varthabharthi


ಸಂಪಾದಕೀಯ

ಪ್ರವಾಹಕ್ಕೆ ಕೊಚ್ಚಿ ಹೋಗದಿರಲಿ ಸರಕಾರ

ವಾರ್ತಾ ಭಾರತಿ : 22 Sep, 2020

ಈಗಾಗಲೇ ನೋಟು ನಿಷೇಧ, ಜಿಎಸ್‌ಟಿ, ಕೊರೋನ, ಲಾಕ್‌ಡೌನ್ ಮೊದಲಾದ ಬೃಹತ್ ನೆರೆಗಳಿಂದ ಈ ನಾಡು ಕೊಚ್ಚಿ ಹೋಗಿದೆ. ಆರ್ಥಿಕತೆಯ ಗುಡ್ಡ ಕುಸಿದಿದೆ. ರೈತರು, ವಲಸೆ ಕಾರ್ಮಿಕರು ನೆರೆಯ ಸುಳಿಗೆ ಸಿಕ್ಕು ಉಸಿರು ಕಳೆದುಕೊಂಡಿದ್ದಾರೆ. ಕೇಂದ್ರ ಸರಕಾರ ಇವೆಲ್ಲವನ್ನೂ ‘ದೇವರ ಕೆಲಸ’ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಇಂತಹ ಹೊತ್ತಿನಲ್ಲೇ, ಭಾರೀ ಮಳೆ ಸುರಿದು ಪ್ರಕೃತಿದತ್ತವಾದ ಪ್ರವಾಹಕ್ಕೆ ರಾಜ್ಯ ಸಿಲುಕಿಕೊಂಡಿದೆ. ಈ ಹಿಂದೆಲ್ಲ ಪ್ರವಾಹಕ್ಕಾಗಿ ಉತ್ತರ ಕರ್ನಾಟಕ ಸುದ್ದಿಯಾಗುತ್ತಿದ್ದರೆ, ಈ ಬಾರಿ ಮಳೆಗೆ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಸುದ್ದಿಯಾಗಿವೆ. ಉಡುಪಿಯಂತೂ ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ. ಸಾವಿರಾರು ಮನೆಗಳು ಜಲಾವೃತಗೊಂಡಿದ್ದರೆ, ಸುಮಾರು 3,000 ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಕೊಂಡಿದೆ. ಎನ್‌ಡಿಆರ್‌ಎಫ್ ತಂಡವನ್ನು ಸರಕಾರ ಉಡುಪಿಗೆ ಕಳುಹಿಸಿದೆ. ಕಳೆದ ನಲ್ವತ್ತು ವರ್ಷಗಳಲ್ಲೇ ಅತಿ ಹೆಚ್ಚು ಮಳೆಯನ್ನು ಉಡುಪಿ ಜಿಲ್ಲೆ ಈ ಬಾರಿ ಕಂಡಿದೆ.

