varthabharthi


ನಿಮ್ಮ ಅಂಕಣ

ಒಳಮೀಸಲಾತಿಯೆಂಬ ಒಡಲಾಳದ ಕೂಗು

ವಾರ್ತಾ ಭಾರತಿ : 22 Sep, 2020
ಡಾ. ನಾಗೇಶ್ ಕೆ. ಎನ್.

ಇತ್ತೀಚೆಗೆ ಮಾನ್ಯ ಸರ್ವೊಚ್ಚ ನ್ಯಾಯಾಲಯದ ಪಂಚಪೀಠ ನೀಡಿದ ಮೀಸಲಾತಿಯ ಒಳಗೆ ರಾಜ್ಯಗಳು ಆದ್ಯತೆಯ ಮೇರೆಗೆ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಬಹುದು ಎಂಬ ತೀರ್ಪು ಬೂದಿ ಮುಚ್ಚಿದ ಕೆಂಡದಂತಿದ್ದ ಒಳಮೀಸಲಾತಿಯ ಕೂಗಿನ ಚರ್ಚೆ ಸ್ಫೋಟಗೊಂಡು ಮತ್ತೆ ಮುನ್ನೆಲೆಗೆ ಬಂದಿದೆ.

ಸಂವಿಧಾನವು 1950ರಲ್ಲಿ ಜಾರಿಯಾದ ಬಳಿಕ ಪರಿಶಿಷ್ಟ ಜಾತಿಗೆ ಶೇ.15ರಷ್ಟು ಮೀಸಲಾತಿಯನ್ನು ಕಲಿಸಿತು. 1975ರವರೆಗೆ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾಗಿದ್ದ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ತೀರ ಹಿಂದುಳಿದಿದ್ದ ಅಸ್ಪಶ್ಯ ಜಾತಿಗಳು ಮಾತ್ರ ಈ ಪಟ್ಟಿಯಲ್ಲಿದ್ದವು. ಇಡೀ ದೇಶದಲ್ಲಿ ಕೆಲವು ರಾಜ್ಯ ಸರಕಾರಗಳು ಮೀಸಲಾತಿಯ ಅನುಷ್ಠಾನದಲ್ಲಿನ ವೈಫಲ್ಯವನ್ನು ಎತ್ತಿ ಹಿಡಿದು ಮನವರಿಕೆ ಮಾಡಲಾಗಿ ಕೇಂದ್ರ ಸರಕಾರದ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರು ಹೊಂದಿರುವ ಮೀಸಲು ಪ್ರಮಾಣ ಕ್ಲಾಸ್-1ರಲ್ಲಿ ಶೇ. 1ರಿಂದ 6, ಕ್ಲಾಸ್-2ರಲ್ಲಿ ಶೇ. 10.4, ಕ್ಲಾಸ್-3ರಲ್ಲಿ ಶೇ. 14 ಪ್ರಮಾಣದಲ್ಲಷ್ಟೆ ಈ ಜಾತಿಗಳ ಮೀಸಲಾತಿಯನ್ವಯ ಒದಗಿಸಿದ ಅವಕಾಶವನ್ನು ದಕ್ಕಿಸಿಕೊಳ್ಳುವಲ್ಲಿ ವಿಫಲವಾಗಿದ್ದವು. ಹೀಗೆ ಖಾಲಿ ಉಳಿಯುತ್ತಿದ್ದ ರೋಸ್ಟರ್ ಹುದ್ದೆಗಳನ್ನು ತುಂಬಲು ಆರ್ಥಿಕವಾಗಿ ಹಿಂದುಳಿದ ಕೆಲವು ಜಾತಿಗಳನ್ನು ಪರಿಶಿಷ್ಟ ಜಾತಿಗೆ ತುಂಬಲಾಯಿತು.

