varthabharthi


ನಿಮ್ಮ ಅಂಕಣ

ದಿವಾಳಿ ಘೋಷಿಸಿಕೊಂಡು ಚರಕ ನಿದ್ದೆ ಮಾಡುತ್ತ ಕುಳಿತಿಲ್ಲ -ಪ್ರಸನ್ನ

ವಾರ್ತಾ ಭಾರತಿ : 18 Sep, 2020
-ಪ್ರಸನ್ನ ಶ್ರಮಜೀವಿ ಆಶ್ರಮ, ಹೊನ್ನೇಸರ

ಮಾನ್ಯರೆ,

‘‘ಚರಕದ ಸಮಸ್ಯೆ: ನನಗೆ ಕಂಡಷ್ಟು’’ ಎಂಬ ಶಿರೋನಾಮೆಯಲ್ಲಿ ತಾವು ಲೇಖನವೊಂದನ್ನು ಪ್ರಕಟಿಸಿರುತ್ತೀರಿ. ಹಿರಿಯ ಪತ್ರಕರ್ತರೂ, ನುರಿತ ಬುದ್ಧಿಜೀವಿಗಳೂ, ಪ್ರಗತಿಪರ ಚಿಂತಕರೂ ಆಗಿರುವ ಕೆ.ಪಿ. ಸುರೇಶರು ಲೇಖನವನ್ನು ಬರೆದಿರುತ್ತಾರೆ.

ತುಂಬ ಯಶಸ್ವಿಯಾಗಿ ಹಾಗೂ ಲಾಭದಾಯಕವಾಗಿ ನಡೆಯುತ್ತಿರುವ ಚರಕ ಸಂಸ್ಥೆ- ಈ ವರ್ಷವೂ ಲಾಭದಲ್ಲಿಯೇ ಇದ್ದೇವೆ. ನಾವು, ಒಮ್ಮೆಗೇ ದಿವಾಳಿ ಘೋಷಿಸಿಕೊಂಡಿರುವುದು ನಿಜ. ಆದರೆ, ಶ್ರೀಯುತರು ಆರೋಪಿಸಿರುವಂತೆ ಆಂತರಿಕ ಸಮಸ್ಯೆಗಳಿಂದಾಗಿ ಸಂಸ್ಥೆ ದಿವಾಳಿ ಎದ್ದಿಲ್ಲ ಅಥವಾ ಪ್ರಚಾರ ಗಿಟ್ಟಿಸಿಕೊಳ್ಳಲಿಕ್ಕಾಗಿ ಕೂಡ ಅಲ್ಲ. ಬಾಹ್ಯ ಕಾರಣಗಳಿಗಾಗಿ ದಿವಾಳಿಯೆದ್ದಿದ್ದೇವೆ. ಚರಕವೇ ಏಕೆ, ಈ ದೇಶದ ಸಾವಿರಾರು ಗ್ರಾಮೋದ್ಯೋಗ ಸಂಸ್ಥೆಗಳು, ಕೋವಿಡ್ ಸೇರಿದಂತೆ ತಮ್ಮದಲ್ಲದ ಬಾಹ್ಯಕಾರಣಗಳಿಗಾಗಿ ದಿವಾಳಿ ಎದ್ದಿವೆ.

