varthabharthi


ರಾಷ್ಟ್ರೀಯ

ನಟಿಯಿಂದ ಅತ್ಯಾಚಾರ ಆರೋಪ

ಚಿತ್ರನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಎಫ್‌ಐಆರ್ ದಾಖಲು

ವಾರ್ತಾ ಭಾರತಿ : 23 Sep, 2020

ಮುಂಬೈ, ಸೆ. 23: ನಟಿಯೊಬ್ಬರು ತನ್ನ ಮೇಲೆ 2013ರಲ್ಲಿ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿದ ಬಳಿಕ ಚಿತ್ರ ನಿರ್ದೇಶಕ ಅನುರಾಗ ಕಶ್ಯಪ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಈ ಆರೋಪವನ್ನು ಅನುರಾಗ ಕಶ್ಯಪ್, ಆಧಾರ ರಹಿತ ಎಂದು ನಿರಾಕರಿಸಿದ್ದಾರೆ. ನಟಿ ತನ್ನ ವಕೀಲ ನಿತಿನ್ ಸತ್ಪುತೆ ಅವರೊಂದಿಗೆ ಆಗಮಿಸಿ ನೀಡಿದ ದೂರಿನ ಹಿನ್ನೆಲೆಯಲ್ಲಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಡ ರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. 7 ವರ್ಷ ಹಿಂದಿನ ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಲು ಅನುರಾಗ್ ಕಶ್ಯಪ್ ಅವರಿಗೆ ಕರೆ ನೀಡಲಾಗುವುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ 2013ರಲ್ಲಿ ವರ್ಸೋವಾದ ಯಾರಿ ರಸ್ತೆಯ ಸನಿಹದ ಸ್ಥಳದಲ್ಲಿ ಅನುರಾಗ್ ಕಶ್ಯಪ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದಾರೆ.

ನಟಿ ಹಾಗೂ ಅವರ ವಕೀಲರು ಆರಂಭದಲ್ಲಿ ಓಶಿವಾರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಆದರೆ, ಅಲ್ಲಿನ ಪೊಲೀಸ್ ಅಧಿಕಾರಿ ವರ್ಸೋವಾ ಪೊಲೀಸ್ ರಾಣೆಯನ್ನು ಸಂಪರ್ಕಿಸುವಂತೆ ಸೂಚಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)