ಕರ್ನಾಟಕ ರಾಜ್ಯದಲ್ಲೂ ಇದಕ್ಕೆ ಪೂರಕವಾಗಿ 1972ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಸರಕಾರವು ನ್ಯಾ.ಎಲ್.ಜಿ. ಹಾವನೂರು ಆಯೋಗವನ್ನು ಸಾಮಾಜಿಕವಾಗಿ ಹಿಂದುಳಿದ ಜಾತಿವರ್ಗಗಳ ಸಮೀಕ್ಷೆ ಮಾಡಲು ನೇಮಿಸಿತು. ಈ ಆಯೋಗವು 1975ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯಲ್ಲಿ ಹಿಂದುಳಿದ ಜಾತಿ ಮತ್ತು ವರ್ಗಗಳ ಬಗ್ಗೆ ಅಷ್ಟೆ ಅಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಸ್ಪಶ್ಯ ಜಾತಿಗಳನ್ನು ಸೇರಿಸಲು ಸಲಹೆ ನೀಡಿತಲ್ಲದೆ ಅದರ ಜಾರಿಯ ಬಗ್ಗೆ ಒತ್ತಿ ಹೇಳಿತು. ಮುಂದುವರಿದು ಮತಾಂತರಗೊಂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ದಲಿತರಿಗೂ ಅವರ ಎರಡನೆಯ ತಲೆಮಾರಿನವರೆಗೆ ಮೀಸಲಾತಿಯನ್ನು ಕಲ್ಪಿಸಬೇಕೆಂದು ವರದಿಯಲ್ಲಿ ಹೇಳಲಾಯಿತು. ಅದರಂತೆ ಸರಕಾರದ ಆದೇಶಗಳು ಕೂಡ ಹೊರಬಿದ್ದವು. 1979ರಲ್ಲಿ ಉಚ್ಚನ್ಯಾಯಾಲಯವು ಸರಕಾರದ ಆದೇಶವನ್ನು ತಿರಸ್ಕರಿಸಿ ಮತಾಂತರಗೊಂಡ ದಲಿತ-ಮುಸ್ಲಿಂ ಮತ್ತು ದಲಿತ-ಕ್ರಿಶ್ಚಿಯನ್ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕಲಾಯಿತು.

ಇದೇ ವರದಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.57.3 ಇರುವ ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳು, 26.3ರಷ್ಟು ಹೊಲೆಯ ಮತ್ತು ಹೊಲೆಯ ಸಂಬಂಧಿತ ಉಪಜಾತಿಗಳು ಹಾಗೂ ಶೇ.16.4ರಷ್ಟು ಪರಿಶಿಷ್ಟ ಜಾತಿಗೆ ಆಗತಾನೆ ಸೇರಿಸಲಾದ ಸ್ಪಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ ಜಾತಿಗಳು ಇರುತ್ತಾರೆ ಎಂದು ಸೂಚಿಸಲಾಗಿದ್ದ ಎಲ್.ಜಿ.ಹಾವನೂರು ವರದಿಯನ್ನು ಯಥಾವತ್ತು ಸಂಪೂರ್ಣವಾಗಿ ಜಾರಿಗೆ ತಂದಿದ್ದರೆ ಶೇ.15 ಮೀಸಲು ಪ್ರಮಾಣದಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳಿಗೆ ಶೇ.8.5ರಷ್ಟು ಒಳಮೀಸಲಾತಿ ಸಿಗಬೇಕಿತ್ತು. ಆದರೆ ಯಥಾವತ್ತು ವರದಿಯನ್ನು ಜಾರಿಗೊಳಿಸದೆ ಅಸ್ಪಶ್ಯ ಜಾತಿಗಳ ಜೊತೆಗೆ ಅವೈಜ್ಞಾನಿಕವಾಗಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಎಂಬ ಕಾರಣಕ್ಕೆ ಸ್ಪಶ್ಯ ಜಾತಿಗಳನ್ನು ಸೇರಿಸಿದ್ದನ್ನು ಅಂದಿನ ಸಚಿವ ಸಂಪುಟದ ಮಂತ್ರಿಗಳಾಗಿದ್ದ ಎನ್.ರಾಚಯ್ಯ ಮತ್ತು ಬಿ.ಬಸವಲಿಂಗಪ್ಪನವರು ತೀವ್ರವಾಗಿ ಖಂಡಿಸಿ ಇದು ಅಸ್ಪಶ್ಯರ ಪಾಲಿನ ಮರಣ ಶಾಸನ ಎಂದು ವಿರೋಧಿಸಿದ್ದರು. ಹೀಗೆ ಈಗ ಸೇರ್ಪಡೆಯಾದ ಕೆಲವೇ ವರ್ಷಗಳಲ್ಲಿ ಕೇಂದ್ರ ಸರಕಾರದ ರೋಸ್ಟರ್ ಕ್ಲಾಸ್-1 ಹುದ್ದೆಗಳಲ್ಲಿ ಶೇ.13ರಷ್ಟು ಮೀಸಲಾತಿಯನ್ನು ಸ್ಪಶ್ಯ ಜಾತಿಗಳೇ ತುಂಬಿಕೊಂಡವು. ಇನ್ನೂ ರಾಜಕೀಯದಲ್ಲಿ ಇದರ ಗಂಭೀರ ಪರಿಣಾಮ ಯಾವ ಮಟ್ಟಕ್ಕೆ ತಲುಪಿತೆಂದರೆ ಸ್ಪಶ್ಯ ಜಾತಿಗಳಿಗೆ ಸಾಮಾಜಿಕ ಪ್ರವೇಶ ಇರುವ ಕಾರಣ ಅಸ್ಪಶ್ಯರನ್ನು ಮೇಲ್ಜಾತಿಗಳು ತಿರಸ್ಕರಿಸಿ, ಸಹಜವಾಗಿಯೇ ಸ್ಪಶ್ಯರಿಗೆ ಎಲ್ಲಾ ಪಕ್ಷಗಳಲ್ಲೂ ಮಣೆ ಹಾಕಲ್ಪಟ್ಟು ಬಹುತೇಕ ಮೀಸಲು ಕ್ಷೇತ್ರಗಳ ಸ್ಥಾನಗಳು ಸ್ಪಶ್ಯರ ಜಾತಿಗಳ ಪಾಲಾಗುವುದರ ಜೊತೆಗೆ ಶಿಕ್ಷಣ ಉದ್ಯೋಗದಲ್ಲಿ ಇಂದಿಗೂ ಸಿಂಹಪಾಲನ್ನು ಪಡೆಯುತ್ತಾ ಬಂದಿದ್ದಾರೆ. (ಕಳೆದ ಇಪ್ಪತ್ತು ವರ್ಷಗಳ ಎಸ್ಸಿ ಮೀಸಲಾತಿ ಕ್ಷೇತ್ರಗಳ ಶಾಸಕರು, ಸಂಸದರ ಪಟ್ಟಿ ಮತ್ತು ಕರ್ನಾಟಕದ ಕೆಪಿಎಸ್‌ಸಿಯ ನೇಮಕಾತಿ ಮತ್ತು ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಪಟ್ಟಿ ಪರಿಶೀಲಿಸಿದರೆ ತಿಳಿಯುತ್ತದೆ).

