varthabharthi


ರಾಷ್ಟ್ರೀಯ

ಕ್ವಾಲಿಟಿ ಲಿ.ವಿರುದ್ಧ ಬ್ಯಾಂಕುಗಳಿಗೆ 1,400 ಕೋ.ರೂ.ವಂಚನೆ ಪ್ರಕರಣ

ವಾರ್ತಾ ಭಾರತಿ : 21 Sep, 2020

ಹೊಸದಿಲ್ಲಿ,ಸೆ.21: ದೇಶದ ಅತ್ಯಂತ ಜನಪ್ರಿಯ ಡೇರಿ ಉತ್ಪನ್ನಗಳ ತಯಾರಿಕೆ ಕಂಪನಿ ಕ್ವಾಲಿಟಿ ಲಿಮಿಟೆಡ್ ವಿರುದ್ಧ ಬ್ಯಾಂಕುಗಳ ಗುಂಪೊಂದಕ್ಕೆ 1,400 ಕೋ.ರೂ.ಗಳನ್ನು ವಂಚಿಸಿದ ಆರೋಪದಲ್ಲಿ ಸಿಬಿಐ ಪ್ರಕರಣವನ್ನು ದಾಖಲಿಸಿದೆ. ಸೋಮವಾರ ದಿಲ್ಲಿ ಸೇರಿದಂತೆ ಎಂಟು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಪ್ರಕರಣ ದಾಖಲಾಗಿದೆ.

ಸಿಬಿಐ ಹೆಸರಿಸಿರುವ ಆರೋಪಿಗಳಲ್ಲಿ ಕ್ವಾಲಿಟಿಯ ನಿರ್ದೇಶಕರಾದ ಸಂಜಯ ಧಿಂಗ್ರಾ,ಸಿದ್ಧಾಂತ ಗುಪ್ತಾ ಮತ್ತು ಅರುಣ ಶ್ರೀವಾಸ್ತವ ಸೇರಿದ್ದಾರೆ. 2012ರಲ್ಲಿ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದಲ್ಲಿ ರಚನೆಯಾಗಿದ್ದ 10 ಬ್ಯಾಂಕುಗಳ ಕೂಟವು ಅವರ ವಿರುದ್ಧ ವಂಚನೆ,ಫೋರ್ಜರಿ,ಕ್ರಿಮಿನಲ್ ಒಳಸಂಚು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು.

2010ರಿಂದ ಕ್ವಾಲಿಟಿ ಸಾಲಗಳನ್ನು ಪಡೆದುಕೊಂಡಿತ್ತು,ಆದರೆ 2018ರ ಆರಂಭದಲ್ಲಿ ಮರುಪಾವತಿಯನ್ನು ಮಾಡದೇ ಬಾಕಿ ಉಳಿಸಿಕೊಂಡಿತ್ತು. ಆಗಸ್ಟ್,2018ರಲ್ಲಿ ಅದರ ಸಾಲದ ಖಾತೆಯನ್ನು ಅನುತ್ಪಾದಕ ಆಸ್ತಿಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ಬ್ಯಾಂಕ್ ಆಫ್ ಇಂಡಿಯಾ ದೂರಿನಲ್ಲಿ ಆರೋಪಿಸಿದೆ.

ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಕೆನರಾ ಬ್ಯಾಂಕ್,ಬ್ಯಾಂಕ್ ಆಫ್ ಬರೋಡ, ಆಂಧ್ರ ಬ್ಯಾಂಕ್,ಕಾರ್ಪೊರೇಷನ್ ಬ್ಯಾಂಕ್,ಐಡಿಬಿಐ,ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ,ಧನಲಕ್ಷ್ಮಿ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳು ವಂಚನೆಗೆ ಗುರಿಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)