ಗ್ರಾಮೋದ್ಯೋಗಿಗಳನ್ನು ನಲುಗಿಸಬಾರದು ಎಂಬ ತತ್ವಕ್ಕೆ ಸಂಸ್ಥೆ ಬದ್ಧವಾಗಿದೆ. ಹಾಗಾಗಿ, ಒಂದೂವರೆ ವರ್ಷಗಳ ಆರ್ಥಿಕ ಮುಗ್ಗಟ್ಟು, ಕೋವಿಡ್ ಲಾಕ್‌ಡೌನ್‌ನ ಐದು ತಿಂಗಳ ಸಂಕಟ ಎಲ್ಲದರ ನಡುವೆಯೂ ಉತ್ಪಾದನೆ ನಿಲ್ಲಿಸಲಿಲ್ಲ. ಆದರೆ ಭ್ರಷ್ಟ ಸರಕಾರಿ ಆಡಳಿತ ವ್ಯವಸ್ಥೆಯು ಸಂಸ್ಥೆಗೆ ನ್ಯಾಯಯುತವಾಗಿ ಬರಬೇಕಿರುವ ವಿವಿಧ ಸರಕಾರಿ ಯೋಜನೆಗಳ ಹಣ ಬಾರದಂತೆ ತಡೆಹಿಡಿಯಿತು. ನಮ್ಮ ಪುಟ್ಟ ಸಂಸ್ಥೆಯ ಮೇಲೆ ಸರಕಾರದ ಹೊರೆ ಎರಡು ಕೋಟಿ ರೂಪಾಯಿಗಳನ್ನು ಮೀರಿತು. ಸಂಸ್ಥೆಯ ತಿಜೋರಿ ಖಾಲಿಯಾಯಿತು. ಇತ್ತ, ವ್ಯಾಪಾರ ಕುಂಟುತ್ತ ನಡೆದಿದೆ. ಇದು ಸಮಸ್ಯೆ. ಆದರೆ, ದಿವಾಳಿ ಘೋಷಿಸಿಕೊಂಡು ಚರಕ ನಿದ್ದೆ ಮಾಡುತ್ತಾ ಕುಳಿತಿಲ್ಲ. ಚರಕದ ಹೆಣ್ಣುಮಕ್ಕಳು ಮಣ್ಣುಕೆಲಸ ಮಾಡಿ ಸಂಸ್ಥೆಯನ್ನು ಜೀವಂತವಾಗಿಟ್ಟಿದ್ದಾರೆ. ದೇಸಿ ಅಂಗಡಿಗಳ ಮಹಿಳೆಯರು ಕೋವಿಡ್‌ನ ಅಪಾಯವನ್ನು ಕಡೆಗಣಿಸಿ ವ್ಯಾಪಾರ ವಹಿವಾಟು ನಡೆಸಿದ್ದಾರೆ. ಗ್ರಾಹಕರು ದೇಸಿ ಉತ್ಪನ್ನಗಳನ್ನು ಕೊಳ್ಳುವ ಮೂಲಕ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಹಲವರು ಧನಸಹಾಯ ಮಾಡಲು ಮುಂದೆ ಬಂದಿದ್ದಾರೆ. ‘‘ದಾನ ಬೇಡ ಬಟ್ಟೆ ಕೊಳ್ಳಿ’’ ಎಂದು ನಾವು ಅವರಲ್ಲಿ ಮನವಿಮಾಡಿಕೊಂಡಿದ್ದೇವೆ. ಅವರು ನಗುಮುಖದಿಂದಲೇ ‘Gift Voucher’ಗಳನ್ನು ಖರೀದಿಸಿ ತಮ್ಮ ಆಪ್ತರಿಗೆ ಹಂಚುತ್ತಿದ್ದಾರೆ. ಹೀಗೆ ಕೆಡುಕನ್ನೇ ಒಳಿತನ್ನಾಗಿಸುವ ಒಂದು ಮಹಾನ್ ಪ್ರಯತ್ನವು ಹಳ್ಳಿಗಾಡಿನಲ್ಲಿ ಆರಂಭವಾಗಿದೆ.

