varthabharthi


ನಿಮ್ಮ ಅಂಕಣ

ರಾಜಕೀಯ ಸುಳಿಯಲ್ಲಿ ಸಿಲುಕಿರುವ ಜಾತಿ ಜನಗಣತಿ

ವಾರ್ತಾ ಭಾರತಿ : 18 Sep, 2020
ಕೆ. ಎನ್. ಲಿಂಗಪ್ಪ, ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ.

ಸಮೀಕ್ಷೆ ನಡೆಸಲು ವ್ಯಯಿಸಿದ ಹಣ ಕಡಿಮೆಯೆದೇನಲ್ಲ, ಬರೋಬ್ಬರಿ 160 ಕೋಟಿ ರೂ. ಇದು ಜನ ಸಾಮಾನ್ಯರ ತೆರಿಗೆ ಹಣ. ತಾತ್ವಿಕ ಹಿನ್ನೆಲೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ರಾಜಕೀಯ ಒಳಸುಳಿಗಳಿಗೆ ಸಿಲುಕಿ, ಸರಕಾರದ ಬೊಕ್ಕಸದಿಂದ ಖರ್ಚು ಮಾಡಿದ ಹಣ ಅಪವ್ಯಯವಾಗಬಾರದು. ಬಹುತ್ವದ ಹಿತದೃಷ್ಟಿಯಿಂದ ವರದಿ ಸ್ವೀಕರಿಸಿ ವಿಧಾನಸಭೆಯ ಉಭಯ ಸದನಗಳಲ್ಲಿ ಮಂಡಿಸಿ ಪ್ರಜಾಸತ್ತಾತ್ಮಕವಾಗಿ ಚರ್ಚೆಗೆ ಒಳಪಡಿಸಿ, ಅದು ಅವೈಜ್ಞಾನಿಕ ಅಥವಾ ಅಪ್ರಸ್ತುತ ಎನಿಸಿದಲ್ಲಿ ಉಚಿತ ತೀರ್ಮಾನ ಕೈಗೊಳ್ಳುವ ಅಧಿಕಾರ ಚುನಾಯಿತ ಸದಸ್ಯರಿಗಿದೆ. ಇಂತಹ ಪ್ರಜಾಸತ್ತೆ ವಿಧಿ- ವಿಧಾನಗಳನ್ನು ಬಿಟ್ಟು, ಅಪಾರ ಹಣ ಮತ್ತು ಶ್ರಮ ವ್ಯಯಿಸಿ ಸಂಗ್ರಹಿಸಿದ, ಬಹುಜನ ಕಲ್ಯಾಣದ ಕಾರ್ಯಕ್ರಮಗಳ ಪ್ರಯೋಜನೆಗೆ ಬರುವ ಅಂಕಿಅಂಶಗಳನ್ನು ಆಯೋಗದ ತಿಜೋರಿಯಲ್ಲಿ ಗೆದ್ದಲು ಹಿಡಿಯಲು ಬಿಡುವುದು ಎಷ್ಟು ಮಾತ್ರ ಸರಿ?


1992ರ ನವೆಂಬರ್ 16, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪಾಲಿಗೊಂದು ಶುಭದಿನ! ಮಂಡಲ್ ಕೇಸ್ ಎಂದೇ ಪ್ರಸಿದ್ಧಿ ಪಡೆದಿರುವ, ಇಂದ್ರಸಹಾನಿ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಮಹತ್ವದ ತೀರ್ಪು ನೀಡಿರುವ ದಿನ ಅದು. ಮಂಡಲ್ ಆಯೋಗದ ಹಿನ್ನೆಲೆ ಏನು? ಎಂಬುದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. 1953ರಲ್ಲಿ ಭಾರತ ಸರಕಾರ, ಸಂವಿಧಾನದ ವಿಧಿ 15/4ರ ಅನುಸಾರ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸುವ ಉದ್ದೇಶದಿಂದ, ಕಾಕ ಕಾಲೇಲ್ಕರ್ ಆಯೋಗವನ್ನು ನೇಮಕ ಮಾಡಿತು. ಆಯೋಗ ಕೊಟ್ಟ ವರದಿ, ಸಂವಿಧಾನದ ವಿಧಿಗಳಿಗನುಗುಣವಾಗಿಲ್ಲವೆಂದು ಸಂಸತ್ತಿನಲ್ಲಿ ತಿರಸ್ಕರಿಸಲಾಯಿತು. ತದನಂತರ ಸುಮಾರು 25 ವರ್ಷಗಳ ಅವಧಿಯಲ್ಲಿ 2ನೇ ಆಯೋಗ ನೇಮಕ ಮಾಡುವ ಗೊಡವೆಗೆ, ಆ ದಿನಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಮುಂದಾಗಲಿಲ್ಲ. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷದ ಸರಕಾರ, ಬಿ.ಪಿ.ಮಂಡಲ್ ಅವರ ಅಧ್ಯಕ್ಷತೆಯಲ್ಲಿ 2ನೇ ಆಯೋಗ ನೇಮಿಸಿತು. ಆಯೋಗ 1980ರಲ್ಲಿ ತನ್ನ ವರದಿ ಸಲ್ಲಿಸಿತು. ತಕ್ಷಣದಲ್ಲೇ ಚುನಾವಣೆ ನಡೆದು, ಮತ್ತೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಿತಾದರೂ, ಅವರಾಗಲೀ ಅಥವಾ ಆನಂತರ ಬಂದ ರಾಜೀವ್ ಗಾಂಧಿ ಆಗಲೀ, ವರದಿ ಅನುಷ್ಠಾನಗೈಯಲಿಲ್ಲ.

