varthabharthi


ಕರ್ನಾಟಕ

ತುಮಕೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ ಅವಿರೋಧ ಆಯ್ಕೆ

ವಾರ್ತಾ ಭಾರತಿ : 19 Sep, 2020

ತುಮಕೂರು.ಸೆ.19: ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಉಪಾಧ್ಯಕ್ಷರಾಗಿ ಜಿ.ಪಂ.ಸದಸ್ಯ ಜಿ.ಜೆ.ರಾಜಣ್ಣ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ಸತತವಾಗಿ ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಲ್ಲಾ 14 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯೂ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷ ಎಂದು ನೂತನ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ನಬಾರ್ಡ್ ನೀಡುವ ಸಾಲವನ್ನು ಹೊರತು ಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಸಹಾಯಧನವಿಲ್ಲದೆ ನಡೆಯುತ್ತಿರುವ ಸಹಕಾರಿ ಬ್ಯಾಂಕು, ಪ್ರಸ್ತುತ ರಾಜ್ಯದ ಏ ಗ್ರೇಡ್ ಬ್ಯಾಂಕುಗಳಲ್ಲಿ ಮಂಚೂಣಿಯಲ್ಲಿದೆ. ಬಡವರು, ನಿರ್ಗತಿಕರು, ಶೋಷಿತರಿಗೆ ಬ್ಯಾಂಕು ಸಾಲ ಸೌಲಭ್ಯಗಳು ದೊರೆಯಬೇಕು. ಮೀಟರ್ ಬಡ್ಡಿಯವರು, ಪಾನ್‍ ಬೋರ್ಕರ್ ಗಳ ಕೈಗೆ ಸಿಕ್ಕಿ ನರಳಬಾರದು ಎಂಬ ಉದ್ದೇಶದಿಂದ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಸಿಸಿ ಬ್ಯಾಂಕು ಹಣಕಾಸು ನೆರವಿನಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಸ್ಥಾಪನೆ ಹಾಗೂ ಜಿಲ್ಲೆಯ 51 ಹೋಬಳಿಗಳಲ್ಲಿಯೂ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಬೇಕೆಂಬ ಗುರಿ ಹೊಂದಲಾಗಿದ್ದು, ಎಲ್ಲಾ ಆರ್ಹ ರೈತರಿಗೆ ಸಾಲ ಸಾಲ ಸೌಲಭ್ಯ ಸಿಗುವಂತೆ ಮಾಡುವುದು ನನ್ನ ಮಹಾದಾಸೆಯಾಗಿದೆ ಎಂದರು.

ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳಿಗೆ ಹೊಲಿಕೆ ಮಾಡಿದರೆ ಸಹಕಾರಿ ಕ್ಷೇತ್ರದಲ್ಲಿನ ಅವ್ಯವಹಾರ ಕಡಿಮೆ. ವಾಣಿಜ್ಯ ಬ್ಯಾಂಕುಗಳಲ್ಲಿ ಶೇ97.5ರಷ್ಟಿದ್ದರೆ, ಸಹಕಾರಿ ಬ್ಯಾಂಕುಗಳಲ್ಲಿ ಶೇ2.5ರಷ್ಟಿದೆ. ಪ್ರತಿ 15 ದಿನಗಳಿಗೊಮ್ಮೆ ನಮ್ಮ ಬ್ಯಾಂಕಿನ ವ್ಯವಹಾರ ಕುರಿತ ಆರ್.ಬಿ.ಐಗೆ ವರದಿ ನೀಡಲಾಗುತ್ತಿದೆ. ಒಂದೆರಡು ಸಹಕಾರಿ ಬ್ಯಾಂಕುಗಳು ಅವ್ಯವಹಾರದಲ್ಲಿ ತೊಡಗಿವೆ ಎಂದ ಮಾತ್ರಕ್ಕೆ ಇಡೀ ಸಹಕಾರಿ ಕ್ಷೇತ್ರವನ್ನು ಅನುಮಾನದಿಂದ ನೋಡುವುದು ತರವಲ್ಲ ಎಂದ ಕೆ.ಎನ್.ರಾಜಣ್ಣ, ಸಹಕಾರಿ ಕ್ಷೇತ್ರವನ್ನು ಆರ್ಬಿಐ ನೇರ ನಿಗಾವಣೆಗೆ ತರಬೇಕೆಂಬ ಪ್ರಸ್ತಾಪಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಬ್ಯಾಂಕು 31-03-2020ರ ಅಂತ್ಯಕ್ಕೆ 1,232 ಲಕ್ಷ ರೂ.ಗಳು ಲಾಭ ಗಳಿಸಿದ್ದು, 1,70,815 ಲಕ್ಷ ರೂ.ಗಳ ದುಡಿಯುವ ಬಂಡವಾಳ ಹೊಂದಿದ್ದು, ಶೇ 4.37ರಷ್ಟು ಎನ್.ಪಿ.ಎ ಹೊಂದಿದೆ. ಇದನ್ನು ಶೇ3ಕ್ಕೆ ಇಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಲಕ್ಷ್ಮಿನಾರಾಯಣ್, ರಾಜಕುಮಾರ್, ಎಸ್.ಆರ್.ನಾಗೇಶ್‍ ಬಾಬು, ಜಿ.ಎಸ್.ರವಿ, ರಾಜೇಂದ್ರ ಆರ್., ಡಿ.ಶಿವಣ್ಣ, ಹೆಚ್.ಸಿ.ಪ್ರಭಾಕರ್, ಸಿದ್ದಲಿಂಗಪ್ಪ, ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಗಂಗಣ್ಣ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಪಾಟೀಲ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣನಾಯಕ್ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)