varthabharthi


ಪ್ರಚಲಿತ

ಪ್ರಾಯೋಜಿತ ಕೋಮು ಗಲಭೆಗಳ ಸುತ್ತ ಮುತ್ತ

ವಾರ್ತಾ ಭಾರತಿ : 21 Sep, 2020
ಸನತ್ ಕುಮಾರ್ ಬೆಳಗಲಿ

ಒಂದು ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ನಡೆದ ವ್ಯವಸ್ಥಿತವಾದ ದಾಳಿ ಯನ್ನು ಎರಡು ಗುಂಪುಗಳ ನಡುವಣ ಘರ್ಷಣೆ ಎಂದು ಕರೆಯುವುದು ತಪ್ಪಾಗುತ್ತದೆ. ಅದೂ ಸರಕಾರಿ ಪ್ರಾಯೋಜಿತ ದಾಳಿಯಾದುದರಿಂದ ಹತ್ಯಾಕಾಂಡ ಅಥವಾ ನರಮೇಧ ಎಂದು ಬರೆಯುವುದು ಸೂಕ್ತ.


ಕೋಮು ಗಲಭೆ ಮತ್ತು ಹಿಂಸಾಚಾರ ಎಂಬ ಶಬ್ದಗಳು ಮಾಧ್ಯಮಗಳಲ್ಲಿ ಧಾರಾಳವಾಗಿ ಬಳಸಲ್ಪಡುತ್ತವೆ. ಆದರೆ ಇವೆರಡು ಶಬ್ದಗಳ ನಿಖರವಾದ ಅರ್ಥವನ್ನು ಹುಡುಕಲು ಹೊರಟರೆ ಅನೇಕ ಬಾರಿ ಗೊಂದಲವುಂಟಾಗುತ್ತದೆ. ಸಾಮಾನ್ಯವಾಗಿ ಎರಡು ಗುಂಪುಗಳ ನಡುವಿನ ಘರ್ಷಣೆ, ಕಲ್ಲು ತೂರಾಟಗಳನ್ನು ಗಲಭೆ ಎಂದು ವ್ಯಾಖ್ಯಾನಿಸಲಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ವಿಭಜನೆಯ ಕಾರ್ಮೋಡ ಕವಿದಾಗ ಭಾರತ ಮತ್ತು ಪಾಕಿಸ್ತಾನದ ಕೆಲವೆಡೆ ನಡೆದ ಘಟನೆಗಳು ಖಂಡಿತವಾಗಿ ಕೋಮು ಗಲಭೆಗಳಾಗಿದ್ದವು. ನಂತರ ದೇಶದಲ್ಲಿ ಹಲವಾರು ಕಡೆ ನಡೆದ ಘರ್ಷಣೆಗಳಲ್ಲಿ ಕೋಮು ದ್ವೇಷದ ಛಾಯೆಯಿದ್ದುದು ನಿಜ.

ಆದರೆ 2002ರಲ್ಲಿ ಗುಜರಾತಿನಲ್ಲಿ ನಡೆದ ಘಟನೆಗಳನ್ನು ಕೋಮು ಘರ್ಷಣೆ ಎಂದು ಕರೆಯಲು ಮನಸ್ಸು ಒಪ್ಪುವುದಿಲ್ಲ. ಅಂತಲೇ ಆಗ ಅನೇಕ ಆಂಗ್ಲ ಪತ್ರಿಕೆಗಳು ಗಲಭೆ ಎಂದು ಕರೆಯಲು ಒಪ್ಪಲಿಲ್ಲ. ನಾನು ಕೂಡ ಆಗ ಗುಜರಾತ್ ಹತ್ಯಾಕಾಂಡ ಎಂದೇ ಬರೆದೆ. ಒಂದು ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ನಡೆದ ವ್ಯವಸ್ಥಿತವಾದ ದಾಳಿ ಯನ್ನು ಎರಡು ಗುಂಪುಗಳ ನಡುವಣ ಘರ್ಷಣೆ ಎಂದು ಕರೆಯುವುದು ತಪ್ಪಾಗುತ್ತದೆ. ಅದೂ ಸರಕಾರಿ ಪ್ರಾಯೋಜಿತ ದಾಳಿಯಾದುದರಿಂದ ಹತ್ಯಾಕಾಂಡ ಅಥವಾ ನರಮೇಧ ಎಂದು ಬರೆಯುವುದು ಸೂಕ್ತ. ಅದೇ ರೀತಿ ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ದಲಿತ ಸಮುದಾಯದ ಜನರ ಮೇಲೆ ನಡೆದ ಅತ್ಯಂತ ವ್ಯವಸ್ಥಿತ ದಾಳಿಯಲ್ಲದೇ ಬೇರೇನೂ ಅಲ್ಲ.