ಇನ್ನು, ಕೀರ್ತಿಶನಿಯ ಹಿಂದೆ ಬಿದ್ದಿರುವ ನಾವು. ಕೀರ್ತಿಯೆಂಬುದು ಶನಿಯೇ ಸರಿ ಎಂಬ ಅರಿವು ನನಗಿದೆ. ಹಾಗಾಗಿ, ಚರಕ, ದೇಸಿ, ಕವಿ-ಕಾವ್ಯ ಸಂಸ್ಥೆಗಳ ನಾಯಕತ್ವದಿಂದ ನಾನು ದೂರ ಸರಿದು ಕೇವಲ ಮಾರ್ಗದರ್ಶಕನಾಗಿ ಉಳಿದಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ಗ್ರಾಮಸೇವಾ ಸಂಘದ ಕೆಲಸದಲ್ಲಿ, ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಈಗ, ಚರಕದ ಮಹಿಳೆಯರು, ಸಂಸ್ಥೆಯ ಸಂಸ್ಥಾಪಕನಾದ ನನ್ನನ್ನು, ಹಿಂದಕ್ಕೆ ಕರೆಸಿಕೊಂಡಿದ್ದಾರೆ. ಕೀರ್ತಿಶನಿಯ ಬಾಧೆಗೆ ಮತ್ತೆ ಸಿಲುಕಿಕೊಂಡಿದ್ದೇನೆ. ಬೇಗ ಬಿಡುಗಡೆ ಪಡೆದುಕೊಳ್ಳುವ ಯತ್ನ ಮಾಡುತ್ತೇನೆ.

ಶ್ರೀಯುತರು ಚರಕಸಂಸ್ಥೆಯ ಮೇಲೆ ಹಲವು ಗುರುತರವಾದ ಆರೋಪಗಳನ್ನು ಮಾಡಿರುತ್ತಾರೆ. ತಮ್ಮ ಆರೋಪಗಳನ್ನವರು ತುಂಬ ಶಿಸ್ತಿನಿಂದ ಪಟ್ಟಿಮಾಡಿರುವುದರಿಂದಾಗಿ ಅವುಗಳನ್ನು ಅಲ್ಲಗಳೆಯುವ ನನ್ನ ಕೆಲಸ ಅಷ್ಟರಮಟ್ಟಿಗೆ ಸುಲಭವಾಗಿದೆ. ದೇಸಿ ಸಂಸ್ಥೆಯು, ಅರ್ಥಾತ್ ನಾನು ಚರಕಸಂಸ್ಥೆಯನ್ನು ಕೈಗೊಂಬೆ ಮಾಡಿಕೊಂಡಿದ್ದೇನೆ ಎಂಬುದು ಶ್ರೀಯುತರ ಮುಖ್ಯ ಆರೋಪ. ವಸ್ತುಸ್ಥಿತಿ ತದ್ವಿರುದ್ಧವಾಗಿದೆ. ದೇಸಿ ಸಂಸ್ಥೆ ಹಾಗೂ ನಾನು ಸಂತೋಷದಿಂದ ಚರಕದ ಕೈಗೊಂಬೆಗಳಾಗಿದ್ದೇವೆ.

ದೇಸಿ ಎಂಬ ಬ್ರ್ಯಾಂಡು ಚರಕದ ಆಸ್ತಿಯೇ ಆಗಿದೆ. ದೇಸಿ ಧರ್ಮದರ್ಶಿ ಸಂಸ್ಥೆಯಲ್ಲಿ ಚರಕದ ಚುನಾಯಿತ ಪ್ರತಿನಿಧಿಗಳು ಕುಳಿತಿರುತ್ತಾರೆ. ಮಾತ್ರವಲ್ಲ, ದೇಸಿಯ ನಿರ್ವಾಹಕ ಧರ್ಮದರ್ಶಿಗಳು ಚರಕದವರೇ ಆಗಿರುತ್ತಾರೆ. ಚರಕದವರಲ್ಲದ ಇತರ ಧರ್ಮದರ್ಶಿಗಳನ್ನು ಹೆಸರಿಸುವುದಾದರೆ, ದಿವಂಗತ ಪೂರ್ಣಚಂದ್ರತೇಜಸ್ವಿ, ಎಂ.ಎಸ್. ಸತ್ಯು, ಅಜಯ್‌ಕುಮಾರ್ ಸಿಂಹ, ನಾನು ಹಾಗೂ ಇತರರು ಇದ್ದೇವೆ. ಇತರರಾದ ನಮಗೆಲ್ಲರಿಗೂ ದೇಸಿ ಎಂಬುದು ಚರಕದ ಆಸ್ತಿ ಎಂಬ ಸಂಪೂರ್ಣ ಅರಿವಿದೆ.

