varthabharthi


ರಾಷ್ಟ್ರೀಯ

ಕೇಂದ್ರ ಸರಕಾರದ ಬಳಿ ವಲಸೆ ಕಾರ್ಮಿಕರು ಮಾತ್ರವಲ್ಲ ರೈತರ ಆತ್ಮಹತ್ಯೆಯ ಅಂಕಿ ಅಂಶ ಕೂಡ ಇಲ್ಲ!

ವಾರ್ತಾ ಭಾರತಿ : 21 Sep, 2020

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.22: ಕೇಂದ್ರ ಸರಕಾರದ ಬಳಿ ವಲಸೆ ಕಾರ್ಮಿಕರು ಮಾತ್ರವಲ್ಲ, ರೈತರ ಆತ್ಮಹತ್ಯೆಯ ಅಂಕಿ ಅಂಶ ಕೂಡ ಇಲ್ಲವಾಗಿದೆ. ಹಲವಾರು ರಾಜ್ಯಗಳು ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೊಗೆ (ಎನ್‌ಸಿಆರ್‌ಬಿ)ಅಂಕಿ-ಅಂಶಗಳನ್ನು ಸಲ್ಲಿಸದ ಕಾರಣ ಸರಕಾರದ ಬಳಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರಕಾರವು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

ಆತ್ಮಹತ್ಯೆಗಳು ಸೇರಿದಂತೆ ಅಪರಾಧ ದತ್ತಾಂಶಗಳನ್ನು ಸಂಗ್ರಹಿಸುವ ಹಾಗೂ ವಿಶ್ಲೇಷಿಸುವ ಜವಾಬ್ದಾರಿ ಎನ್‌ಸಿಆರ್‌ಬಿಗೆ ಇದೆ.

ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ರೈತರ ಅತ್ಮಹತ್ಯೆ ಪ್ರಕರಣ ಶೂನ್ಯ ಎಂದು ವರದಿ ಮಾಡಿವೆ. ಆದರೆ, ಇತರ ಕ್ಷೇತ್ರಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯನ್ನು ನೀಡಿವೆ. ಆದ್ದರಿಂದ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ದೃಡೀಕೃತ ಮಾಹಿತಿ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಆದಾಗ್ಯೂ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆಗಳ ಬಗ್ಗೆ ಇತ್ತೀಚೆಗಿನ ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ 2019ರಲ್ಲಿ 10281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ಸಂಖ್ಯೆ 2018ರಲ್ಲಿ 10,357 ಆಗಿತ್ತು.

ಕೃಷಿಕ್ಷೇತ್ರದಲ್ಲಿನ ಆತ್ಮಹತ್ಯೆ ಪ್ರಮಾಣವು ದೇಶದ ಒಟ್ಟು ಆತ್ಮಹತ್ಯೆಗಳಲ್ಲಿ ಶೇಕಡಾ 7.4ರಷ್ಟಿದೆ.

ಕರೋನ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮನೆ ತಲುಪಲು ಯತ್ನಿಸುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡ ವಲಸೆ ಕಾರ್ಮಿಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಳೆದ ವಾರ  ಕಾರ್ಮಿಕ ಸಚಿವಾಲಯ ಹೇಳಿದ ಬಳಿಕ ಕೇಂದ್ರ ಭಾರೀ ಟೀಕೆಗಳನ್ನು ಎದುರಿಸಿತ್ತು. ಯಾವುದೇ ಮಾಹಿತಿ ಇಲ್ಲದ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವಾಲಯ ಹೇಳಿತ್ತು.

ತೀವ್ರ ಟೀಕೆಯ ಬಳಿಕ ಜಿಲ್ಲೆಗಳಲ್ಲಿ ಅಂತಹ ಅಂಕಿ ಅಂಶವನ್ನು ಸಂಗ್ರಹಿಸಲು ಯಾವುದೆ ಕಾರ್ಯವಿಧಾನ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)