varthabharthi


ನಿಮ್ಮ ಅಂಕಣ

64 ವರ್ಷಗಳ ನಂತರ ಈಗೇಕೆ ಎಲ್‌ಐಸಿಯ ಶೇರು ವಿಕ್ರಯ?

ವಾರ್ತಾ ಭಾರತಿ : 24 Sep, 2020
ಪ್ರಭಾಕರ ಬಿ. ಕುಂದರ್ ಪ್ರಧಾನ ಕಾರ್ಯದರ್ಶಿ ವಿಮಾ ನೌಕರರ ಸಂಘ, ಉಡುಪಿ ವಿಭಾಗ

ಸ್ವಾತಂತ್ರ್ಯೋತ್ತರ ಭಾರತದ ಸ್ವಾವಲಂಬನೆಗೆ ಅಗತ್ಯವಾಗಿದ್ದ ಮೂಲ ಸೌಕರ್ಯಗಳ ನಿರ್ಮಾಣ, ಬೃಹತ್ ಕೈಗಾರಿಕೆಗಳ ನಿರ್ಮಾಣಕ್ಕೆ ದೊಡ್ಡ ಮೊತ್ತದ ಬಂಡವಾಳದ ಅವಶ್ಯಕತೆಗಳಿರುವ ಸಂದರ್ಭದಲ್ಲಿ ವಿಮಾ ವ್ಯವಹಾರಗಳನ್ನು ರಾಷ್ಟ್ರೀಕರಣ ಮಾಡಬೇಕಾದ ಅವಶ್ಯಕತೆಗಳಿತ್ತು. ಅಂದು ದೇಶದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಬಂಡವಾಳವನ್ನು ಹೂಡುವ ಕೈಗಾರಿಕೋದ್ಯಮಿಗಳು ಇಲ್ಲದಿದ್ದುದರಿಂದ ಮತ್ತು ವಿಮಾ ವ್ಯವಹಾರಗಳನ್ನು ನಡೆಸುತ್ತಿದ್ದ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಹಾಗೂ ಪಾಲಿಸಿದಾರರಿಗೆ ಯಾವುದೇ ಭದ್ರತೆ ಇಲ್ಲದ ಕಾರಣ ವಿಮಾ ವ್ಯವಹಾರ ನಡೆಸುತ್ತಿದ್ದ 247 ಖಾಸಗಿ ಸಂಸ್ಥೆಗಳನ್ನು ಒಗ್ಗೂಡಿಸಿ ರಾಷ್ಟ್ರೀಕೃತ ಭಾರತೀಯ ಜೀವ ವಿಮಾ ಕಂಪೆನಿಯನ್ನು ಸ್ಥಾಪಿಸಲಾಯಿತು.

ಎಲ್‌ಐಸಿಯು ಅಸ್ತಿತ್ವಕ್ಕೆ ಬಂದ ನಂತರ ಪಾಲಿಸಿದಾರರ ಹಣಕ್ಕೆ ಭದ್ರತೆ ಒದಗಿಸುವ ಜೊತೆ ಜೊತೆಗೆ ದೇಶ ನಿರ್ಮಾಣಕ್ಕೆ ಬೇಕಾದ ಬಂಡವಾಳವನ್ನು ಕ್ರೋಡೀಕರಿಸುತ್ತಿದೆ. ಭಾರತೀಯ ಜೀವ ವಿಮಾ ನಿಗಮದ 64 ವರ್ಷಗಳ ಈ ಪಯಣವನ್ನು ಗಮನಿಸಿದಾಗ ಅದು ತನ್ನ ರಾಷ್ಟ್ರೀಕರಣದ ಮೂಲ ಉದ್ದೇಶವನ್ನು ಸಂಪೂರ್ಣವಾಗಿ ಈಡೇರಿಸಿದೆ ಮತ್ತು ಈ ದೇಶದ ಮೂಲೆ ಮೂಲೆಗಳಿಗೂ ವಿಮಾ ಸಂದೇಶವನ್ನು ಪಸರಿಸಿದೆ.