ರಾಜ್ಯದ ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಸರ್ವಸ್ವವನ್ನು ಕಳೆದುಕೊಂಡವರ ಪಾಲಿಗೆ ಈ ನೆರೆ ಇನ್ನೊಂದು ಆಘಾತ. ರಾಜ್ಯ ನೆರೆಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ಹೋಗಿ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ. ಮುಖ್ಯವಾಗಿ ರಾಜ್ಯಕ್ಕೆ ಬಿಡುಗಡೆಯಾಗಬೇಕಾಗಿರುವ ಅನುದಾನಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯಿಟ್ಟು ಯಡಿಯೂರಪ್ಪ ದಿಲ್ಲಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿತ್ತ ಸಚಿವರೂ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿ ರಾಜ್ಯದ ಸಂಕಟಗಳನ್ನು ಚರ್ಚಿಸಿದ್ದಾರೆ. ನೀರಾವರಿ ಕಾಮಗಾರಿಗಳೂ ಸೇರಿದಂತೆ ಹತ್ತು ಹಲವು ಯೋಜನೆಗಳು, ಕೇಂದ್ರ ಸರಕಾರ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡದೇ ಇರುವ ಕಾರಣದಿಂದ ನನೆಗುದಿಯಲ್ಲಿವೆ. ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳಿಗೆ ಕೇಂದ್ರ ತಡೆಯಾಗಿದೆ. ನಗರಾಭಿವೃದ್ಧಿ ಇಲಾಖೆಯಿಂದ ಸುಮಾರು 250 ಕೋಟಿ ರೂಪಾಯಿ ಬರಬೇಕಾಗಿದೆ. ಇದರ ಜೊತೆಗೆ, ಇತರ ಹಲವು ಯೋಜನೆಗಳಿಗಾಗಿ ಕೇಂದ್ರ ಬಿಡುಗಡೆ ಮಾಡಬೇಕಾಗಿರುವ 270 ಕೋಟಿ ರೂಪಾಯಿಯೂ ನನೆಗುದಿಯಲ್ಲಿದೆ. ಜಿಎಸ್‌ಟಿ ಪರಿಹಾರವಂತೂ ಕೊಡುವುದೇ ಇಲ್ಲ ಎಂದು ಹೇಳಿ ಕೇಂದ್ರ ಸರಕಾರ ಕೈತೊಳೆದುಕೊಂಡಿದೆ. ಕನಿಷ್ಠ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಬೇಕಾಗಿರುವ ಹಣವನ್ನಾದರೂ ಬಿಡುಗಡೆ ಮಾಡಿ ಎಂದು ಯಡಿಯೂರಪ್ಪ ಅವರು ದಿಲ್ಲಿಯಲ್ಲಿ ವಿವಿಧ ನಾಯಕರನ್ನು ಒತ್ತಾಯಿಸಿ ಬಂದಿದ್ದಾರೆ. ಭರವಸೆ ಹೊರತು ಪಡಿಸಿದಂತೆ ಇನ್ನಾವ ಪರಿಹಾರವೂ ಸಿಕ್ಕಿಲ್ಲ. ಬರಿಗೈಯಲ್ಲಿ ವಾಪಸ್ ಬಂದಿರುವ ಯಡಿಯೂರಪ್ಪರನ್ನು ನೆರೆ ಪ್ರವಾಹ ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ಈಗಾಗಲೇ ಕೊರೋನ ಸಮಸ್ಯೆಯನ್ನು ಎದುರಿಸಲು ಸಂಪೂರ್ಣ ವಿಫಲವಾಗಿರುವ ಸರಕಾರ, ಈಗ ಈ ಪ್ರವಾಹದ ಸವಾಲನ್ನು ಗೆಲ್ಲಬೇಕಾಗಿದೆ.

ರೈತರ ಸಮಸ್ಯೆ, ಮಳೆ, ಪ್ರವಾಹ ಇತ್ಯಾದಿಗಳನ್ನು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಸವಾಲುಗಳನ್ನು ಎದುರಿಸಿದ್ದಾರೆ. ಬೆಳಗಾವಿ, ಬೆಂಗಳೂರು ಮುಳುಗಿದಾಗಲೂ, ಸಹೋದ್ಯೋಗಿಗಳ ಅಸಹಕಾರಗಳ ನಡುವೆಯೂ ಅವುಗಳನ್ನು ನಿಭಾಯಿಸಲು ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ. ಉತ್ತರ ಕರ್ನಾಟಕ ಕೊಚ್ಚಿ ಹೋದಾಗ, ದಿಲ್ಲಿಯಲ್ಲಿ ಪರಿಹಾರಕ್ಕಾಗಿ ಏಕಾಂಗಿಯಾಗಿ ಅವರು ಪಟ್ಟು ಹಿಡಿದಿದ್ದರು. ಇಂತಹ ಸಂದರ್ಭದಲ್ಲಿ ಜೊತೆ ನಿಲ್ಲಬೇಕಾಗಿದ್ದ ಸಂಸದರು ‘ಕೇಂದ್ರ ಸರಕಾರ ಪರಿಹಾರ ನೀಡಬೇಕಾಗಿಲ್ಲ. ರಾಜ್ಯಕ್ಕೆ ನಿಭಾಯಿಸುವ ಶಕ್ತಿಯಿದೆ’ ಎಂದು ಯಡಿಯೂರಪ್ಪ ಅವರ ದಾರಿಗೆ ಅಡ್ಡಗಾಲು ಹಾಕಿದ್ದರು. ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ನೆರೆಯಿಂದಾದ ನಾಶ, ನಷ್ಟ ಏನಿದೆಯೋ ಅವುಗಳಿಗೆ ಸರಿಯಾದ ಪರಿಹಾರವನ್ನು ಒದಗಿಸಲು ವಿಫಲವಾಗಿರುವುದಕ್ಕೆ ನಾವು ಯಡಿಯೂರಪ್ಪ ಅವರನ್ನಷ್ಟೇ ದೂರಿದರೆ ಪ್ರಯೋಜನವಿಲ್ಲ. ಬೇಜವಾಬ್ದಾರಿ ಸಂಸದರು, ದಿಲ್ಲಿಯಲ್ಲಿ ಸೂಕ್ತ ಪರಿಹಾರ ಬಿಡುಗಡೆ ಮಾಡಲು ಒತ್ತಾಯ ಮಾಡದೇ ಇರುವುದರಿಂದ, ರಾಜ್ಯ ಸಂಕಷ್ಟ ಅನುಭವಿಸಿತು.

