varthabharthi


ರಾಷ್ಟ್ರೀಯ

ಸಂಸದರ ಅಮಾನತು ಹಿಂಪಡೆಯುವ ತನಕ ರಾಜ್ಯಸಭೆ ಬಹಿಷ್ಕರಿಸಲು ವಿಪಕ್ಷಗಳ ನಿರ್ಧಾರ

ವಾರ್ತಾ ಭಾರತಿ : 22 Sep, 2020

ಹೊಸದಿಲ್ಲಿ,ಸೆ.22: ರಾಜ್ಯಸಭೆಯಲ್ಲಿ ಸತತ ಮೂರನೇ ದಿನವೂ ನಾಟಕೀಯ ವಿದ್ಯಮಾನಗಳು ಮುಂದುವರಿದಿದ್ದು,ಕೃಷಿರಂಗಕ್ಕೆ ಸಂಬಂಧಿಸಿದ ಮೂರು ಬೇಡಿಕೆಗಳು ಮತ್ತು ಎಂಟು ಸಂಸದರ ಅಮಾನತುಗಳನ್ನು ಹಿಂದೆಗೆದುಕೊಳ್ಳಬೇಕು ಎಂಬ ಕೋರಿಕೆ ಈಡೇರುವವರೆಗೆ ಪ್ರತಿಪಕ್ಷವು ಸದನ ಕಲಾಪಗಳನ್ನು ಬಹಿಷ್ಕರಿಸಲಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಮಂಗಳವಾರ ಮೇಲ್ಮನೆಯಲ್ಲಿ ಘೋಷಿಸಿದರು.

ಪ್ರತಿಭಟನೆಯ ದ್ಯೋತಕವಾಗಿ ಕಳೆದ ರಾತ್ರಿಯನ್ನು ಸಂಸತ್ ಸಂಕೀರ್ಣದ ಹುಲ್ಲುಹಾಸಿನಲ್ಲಿಯೇ ಕಳೆದಿದ್ದ ಅಮಾನತುಗೊಂಡಿರುವ ಎಂಟು ಸದಸ್ಯರು ಇಂದು ಬೆಳಿಗ್ಗೆ 11:30ರವರೆಗೂ ತಮ್ಮ ಧರಣಿಯನ್ನು ಮುಂದುವರಿಸಿದ್ದರು. ರವಿವಾರ ರಾಜ್ಯಸಭೆಯಲ್ಲಿ ಎರಡು ವಿವಾದಾತ್ಮಕ ಕೃಷಿ ಮಸೂದೆಗಳು ಅಂಗೀಕಾರಗೊಂಡಾಗ ಸದನದಲ್ಲಿ ಅಭೂತಪೂರ್ವ ಕೋಲಾಹಲ ಮತ್ತು ಅಶಿಸ್ತಿನ ನಡವಳಿಕೆಗಾಗಿ ಪೀಠದಲ್ಲಿದ್ದ ಉಪಸಭಾಪತಿ ಹರಿವಂಶ್ ಅವರು 8 ಸದಸ್ಯರನ್ನು ಅಮಾನತುಗೊಳಿಸಿದ್ದರು.

ಹರಿವಂಶ್ ಪ್ರತಿಪಕ್ಷಗಳ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದು,ಅವರ ವಿರುದ್ಧ ಸಲ್ಲಿಸಲಾಗಿದ್ದ ಅವಿಶ್ವಾಸ ಸೂಚನೆಯನ್ನು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ ತಿರಸ್ಕರಿಸಿದ್ದರು.

ಎಂಟು ಸದಸ್ಯರ ಅಮಾನತನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಮಂಗಳವಾರ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಮೇಲ್ಮನೆಯಲ್ಲಿ ಸಭಾತ್ಯಾಗವನ್ನು ಮಾಡಿದವು. ಆಪ್,ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದವು. ಬಿಜೆಡಿ ಮತ್ತು ಬಿಎಸ್‌ಪಿ ಪ್ರತಿಪಕ್ಷಗಳ ಬಹಿಷ್ಕಾರದಲ್ಲಿ ಭಾಗಿಯಾಗಿರಲಿಲ್ಲ. ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ್ದರೂ ಸದನವು ಮೂರನೇ ಕೃಷಿ ಮಸೂದೆಯ ಮೇಲಿನ ಚರ್ಚೆಯನ್ನು ಮುಂದುವರಿಸಿದ್ದು ಉಪಸಭಾಪತಿಗಳು ಪೀಠದಲ್ಲಿದ್ದರು. ಅಪರಾಹ್ನ ಮಸೂದೆಯು ಅಂಗೀಕಾರಗೊಂಡಿದೆ.

 ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಆಝಾದ್ ಮೂರು ಬೇಡಿಕೆಗಳನ್ನು ವಿವರಿಸಿದರು. ಖಾಸಗಿಯವರು ಸರಕಾರವು ನಿಗದಿಗೊಳಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸದಂತೆ ಸರಕಾರವು ಶಾಸನವೊಂದನ್ನು ತರಬೇಕು,ಕನಿಷ್ಠ ಬೆಂಬಲ ಬೆಲೆಗಳು ಎಂ.ಎಸ್.ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿರಬೇಕು ಮತ್ತು ರೈತರಿಂದ ನಿಗದಿತ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಬೆಳೆಗಳ ಖರೀದಿಯನ್ನು ಸರಕಾರ ಅಥವಾ ಭಾರತೀಯ ಆಹಾರ ನಿಗಮ ಖಚಿತಪಡಿಸಬೇಕು ಇವು ಈ ಮೂರು ಬೇಡಿಕೆಗಳಾಗಿವೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು, ಅಮಾನತುಗೊಂಡಿರುವ ಸದಸ್ಯರು ತಮ್ಮ ನಡವಳಿಕೆಗಾಗಿ ಕ್ಷಮೆಯನ್ನು ಯಾಚಿಸಿದರೆ ಮಾತ್ರ ಅವರ ವಿರುದ್ಧದ ಶಿಸ್ತುಕ್ರಮವನ್ನು ಹಿಂದೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ರಾಜ್ಯಸಭೆಯಲ್ಲಿ ಸದನ ನಾಯಕ ಥಾವರ್‌ಚಂದ್ ಗೆಹ್ಲೋಟ್ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಬೆಳಿಗ್ಗೆ ಹರಿವಂಶ್ ಅವರು ಚಹಾದೊಂದಿಗೆ ಪ್ರತಿಭಟನಾನಿರತ ಸದಸ್ಯರ ಬಳಿಗೆ ತೆರಳಿ ಕಪ್‌ಗಳಲ್ಲಿ ಚಹಾ ಹಾಕಿ ನೀಡಿದ್ದರು. ಆದರೆ ಅವರ ‘ಚಹಾ ರಾಜತಾಂತ್ರಿಕತೆ ’ಯನ್ನು ನಿರಾಕರಿಸಿದ ಸದಸ್ಯರು ಅವರನ್ನು ‘ರೈತ ವಿರೋಧಿ’ ಎಂದು ಕರೆದಿದ್ದರು.

   ಇದರ ಬೆನ್ನಲ್ಲೇ ಹರಿವಂಶ್ ರನ್ನು ಬೆಂಬಲಿಸಿ ಟ್ವೀಟಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ತನ್ನ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದವರಿಗಾಗಿ ಚಹಾ ಒಯ್ದಿದ್ದ ಹರಿವಂಶ್ ಜಿ ಅವರ ಈ ನಡೆ ಅವರು ಎಷ್ಟೊಂದು ವಿನಮ್ರ ಮತ್ತು ಉದಾರ ಹೃದಯಿಗಳಾಗಿದ್ದಾರೆ ಎನ್ನುವುದನ್ನು ತೋರಿಸಿದೆ ’ಎಂದಿದ್ದಾರೆ.

 ಚಹಾ ನಿರಾಕರಣೆಯಿಂದ ಮುಖಭಂಗಗೊಂಡ ಹರಿವಂಶ ಸಂಸತ್ತಿನಲ್ಲಿ ತನ್ನ ಮೇಲೆ ಪ್ರತಿಪಕ್ಷ ಸದಸ್ಯರ ಹಲ್ಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರದವರೆಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು.

  ಚಹಾ ನೀಡಲು ಮುಂದಾಗಿದ್ದ ಹರಿವಂಶ ಅವರ ನಡೆಗೆ ಪ್ರತಿಕ್ರಿಯಿಸಿದ ಆಝಾದ್,‘ನಾನು ಅದನ್ನು ಮೆಚ್ಚುತ್ತೇನೆ. ನಾವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರಬಹುದು,ಆದರೆ ನಾವು ಒಂದು ಕುಟುಂಬವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.

 ಬೇಷರತ್ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ. ಸರಕಾರವು ರೈತರ ಕ್ಷಮೆಯನ್ನು ಯಾಚಿಸಬೇಕು ಎಂದು ಅಮಾನತುಗೊಂಡಿರುವ ಸಿಪಿಎಂ ಸದಸ್ಯ ಕೆ.ಕೆ.ರಾಗೇಶ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)