varthabharthi


ಕರಾವಳಿ

ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ ನಿಧನ

ವಾರ್ತಾ ಭಾರತಿ : 23 Sep, 2020

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

'ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್' ಸ್ಥಾಪಿಸಿ ಸುಮಾರು 15 ವರ್ಷಗಳಿಗೂ ಅಧಿಕ ಕಾಲ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಇಬ್ರಾಹಿಂ ಹಾಜಿ ಅವರು ದ.ಕ.ಜಿಲ್ಲೆಯಲ್ಲಿ ಹಲವು ಮಸೀದಿಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇಬ್ರಾಹಿಂ ಹಾಜಿ ಅವರು ಉದ್ಯಮಿಯಾಗಿದ್ದು, ಕಮ್ಮಾಡಿ ಫ್ಲೈವುಡ್ ಮತ್ತು ಬ್ಲಾಕ್ ಬೋರ್ಡ್ ಸಂಸ್ಥೆಯ ಮಾಲಕರಾಗಿದ್ದರು. ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಂಪ್ಯದಲ್ಲಿರುವ ಕಮ್ಮಾಡಿ ಮೈದಾನದಲ್ಲಿ ಬೃಹತ್ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿದ್ದು, ಅದರ ಕಾಮಗಾರಿ ಪ್ರಗತಿಯಲ್ಲಿದೆ. ಕಮ್ಮಾಡಿ ಮಸೀದಿ, ತಿಂಗಳಾಡಿ ಮಸೀದಿ, ದರ್ಬೆ  ಮಸೀದಿ ಸೇರಿದಂತೆ ಹಲವು ಕಡೆಗಳಲ್ಲಿ ಮಸೀದಿ ನಿರ್ಮಾಣ ಕಾರ್ಯ ನಡೆಸಿರುವ ಅವರು ನೂರಾರು ಮಸೀದಿಗಳ ನಿರ್ಮಾಣಕ್ಕೆ ಧನ ಸಹಾಯವನ್ನು ಮಾಡಿದ್ದರು. ಅಲ್ಲದೆ ಬಡ, ಅನಾಥ ಹೆಣ್ಣು ಮಕ್ಕಳ ಮದುವೆ, ಶಿಕ್ಷಣ ಇನ್ನಿತರ ಅವಶ್ಯಕತೆಗಳಿಗೆ ಧನ ಸಹಾಯ ನೀಡುತ್ತಾ ಕೊಡುಗೈ ದಾನಿ ಎನಿಸಿಕೊಂಡಿದ್ದರು.

ಕಮ್ಮಾಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಇಫ್ಲುಲ್ ಖುರ್‍ಆನ್ ತರಗತಿಯನ್ನು ನಡೆಸಲು ಕ್ರಮ ಕೈಗೊಂಡಿದ್ದ ಅವರು ನೂರಾರು ವಿದ್ಯಾರ್ಥಿಗಳಿಗೆ ಉಚಿತ ವಾಸ್ತವ್ಯದೊಂದಿಗೆ ಶಿಕ್ಷಣ ಪಡೆಯಲು ವ್ಯವಸ್ಥೆಗೊಳಿಸಿದ್ದರು.

ಕಮ್ಮಾಡಿಯಲ್ಲಿ ನಡೆಸಲ್ಪಡುತ್ತಿದ್ದ ಝಹ್‍ರಬತುಲ್ ವುಮೆನ್ಸ್ ಕಾಲೇಜ್ ಇದರ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. 

ಖಬ್‍ರ್ ನಿರ್ಮಾಣ

ಕಮ್ಮಾಡಿ ಹಾಜಿ ಅವರು ತನಗಾಗಿ ಮೊದಲೇ ಖಬ್‍ರ್ ನಿರ್ಮಿಸಿಕೊಂಡಿದ್ದರು. ಕಮ್ಮಾಡಿ ಮಸೀದಿಯ ಪಕ್ಕದಲ್ಲಿ ತನಗಾಗಿ ಖಬ್‍ರ್ ನಿರ್ಮಾಣ ಮಾಡಿಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)