ವಿಪರ್ಯಾಸವೆಂದರೆ, ಬೊಕ್ಕಸದಲ್ಲಿರುವ ಇರುವ ಹಣವನ್ನೇ ಬಳಸಿ ಸಂತ್ರಸ್ತರಿಗೆ ಸರಕಾರ ಪರಿಹಾರ ಬಿಡುಗಡೆ ಮಾಡಿತ್ತಾದರೂ ಅದರ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದವು. ಕಳೆದ ಬಾರಿ ರೈತರಿಗೆ ಅತಿ ಹೆಚ್ಚು ಪರಿಹಾರದ ಭರವಸೆಯನ್ನು ಸರಕಾರ ನೀಡಿತ್ತು. ಆದರೆ ಪರಿಹಾರ ವಿತರಣೆ ಮಾತ್ರ ಸರಿಯಾದ ರೀತಿಯಲ್ಲಿ ಹಂಚಿಕೆಯಾಗಲಿಲ್ಲ. ಪರಿಹಾರದ ಮೊತ್ತದಲ್ಲಿ ತಾರತಮ್ಯ, ಒಂದೇ ಬೆಳೆ ಮತ್ತು ಒಂದೇ ಕ್ಷೇತ್ರವಿರುವ ರೈತರಿಗೆ ಪರಿಹಾರದಲ್ಲಿ ವ್ಯತ್ಯಾಸ, ರಾಜಕೀಯ ಬೆಂಬಲ ಇರುವ ವ್ಯಕ್ತಿಗಳಿಗೆ ಹೆಚ್ಚು ಪರಿಹಾರ, ನಕಲಿ ಫಲಾನುಭವಿಗಳ ಸೃಷ್ಟಿ, ನೈಜ ಫಲಾನುಭವಿಗಳನ್ನು ಕೈ ಬಿಟ್ಟ ಅಧಿಕಾರಿಗಳು ಇತ್ಯಾದಿ ಆರೋಪಗಳು ಸರಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದವು. ಕಳೆದ ಬಾರಿಯ ನೈಜ ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ತಲುಪಿಲ್ಲ. ಕುಸಿದು ಬಿದ್ದ ಕೊಡಗು ಸೇರಿದಂತೆ ಮಲೆನಾಡನ್ನು ಮೇಲೆತ್ತುವಲ್ಲಿ ಸರಕಾರ ಯಶಸ್ವಿಯಾಗಿಲ್ಲ. ಹೀಗಿರುವಾಗ, ಹೊಸ ಪ್ರವಾಹದ ಸವಾಲನ್ನು ಸರಕಾರ ಎದುರಿಸುವ ಬಗೆಯಾದರೂ ಹೇಗೆ?