ಈ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ದಿಲ್ಲಿಯಲ್ಲಿ ನಡೆದ ಇತ್ತೀಚಿನ ಘಟನೆಗಳು ಕೂಡ ಅತ್ಯಂತ ಪೂರ್ವ ತಯಾರಿಯ ಹಿಂಸಾಚಾರ. ಕರಾಳ ಪೌರತ್ವ ತಿದ್ದುಪಡಿ ಕಾಯ್ದೆಯ (ಎನ್‌ಆರ್‌ಸಿ)ವಿರುದ್ಧ ನಡೆದ ಶಾಂತಿಯುತ ಹೋರಾಟವನ್ನು ಹತ್ತಿಕ್ಕಲು ಆಳುವ ಪಕ್ಷ ಮತ್ತು ಪರಿವಾರ ನಡೆಸಿದ ಘೋರ ಹಿಂಸಾಚಾರವಲ್ಲದೆ ಬೇರೇನೂ ಅಲ್ಲ ಎಂದರೆ ಅತಿಶಯೋಕ್ತಿ ಅಲ್ಲ.

ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಏಕಪಕ್ಷೀಯವಾಗಿ ತನಿಖೆ ನಡೆಸಿದ ದಿಲ್ಲಿ ಪೊಲೀಸರು 1,700 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತವಾಗಿ ಶಾಹೀನ್‌ಬಾಗ್‌ನಲ್ಲಿ ಚಳವಳಿ ನಡೆಸಿದ ಹೋರಾಟಗಾರರೇ ಹಿಂಸಾಚಾರಕ್ಕೆ ಕಾರಣ ಎಂದು ಯಾರದೋ ಅಪರಾಧವನ್ನು ಇನ್ಯಾರದೋ ತಲೆಗೆ ಕಟ್ಟುವ ಮಸಲತ್ತು ಮಾಡಲಾಗಿದೆ. ಇದನ್ನಾಧರಿಸಿಯೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಕರಾಳ ಯುಎಪಿಎ ಶಾಸನದಡಿ ಬಂಧಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಹಿರಿಯ ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿ ಮತ್ತು ಸಮಾಜವಾದಿ ಯೋಗೇಂದ್ರ ಯಾದವ್ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ.ಅಪೂರ್ವಾನಂದ ಮತ್ತು ಜಯತಿ ಘೋಷ್ ಅವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

