varthabharthi


ನಿಮ್ಮ ಅಂಕಣ

ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಹಿನ್ನಡೆ

ವಾರ್ತಾ ಭಾರತಿ : 19 Sep, 2020
ಡಾ. ರಝಾಕ್ ಉಸ್ತಾದ್ ಪ್ರಾಧ್ಯಾಪಕರು, ರಾಯಚೂರು

ಈ ದೇಶದ ಮೀಸಲಾತಿಯ ಬಹುದೊಡ್ಡ ಪಾಲುದಾರರು ಅಲ್ಪಸಂಖ್ಯಾತರು ಎಂದು ಬಹುತೇಕರು ನಂಬಿದ್ದಾರೆ ಅಥವಾ ಬಿಜೆಪಿ ನಂಬಿಸಿದೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತ ಬಂದರೂ ಮುಸ್ಲಿಮರು ನೇಮಕಾತಿಯಲ್ಲಿ, ಶಿಕ್ಷಣದಲ್ಲಿ ಹಾಗೂ ರಾಜಕೀಯದಲ್ಲಿ ಯಾವುದೇ ರೀತಿಯ ಮೀಸಲಾತಿ ಹೊಂದಿಲ್ಲ ಎನ್ನುವ ಕಟು ಸತ್ಯ ಇಂತಹವರಿಗೆ ಗೊತ್ತಿಲ್ಲ.


ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಸುಮಾರು ಶೇ. 13.8 ರಷ್ಟಿದೆ. ಈ ಶೇಕಡವಾರು ಅಂದಾಜು ದೇಶಕ್ಕೂ ಅನ್ವಯವಾಗುತ್ತದೆ. ಇದರ ಜೊತೆಗೆ ಕ್ರೈಸ್ತ, ಸಿಖ್, ಜೈನ್, ಪಾರ್ಸಿ ಹಾಗೂ ಇನ್ನಿತರ ಸಮುದಾಯ ಸೇರಿ ರಾಜ್ಯದ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಸುಮಾರು ಶೇ. 17ರಷ್ಟಿದೆ. ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ ವಿಶೇಷವಾಗಿ ಮುಸ್ಲಿಂ ಸಮುದಾಯ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದಾರೆ, ಅವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಸಮೃದ್ಧವಾಗಿಲ್ಲ ಎಂದು ಸರಕಾರ ನೇಮಿಸಿದ ನ್ಯಾ. ರಾಜೇಂದ್ರ ಸಾಚಾರ್ ಸಮಿತಿ ಹೇಳಿದೆ. ಮುಸಿಂ ಸಮುದಾಯದ ಪ್ರಾತಿನಿದ್ಯ ಸರಕಾರದ ಹಂತದಲ್ಲಿ (ಸರಕಾರಿ ಸೇವೆಯಲ್ಲಿ) ಅತ್ಯಂತ ಕಡಿಮೆ ಎಂದು ನಾಗರಿಕ ಸೇವೆಯಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ಇದ್ದಾರೆ ಎಂದು ವರದಿ ಹೇಳುತ್ತದೆ. ಆದರೆ ಬಿಜೆಪಿ ಮಾತ್ರ, ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರ ತುಷ್ಟೀಕರಣ ನಡೆಯುತ್ತಿದೆ, ಸರಕಾರದ ಯೋಜನೆಗಳು ಯತೇಚ್ಛವಾಗಿ ಮುಸ್ಲಿಮರಿಗೆ ಹರಿದು ಹೋಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತದೆ.