ಭಾರತೀಯ ಜೀವ ವಿಮಾ ನಿಗಮವು ಈ ದೇಶದ ಅತಿ ದೊಡ್ಡ ಆರ್ಥಿಕ ಸಂಸ್ಥೆಯಾಗಿದೆ. ಸುಮಾರು 40 ಕೋಟಿ ಪಾಲಿಸಿದಾರರನ್ನು ಹೊಂದಿರುವ ಅದು ವಿಶ್ವದ ಅತೀ ದೊಡ್ಡ ವಿಮಾ ಸಂಸ್ಥೆಗಳಲ್ಲಿ ಪ್ರಮುಖವಾದುದು. ದೇಶದ ಜನತೆಗೆ ನೀಡಿದ ಭರವಸೆಯನ್ನು ತಪ್ಪದೆ ಪರಿಪಾಲಿಸುತ್ತಿರುವ ಈ ಸಂಸ್ಥೆಯು ಶೇ.99.6ರಷ್ಟು ದಾವೆ (ಕ್ಲೈಮ್ಸ್)ಗಳನ್ನು ಇತ್ಯರ್ಥಗೊಳಿಸುವ ಮೂಲಕ ಒಂದು ವಿಶ್ವಾಸಾರ್ಹ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1956ರಲ್ಲಿ ಸರಕಾರ ತೊಡಗಿಸಿದ್ದು ಕೇವಲ 5 ಕೋಟಿ ರೂ. ಬಂಡವಾಳ (ಮುಂದೆ 2011ರಲ್ಲಿ ಈ ಬಂಡವಾಳ 100 ಕೋಟಿ ರೂ.ಗೆ ಒಂದು ಶಾಸನಾತ್ಮಕವಾಗಿಯಷ್ಟೇ ಏರಿಸಲಾಗಿದೆ). ಈ ಬಂಡವಾಳಕ್ಕೆ ಪ್ರತಿಯಾಗಿ ಸರಕಾರಕ್ಕೆ ಎಲ್‌ಐಸಿಯು ಈವರೆಗೆ 26,000 ಕೋಟಿ ರೂ. ನೀಡಿದೆ. ಕಳೆದ ವರ್ಷ 2,611 ಕೋಟಿ ರೂ. ಲಾಭಾಂಶವಾಗಿ ನೀಡಿದೆ.

ಇತ್ತೀಚಿನ ಅಂಕಿ-ಅಂಶಗಳನ್ನು ನೋಡಿ:

* ಎಲ್‌ಐಸಿಯ ಒಟ್ಟು ಆಸ್ತಿ 32 ಲಕ್ಷ ಕೋಟಿ ರೂ. * ಇಲ್ಲಿಯವರೆಗೆ ಪಂಚವಾರ್ಷಿಕ ಯೋಜನೆಗಳಲ್ಲಿ ಹೂಡಿರುವ ಒಟ್ಟು ಮೊತ್ತ 29 ಲಕ್ಷ ಕೋಟಿ ರೂ.

* ಭಾರತೀಯ ರೈಲ್ವೆಯಲ್ಲಿ 1,50,000 ಕೋಟಿ ರೂ. ಹೂಡಿಕೆ ಮಾಡಿದೆ.

* ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 1,25,000 ಕೋಟಿ ರೂ. ನೀಡಲು ಒಪ್ಪಿಕೊಂಡಿದೆ.

* ಪ್ರತೀ ವರ್ಷ 3.5ರಿಂದ 4.5 ಲಕ್ಷ ಕೋಟಿ ರೂ.ಗಳಷ್ಟು ತೊಡಗಿಸಬಹುದಾದ ಬಂಡವಾಳವನ್ನು ಕ್ರೋಡೀಕರಿಸುತ್ತಿದೆ.

ಒಟ್ಟಾರೆಯಾಗಿ ಎಲ್‌ಐಸಿಯು ‘ಜನರ ಉಳಿತಾಯ ಜನ ಕಲ್ಯಾಣಕ್ಕಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಆರ್ಥಿಕತೆ ಮತ್ತು ದೇಶ ನಿರ್ಮಾಣದ ಕಾರ್ಯದಲ್ಲಿ ಎಂದೆಂದಿಗೂ ನಿರತವಾಗಿದೆ.