ದೇಸಿ ಸಂಸ್ಥೆ ಸರಕಾರಿ ಜಮೀನನ್ನು ಖರೀದಿಸಿ ಚರಕಕ್ಕೆ ವರ್ಗಾಯಿಸದೆ ‘ಗುಳುಂ’ ಮಾಡಿದೆ ಎಂದು ಆರೋಪ ಮಾಡಿದ್ದಾರೆ, ಮೂರೂ ಸಂಸ್ಥೆಗಳ ಲೆಕ್ಕಪತ್ರಗಳು ಸಾರ್ವಜನಿಕ ಅವಗಾಹನೆಗೆ ಲಭ್ಯವಿಲ್ಲ ಎಂದು ಆರೋಪ ಮಾಡಿದ್ದಾರೆ. ದೇಸಿ ಸಂಸ್ಥೆ ಯಾವುದೇ ಸರಕಾರಿ ಜಮೀನನ್ನೂ ಖರೀದಿಸಿಲ್ಲ, ತನ್ನದೇ ಅಪಾರ ಹಣ ಖರ್ಚುಮಾಡಿ ಖಾಸಗಿ ಜಮೀನು ಖರೀದಿಸಿ, ಚರಕದ ಸಲುವಾಗಿ ‘ಶ್ರಮಜೀವಿ ಆಶ್ರಮ’ ಎಂಬ ಹೆಸರಿನ ಹೊಸ ಉತ್ಪಾದನಾ ಸಂಕೀರ್ಣವೊಂದನ್ನು ನಿರ್ಮಿಸಿ ನೀಡಿರುತ್ತದೆ ದೇಸಿ. ಚರಕದ ಹೆಚ್ಚಿನ ಉತ್ಪಾದನಾ ಚಟುವಟಿಕೆ ನಡೆದಿರುವುದೇ ಶ್ರಮಜೀವಿ ಆಶ್ರಮದಲ್ಲಿ.

ಇನ್ನು, ಮೂರೂ ಸಂಸ್ಥೆಗಳ ಲೆಕ್ಕಪತ್ರಗಳು. ಅವು, ಯಾವತ್ತಿನಿಂದಲೂ ಸಾರ್ವಜನಿಕ ಅವಗಾಹನೆಗೆ ಲಭ್ಯವಿದೆ. ಲೇಖನವನ್ನು ರಚಿಸುವ ಮೊದಲು, ಶ್ರೀಯುತರು ಅವಗಾಹನೆ ಮಾಡಿದ್ದಿದ್ದರೆ, ಸಂಸ್ಥೆಗೂ ಮಾನಹಾನಿ ತಪ್ಪುತ್ತಿತ್ತು. ಶ್ರೀಯುತರಿಗೂ ಮುಖಭಂಗ ತಪ್ಪುತ್ತಿತ್ತು. ನಮ್ಮ ಲೆಕ್ಕಪತ್ರಗಳು ಹಾಗೂ ವ್ಯವಹಾರ ಸಾಕಷ್ಟು ಪಾರದರ್ಶಕವಾಗಿದೆ. ಉದಾಹರಣೆಗೆ, ಅಂಗಡಿಗಳ ವಹಿವಾಟು ಪ್ರತಿದಿನದ ಕಡೆಯಲ್ಲಿ ಸಾರ್ವಜನಿಕಗೊಳ್ಳುತ್ತದೆ. ಆಸಕ್ತರು ಗಮನಿಸಲಿ ಎಂದೇ ಹಾಗೆ ಮಾಡುತ್ತದೆ ಸಂಸ್ಥೆ. ಶ್ರೀಯುತರ ಇತರ ಆರೋಪಗಳೂ ಸತ್ಯಕ್ಕೆ ದೂರವಾಗಿವೆ.

