದ ಆದರೆ ಹತ್ತಿರದವರಿಗೆ ಎಲ್ಲವೂ ಆದ ದೂರದ ನೆನಪುಗಳನ್ನು ಉಳಿಸಿಹೋಗುತ್ತದೆ. ಜೀವ ಶಾಶ್ವತವಲ್ಲದಿದ್ದರೂ ಸಂಬಂಧಗಳು ಶಾಶ್ವತವಷ್ಟೇ! ಪ್ರಾಯಃ ಸಂಬಂಧದ ಸೋಂಕು ಹಬ್ಬಬೇಕಾದರೆ ಮತ್ತೆ ಗತಕ್ಕೆ ಮರಳಬೇಕು. ನನ್ನ ಅಕ್ಕ ಮೈಸೂರಿನಿಂದ 1972ರಲ್ಲಿ ಎಂ.ಎ. ಓದಿ ಬರುವಾಗ ನನಗೆ ತಂದ ಹಳದಿ ಅಂಗಿಯ ನೆನಪಾಗಬೇಕು. ಅಮ್ಮ ಎಲ್ಲೋ ಹೋದ ದಿನಗಳಲ್ಲಿ ಮನೆಯಲ್ಲಿ ಅವಳು ಮಾಡಿದ ಅಡಿಗೆಯ ಪರಿಮಳ ಬರಬೇಕು.

ಸ್ಮಶಾನ ವೈರಾಗ್ಯ ಎಂದಂತೆ ಇವೆಲ್ಲ ಮಾಸಿಹೋಗದಿರಲಿ. ಏಕೆಂದರೆ ಉಳಿಯುವಷ್ಟು ದಿನಗಳು ನನ್ನವು; ನಮ್ಮವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)