1990 ರಲ್ಲಿ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ದಿಟ್ಟತನ ತೋರಿ, ವರದಿ ಅನುಸಾರ, ಸರಕಾರದ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ನಿರ್ಧರಿಸಿದರು. ಕೇಂದ್ರ ಸರಕಾರ ಶೇ. 27ರಷ್ಟು ಕೋಟ ನಿಗದಿಪಡಿಸಿ ಆದೇಶ ಹೊರಡಿಸಿತು. ಪ್ರಧಾನಿ ವಿ.ಪಿ.ಸಿಂಗ್ ಅವರ ಈ ನಿರ್ಧಾರ ಹಿಂದುಳಿದ ವರ್ಗಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ರಾಜಕೀಯ ಕಾರಣದ ಹಿನ್ನೆಲೆಯಲ್ಲಿ, ಸರಕಾರದ ನಿರ್ಧಾರವನ್ನು ವಿರೋಧಿಸಿ ಇಂದ್ರ ಸಹಾನಿ ಎಂಬವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರು. ಸರ್ವೋಚ್ಚ ನ್ಯಾಯಾಲಯ ಸರಕಾರದ ಆದೇಶವನ್ನು ಎತ್ತಿಹಿಡಿಯಿತು. ಮುಂದೆ, ಆ ಆದೇಶವೇ ಮಂಡಲ್ ತೀರ್ಪು ಎಂದು ಜನಜನಿತವಾಯಿತು. ಈ ತೀರ್ಪು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಬದುಕಿಗೆ ಉಜ್ವಲ ಬೆಳಕಾಗಿ, ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಸಂವಿಧಾನದ ವಿಧಿ 15(4) ರನ್ವಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಸಮುದಾಯಗಳ ಜನಸಂಖ್ಯೆ ಮತ್ತು ಅವುಗಳ ಸ್ಥಿತಿ-ಗತಿಗಳ ಸಮಗ್ರ ಮಾಹಿತಿ ಅತ್ಯವಶ್ಯಕ ಎಂದು ಆಯೋಗಗಳು ಕಾಲಕಾಲಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿವೆ. ಸರ್ವೋಚ್ಚ ನ್ಯಾಯಾಲಯ ಕೂಡ, ಆಂಧ್ರಪ್ರದೇಶ / ಬಲರಾಮ್, ಇಂದ್ರಸಹಾನಿ / ಭಾರತ ಸರಕಾರ ಹಾಗೂ ಕೃಷ್ಣಮೂರ್ತಿ / ಕರ್ನಾಟಕ, ಈ ಪ್ರಕರಣಗಳಲ್ಲಿ ಜಾತಿಗಳ ಜನಸಂಖ್ಯೆ ಮತ್ತು ಅವುಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅಂಕಿಅಂಶಗಳು ಬೇಕೆಂಬುದನ್ನು ಪುಷ್ಟೀಕರಿಸಿದೆ.

ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣಗಳಲ್ಲಿ, ಮುಖ್ಯವಾಗಿ ಜನಸಂಖ್ಯಾನುಸಾರ ಶೇಕಡವಾರು ಕೋಟ ನಿಗದಿಗೊಳಿಸಲು ಮತ್ತು ವರ್ಗ ವಿಂಗಡಿಸಲು ಈ ಅಂಕಿಅಂಶಗಳು ಅವಶ್ಯ ಎಂದೇ ಹೇಳಿದೆ. ಪರಿಶಿಷ್ಟವರ್ಗಗಳು ಸೇರಿದಂತೆ ಒಟ್ಟಾರೆ ಮೀಸಲಾತಿ ಶೇ.50ಕ್ಕಿಂತ ಹೆಚ್ಚಿರಬಾರದೆಂಬ ಸರ್ವೋಚ್ಚ ನ್ಯಾಯಾಲಯದ ನಿಲುವಿಗೆ, ಜಾತಿವಾರು ಮಾಹಿತಿಯ ಅಲಭ್ಯತೆ ಕಾರಣ ಎಂಬುದು ಕೂಡ ಗಮನಿಸಬೇಕಾದ ಅಂಶ. ಹೌದು, ಹಾಗಾದರೆ ಜಾತಿವಾರು ಜನಸಂಖ್ಯೆ ಮತ್ತಿತರ ಮಾಹಿತಿಗಳಿಲ್ಲವೇ? ಎಂಬ ಪ್ರಶ್ನೆ ಎದುರಾಗುತ್ತದೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ 1871ರಿಂದ 1931ರವರೆಗೆ ದೇಶಾದ್ಯಂತ ಜಾತಿಗಳ ಜನಸಂಖ್ಯೆಯನ್ನೊಳಗೊಂಡ ಅಂಕಿ-ಅಂಶಗಳನ್ನು ಪ್ರತಿ ಜನಗಣತಿ ಸಂದರ್ಭದಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಜಾತಿ-ಜನಗಣತಿ ಪದ್ಧತಿ ಅನೂಹ್ಯ ಕಾರಣಗಳಿಂದ ನಿಂತು ಹೋಗಿದೆ.

ಸಾಮಾಜಿಕ ನ್ಯಾಯತತ್ವದ ಪ್ರತಿಪಾದನೆಯೇ ಸರ್ವರಿಗೂ ಸಮಪಾಲು-ಸಮಬಾಳು. ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಆಯಾಯ ಸಮುದಾಯಗಳ ಪ್ರಗತಿಗೆ, ಜಾತಿಜನಸಂಖ್ಯೆಗೆ ಅನುಗುಣವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದು ಸಂವಿಧಾನದ ಆಶಯವೂ ಆಗಿದೆ.

ಕರ್ನಾಟಕದಲ್ಲಿ ಹಾವನೂರ್ ಆಯೋಗ ಹಿಂದುಳಿದ ವರ್ಗಗಳನ್ನು ಗುರುತಿಸಲು ಮಾದರಿ ಸಮೀಕ್ಷೆಯ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡಿತು. ವೆಂಕಟಸ್ವಾಮಿ ಆಯೋಗ ಸ್ವಲ್ಪ ಮುಂದುವರಿದು ಸುಮಾರು 60 ಲಕ್ಷ ಕುಟಂಬಗಳನ್ನು ಸಮೀಕ್ಷೆ ಮಾಡಿ ತನ್ನ ವರದಿಯನ್ನು ಸಿದ್ಧ ಪಡಿಸಿತು. ವೆಂಕಟಸ್ವಾಮಿ ಆಯೋಗ ಸಂಗ್ರಹಿದ ಅಂಕಿ ಅಂಶಗಳನ್ನೇ ಆಧರಿಸಿ ನ್ಯಾ. ಚಿನ್ನಪ್ಪರೆಡ್ಡಿ ಆಯೋಗ ಕೂಡ ವರದಿ ಸಿದ್ಧಪಡಿಸಿತ್ತು ಎಂಬುದು ಗಮನಿಸಬೇಕಾದ ಅಂಶ.

ಮಂಡಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಯ್ದೆ ರೂಪಿಸಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳನ್ನು ಅಸ್ತಿತ್ವಕ್ಕೆ ತಂದವು. ಕರ್ನಾಟಕದಲ್ಲಿಯೂ ಕೂಡ ‘‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 1995’’ ಜಾರಿಗೆ ಬಂದಿತು. ಕಾಯ್ದೆಯ ಕಲಂ 9ರಲ್ಲಿ, ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿ ಆಧಾರಿತ ಜನಗಣತಿಯ ಅಗತ್ಯದ ಬಗ್ಗೆ ಹೇಳಿದೆ. ಅಷ್ಟೇ ಅಲ್ಲದೆ ಪ್ರತಿ 10 ವರ್ಷಗಳಿಗೊಮ್ಮೆ ಸಂವಿಧಾನದ ವಿಧಿ 16(4)ರಲ್ಲಿ ಹೇಳಿರುವಂತೆ, ‘ಸಾಕಷ್ಟು’ ಪ್ರಾತಿನಿಧ್ಯ ಪಡೆದುಕೊಂಡಿರುವ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ಆಗಬೇಕೆಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ, ಕಾಯ್ದೆ ಅಸ್ತಿತ್ವಕ್ಕೆ ಬಂದ ಮೊದಲ 10 ವರ್ಷಗಳ ನಂತರ, ಈ ಶಾಸನ ಬದ್ಧ ಪ್ರಕ್ರಿಯೆಗೆ ಮುಂದಾಗಲಿಲ್ಲ. ಜಾತಿಗಳ ಜನಸಂಖ್ಯೆ ಅಲಭ್ಯತೆ ಕಾರಣ, ಒಟ್ಟಾರೆ ಶೇ.ವಾರು ಮೀಸಲಾತಿ ನಿಗದಿಪಡಿಸುವಲ್ಲಿ, ಪರಿಶಿಷ್ಟವರ್ಗ ಮತ್ತು ಅರ್ಹ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. 2014ರಲ್ಲಿ, ಅಂತೂ ಇಂತೂ, ಕರ್ನಾಟಕ ಸರಕಾರ ದೃಢ ಇಚ್ಛಾಶಕ್ತಿಯಿಂದ ದೇಶದಲ್ಲೇ ಪ್ರಥಮ ಬಾರಿಗೆ ಜಾತಿವಾರು ಸಮಗ್ರ ಜನಗಣತಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲು ನಿರ್ಧರಿಸಿತು. ಸರಕಾರದ ದೃಢ ನಿಲುವಿನ ಹಿಂದೆ ಇದ್ದವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ತತ್ಸಂಬಂಧ ಸರಕಾರ ಆದೇಶ ಹೊರಡಿಸಿತು.

ಸರಕಾರದ ಆದೇಶದ ಮೇರೆಗೆ, ಎಚ್. ಕಾಂತರಾಜ ಆಯೋಗ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿ ಸಮಾಜ ವಿಜ್ಞಾನಿಗಳು, ಪರಿಣಿತ ಅಧಿಕಾರಿಗಳು ಮತ್ತು ತಂತ್ರಜ್ಞರ ಪೂರ್ವಭಾವಿ ಸಭೆಗಳನ್ನು ನಡೆಸಿ, ಅವರು ನೀಡಿದ ಸಲಹೆಗಳನ್ನು ಮತ್ತು ರಾಷ್ಟ್ರೀಯ ಜನಗಣತಿಯಲ್ಲಿ ಅನುಸರಿಸುವ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಸಮೀಕ್ಷೆಗೆ ಅವಶ್ಯ ಬೇಕಾಗಿರುವ ಪರಿಕರಗಳನ್ನು ಸಿದ್ಧಪಡಿಸಿಕೊಂಡು, ಬಿಇಎಲ್ ಸಂಸ್ಥೆಯ ನೇರ ನಿಯಂತ್ರಣದಲ್ಲಿ, ಕರ್ನಾಟಕದ ಜನತೆಗೆ ಅಗತ್ಯ ಮಾಹಿತಿಯನ್ನು ಪ್ರಚಾರ ಮಾಧ್ಯಮಗಳ ಮೂಲಕ ನೀಡಿ, 2015 ಎಪ್ರಿಲ್-ಮೇ ತಿಂಗಳಲ್ಲಿ ‘‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’’ ಎಂದು ಕರ್ನಾಟಕದ ಜಾತಿಗಳ ಅಂಕಿಅಂಶಗಳನ್ನು ಸಂಗ್ರಹಿಸಿದೆ. ಸಂಗ್ರಹಿಸಿದ ವಿಧಾನಗಳನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆ ದೃಢೀಕರಿಸಿದೆ ಎಂದು ಆಯೋಗವೇ ಹೇಳಿದೆ. ಜಾತಿ-ಜನಗಣತಿಯ ಅಂಕಿಅಂಶ ಮತ್ತು ಹಿಂದುಳಿದ ವರ್ಗಗಳ ಮರುವರ್ಗೀಕರಣದ ವರದಿಗಳನ್ನು ಸರಕಾರಕ್ಕೆ ಸಲ್ಲಿಸುವಷ್ಟರಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಆನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೆ ಆಯೋಗ ವರದಿ ಸಲ್ಲಿಸಲು ಪ್ರಯತ್ನ ಪಟ್ಟಿತ್ತಾದರೂ, ಸಫಲವಾಗಲಿಲ್ಲ.