ನವ ಉದಾರೀಕರಣದ ಕರಿನೆರಳು:

 90ರ ದಶಕದಲ್ಲಿ ಆರ್ಥಿಕ ಸುಧಾರಣೆಗಳ ಅಲೆಯೆದ್ದು ನಮ್ಮ ದೇಶವೂ ನವ ಉದಾರೀಕರಣದ ನೀತಿಗಳನ್ನು ಅಪ್ಪಿಕೊಳ್ಳಲು ಆರಂಭಿಸುತ್ತಿದ್ದಂತೆ ಅದರ ಛಾಯೆಯು ಆರ್ಥಿಕ ವಲಯ ಮತ್ತು ಸೇವಾ ವಲಯದ ಮೇಲೆಯೂ ಬೀಳಲಾರಂಬಿಸಿತು. ಅದರ ಭಾಗವಾಗಿ ವಿಮಾ ಕ್ಷೇತ್ರಗಳ ಸುಧಾರಣೆಗಾಗಿ 1991ರಲ್ಲಿ ಸರಕಾರವು ಮಲ್ಹೋತ್ರ ಸಮಿತಿಯನ್ನು ನೇಮಿಸಿತು. ಈ ಸಮಿತಿಯು ಎಲ್‌ಐಸಿಯ ಶೇರು ಬಂಡವಾಳವನ್ನು ನೂರು ಕೋಟಿ ರೂಪಾಯಿಗೆ ಏರಿಸಿ ಅದರ ಶೇ.50ರಷ್ಟು ಶೇರುಗಳನ್ನು ಖಾಸಗಿಯವರಿಗೆ ಮಾರುವಂತೆ ಶಿಫಾರಸು ಮಾಡಿತ್ತು. ಈ ನೀತಿಯ ವಿರುದ್ಧ ಅಂದಿನಿಂದ AIIEA ಯ ನೇತೃತ್ವದಲ್ಲಿ ತೀವ್ರ ಹೋರಾಟ ಆರಂಭವಾಯಿತು. ಖಾಸಗೀಕರಣದ ವಿರುದ್ಧ ದೇಶದಾದ್ಯಂತ 1.5 ಕೋಟಿ ಸಹಿ ಸಂಗ್ರಹಿಸಲಾಯಿತು. ಕೊನೆಗೆ 1999ರಲ್ಲಿ ವಾಜಪೇಯಿ ನೇತೃತ್ವದ ಸರಕಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಮಸೂದೆ ಅಂಗೀಕರಿಸುವ ಮೂಲಕ ಶೇ.26ರಷ್ಟು ವಿದೇಶಿ ಬಂಡವಾಳದೊಂದಿಗೆ ಖಾಸಗಿ ವಿಮಾ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದರೂ ಎಲ್‌ಐಸಿಯು ಸಂಪೂರ್ಣ ಸಾರ್ವಜನಿಕ ವಲಯದಲ್ಲೇ ಮುಂದುವರಿದಿದೆ. ಎರಡು ದಶಕಗಳ ತೀವ್ರ ಸ್ಪರ್ಧೆಯ ನಡುವೆಯೇ ಇಂದಿಗೂ ಭಾರತದ ವಿಮಾ ಮಾರುಕಟ್ಟೆಯ ಅಗ್ರನಾಯಕನಾಗಿ ಮುಂದುವರಿದಿದೆ.

ಭಾರತೀಯ ಜೀವ ವಿಮಾ ನಿಗಮ ಇಂತಹ ಅದ್ಭುತ ಸಾಧನೆ ಮಾಡುತ್ತಿದ್ದರೂ ಸರಕಾರಗಳು ಈ ಸಂಸ್ಥೆಯನ್ನು ದುರ್ಬಲಗೊಳಿಸುವ ಖಾಸಗೀಕರಣದ ತಮ್ಮ ಪ್ರಯತ್ನಗಳನ್ನು ಮುಂದುವರಿಸಿವೆ. 2008ರಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ. 49ಕ್ಕೆ ಹೆಚ್ಚಿಸಲಾಗಿದೆ. 2011ರಲ್ಲಿ ತಿದ್ದುಪಡಿ ತರುವ ಮೂಲಕ ಎಲ್‌ಐಸಿಯ ಬಂಡವಾಳವನ್ನು ನೂರು ಕೋಟಿ ರೂ.ಗೆ ಏರಿಸಲಾಗಿದೆ. ಎಲ್‌ಐಸಿಯ ಖಾಸಗೀಕರಣಕ್ಕೆ ಸರಕಾರ ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ನಮ್ಮ ಸಂಘಟನೆಯು ಪ್ರಚಾರಾಂದೋಲನದ ಮೂಲಕ ಜನರ ಬೆಂಬಲ ಗಳಿಸಿದ ಕಾರಣ ಅದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ.