ಈ ಬಾರಿಯ ನಾಶ, ನಷ್ಟ ಸಂದರ್ಭವನ್ನು ನಿಭಾಯಿಸುವುದು ಸರಕಾರಕ್ಕೆ ಇನ್ನೂ ಕಷ್ಟವಾಗಲಿದೆ. ಮುಖ್ಯವಾಗಿ ಸರಕಾರದೊಳಗೆ ಭಿನ್ನಮತ ತೀವ್ರವಾಗಿದೆ. ಯಡಿಯೂರಪ್ಪರ ವಿರುದ್ಧ ಒಂದು ಗುಂಪು ನಿರಂತರವಾಗಿ ಕೆಲಸ ಮಾಡುತ್ತಿದೆೆ. ಯಡಿಯೂರಪ್ಪರ ಹೆಸರಿಗೆ ಮಸಿ ಬಳಿಯಲು ಆ ಗುಂಪು ಕಾಯುತ್ತಿವೆ. ಇದರ ಜೊತೆಜೊತೆಗೆ ಖಜಾನೆ ಸಂಪೂರ್ಣ ಬಡವಾಗಿದೆ. ಕೇಂದ್ರದಿಂದ ಯಾವುದೇ ಆರ್ಥಿಕ ನೆರವು ಸಿಗುವ ಸಾಧ್ಯತೆಗಳೂ ಇಲ್ಲ. ಆರ್‌ಬಿಐ ಸಾಲ ಪಡೆಯುವುದು ಅನಿವಾರ್ಯ ಎಂದು ಸರಕಾರ ಒಪ್ಪಿಕೊಂಡಿದೆ. ನೆರೆಯನ್ನು ಎದುರಿಸುವ ಯಾವ ಪೂರ್ವತಯಾರಿಯನ್ನು ಸರಕಾರ ಮಾಡಿಕೊಂಡಿಲ್ಲ. ಲಾಕ್‌ಡೌನ್‌ನಿಂದಾಗಿ ತತ್ತರಿಸಿ ಕೂತಿರುವ ಆರ್ಥಿಕತೆಯನ್ನು ಒಂದಿಷ್ಟಾದರೂ ಮೇಲೆತ್ತಿದರೆ ಸಾಕು ಎನ್ನುವಂತಹ ಸ್ಥಿತಿಗೆ ಬಂದು ನಿಂತಿದೆ ಸರಕಾರ.

ಆದರೆ ಪ್ರವಾಹದಲ್ಲಿ ಸಿಲುಕಿಕೊಂಡಿರುವ ರೈತರಿಗೆ ಯಾವುದೇ ರೀತಿಯ ನೆರವನ್ನು ನೀಡದೆ ಇದ್ದರೆ ಆರ್ಥಿಕತೆಯನ್ನು ಮೇಲೆತ್ತುವ ಸರಕಾರದ ಪ್ರಯತ್ನ ತೀವ್ರ ಹಿನ್ನಡೆಯನ್ನು ಪಡೆಯುತ್ತದೆ. ಈ ಬಾರಿ ಮಳೆಗೆ ಬೆಂಗಳೂರು, ಮಂಗಳೂರು, ಉಡುಪಿಯಂತಹ ನಗರಗಳು ತತ್ತರಿಸಿರುವುದರಿಂದ ನಗರಗಳ ಆರ್ಥಿಕತೆಯೂ ಚಿಗುರುವುದು ಕಷ್ಟ. ಈ ಪ್ರವಾಹವನ್ನು ಈಜಿ ದಡ ಸೇರುವುದು ಯಡಿಯೂರಪ್ಪ ಪಾಲಿಗೆ ಅಷ್ಟು ಸುಲಭವಿಲ್ಲ. ಈ ನಿಟ್ಟಿನಲ್ಲಿ, ಎಲ್ಲ ಸಂಸದರು ಯಡಿಯೂರಪ್ಪ ಅವರ ಜೊತೆಗೆ ನಿಂತು ದೊಡ್ಡ ಧ್ವನಿಯಲ್ಲಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರಕಾರವನ್ನು ಒತ್ತಾಯಿಸುವುದೊಂದೇ ದಾರಿ. ಮೋದಿ ಮುಖ್ಯವೋ, ನಾಡು ಮುಖ್ಯವೋ ಎನ್ನುವುದನ್ನು ಬಿಜೆಪಿ ಸಂಸದರು ಸಾಬೀತು ಮಾಡುವ ಸಂದರ್ಭ ಇದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)