varthabharthi


ಅಂತಾರಾಷ್ಟ್ರೀಯ

ಜಾಧವ್ ಪರ ವಾದಕ್ಕೆ ಭಾರತೀಯ ವಕೀಲರ ನೇಮಕ: ಭಾರತದ ಬೇಡಿಕೆ ತಿರಸ್ಕರಿಸಿದ ಪಾಕ್

ವಾರ್ತಾ ಭಾರತಿ : 19 Sep, 2020

ಇಸ್ಲಾಮಾಬಾದ್,ಸೆ.19: ಬೇಹುಗಾರಿಕೆಯ ಆರೋಪದಲ್ಲಿ ಮರಣದಂಡನೆಯನ್ನು ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದಿಸಲು ಭಾರತೀಯ ನ್ಯಾಯವಾದಿ ಅಥವಾ ಬ್ರಿಟನ್ ರಾಣಿಯ ಅಧಿಕೃತ ವಕೀಲರನ್ನು ನೇಮಿಸಲು ಅವಕಾಶ ನೀಡಬೇಕೆಂಬ ಭಾರತದ ಬೇಡಿಕೆಯನ್ನು ಪಾಕಿಸ್ತಾನವು ಶನಿವಾರ ತಿರಸ್ಕರಿಸಿದೆ.

   ಇಸ್ಲಾಮಾಬಾದ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಪಾಕ್‌ನ ವಿದೇಶಾಂಗ ವಕ್ತಾರ ಝಾಹಿದ್ ಹಾಫೀಝ್ ಚೌಧರಿ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಜಾಧವ್ ಪರವಾಗಿ ವಾದಿಸಲು ಪಾಕಿಸ್ತಾನದಿಂದ ಹೊರಗಿನ ನ್ಯಾಯವಾದಿಗೆ ಅವಕಾಶ ನೀಡಬೇಕೆಂಬ ಅವಾಸ್ತವಿಕ ಬೇಡಿಕೆಯನ್ನು ಭಾರತವು ನಿರಂತರವಾಗಿ ಮುಂದಿಡುತ್ತಾ ಬಂದಿದೆ ಎಂದು ಹೇಳಿದರು.

 ‘‘ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ವಕೀಲವೃತ್ತಿ ಮಾಡುವ ಪರವಾನಗಿ ಹೊಂದಿರುವ ನ್ಯಾಯವಾದಿಗಳಿಗೆ ಮಾತ್ರವೇ ವಾದ ಮಾಡಲು ಅನುಮತಿ ನೀಡಲಾಗುವುದೆಂದು ನಾವು ಭಾರತಕ್ಕೆ ಮಾಹಿತಿ ನೀಡಿದ್ದೇವೆ. ಈ ನಿಯಮವು ಅಂತಾರಾಷ್ಟ್ರೀಯ ವಕೀಲ ವೃತ್ತಿಯ ನಿಯಮಗಳಿಗೆ ಅನುಗುಣವಾಗಿದೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ’’ ಎಂದವರು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಪಾಕ್ ಸರಕಾರಕ್ಕೆ ನೀಡಿದ ಆದೇಶವೊಂದರಲ್ಲಿ, ಜಾಧವ್ ಪರವಾಗಿ ವಾದಿಸಲು ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಇನ್ನೊಂದು ಅವಕಾಶ ನೀಡುವಂತೆ ತಿಳಿಸಿತ್ತು ಹಾಗೂ ಪ್ರಕರಣ ದ ಆಲಿಕೆಯನ್ನು ಒಂದು ತಿಂಗಳ ಮಟ್ಟಿಗೆ ಮಂದೂಡಿತ್ತು.

 ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪನ್ನು ಮಾತು ಮತ್ತು ಕೃತಿಯಲ್ಲಿ ಜಾರಿಗೆ ತರುವ ತನ್ನ ಬಾಧ್ಯತೆಯನ್ನು ಈಡೇರಿಸಲು ಪಾಕ್‌ಗೆ ಸಾಧ್ಯವಾಗಿಲ್ಲವೆಂದು ಭಾರತದ ವಿದೇಶಾಂಗ ಖಾತೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಭಾರತೀಯ ರಾಯಭಾರಿ ಕಚೇರಿಗೆ ಜಾಧವ್ ಅವರನ್ನು ಸಂಪರ್ಕಿಸಲು ಪಾಕ್ ಅವಕಾಶ ನೀಡದೆ ಇರುವುದನ್ನು ಹಾಗೂ ಅವರಿಗೆ ಪಾಕ್ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಭಾರತವು 2017ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಮೆಟ್ಟಲೇರಿತ್ತು.

2019ರ ಜುಲೈನಲ್ಲಿ ನೀಡಿದ ತೀರ್ಪಿನಲ್ಲಿ ಹೇಗ್ ಮೂಲದ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ವಿಧಿಸಲಾದ ಮರಣದಂಡನೆ ತೀರ್ಪನ್ನು ಪಾಕಿಸ್ತಾನವು ಪರಿಣಾಮಕಾರಿಯಾಗಿ ಪರಾಮರ್ಶಿಸಬೇಕು ಹಾಗೂ ಮರುಪರಿಶೀಲಿಸಬೇಕೆಂದು ತಿಳಿಸಿತ್ತು.

 50 ವರ್ಷದ ಜಾಧವ್ ಅವರನ್ನು ಪಾಕಿಸ್ತಾನದ ಸೇನಾ ನ್ಯಾಯಾಲಯವು 2017ರ ಎಪ್ರಿಲ್‌ನಲ್ಲಿ ಬೇಹುಗಾರಿಕೆ ಹಾಗೂ ಭಯೋತ್ಪಾದನೆಯ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಮರಣದಂಡನೆ ವಿಧಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)