ಆದರೆ, ವಾಸ್ತವವಾಗಿ ಮುಸ್ಲಿಮರು ಮೂಲೆಗುಂಪಾಗಲು ಕಾಂಗ್ರೆಸ್ ಪಕ್ಷವೇ ಮುಖ್ಯ ಕಾರಣ. ಈ ದೇಶದ ಮೀಸಲಾತಿಯ ಬಹುದೊಡ್ಡ ಪಾಲುದಾರರು ಅಲ್ಪಸಂಖ್ಯಾತರು ಎಂದು ಬಹುತೇಕರು ನಂಬಿದ್ದಾರೆ ಅಥವಾ ಬಿಜೆಪಿ ನಂಬಿಸಿದೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತ ಬಂದರೂ ಮುಸ್ಲಿಮರು ನೇಮಕಾತಿಯಲ್ಲಿ, ಶಿಕ್ಷಣದಲ್ಲಿ ಹಾಗೂ ರಾಜಕೀಯದಲ್ಲಿ ಯಾವುದೇ ರೀತಿಯ ಮೀಸಲಾತಿ ಹೊಂದಿಲ್ಲ ಎನ್ನುವ ಕಟು ಸತ್ಯ ಇಂತಹವರಿಗೆ ಗೊತ್ತಿಲ್ಲ. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೆಲವು ಮುಸ್ಲಿಂ ಗುಂಪುಗಳನ್ನು ಸೇರಿಸಿದ್ದರೂ ಬಹುತೇಕ ಮುಸ್ಲಿಮರು ಆ ಗುಂಪಿನ ಹೆಸರನ್ನು ತಮ್ಮ ದಾಖಲೆಗಳಲ್ಲಿ ಸೇರಿಸದೆ ಇರುವುದರಿಂದ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ವಂಚಿತಗೊಂಡಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಬಹುತೇಕ ಮುಸ್ಲಿಮರು 2ಬಿ ಪ್ರವರ್ಗದಲ್ಲಿ ಮತ್ತು ಕೆಲವು ಮುಸ್ಲಿಮರು 1ಎ ಪ್ರವರ್ಗದಲ್ಲಿ ಬಂದಿರುವುದರಿಂದ ಒಂದಿಷ್ಟು ಮೀಸಲಾತಿಯ ಸವಲತ್ತು ಪಡೆದಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ನಿರ್ದೇಶನಾಲಯ, ವಕ್ಫ್ ಬೋರ್ಡ್ ಸೇರಿ ನಾಲ್ಕು ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಇದರ ಜೊತೆಗೆ ಕೇಂದ್ರ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಲವು ಯೋಜನೆಗಳು ಸೇರಿ ಇಲಾಖೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ಬಂದಿದೆ. ರಾಜ್ಯದ ಬಜೆಟ್ ಗಾತ್ರ ಹೆಚ್ಚಾದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಿಗದಿಗೊಳಿಸಲಾದ ಅನುದಾನವೂ ಹಿಂದಿನ 10 ವರ್ಷಗಳಿಂದ ಹೆಚ್ಚಾಗುತ್ತ ಬಂದಿದೆ. ಆದರೆ, ಬಿಜೆಪಿ ಸರಕಾರ ಬಂದ ಮೇಲೆ ಕಳೆದ ಎರಡು ವರ್ಷಗಳಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾಗುತ್ತಿರುವ ಅನುದಾನದಲ್ಲಿ ಅಧರ್ದಷ್ಟು ಕಡಿತವಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಧಾನಮಂತ್ರಿಗಳ ಅಲ್ಪಸಂಖ್ಯಾತರ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿ ಇರುತ್ತದೆ. ಪ್ರಧಾನಮಂತ್ರಿಗಳ ಅಲ್ಪಸಂಖ್ಯಾತರ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ಕಾರ್ಯನಿರ್ವಹಿಸಬೇಕು. ಈ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿ ಇರುತ್ತದೆ. ರಾಜ್ಯ ಮಟ್ಟದ ಸಭೆ ಜರುಗಿಸುವುದಕ್ಕೆ ಮುಂಚೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇರುವ ಸಮಿತಿ ಸಭೆೆ ನಡೆಸಿ, ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನದ ಸ್ಥಿತಿಗತಿಯ ವರದಿಯನ್ನು ರಾಜ್ಯ ಸಮಿತಿಗೆ ಸಲ್ಲಿಸಬೇಕು. ರಾಜ್ಯ ಮಟ್ಟದ ಸಮಿತಿ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಬೇಕು.