 ವಾಸ್ತವವಾಗಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಮೂಲ ಪ್ರಚೋದಕರು ಯಾರೆಂದು ಎಲ್ಲರಿಗೂ ಗೊತ್ತಿದೆ. ಸಿಎಎ ಮತ್ತು ಎನ್‌ಆರ್‌ಸಿಗಳೆಂಬ ಕರಾಳ ಕಾಯ್ದೆಗಳ ವಿರುದ್ಧ ಶಾಹೀನ್ ಬಾಗ್‌ನಲ್ಲಿ ನಡೆದ ಶಾಂತಿಯುತ ಸತ್ಯಾಗ್ರಹವನ್ನು ವಿಫಲಗೊಳಿಸಲು ಕೆಲವು ಬಿಜೆಪಿ ನಾಯಕರೇ ಸೂತ್ರದಾರರು. ಇದಕ್ಕೆಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಣ್ಸನ್ನೆಯ ಸೂಚನೆಯೂ ಇತ್ತೆಂದು ದಿಲ್ಲಿಯ ಜನ ಆಡಿ ಕೊಳ್ಳುತ್ತಾರೆ. ಈ ಹಿಂಸಾಚಾರ 2020ರ ಫೆಬ್ರವರಿಯಲ್ಲಿ ನಡೆಯಿತು. ಇದರಲ್ಲಿ ಒಟ್ಟು 54 ಮಂದಿ ಕೊಲ್ಲಲ್ಪಟ್ಟರು. ಅದರಲ್ಲಿ 40 ಮಂದಿ ಮುಸ್ಲಿಮರು. ಇದು ತನ್ನಿಂದ ತಾನೇ ನಡೆದ ಹಿಂಸಾಚಾರವಲ್ಲ. ಇದಕ್ಕೆ ಅಧಿಕಾರದಲ್ಲಿದ್ದವರ ಪ್ರಚೋದನೆಯೂ ಇತ್ತು.ಆಗ ದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ನೀಡಲಿದ್ದರು. ಆ ಸಂದರ್ಭದಲ್ಲಿ ಶಾಹೀನ್ ಬಾಗ್‌ನಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿದವರು ಜಾಗವನ್ನು ಖಾಲಿ ಮಾಡದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಬಹಿರಂಗ ವಾಗಿ ಬೆದರಿಕೆ ಹಾಕಿದ್ದರು. ಇನ್ನು ಕೇಂದ್ರ ಮಂತ್ರಿ ಅನುರಾಗ್ ಠಾಕೂರ್‌ರಂತೂ ಜನಸ್ತೋಮದ ಮುಂದೆ ವೇದಿಕೆಯ ಮೇಲೆ ನಿಂತು ‘‘ದೇಶ್ ಕಿ ಗದ್ದಾರೋಂಕೊ ಗೋಲಿ ಮಾರೋ’’ ಎಂದು ಕೂಗಿ ಉದ್ರಿಕ್ತ ಜನರಿಂದಲೂ ಕೆರಳಿಸಿದ್ದರು. ದಿಲ್ಲಿ ಪೋಲಿಸರು ಸಿದ್ಧಪಡಿಸಿದ 1,700 ಪುಟಗಳ ಆರೋಪ ಪಟ್ಟಿಯಲ್ಲಿ ಈ ರೀತಿ ಪ್ರಚೋದನೆ ನೀಡಿದವರ ಮೇಲೆ ಒಂದೇ ಒಂದು ಅಕ್ಷರವೂ ಇಲ್ಲ.

ಈ ರೀತಿ ಪ್ರಚೋದನಕಾರಿ ಘೋಷಣೆ ಕೂಗಿದ ಬಿಜೆಪಿ ನಾಯಕರ ಮೇಲೆ ಎಫ್‌ಐಆರ್ ಹಾಕಲು ದಿಲ್ಲಿ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ದಿಲ್ಲಿ ಪೊಲೀಸರು ಕಡೆಗಣಿಸಿದರು. ಬದಲಾಗಿ ಇಂತಹ ಆದೇಶ ನೀಡಿದ ನ್ಯಾಯಾಧೀಶರನ್ನೇ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲಾಯಿತು. ದಿಲ್ಲಿಯ ಪೊಲೀಸ್ ಇಲಾಖೆ ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಯಂತ್ರಣಕ್ಕೆ ಒಳಪಡುವುದರಿಂದ ಎಲ್ಲವೂ ಅವರ ಮೌಖಿಕ ಆದೇಶದಂತೆ ನಡೆದಿದೆ ಎಂದರೆ ತಪ್ಪಿಲ್ಲ.