ಈ ಎಲ್ಲದರ ನಡುವೆಯೇ ಸುದ್ದಿ ಮಾಧ್ಯಮಗಳು ಅದರಲ್ಲೂ ದೃಶ್ಯಮಾಧ್ಯಮಗಳು ಜಾತಿ-ಜನಗಣತಿ ವರದಿ ‘‘ಲೀಕ್’’ ಆಗಿದೆ ಎಂದು ಬೊಬ್ಬೆ ಹೊಡೆದು, ಕೆಲ ಪ್ರಮುಖ ಜಾತಿಗಳ ಕಪೋಲ ಕಲ್ಪಿತ ಅಂಕಿ-ಅಂಶಗಳನ್ನು ‘ಬಹಿರಂಗ’ ಪಡಿಸಿದವು. ತಕ್ಷಣದಲ್ಲೇ ಆಯೋಗವು, ಯಾವುದೇ ಅಂಕಿಅಂಶಗಳು ಲೀಕ್ ಆಗಿಲ್ಲವೆಂದು ಸ್ಪಷ್ಟಪಡಿಸಿತು. ಆದರೆ, ಕೆಲ ವ್ಯಕ್ತಿ ಸಂಘ-ಸಂಸ್ಥೆಗಳು ದೃಶ್ಯಮಾಧ್ಯಮಗಳಲ್ಲಿ ಬಂದ ಅಂಕಿಅಂಶಗಳೇ ನಿಜ ಎಂದು ನಂಬಿಕೊಂಡಿದುದು, ಆಯೋಗ ಯಾವುದೇ ಪೂರ್ವಾಗ್ರಹ ಇಲ್ಲದೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಗೆ ಗ್ರಹಣ ಬಡಿಯಿತು. ಈ ಬಗ್ಗೆ ಪತ್ರಿಕಾ ಹೇಳಿಕೆಗಳ ಮೂಲಕ ಸಮೀಕ್ಷೆ ಬಗ್ಗೆಯೇ ಅನುಮಾನಗಳನ್ನು ಅನೇಕರು ವ್ಯಕ್ತ ಪಡಿಸಿದರು. ಮೊದಲೇ ಸಮೀಕ್ಷೆಯನ್ನೇ ವಿರೋಧಿಸಿದ್ದಂತಹ ಕೆಲವು ‘ರಾಜಕೀಯ ಶಕ್ತಿಗಳು’ ಜಾಗೃತಗೊಂಡವು. ಕೆಲವರ ರಾಜಕೀಯ ಹಿತಾಸಕ್ತಿಗೆ ‘‘ಮಾರಕ’’ವಾಗಬಹುದೆಂದು, ಆ ವರ್ಗಗಳ ರಾಜಕಾರಣಿಗಳು ಅಂತರಂಗದಲ್ಲಿ, ಜಾತಿ-ಜನಗಣತಿಯ ಅಂಕಿಅಂಶಗಳು ಬಹಿರಂಗಗೊಳ್ಳ ಬಾರದು ಎಂಬ ನಿಲುವಿಗೆ ಬಂದ ಹಾಗೆ ಕಾಣಿಸುತ್ತಿದೆ. ವರದಿ ಬಹಿರಂಗ ಗೊಳಿಸಲು ಕೆಲವು ಶಾಸಕರು ಶಾಸನ ಸಭೆಗಳಲ್ಲಿ ಒತ್ತಾಯಿಸಿದರೂ ಸರಕಾರ ಮಾತ್ರ ಹಾರಿಕೆ ಉತ್ತರವನ್ನೇ ಕೊಡುತ್ತಾ ಬಂದಿದೆ.