ಆದರೆ, ದುರದೃಷ್ಟವಶಾತ್ ಕಳೆದ 9 ವರ್ಷಗಳಿಂದ ರಾಜ್ಯದಲ್ಲಿ ಪ್ರಧಾನಮಂತ್ರಿಗಳ ಅಲ್ಪಸಂಖ್ಯಾತರ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಸಮಿತಿಗಳ ರಚನೆ ಬಗ್ಗೆ ಸರಕಾರ ಸೂಕ್ತ ಆದೇಶಗಳು ಮಾಡಿಲ್ಲ. ಇದರಿಂದ ಬಹುತೇಕ ಜಿಲ್ಲಾ ಮಟ್ಟದ ಸಭೆೆಗಳು ಜರುಗದೆ ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನ ನನೆಗುದಿಗೆ ಬಿದ್ದಂತಾಗಿದೆ. ಅದೇ ರೀತಿ ರಾಜ್ಯ ಮಟ್ಟದ ಪ್ರಧಾನಮಂತ್ರಿಗಳ ಅಲ್ಪಸಂಖ್ಯಾತರ 15 ಅಂಶಗಳ ಕಾರ್ಯಕ್ರಮ ಸಮಿತಿ ಕಾಟಾಚಾರಕ್ಕೆ ವರ್ಷದಲ್ಲಿ ಒಂದು ಅಥವಾ ಎರಡು ಸಭೆೆ ನಡೆಸಿದ ಉದಾಹರಣೆಗಳು ಇವೆ. ಪ್ರಧಾನಮಂತ್ರಿಗಳ ಅಲ್ಪಸಂಖ್ಯಾತರ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ರಾಜ್ಯ ಮಟ್ಟದ ಸಭೆಯಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯದಿಂದ ಆಯ್ಕೆಯಾದ ಎಲ್ಲ ಶಾಸಕರು, ಬಹುವಲಯ ಅಭಿವೃದ್ಧಿ ಯೋಜನೆಯ (ಎಂ.ಎಸ್.ಡಿ.ಪಿ.) ಜಿಲ್ಲೆಗಳ ಲೋಕಸಭಾ ಸದಸ್ಯರು ಸದಸ್ಯರಾಗಿರುತ್ತಾರೆ. ಆದರೆ, ಈ ಸಮಿತಿಯ ಸಭೆೆಗೆ ಬಹುತೇಕ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರು ಹಾಜರಾಗುವುದಿಲ್ಲ, ಇದರಿಂದ ಅಲ್ಪಸಂಖ್ಯಾತ ಸಮುದಾಯದ ಜನ ಸ್ಥಳೀಯವಾಗಿ ಎದುರಿಸುವ ಸಮಸ್ಯೆಗಳನ್ನು ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವಾಗದೇ ಸಮಸ್ಯೆಗಳು ಜಟಿಲವಾಗಿಯೇ ಉಳಿದಿವೆ.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ಸರಕಾರ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ, ವಿದೇಶಿ ವಿದ್ಯಾರ್ಥಿವೇತನ, ವಿದ್ಯಾಸಿರಿ, ವಿದ್ಯಾರ್ಥಿನಿಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ವೌಲಾನಾ ಆಝಾದ್ ಶಾಲೆಗಳು, ಶಾದಿಮಹಲ್, ಬಿದಾಯಿ, ಕ್ರಿಶ್ಚಿಯನ್ ಅಭಿವೃದ್ಧಿ, ಜೈನ್/ಸಿಖ್ ಅಭಿವೃದ್ಧಿ, ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆ, ಬಹುವಲಯ ಅಭಿವೃದ್ಧಿ ಯೋಜನೆ ಇತ್ಯಾದಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತದೆ. ಅದೇ ರೀತಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ (ಅರಿವು), ಗಂಗಾ ಕಲ್ಯಾಣ, ಶ್ರಮಶಕ್ತಿ, ಕೃಷಿ ಭೂಮಿ ಖರೀದಿ, ಸಣ್ಣ ಸಾಲ ಮತ್ತು ಸಹಾಯ ಧನ, ಕ್ರೈಸ್ತ ಸಮುದಾಯ ವಿಶೇಷ ಅಭಿವೃದ್ಧಿ ಯೋಜನೆ ಇತ್ಯಾದಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತದೆ. ಆದರೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಈ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆಮಾಡುವ ಅಧಿಕಾರ ಶಾಸಕರಿಗೆ ನೀಡಿರುವುದರಿಂದ ಬಿಜೆಪಿಯಿಂದ ಆಯ್ಕೆಯಾದ ಶಾಸಕರು ಬಹುತೇಕ ಈ ಯೋಜನೆಗಳನ್ನು ಅನುಷ್ಠಾನ ಮಾಡಲು ಆಸಕ್ತಿತೋರದೆ ಇರುವುದರಿಂದ ಮುಸ್ಲಿಂ ಸಮುದಾಯಕ್ಕೆ ಈ ಯೋಜನೆಗಳ ಲಾಭ ಸಿಗದೆ ನಾಮಕೆವಾಸ್ತೆ ಯೋಜನೆಗಳು ಎನ್ನುವ ಪರಿಸ್ಥಿತಿ ಬಂದಿದೆ. ಇದರ ಬದಲಾಗಿ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಲು ಅವಕಾಶ ನೀಡಿದಲ್ಲಿ ಬಹುತೇಕ ಯೋಜನೆಗಳು ಅನುಷ್ಠಾನವಾಗಬಹುದು.

ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಹಲವು ಯೋಜನೆಗಳ ಅನುದಾನ ಕಡಿತಗೊಳಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ವಿರೋಧಿ ನಿಲುವು ಪ್ರದರ್ಶನ ಮಾಡಿದೆ. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯ ಅನುದಾನ ಶೇ. 25ರಷ್ಟು (90 ಕೋ.ರೂ. ಇದ್ದ ಅನುದಾನವನ್ನು ಕಡಿತಗೊಳಿಸಿ 67.50 ಕೋ.ರೂ.ನೀಡಿದೆ) ಕಡಿತಗೊಳಿಸಿದೆ. ಶಾದಿಮಹಲ್/ಸಮುದಾಯ ಭವನ ಯೋಜನೆಯ ಶೇ. 25ರಷ್ಟು ಅನುದಾನ ಕಡಿತ, ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನ ಶೇ. 25 ರಷ್ಟು (20 ಕೋ.ರೂ. ಇದ್ದ ಅನುದಾನವನ್ನು ಕಡಿತಗೊಳಿಸಿ 15 ಕೋ.ರೂ.ನೀಡಿದೆ) ಹಾಗೂ ವಿದ್ಯಾರ್ಥಿ ವೇತನದಲ್ಲಿ ಶೇ. 25ರಷ್ಟು (275 ಕೋ.ರೂ. ಇದ್ದ ಅನುದಾನವನ್ನು ಕಡಿತಗೊಳಿಸಿ 206 ಕೋ.ರೂ.ನೀಡಿದೆ) ಅನುದಾನ ಕಡಿತಗೊಳಿಸಿದೆ ಹಾಗೂ ವಿದ್ಯಾರ್ಥಿಗಳಿಗೆ ನೀಡಲಾಗುವ ಶೈಕ್ಷಣಿಕ ಸಾಲ ಅರಿವು ಯೋಜನೆಯ ಅನುದಾನ ಶೇ. 50ರಷ್ಟು ಕಡಿತಗೊಳಿಸಿದೆಯಲ್ಲದೆ, ಕೆಲವು ಅಲ್ಪಸಂಖ್ಯಾತರ ಯೋಜನೆಗಳನ್ನು ಕೂಡ ರದ್ದುಗೊಳಿಸಲು ಆದೇಶಿಸಿದೆ.

