varthabharthi


ಕ್ರೀಡೆ

ಐಪಿಎಲ್ ಮೊದಲ ಪಂದ್ಯ: ಹಾಲಿ ಚಾಂಪಿಯನ್ ಮುಂಬೈಗೆ ಸೋಲುಣಿಸಿದ ಚೆನ್ನೈ ಸೂಪರ್ ಕಿಂಗ್ಸ್

ವಾರ್ತಾ ಭಾರತಿ : 19 Sep, 2020

Photo: twitter

   ಅಬುಧಾಬಿ, ಸೆ.19: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಶನಿವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುಣಿಸಿದೆ.

  ಗೆಲುವಿಗೆ 163 ರನ್‌ಗಳ ಸವಾಲು ಪಡೆದ ಚೆನ್ನೈ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಗೆಲುವು ದಾಖಲಿಸಿದೆ.

ಅಂಬಟಿ ರಾಯುಡು 71 ರನ್(48ಎ, 6ಬೌ,3ಸಿ), ಎಫ್ ಡು ಪ್ಲೇಸಿಸ್ ಔಟಾಗದೆ 58 ರನ್ (44ಎ, 6ಬೌ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರವೀಂದ್ರ ಜಡೇಜ 10 ರನ್, ಸ್ಯಾಮ್ ಕುರ್ರನ್ 18 ರನ್ ಕೊಡುಗೆ ನೀಡಿದರು.

  2 ಓವರ್‌ಗಳಲ್ಲಿ 6 ರನ್‌ಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್ (1) ಮತ್ತು ಶಾನ್ ವಾಟ್ಸನ್(4) ವಿಕೆಟ್‌ನ್ನು ಕಳೆದುಕೊಂಡ ಚೆನ್ನೈ ತಂಡಕ್ಕೆ ಮೂರನೇ ವಿಕೆಟ್‌ಗೆ ಪ್ಲೆಸಿಸ್ ಮತ್ತು ರಾಯುಡು 115 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಶೇಖ್ ಝಾಹಿದ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು.

 ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 162 ರನ್ ಗಳಿಸಿದೆ.

   ಇನಿಂಗ್ಸ್ ಆರಂಭಿಸಿದ ಮುಂಬೈ ನಾಯಕ ರೋಹಿತ್ ಶರ್ಮಾ ಅವರು ದೀಪಕ್ ಚಹಾರ್ ಅವರ ಓವರ್‌ನ ಮೊದಲ ಎಸೆತವನ್ನು ಬೌಂಡರಿಟ್ಟುವ ಮೂಲಕ ಖಾತೆ ತೆರೆದರು. ರೋಹಿತ್ ಮತ್ತು ಕ್ವಿಂಟನ್ ಡಿ ಕಾಕ್ ಅಬ್ಬರದ ಬ್ಯಾಟಿಂಗ್‌ನತ್ತ ನೋಡಿದ್ದರು. ಆದರೆ 4.4ನೇ ಓವರ್‌ನಲ್ಲಿ ಪಿಯೂಸ್ ಚಾವ್ಲಾ ಅವರು ರೋಹಿತ್ ಶರ್ಮಾಗೆ ಪೆವಿಲಿಯನ್ ಹಾದಿ ತೋರಿಸಿದರು.ರೋಹಿತ್ 12 ರನ್ ಗಳಿಸಿದರು. ಸೌರಭ್ ತಿವಾರಿ 42 ರನ್( 31ಎ, 3ಬೌ,1ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕ್ವಿಂಟನ್ ಡಿ ಕಾಕ್ (33), ಸೂರ್ಯಕುಮಾರ್ ಯಾದವ್(17), ಹಾರ್ದಿಕ್ ಪಾಂಡ್ಯ(14), ಕೀರನ್ ಪೊಲಾರ್ಡ್(18), ಜೇಮ್ಸ್ ಪ್ಯಾಟಿನ್ಸನ್ (11) ಎರಡಂಕೆಯ ಸ್ಕೋರ್ ದಾಖಲಿಸಿದರು. ಕೃನಾಲ್ ಪಾಂಡ್ಯ 3 ರನ್ ರಾಹುಲ್ ಚಹಾರ್ ಔಟಾಗದೆ 2ರನ್ ಮತ್ತು ಜಸ್ಪ್ರೀತ್ ಬುಮ್ರಾ ಔಟಾಗದೆ 5 ರನ್ ಗಳಿಸಿದರು.

ಚೆನ್ನೈ ತಂಡದ ಲುಂಗಿ ಗಿಡಿ 38ಕ್ಕೆ 3, ದೀಪಕ್ ಚಹರ್ 32ಕ್ಕೆ 2 , ರವೀಂದ್ರ ಜಡೇಜ 42ಕ್ಕೆ 2, ಸ್ಯಾಮ್ ಕುರ್ರನ್(28ಕ್ಕೆ 1) ಮತ್ತು ಪಿಯೂಸ್ ಚಾವ್ಲಾ(21ಕ್ಕೆ 1) ತಲಾ 1 ವಿಕೆಟ್ ಹಂಚಿಕೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)