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಭೀಮಾ ಕೊರೇಗಾಂವ್‌ನಲ್ಲೂ ಹೀಗೇ ಆಯಿತು. ಪೇಶ್ವೆ ಶಾಹಿಯನ್ನು ಸೋಲಿಸಿದ ಮಹಾರ ಸೈನಿಕರ ಶೌರ್ಯ ದಿನವನ್ನು ಆಚರಿಸಲು ದೇಶದ ನಾನಾ ಕಡೆಗಳಿಂದ ಬಂದಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರು ಮಾತ್ರವಲ್ಲ, ಸಾಮಾನ್ಯ ಜನರ ಮೇಲೆ ಕೂಡಾ ಕೋಮುವಾದಿ ಮನುವಾದಿ ಗೂಂಡಾಗಳು ಹಲ್ಲೆ ಮಾಡಿ ಅನೇಕ ಸಾವು ನೋವುಗಳಿಗೆ ಕಾರಣರಾದರು.ಆಗ ಮಹಾರಾಷ್ಟ್ರದಲ್ಲಿದ್ದ ಬಿಜೆಪಿ ಸರಕಾರ ದಾಳಿಗೆ ಪ್ರಚೋದಿಸಿದವರನ್ನು ಬಿಟ್ಟು ದಾಳಿಗೆ ಒಳಗಾದವರ ಮೇಲೆ ಖಟ್ಲೆ ಹಾಕಿತು. ಗಲಭೆಗೆ ಪ್ರಚೋದನೆ ನೀಡಿದ ಮಿಲಿಂದ ಏಕಬೋಟೆ ಮತ್ತು ಸಂಭಾಜಿ ಭಿಡೆ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಬದಲಾಗಿ ಈ ಘಟನೆಗೆ ಸಂಬಂಧವೇ ಇಲ್ಲದ ಹೆಸರಾಂತ ನ್ಯಾಯವಾದಿ ಸುಧಾ ಭಾರದ್ವಾಜ್, ಶೋಮಾ ಸೇನ್, ಆನಂದ್ ತೇಲ್ತುಂಬ್ಡೆ ಹಾಗೂ ಕವಿ ವರವರರಾವ್ ಮುಂತಾದವರ ಮೇಲೆ ಪ್ರಕರಣವನ್ನು ದಾಖಲಿಸಿ ಕರಾಳ ಯುಎಪಿಎ ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಲಾಗಿದೆ. ವಯೋವೃದ್ಧರಾದ, ನಾನಾ ಕಾಯಿಲೆ ಗಳಿಂದ ಬಳಲುತ್ತಿರುವ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲೂ ನಿರಾಕರಿಸಲಾಗಿದೆ.

ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತದ ಪರಿಣಾಮವಾಗಿ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ಶೇ.23ಕ್ಕೆ ಕುಸಿದ ಜಿಡಿಪಿ ಇನ್ನೂ ಪಾತಾಳಕ್ಕೆ ಅಂದರೆ 9ಕ್ಕೆ ಕುಸಿಯುವ ಸಂಭವವಿದೆ. ನಿರುದ್ಯೋಗ ಹೆಚ್ಚುತ್ತಿದೆ. ಸುಮಾರು ಹತ್ತು ಕೋಟಿ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಈ ವೈಫಲ್ಯಗಳನ್ನು ಬಯಲಿಗೆಳೆಯುವ ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕಲು ಯುಎಪಿಎ ಎಂಬ ಕರಾಳ ಕಾನೂನನ್ನು ಬಳಸಲಾಗುತ್ತಿದೆ.

ದೇಶದಲ್ಲಿ ಒಂದು ಸಮುದಾಯದ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ದ್ವೇಷದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ‘ಲವ್ ಜಿಹಾದ್’ ಎಂಬ ಸುಳ್ಳು ಕತೆ ಕಟ್ಟಿ ಎರಡು ಸಮುದಾಯಗಳ ನಡುವೆ ಅಪನಂಬಿಕೆಯ ಅಡ್ಡಗೋಡೆ ನಿರ್ಮಿಸಲು ಯತ್ನಿಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿದೆ.ಈಗ ‘ಯುಪಿಎಸ್‌ಸಿ ಜಿಹಾದ್’ ಎಂಬ ಹೊಸ ಕತೆಯನ್ನು ಟಿವಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ದೇಶದ ಆಡಳಿತ ಸೇವೆಗೆ ನುಸುಳಲು ಮುಸಲ್ಮಾನರು ಹುನ್ನಾರ ನಡೆಸಿದ್ದಾರೆ ಎಂದು ಬಿಂಬಿಸಲು ‘ಸುದರ್ಶನ’ ಎಂಬ ಖಾಸಗಿ ಸುದ್ದಿವಾಹಿನಿ ಪ್ರಯತ್ನಿಸುತ್ತಿದೆ. ಈ ಕಾರ್ಯಕ್ರಮವನ್ನು ಬಿತ್ತರಿಸದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆ ನೀಡಿದೆ. ಒಂದು ಸಮುದಾಯ ಇಂತಹ ಕಾರ್ಯಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ದೇಶದ ಶೇಕಡಾ 16ರಷ್ಟಿರುವ ಮುಸ್ಲಿಂ ಅಲ್ಪ ಸಂಖ್ಯಾತರ ಮಕ್ಕಳು ಇತ್ತೀಚೆಗೆ ಸ್ಪರ್ಧಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಆಡಳಿತ ಸೇವೆಗೆ ಬರುತ್ತಿರುವುದನ್ನು ಸಹಿಸಲಾಗದ ಕೋಮುವ್ಯಾಧಿ ಮನಸ್ಸುಗಳು ಇಂತಹ ಕುತ್ಸಿತ ಪ್ರಚಾರ ನಡೆಸಿವೆ.