ಸಾವಿರಾರು ವರ್ಷಗಳಿಂದ ಶಿಕ್ಷಣ ಆಸ್ತಿ ಅಧಿಕಾರದಿಂದ ವಂಚಿತವಾಗಿದ್ದ, ಕುಲಕಸುಬುಗಳಿಗೆ ಅಂಟಿಕೊಂಡಿದ್ದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಮತ್ತು ಅಸ್ಪಶ್ಯ ಅಲೆಮಾರಿ ಜಾತಿಗಳು ಸ್ಪಶ್ಯ ಜಾತಿ ಮತ್ತು ಈ ವೇಳೆಗಾಗಲೇ ವಿಶ್ವವಿದ್ಯಾನಿಲಯ ಮೊದಲ ತಲೆಮಾರಿನ ಶಿಕ್ಷಣ ಪಡೆದು ಉದ್ಯೋಗದತ್ತ ಮುಖ ಮಾಡಿದ್ದ ಹೊಲೆಯ ಮತ್ತು ಹೊಲೆಯ ಸಂಬಂಧಿತ ಜಾತಿಗಳ ಜೊತೆಗೆ ಸ್ಪರ್ಧಿಸಿ ಶಿಕ್ಷಣ, ಉದ್ಯೋಗ, ರಾಜಕೀಯ ಅವಕಾಶಗಳಿಂದ ವಂಚಿತರಾಗುತ್ತಲೇ ಬಂದಿದ್ದು, ಈ ಅವಕಾಶ ವಂಚಿತ ತಾರತಮ್ಯದಿಂದ ವಂಚಿತ ಸಮುದಾಯಗಳು ತಮಗೆ ದಕ್ಕದ ಮೀಸಲಾತಿಯಲ್ಲಿ ಪಾಲು ಕೇಳಲು ಹುಟ್ಟಿಕೊಂಡ ಚಳವಳಿಯೇ ಒಳಮೀಸಲಾತಿ ಹೋರಾಟ. ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ 1994ರಲ್ಲಿ ಒಳಮೀಸಲಾತಿ ಹೋರಾಟ ಜೀವ ತಳೆಯಿತು. ನೆರೆಯ ರಾಜ್ಯವಾದ ಕರ್ನಾಟಕಕ್ಕೆ ಇದು ಪಸರಿಸಿ ಇಂದಿಗೆ ಮೂರು ದಶಕಗಳಾಗುತ್ತಾ ಬಂದು, ನೂರಾರು ಬಗೆಯ ಹೋರಾಟಗಳು, ಸಾವು, ನೋವು ಬಲಿದಾನಗಳನ್ನು ಈ ಒಳಮೀಸಲಾತಿ ಹೋರಾಟ ಪಡೆದಿದೆ.

