varthabharthi


ನಿಮ್ಮ ಅಂಕಣ

ನೂತನ ಶಿಕ್ಷಣ ನೀತಿ: ಅನುಷ್ಠಾನಕ್ಕೆ ಶಿಕ್ಷಕರು ಎಲ್ಲಿದ್ದಾರೆ?

ವಾರ್ತಾ ಭಾರತಿ : 23 Sep, 2020
ಭಗವಾನ್ ಚೌಧರಿ

ನೂತನ ಶಿಕ್ಷಣ ನೀತಿ ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿದೆ ಆದರೆ ಈ ಗುರಿಗಳನ್ನು ಹೇಗೆ ಸಾಧಿಸಲಾಗುವುದು? ಎಂಬ ಬಗ್ಗೆ ಅದರಲ್ಲಿ ಬಹಳ ವಿವರಗಳಿಲ್ಲ. ಗುರಿಗಳಲ್ಲಿ ಹಲವು ಗುರಿಗಳು ವಿಶೇಷವಾಗಿ ಮೊದಲ ಹಂತದ ಶಿಕ್ಷಣಕ್ಕೆ ಸಂಬಂಧಿಸಿದವುಗಳು ಪ್ರಶಂಸಾರ್ಹ ಹಾಗೂ ಅವಶ್ಯಕ. ಮಾಡಿ ಕಲಿ, ಸೃಜನಶೀಲತೆ ಹಾಗೂ ಶೋಧನೆ, ಪ್ರಶ್ನಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸುವುದು -ಇತ್ಯಾದಿ ಯಶಸ್ವಿಯಾದಲ್ಲಿ ಶಿಕ್ಷಣದಲ್ಲಿ ನಿಜವಾಗಿಯೂ ಮಹತ್ವಪೂರ್ಣ ಬದಲಾವಣೆಗಳಾದವು.

ಆದರೆ ಇವುಗಳನ್ನೆಲ್ಲ ಕಾರ್ಯಗತಗೊಳಿಸಲು ನಾವು ಶಿಕ್ಷಕರನ್ನು ಎಲ್ಲಿಂದ ತರುವುದು? ಈಗ ಇರುವ ಸಾಕಷ್ಟು ಸಿದ್ಧತೆಗಳಿಲ್ಲದ ಮತ್ತು ಹಲವು ವೇಳೆ ಗೈರು ಹಾಜರಾಗುವ ಶಿಕ್ಷಕರನ್ನು ಬದಲಾಯಿಸುವುದು ಸಾಧ್ಯವಾದೀತೇ? ಶಿಕ್ಷಕ ವೃತ್ತಿಗೆ ಬೇಕಾದ ಅರ್ಹತೆಯನ್ನು ಹೆಚ್ಚಿಸಬೇಕೆನ್ನುವುದು ಈ ಬಗ್ಗೆ ಕೇಳಿ ಬಂದಿರುವ ಒಂದು ಸೂಚನೆ. ಆದರೆ ಶಿಕ್ಷಕ ಓರ್ವ ತಜ್ಞನೆಂದು ತಿಳಿಯುವುದು ತಪ್ಪಾಗಬಹುದು. ಬದಲಾಗಿ ಆತ/ಆಕೆ ಓರ್ವ ಪ್ರೇರಕ /ಕಿ, ಸ್ಫೂರ್ತಿ ನೀಡುವಾತ, ಆಪ್ತ ಸಮಾಲೋಚಕ, ಓರ್ವ ಗುರು ಎಂದು ಪರಿಗಣಿಸುವುದು ಹೆಚ್ಚು ಸೂಕ್ತ.