ಸಮೀಕ್ಷೆ ನಡೆಸಲು ವ್ಯಯಿಸಿದ ಹಣ ಕಡಿಮೆಯೆದೇನಲ್ಲ, ಬರೋಬ್ಬರಿ 160 ಕೋಟಿ ರೂ. ಇದು ಜನ ಸಾಮಾನ್ಯರ ತೆರಿಗೆ ಹಣ. ತಾತ್ವಿಕ ಹಿನ್ನೆಲೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ರಾಜಕೀಯ ಒಳಸುಳಿಗಳಿಗೆ ಸಿಲುಕಿ, ಸರಕಾರದ ಬೊಕ್ಕಸದಿಂದ ಖರ್ಚು ಮಾಡಿದ ಹಣ ಅಪವ್ಯಯವಾಗಬಾರದು. ಬಹುತ್ವದ ಹಿತದೃಷ್ಟಿಯಿಂದ ವರದಿ ಸ್ವೀಕರಿಸಿ ವಿಧಾನಸಭೆಯ ಉಭಯ ಸದನಗಳಲ್ಲಿ ಮಂಡಿಸಿ ಪ್ರಜಾಸತ್ತಾತ್ಮಕವಾಗಿ ಚರ್ಚೆಗೆ ಒಳಪಡಿಸಿ, ಅದು ಅವೈಜ್ಞಾನಿಕ ಅಥವಾ ಅಪ್ರಸ್ತುತ ಎನಿಸಿದಲ್ಲಿ ಉಚಿತ ತೀರ್ಮಾನ ಕೈಗೊಳ್ಳುವ ಅಧಿಕಾರ ಚುನಾಯಿತ ಸದಸ್ಯರಿಗಿದೆ.

ಇಂತಹ ಪ್ರಜಾಸತ್ತೆ ವಿಧಿ- ವಿಧಾನಗಳನ್ನು ಬಿಟ್ಟು, ಅಪಾರ ಹಣ ಮತ್ತು ಶ್ರಮ ವ್ಯಯಿಸಿ ಸಂಗ್ರಹಿಸಿದ, ಬಹುಜನ ಕಲ್ಯಾಣದ ಕಾರ್ಯಕ್ರಮಗಳ ಪ್ರಯೋಜನೆಗೆ ಬರುವ ಅಂಕಿಅಂಶಗಳನ್ನು ಆಯೋಗದ ತಿಜೋರಿಯಲ್ಲಿ ಗೆದ್ದಲು ಹಿಡಿಯಲು ಬಿಡುವುದು ಎಷ್ಟು ಮಾತ್ರ ಸರಿ? ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ನೇಮಕ ಮಾಡಲಾಗಿದ್ದ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಸದ್ಯ ಸರಕಾರದ ಮುಂದಿದೆ. ವರದಿ ಬಗ್ಗೆ ಪರ-ವಿರೋಧಗಳು ತಲೆ ಎತ್ತಿವೆ. ವಿರೋಧಿಗಳು ಗಣತಿಯನ್ನು ಆಯೋಗ ಸೂಕ್ತ ಮಾನದಂಡ ಅನುಸರಿಸಿ ನಡೆಸಿಲ್ಲ ಎಂದು ಆಕ್ಷೇಪಿಸಿರುವುದು ವರದಿಯಾಗಿದೆ. ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಮಾಡಿರುವ ಜಾತಿ-ಜನಗಣತಿ ಅಂಕಿಅಂಶಗಳನ್ನು ನ್ಯಾ.ಸದಾಶಿವ ಆಯೋಗದ ವರದಿಯ ಅಂಕಿಅಂಶಗಳ ಜೊತೆ ತುಲನೆಗೆ ಒಳಪಡಿಸಿ, ಸರಕಾರ ಮ ುಂದಿನ ಕ್ರಮ ನಿರ್ಧರಿಸಬಹುದಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯದ ಸಮುದಾಯಗಳು ಸಿಕ್ಕಿದ್ದೇ ಸಿರುಂಡೆ ಎಂದು ಅನ್ಯಾಯದ ಪಾಲನ್ನು ಪಡೆಯುತ್ತಲೇ ಹೋಗುತ್ತವೆ! ಹಿಂದುಳಿದವರನ್ನು ರಕ್ಷಿಸಬೇಕಾದ ದೇವರೂ ಅವರ ಪಾಲಿಗೆ ಇಲ್ಲವಾಗಿದ್ದಾನೆ!.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)