ಸಂಸ್ಥೆಯೇಕೆ ದಿವಾಳಿ ಘೋಷಿಸಿಕೊಂಡಿತ್ತು? ಸಂಸ್ಥೆಯ ಮುಂದೆ ಎರಡು ದಾರಿಗಳಿದ್ದವು. ನ್ಯಾಯಯುತವಾಗಿ ಬರಬೇಕಿರುವ ಹಣವನ್ನು ಬಿಡುಗಡೆಮಾಡಿಸಿಕೊಳ್ಳಲಿಕ್ಕಾಗಿ ಲಂಚ ಕೊಡಬೇಕಿತ್ತು. ಹೋರಾಟ ಮಾಡುವುದು ಎರಡನೇ ಹಾದಿಯಾಗಿತ್ತು. ಹೆಚ್ಚಿನ ಸಹಕಾರ ಸಂಘಗಳು, ಖಾದಿ ಸಂಸ್ಥೆಗಳು ಹಾಗೂ ಇತರರು ಮೊದಲ ಹಾದಿ ಹಿಡಿಯುತ್ತಾರೆ, ಅನಿವಾರ್ಯವಾಗಿ, ಜನರ ಸಂಕಟ ನೋಡಲಾಗದೆ, ಮೊದಲ ಹಾದಿ ಹಿಡಿಯುತ್ತಾರೆ. ಹೀಗೆ ಮಾಡಿ, ಭ್ರಷ್ಟತೆಯ ಕೂಪದಲ್ಲಿ ತಾವೂ ಬಿದ್ದು, ಸಂಸ್ಥೆಯನ್ನೂ ಸಾಯಿಸುತ್ತಾರೆ. ಚರಕದ ಮಹಿಳೆಯರು ಎರಡನೆಯ ಹಾದಿ ಹಿಡಿದಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಹಾಗೆಯೇ ಮಾಡಿಕೊಂಡು ಬಂದಿದ್ದಾರೆ, ನಗುಮುಖದಿಂದ ಹಾಗೆ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಅರಿವಿರುವ ಗ್ರಾಹಕನ ರೂಪದಲ್ಲಿ ನಮ್ಮ ಸಂಸ್ಥೆಗೆ ದೇವರು ಪ್ರತ್ಯಕ್ಷನಾಗಿದ್ದಾನೆ. ಪ್ರೀತಿಯ ಮಹಾಪೂರವೇ ಹರಿಯತೊಡಗಿದೆ. ಅಧಿಕಾರಿಗಳು ಹಾಗೂ ಸರಕಾರಗಳು ಒಂದೊಮ್ಮೆ ತಮ್ಮ ಜವಾಬ್ದಾರಿ ನಿರ್ವಹಿಸದೆ ಹೋದರೂ, ಚರಕವು ಮತ್ತೆ ಎದ್ದು ನಿಲ್ಲಲಿದೆ ಎಂಬ ನಂಬಿಕೆ ನಮಗಿದೆ.

ಚರಕ ಸಂಸ್ಥೆಯಲ್ಲಿ, ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿ ಅಥವಾ ಮಹಿಳೆಯರಲ್ಲಿ ಸಮಸ್ಯೆಗಳಿಲ್ಲ ಎಂದು ನಾನು ವಾದಿಸುತ್ತಿಲ್ಲ. ನೂರು ಸಮಸ್ಯೆಗಳಿವೆ. ಆದರೆ ಅವರ ಕೈಗಳಿಗೆ ಇಂದು ನಾಯಕತ್ವ ಬಂದಿದೆ. ಅವರ ತಪ್ಪುಗಳನ್ನು ತಿದ್ದೋಣ, ಜೊತೆಜೊತೆಗೆ ನಮ್ಮದೂ ತಪ್ಪುಗಳನ್ನು ತಿದ್ದಿಕೊಳ್ಳೋಣ. ಎಲ್ಲರೂ ಕೈಜೋಡಿಸಿ ಗ್ರಾಮಸ್ವರಾಜ್ಯದ ನಿರ್ಮಾಣ ಮಾಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)