ಯಾವುದೇ ಒಂದು ರಂಗದಲ್ಲಿ ಆಳವಾದ ಜ್ಞಾನ ಹೊಂದಿರುವಾತ ಗುರು. ಆದರೆ ನಮ್ಮ 21ನೇ ಶತಮಾನದ ಗುರು ಅಥವಾ ಶಿಕ್ಷಕ ಕೌಶಲ್ಯವನ್ನು, ಜ್ಞಾನವನ್ನು ಎಲ್ಲಿಂದ ಪಡೆಯಬೇಕು?. ಅದು ಎಲ್ಲಿದೆ ಎಂದು ತಿಳಿದಿದ್ದರೆ ಸಾಕು; ದಾಸ್ತಾನಾಗಿರುವ ಆ ಜ್ಞಾನವನ್ನು ಆಧುನಿಕ ತಂತ್ರಜ್ಞಾನ ಬಳಸಿ, ಅಂತರ್ಜಾಲ/ ಆನ್‌ಲೈನ್ ಮೂಲಕ ಬೇಕಾದಾಗ ಪಡೆದುಕೊಳ್ಳಬಹುದು. ಹೀಗೆ ಶಿಕ್ಷಕ ಓರ್ವ ಮಾರ್ಗದರ್ಶಿ, ಮಾನಿಟರ್, ಉಸ್ತುವಾರಿ ನೋಡಿಕೊಳ್ಳುವವ ಓರ್ವ ಕ್ಯುರೇಟರ್ ಆಗುತ್ತಾನೆ. ಇದು ಶುಭ ಸುದಿ.್ದ ಯಾಕೆಂದರೆ ಕಡಿಮೆ ತರಬೇತಿ ಮತ್ತು ಅರ್ಹತೆಗಳನ್ನು ಹೊಂದಿ ಹೀಗೆ ಕ್ಯುರೇಟರ್‌ಗಳಾಗಬಹುದಾದ ಶಿಕ್ಷಕರು ನಮಗೆ ಬೃಹತ್ ಸಂಖ್ಯೆಯಲ್ಲಿ ಬೇಕು. ತಂತ್ರಜ್ಞಾನ ಅತ್ಯುತ್ಸಾಹಿಗಳು, ಆಶಾವಾದಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮಗೆ ಕ್ಯುರೇಟರ್‌ಗಳು ಕೂಡ ಬೇಡ, ಅವರ ಸ್ಥಾನದಲ್ಲಿ ತಂತ್ರಜ್ಞಾನ ಮತ್ತು ಬುದ್ಧಿವಂತ (ಇಂಟಲಿಜೆಂಟ್) ಸರ್ಚ್ ಇಂಜಿನ್‌ಗಳನ್ನು ಕುಳ್ಳಿರಿಸಬಹುದು ಎಂದು ಹೇಳಿಯಾರು. ಆದರೆ ನಾನು ಇದನ್ನು ಒಪ್ಪುವುದಿಲ್ಲ. ಯಾಕೆಂದರೆ ಶಿಕ್ಷಕನೊಬ್ಬ ಕೇವಲ ಕ್ಯುರೇಟರ್ ಅಷ್ಟೇ ಅಲ್ಲ ಆತನೊಂದಿಗೆ ಅವನ ಶಿಷ್ಯರು ಆಳವಾದ ಸಂಬಂಧವನ್ನು ಏರ್ಪಡಿಸಿಕೊಳ್ಳುತ್ತಾರೆ. ಅಂತಹ ಸಂಬಂಧಗಳು ಸಾಧ್ಯವಾಗುವಂತಹ ಗುರು ಆತ.

ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕನಾಗಿ ಪಡೆದ ಅನುಭವದ ಆಧಾರದಲ್ಲಿ ಹೇಳುತ್ತೇನೆ: ಪಠ್ಯಪುಸ್ತಕಗಳಿಗಿಂತ ಮಿಗಿಲಾಗಿ ವಿದ್ಯಾರ್ಥಿಗಳು ಶಿಕ್ಷಕರಿಂದ ಮುಖತಃ ಕಲಿಯುವುದನ್ನು ಹೆಚ್ಚು ಇಷ್ಟ ಪಡುತ್ತಾರೆ. ಯಾಕೆಂದರೆ ಆತ ತರಗತಿಯಲ್ಲಿ ಅವರಿಗೆ ಯಾವುದು ಮುಖ್ಯ, ಯಾವುದು ಮುಖ್ಯವಲ್ಲ, ಯಾವುದು ಅರ್ಥಪೂರ್ಣ, ಯಾವುದು ಕ್ಷುಲ್ಲಕ ಎಂದು ಒತ್ತಿ ಹೇಳಿ ಮನವರಿಕೆ ಮಾಡಿಸಬಲ್ಲ. ಆತ ಉದಾಹರಣೆಗಳನ್ನು, ಹೋಲಿಕೆಗಳನ್ನು ನೀಡಿ, ಪ್ರಶ್ನೆಗಳನ್ನು ಉತ್ತರಿಸುತ್ತಾ, ಹಾಸ್ಯ ಚಟಾಕಿಗಳನ್ನು ಹಾರಿಸಿ ವಿದ್ಯಾರ್ಥಿಗಳು ತರಗತಿಯಲ್ಲಿ ಲವಲವಿಕೆಯಿಂದ ಇರುವಂತೆ ಮಾಡಬಲ್ಲ. ಅಂತರ್ಜಾಲ ತಂತ್ರಜ್ಞಾನ, ಆನ್‌ಲೈನ್ ಇದನ್ನು ಮಾಡಲಾರದು. ಇದು ತತ್ವಜ್ಞಾನಿ ಸಾಕ್ರೆಟಿಸ್‌ನ ವಿಧಾನ.

