varthabharthi


ರಾಷ್ಟ್ರೀಯ

ಕೊರೋನದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ

ವಾರ್ತಾ ಭಾರತಿ : 23 Sep, 2020

ಬೆಂಗಳೂರು, ಸೆ.23: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಕೊರೋನ ಸೋಂಕಿನ ಕಾರಣದಿಂದ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೋವಿಡ್ ಸೋಂಕು ತಗಲಿತ್ತು. ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದರೂ ಸುರೇಶ್ ಅಂಗಡಿ ಅವರು ವೈದ್ಯರ ಸಲಹೆ ಮೇರೆಗೆ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿದವು.

ಸಂಸತ್ ಅಧಿವೇಶನಕ್ಕೂ ಮುನ್ನ ಎಲ್ಲಾ ಸಂಸದರಿಗೂ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ ಸುರೇಶ್ ಅಂಗಡಿ ಅವರಿಗೆ ಸೋಂಕು ಪಾಸಿಟಿವ್ ಕಾಣಿಸಿಕೊಂಡಿತ್ತು. ಶ್ವಾಸಕೋಶದ ಸೋಂಕಿಗೆ ಗುರಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.

ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ 1955ರ ಜೂನ್ 1ರಂದು ತಂದೆ ಚನ್ನಬಸಪ್ಪ ಅಂಗಡಿ, ತಾಯಿ ಸೋಮವ್ವ ಅಂಗಡಿ ದಂಪತಿಗಳ ಪುತ್ರನಾಗಿ ಜನಿಸಿದ್ದ ಸುರೇಶ್ ಅಂಗಡಿ, ಮಂಗಳ ಅಂಗಡಿಯವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಬೆಳಗಾವಿ ಜಿಲ್ಲೆಯವರಾದ ಸುರೇಶ್ ಅಂಗಡಿ ಅವರು ಆರ್.ಎಲ್. ಕಾನೂನು ಕಾಲೇಜ್‍ನಲ್ಲಿ ಕಾನೂನು ಪದವೀಧರರಾಗಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

1996 ರಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿಯ ಉಪಾಧ್ಯಕ್ಷರಾಗಿ, 1999ರಲ್ಲಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, 2001ರಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 2004ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆಲುವು, 2009ರಲ್ಲಿ ಎರಡನೇ ಬಾರಿ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆ, 2014ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆ, 2019ರಲ್ಲಿ 4ನೇ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದ ಅವರು ಮೇ 30 ರಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ರೈಲ್ವೆ ಖಾತೆ ಸಚಿವರಾಗಿದ್ದರು. ಅಲ್ಲದೆ, 19 ಜುಲೈ 2016 ರಿಂದ 25 ಮೇ 2019ರ ವರೆಗೆ ಪಾರ್ಲಿಮೆಂಟ್ ಹೌಸ್ ಕಮಿಟಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವರಾದ ಅಧಿಕಾರ ಸ್ವೀಕರಿಸಿದ ಬಳಿಕ ಅನೇಕ ರೈಲ್ವೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಒಟ್ಟಾರೆ ಸುರೇಶ್ ಅಂಗಡಿ ಅವರ ನಿಧನದಿಂದ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಅಂಧಕಾರ ಮೂಡಿದ್ದು, ಕುಟುಂಬಸ್ಥರು, ಸಂಬಂಧಿಕರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ದುಃಖ ಮಡುಗಟ್ಟಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)