ಪಂಜಾಬ್‌ನಲ್ಲಿ 1975ರಲ್ಲೇ ಗ್ಯಾನಿ ಜೈಲ್‌ಸಿಂಗ್ ಒಳಮೀಸಲಾತಿಯನ್ನು ಜಾರಿಗೆ ತಂದರು. ಅಲ್ಲಿ ಬಲ್ಮಿಕಿಗಳು ಒಳಮೀಸಲಾತಿ ಬಯಸಿ ಹೋರಾಟ ನಡೆಸಿದರೆ ಚಮ್ಮಾರರು ಒಳಮೀಸಲಾತಿ ವಿರೋಧಿಯಾಗಿದ್ದರು. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರು ಷೆಡ್ಯೂಲ್-9ಕ್ಕೆ ತಿದ್ದುಪಡಿ ತಂದು ಸಾಮಾನ್ಯ ಮೀಸಲಾತಿಯಲ್ಲಿಯೇ ಶೇ. 3ರಷ್ಟು ಒಳಮೀಸಲಾತಿಯನ್ನು ಅರುಂಧತಿಯಾರ್ (ಕರ್ನಾಟಕದಲ್ಲಿ ಮಾದಿಗ) ಸಮುದಾಯಕ್ಕೆ ನೀಡುವುದರ ಜೊತೆಗೆ ಅರುಂಧತಿಯಾರ್ ಮತ್ತು ಚಕ್ಕುಲಿಯಾರ್ ಸಮುದಾಯಗಳು ಪರಿಶಿಷ್ಟ ಜಾತಿಯಲ್ಲಿಯೂ ಮೀಸಲಾತಿ ಪಡೆಯುವಂತೆ ಅವಕಾಶ ಮಾಡಿಕೊಟ್ಟರು. ಇಲ್ಲಿ ಇಪ್ಪತ್ತೆಂಟು ವರ್ಷಗಳ ಕಾಲ ಒಳಮೀಸಲಾತಿ ಪರಹೋರಾಟ ನಡೆಸಿದವರು ಅರುಂಧತಿಯಾರ್, ಒಳಮೀಸಲಾತಿಯನ್ನು ವಿರೋಧಿಸಿದವರು ವಿಡುದಲೈ ಚಿರುತೈಗಳ್ ಮತ್ತು ಪರಿಯಾರ್ ಸಮುದಾಯ. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುರವರು ಒಳಮೀಸಲಾತಿಯನ್ನು ಜಾರಿಗೊಳಿಸಿದರು. ಇಲ್ಲಿ ಒಳಮೀಸಲಾತಿ ಪರ ಹೋರಾಟ ನಡೆಸಿದವರು ಮಾದಿಗ ದಂಡೋರ, ವಿರೋಧಿಸಿದವರು ಮಾಲ ಮಹಾನಾಡು ಮತ್ತು ದಲಿತ ಪ್ಯಾಂಥರ್ಸ್‌. 2005ರಲ್ಲಿ ಇದೇ ಆಂಧ್ರಪ್ರದೇಶ ಸರಕಾರ ಒಳಮೀಸಲಾತಿ ಕಲ್ಪಿಸಿರುವುದನ್ನು ಪ್ರಶ್ನಿಸಿ ಇ.ವಿ.ಚಿನ್ನಯ್ಯ / ಆಂಧ್ರಪ್ರದೇಶ ಸರಕಾರದ ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಾದಿಯಾಗಿ ಐದು ಜನರಿದ್ದ ನ್ಯಾಯಪೀಠವು ಹೋಮೋಜೀನಿಯಸ್ ಕಾರಣ ನೀಡಿ ಒಳಮೀಸಲಾತಿ ಕಲ್ಪಿಸುವುದು ಸಂವಿಧಾನದ ವ್ಯಾಪ್ತಿಗೆ ಬರುವುದಿಲ್ಲ ಎಂಬ ತೀರ್ಪನ್ನಿತ್ತರು. ದೇಶದಲ್ಲಿ ಒಳಮೀಸಲಾತಿ ಜಾರಿಯಲ್ಲಿದ್ದ ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ, ತಮಿಳುನಾಡು, ರಾಜ್ಯಗಳಿಗೆ ಈ ತೀರ್ಪು ಅನ್ವಯವಾಗಿ ಒಳಮೀಸಲಾತಿ ಜಾರಿಯನ್ನು ಆಯಾ ರಾಜ್ಯ ಸರಕಾರಗಳು ರದ್ದು ಮಾಡಿದವು. ಈತನ್ಮಧ್ಯೆ ಕರ್ನಾಟಕದಲ್ಲಿ ಮೀಸಲಾತಿ ಅವಕಾಶ ಗಳಿಂದ ವಂಚಿತವಾಗಿದ್ದ ಮಾದಿಗ ಸಂಬಂಧಿತ ಜಾತಿಗಳು ಒಳಮೀಸಲಾತಿ ಕಲ್ಪಿಸುವಂತೆ ಮಾಡಿದ್ದ ಹೋರಾಟ ಪ್ರಬಲವಾದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ವರದಿ ನೀಡಲು ರಚನೆ ಮಾಡಿತು. ಸುಮಾರು ಆರು ವರ್ಷಗಳ ಕಾಲ ಸಮೀಕ್ಷೆ ನಡೆಸಿದ ಆಯೋಗವು 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರಿಗೆ ನ್ಯಾ.ಎ.ಜೆ.ಸದಾಶಿವ ಆಯೋಗವು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ವರದಿಯನ್ನು ಸಲ್ಲಿಸಿತು. ಈ ವರದಿಯನ್ನು ಸಲ್ಲಿಸುವಾಗ ನ್ಯಾ.ಎ.ಜೆ.ಸದಾಶಿವ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ವರದಿಯ ಸಾರಾಂಶವಾಗಿ ಎರಡು ಪುಟಗಳ ವಿವರಣೆಯಲ್ಲಿ:
1. A ಗುಂಪಿನಲ್ಲಿ ಮಾದಿಗ ಸಂಬಂಧಿತ 51 ಜಾತಿಗಳಿಗೆ ಶೇ.6,
2. B ಗುಂಪಿನ ಹೊಲೆಯ ಸಂಬಂಧಿತ 29 ಜಾತಿಗಳಿಗೆ ಶೇ.5,
3. C ಗುಂಪಿನ ಸ್ಪಶ್ಯ ಸಂಬಂಧಿಸಿ 10 ಜಾತಿಗಳಿಗೆ ಶೇ.3
4. ಈ ಗುಂಪಿನ ಸ್ಪಶ್ಯ ಅಲೆಮಾರಿ ಸಂಬಂಧಿತ 16 ಜಾತಿಗಳಿಗೆ ಶೇ.1 ಒಳಮೀಸಲಾತಿಯನ್ನು ಕಲ್ಪಿಸಲು ಜನಸಂಖ್ಯಾಧಾರಿತ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಯ ಮಾನದಂಡವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸಲ್ಲಿಸಲಾಗಿರುವ ಬಗ್ಗೆ ತಿಳಿಸಿದರು. ಈವರೆಗೂ ಮೀಸಲಾತಿಯಲ್ಲಿ ಸಿಂಹಪಾಲನ್ನು ಪಡೆಯುತ್ತಿದ್ದ ಸ್ಪಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಚ, ಕೊರಮ ಮತ್ತು ಕೆಲವು ಹೊಲೆಯ ಸಂಘಟನೆಗಳು ಒಳಮೀಸಲಾತಿ ಶಿಫಾರಸಿನ ವಿರುದ್ಧವಾಗಿ ನಿಂತವು. ಸದನದಲ್ಲಿ ಮಂಡನೆಯಾಗಿ ಚರ್ಚೆಯೇ ಆಗದ ವರದಿಯ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತ ಸರಕಾರಗಳ ಮೇಲೆ ಒತ್ತಡ ಹೇರಿದವು. ಒಳಮೀಸಲಾತಿ ಶೀಘ್ರವಾಗಿ ಮಂಡಿಸಿ ಜಾರಿಯಾಗುವುದನ್ನು ತಪ್ಪಿಸಲು ಕೆಳಕಂಡ ವಾದಗಳನ್ನು ಹರಿಬಿಡುತ್ತ ಪರೋಕ್ಷವಾಗಿ ಒಳಮೀಸಲಾತಿಯನ್ನು ವಿರೋಧಿಸಿದವು. ಆ ಕೆಲ ಅಂಶಗಳು:

1. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ.
2. ಹೊಲೆಮಾದಿಗ ಜಾತಿಗಳ ನಡುವೆ ಒಳಜಗಳಕ್ಕೆ ಕಾರಣವಾಗುತ್ತಿದೆ.
3. ಖಾಸಗೀಕರಣದ ಸಂದರ್ಭದಲ್ಲಿ ಒಳಮೀಸಲಾತಿ ಮತ್ತು ಮೀಸಲಾತಿ ಅಪ್ರಸ್ತುತ.
4. ಒಳಮೀಸಲಾತಿಯ ವಿರುದ್ಧ 99 ಜಾತಿಗಳಿದ್ದು, ಕೇವಲ ಮಾದಿಗ ಜಾತಿ ಮಾತ್ರ ಒಳಮೀಸಲಾತಿ ಕೇಳುತ್ತಿದೆ.
5. ಒಳಮೀಸಲಾತಿ ವರದಿ ಸಾರ್ವಜನಿಕ ಜನಾಭಿಪ್ರಾಯಕ್ಕೆ ಮತ್ತು ವಿಮರ್ಶೆಗೆ ಒಳಪಡಬೇಕು.
6. ಒಳಮೀಸಲಾತಿ ಜಾರಿಯಾದರೆ ಸ್ಪಶ್ಯರನ್ನು ಪರಿಶಿಷ್ಟ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
7. ಒಳಮೀಸಲಾತಿ ಜಾರಿಗಿಂತ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟ ಮಾಡಬೇಕು.
8. ಒಳಮೀಸಲಾತಿ ಕೆನೆಪದರವನ್ನು ಒಳಗೊಂಡಿದ್ದು, ಇದು ಮೀಸಲಾತಿಗೆ ಕಂಟಕವಾಗಿದೆ. ಇವುಗಳನ್ನು ಪ್ರತಿಪಾದಿಸುತ್ತ ಒಳಮೀಸಲಾತಿಯನ್ನು ಪರೋಕ್ಷವಾಗಿ ವಿರೋಧಿಸಲಾಗುತ್ತಿದೆ. ಸರಕಾರ ಸತ್ಯಾಸತ್ಯತೆ ತಿಳಿಯಲು ಶೀಘ್ರವಾಗಿ ಸದನದಲ್ಲಿ ಈ ವರದಿಯನ್ನು ಮಂಡಿಸಿ ಮೇಲಿನ ಊಹಾಪೋಹಗಳಿಗೆ ತೆರೆ ಎಳೆಯಬೇಕಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಮಂಡನೆಯಾದ ಯಾವ ವರದಿಯನ್ನು ಸಾರ್ವಜನಿಕ ಚರ್ಚೆ ಮತ್ತು ವಿಮರ್ಶೆಗೆ ಒಳಪಡಿಸಿರುವುದು ಇತಿಹಾಸದಲ್ಲಿಲ್ಲ. ಉದಾಹರಣೆಗೆ ಎಲ್.ಜಿ.ಹಾವನೂರು ವರದಿ ಮತ್ತು ಇತ್ತೀಚೆಗೆ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿ ಕಲ್ಪಿಸಿರುವುದು. ಹೀಗಿರುವಾಗ ಸುದೀರ್ಘ ಒಳಮೀಸಲಾತಿ ಹಕ್ಕಿಗಾಗಿ ಹೋರಾಟ ಮಾಡಿಕೊಂಡು ಬಂದಿರುವ ಮೀಸಲಾತಿಯಲ್ಲಿ ವಂಚಿತವಾಗಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಮತ್ತು ಅಲೆಮಾರಿ ಜಾತಿಗಳ ಹಕ್ಕೊತ್ತಾಯವಾದ ಒಳ ಮೀಸಲಾತಿ ಹೋರಾಟವನ್ನು ಮಾನ್ಯ ಮಾಡಿ, ಈ ಹಸಿದ ಸಮುದಾಯಗಳ ಒಡಲಾಳದ ಕೂಗನ್ನು ಕರ್ನಾಟಕ ರಾಜ್ಯ ಸರಕಾರವು ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸುವುದರ ಜೊತೆಗೆ ಎಲ್ಲಾ ಜಾತಿ ಜನಾಂಗಗಳಿಗೂ ಆಯಾ ಜಾತಿ ಜನಸಂಖ್ಯೆವಾರು ಒಳಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಪರಿಪಾಲಿಸುವುದೇ ಸಂವಿಧಾನದತ್ತವಾಗಿ ರಚಿತವಾದ ಸರಕಾರಗಳ ಆದ್ಯ ಕರ್ತವ್ಯ.


‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)