ಭಾರತದ ಗುರುಕುಲ ಪರಂಪರೆಯಲ್ಲಿ ಓರ್ವ ಗುರು/ಶಿಕ್ಷಕ ಇದೇ ವಿಧಾನವನ್ನು ಅನುಸರಿಸುತ್ತಿದ್ದ. ಆದ್ದರಿಂದ 21ನೇ ಶತಮಾನದಲ್ಲಿ ಪರಿಣಾಮಕಾರಿ ಶಿಕ್ಷಕರನ್ನು ಸಿದ್ದಗೊಳಿಸಲು ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿ ಯಂತಹ ದೊಡ್ಡ ದೊಡ್ಡ ಪದವಿಗಳನ್ನು ಹೊಂದಿರುವ ಶಿಕ್ಷಕರ ಒಂದು ಸೇನೆ ನಮಗೆ ಬೇಕಾಗಿಲ್ಲ. ನಮಗೆ ಬೇಕಾಗುವುದು ಜ್ಞಾನದ ಸರಿಯಾದ ಮೂಲ, ಸರಿಯಾದ ಮಾಹಿತಿ ಮತ್ತು ಸರಿಯಾದ ನೈಪುಣ್ಯವನ್ನು ಎಲ್ಲಿ ಹುಡುಕಬೇಕು, ಎಲ್ಲಿಂದ ಪಡೆಯಬೇಕು ಎಂಬುದನ್ನು ತಿಳಿದಿರುವ ಮಾನವತಾವಾದಿಗಳು. ಇದಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾದ ಬಲ್ಲವರು ಹಾಗೂ ಆಪ್ತ ಸಮಾಲೋಚಕರಾಗ ಬಲ್ಲವರು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಶಿಕ್ಷಣಕ್ಕೆ ಪರಿಣಾಮಕಾರಿಯಾದ ಒಂದು ಪರಿಹಾರ: ಒಂದು ಕಸಿ (ಹೈಬ್ರಿಡ್) ಪರಿಹಾರ. ತಜ್ಞರು ಅತ್ಯುತ್ತಮವಾದ ವಸ್ತು/ವಿಷಯಗಳನ್ನು (ಕಂಟೆಂಟ್) ಅಭಿವೃದ್ಧಿಪಡಿಸಿ ಆನ್‌ಲೈನ್ ವೀಡಿಯೊ ದಾಖಲು ಮಾಡಿಕೊಳ್ಳಲಾದ ಸಂಭಾಷಣೆ ಹಾಗೂ ಪರಸ್ಪರ ವಿನಿಮಯ ಇಂಟರ್‌ಆ್ಯಕ್ಟಿವ್ ಅಭ್ಯಾಸಗಳಂತಹ ರೂಪಗಳಲ್ಲಿ ವಿದ್ಯಾರ್ಥಿಗಳಿಗೆ ಲಭಿಸುವಂತೆ ಮಾಡುತ್ತಾರೆ. ಆದರೂ ಆಗ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು, ಫಾಲೋಆಫ್ ಮಾಡಿ, ಅವರಿಗೆ ನೀಡಲಾದ ಅಭ್ಯಾಸಗಳನ್ನು (ಎಕ್ಸರ್‌ಸೈಸ್) ಅವರು ಮಾಡಿದ್ದಾರೆಂದು ಖಚಿತಪಡಿಸಿಕೊಳ್ಳಲು ನಮಗೆ ಶಿಕ್ಷಕರು ಬೇಕಾಗುತ್ತಾರೆ. ಮಾನವ ಸಂಪನ್ಮೂಲ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಶಿಷ್ಯರಿಗೆ ಸ್ಫೂರ್ತಿ ಬೇಕಾಗುತ್ತದೆ, ಸ್ಫೂರ್ತಿಯ ಹೊರತಾಗಿ ಹೆಚ್ಚು ಕಲಿಕೆ ಸಾಧ್ಯವಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಬಲ್ಲರು.
    
(ಲೇಖಕರು ಇಂಡಿಯನ್ ಸ್ಕೂಲ್ ಆಫ್ ಬಿಝಿನೆಸ್‌ನಲ್ಲಿ ಹಣಕಾಸು ಪ್ರಾಧ್ಯಾಪಕರು ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಸುಮಾರು ಮೂವತ್ತು ವರ್ಷ ಅಧ್ಯಾಪನ ಮಾಡಿದ್ದಾರೆ).

ಕೃಪೆ: deccanherald

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)