ಅದರಲ್ಲಿ ಶಾದಿಭಾಗ್ಯ ಯೋಜನೆ, ಅಲ್ಪಸಂಖ್ಯಾತ ಕಾಲನಿ ಅಭಿವೃದ್ಧಿ ಯೋಜನೆಗಳು ಸೇರಿದೆ. ವಿದ್ಯಾರ್ಥಿ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಹಾಗೂ ಅರಿವು (ವಿದ್ಯಾರ್ಥಿಗಳಿಗೆ ನೀಡಲಾಗುವ ಶೈಕ್ಷಣಿಕ ಸಾಲ) ಯೋಜನೆಯ ಅನುದಾನವನ್ನು ಸರಕಾರ ಕಡಿತಗೊಳಿಸಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವ ಪ್ರಯತ್ನ ಮಾಡುತ್ತಿದೆ. ಅನುದಾನ ಕಡಿತಗೊಳಿಸುತ್ತಿರುವುದು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕಲ್ಲ. ಯಾಕೆಂದರೆ ಸರಕಾರ ಅನುದಾನ ಕಡಿತಗೊಳಿಸಲು ಪ್ರಾರಂಭಿಸಿರುವುದು 2019-20ನೇ ಸಾಲಿನಿಂದ, ಆಗ ಯಾವುದೇ ಸಾಂಕ್ರಾಮಿಕ ರೋಗವಿರಲಿಲ್ಲ ಮತ್ತು ಆ ವರ್ಷ ಇತರ ಇಲಾಖೆಗಳ ಅನುದಾನ ಕಡಿತಗೊಳಿಸಿದ ಉದಾಹರಣೆಯಿಲ್ಲ. ಇದಕ್ಕೆ ಬಿಜೆಪಿ ಸರಕಾರಕ್ಕೆ ಅಲ್ಪಸಂಖ್ಯಾತರ ಬಗೆಗಿನ ಧೋರಣೆ ಅಥವಾ ಬಹುಸಂಖ್ಯಾತರ ಓಲೈಕೆಯೇ ಕಾರಣವೆನ್ನಬಹುದು.

ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಬೆನ್ನಿಗೆ ನಿಲ್ಲಬೇಕಾದ ಜಾತ್ಯತೀತ ಪಕ್ಷಗಳು ವೌನವಾಗಿರುವುದು ಸಮ್ಮತಿಯ ಲಕ್ಷಣವೆಂದೇ ಭಾವಿಸಬೇಕಾಗಿದೆ. ಕನಿಷ್ಠ ವಿರೋಧ ಪಕ್ಷದ ನಾಯಕರ ಗಮನಕ್ಕೆ ಇಂತಹ ಗಂಭೀರ ವಿಷಯ ಬರದೇ ಇರಲು ಸಾಧ್ಯವಿಲ್ಲ, ಆದರೂ ಸಿದ್ದರಾಮಯ್ಯನವರು ಕನಿಷ್ಠ ವಿರೋಧ ಮಾಡದಷ್ಟು ಅಸಹಾಯಕರಾದರೇ?, ಎಚ್.ಡಿ.ಕುಮಾರಸ್ವಾಮಿಯವರು ಸರಕಾರಕ್ಕೆ ಒಂದು ಮಾತು ಹೇಳದಷ್ಟು ಅಲ್ಪಸಂಖ್ಯಾತರ ವಿರೋಧಿಗಳಾದರೇ? ಎಂದು ಪ್ರಶ್ನಿಸುವಂತಹ ಸಂದರ್ಭ ಬಂದಿರುವುದು ದುರಂತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)