 ಇತ್ತೀಚಿನ ವರ್ಷಗಳಲ್ಲಿ ಯಾವುದೇ ಒಂದು ಸಮುದಾಯದವರು ಭಾರತೀಯ ಆಡಳಿತ ಸೇವೆಯ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಬರುತ್ತಿದ್ದರೆ ಅದು ಆ ಸಮುದಾಯದಲ್ಲಿ ಸುಶಿಕ್ಷಿತರ ಸಂಖ್ಯಾ ಪ್ರಮಾಣ ಹೆಚ್ಚಳವಾಗಿರುವುದರ ಸೂಚನೆಯಾಗಿದೆ. ಇದಕ್ಕೆ ಸಂತಸ ಪಡಬೇಕೇ ಹೊರತು ಅದನ್ನು ‘ಜಿಹಾದ್’ ಎಂದು ಬಿಂಬಿಸಲು ಯತ್ನಿಸಬಾರದು. ಆದರೆ ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ತಮ್ಮ ಕಲ್ಪನೆಯ ಮನುವಾದಿ ಹಿಂದೂ ರಾಷ್ಟ್ರ ಕಟ್ಟಲು ಹೊರಟವರು ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅಂತಲೇ ನಿರ್ದಿಷ್ಟವಾಗಿ ಒಂದು ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಆ ಸಮುದಾಯದ ಬಗ್ಗೆ ಇತರ ಸಮುದಾಯದ ಜನರಲ್ಲಿ ದ್ವೇಷದ ವಿಷ ತುಂಬಲು ಸಾಮಾಜಿಕ ಜಾಲ ತಾಣಗಳನ್ನು, ದೃಶ್ಯ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸುದರ್ಶನ ಟಿವಿ ಇಂತಹ ವಿಷ ಪ್ರಚಾರ ಮಾಡಿ ಸುಪ್ರೀಂ ಕೋರ್ಟ್ ನಿಂದ ಉಗಿಸಿಕೊಂಡಿದೆ. ಕನ್ನಡದಲ್ಲಿ ಕೂಡ ಅಂತಹ ಖಾಸಗಿ ಟಿವಿ ವಾಹಿನಿಗಳಿವೆ. ಬಹುತೇಕ ಕೋಮು ಗಲಭೆಗಳಿಗೆ, ಹಿಂಸಾಚಾರಕ್ಕೆ ಇಂತಹ ವಾಹಿನಿಗಳೂ, ನಂಜು ತುಂಬಿದ ವಾಟ್ಸ್‌ಆ್ಯಪ್ ಗ್ರೂಪ್‌ಗಳೂ ಕಾರಣವೆಂದರೆ ತಪ್ಪ್ಪಲ್ಲ.

ಸುಪ್ರೀಂಕೋರ್ಟ್ ಹೇಳಿದಂತೆ ಇಂತಹ ವಾಹಿನಿಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು ಆದರೆ ಅದು ಅಷ್ಟು ಸುಲಭವಲ್ಲ. ಟಿಆರ್‌ಪಿಯೋ ಇನ್ಯಾವುದೋ ಕಾರಣಕ್ಕಾಗಿ ಸುಳ್ಳು ಸುದ್ದಿ ಹರಡುವ ಮಾಧ್ಯಮಗಳ ಬಗ್ಗೆ ಜನಸಾಮಾನ್ಯರ ನಡುವೆ ಜಾಗೃತಿ ಮೂಡಿಸಬೇಕಾಗಿದೆ. ಅದೇನೇ ಇರಲಿ ಟಿವಿ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮ ಕೊಂಚ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳಲೇಬೇಕು. ಆದರೂ ಅಲ್ಲೂ ವಿಷ ಪ್ರಾಶನ ಕೆಲಸ ಅವ್ಯಾಹತವಾಗಿ ನಡೆದಿದೆ.

ಈ ಕಾರ್ಗತ್ತಲ ಕಾಲದಲ್ಲಿ ಪರಸ್ಪರ ಪ್ರೀತಿಸುವ, ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸುವ ವಿವೇಕದ ಬೆಳಕು ಮಾತ್ರ ಈ ದೇಶವನ್ನು ಕಾಪಾಡಬಲ್ಲದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)