ಕಾರ್ಪೊರೇಟ್‌ಗಳಿಗಾಗಿ ಹುಸಿ ತರ್ಕಗಳು

ಇದೀಗ ಆಡಳಿತದಲ್ಲಿರುವ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಅದು ಅನುಸರಿಸುತ್ತಿರುವ ನೀತಿಗಳಿಂದಾಗಿ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲಕಿದೆ. ಈ ಸಂಕಷ್ಟಕ್ಕೆ ಪರಿಹಾರವಾಗಿ ಸರಕಾರ ಬಜೆಟ್‌ನಲ್ಲಿ ಎಲ್‌ಐಸಿಯ ಶೇರು ವಿಕ್ರಯದ ಪ್ರಸ್ತಾಪ ಮಾಡಿರುವುದು ಮಾತ್ರವಲ್ಲ ಅದರ ಮುಂದುವರಿದ ಭಾಗವಾಗಿ ಎಲ್‌ಐಸಿಯ ಶೇರು ವಿಕ್ರಯದ ಮೌಲ್ಯಮಾಪನ ಮಾಡಲು ಡಿಲೈಟ್ ಸಂಸ್ಥೆಯನ್ನು ನಿಯೋಜಿಸಿದೆ. ಎಲ್‌ಐಸಿ ಶೇರುಗಳ ಮಾರಾಟವನ್ನು ಸಮರ್ಥಿಸಿಕೊಳ್ಳಲು ಸರಕಾರವು ಕೆಲವೊಂದು ತರ್ಕಗಳನ್ನು ಮುಂದಿಟ್ಟಿದೆ. ಅವುಗಳಲ್ಲಿ ಮೊದಲನೆಯದು ಎಲ್‌ಐಸಿಯ ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಬರುತ್ತದೆ ಎಂಬುದು. ಇದು ಖಂಡಿತವಾಗಿಯೂ ಹುಸಿ ವಾದವಾಗಿದೆ. ಏಕೆಂದರೆ ಎಲ್‌ಐಸಿ ನಿರ್ವಹಣೆಯ ಎಲ್ಲ ಮಾಹಿತಿಗಳನ್ನು ಸಂಸತ್ತಿಗೆ ಸಲ್ಲಿಸುತ್ತ ಬಂದಿದೆ ಮತ್ತು ಇದನ್ನು ಸಂಸದೀಯ ಸಮಿತಿಯು ಪರಿಶೀಲಿಸುತ್ತದೆ. ಇದಕ್ಕಿಂತ ಹೆಚ್ಚಿನ ಪಾರದರ್ಶಕತೆ ಇನ್ನೇನು ಬೇಕು? ಎಲ್‌ಐಸಿಯು ಈ ದೇಶಕ್ಕೆ ಮತ್ತು ಅದರ ಅಸ್ತಿತ್ವದ ಉದ್ದೇಶಕ್ಕೆ ಬದ್ಧವಾಗಿರುವುದರಿಂದಲೇ ಇಷ್ಟೊಂದು ಲಾಭದಾಯಕವಾಗಿ ಕೆಲಸ ಮಾಡುತ್ತಿದೆ.

ಸರಕಾರವು ಮುಂದೊಡ್ಡಿರುವ ಎರಡನೇ ಕಾರಣ ಎಲ್‌ಐಸಿಯ ಶೇರು ಮಾರಾಟ ಮಾಡುವ ಮೂಲಕ ವಿಮಾ ವ್ಯವಹಾರ ವೃದ್ಧಿಸಲು ಅಗತ್ಯ ಬಂಡವಾಳ ದೊರೆಯುತ್ತದೆಂದು ಹೇಳಲಾಗುತ್ತಿದೆ. ಇದು ಕೂಡ ಹುಸಿ ತರ್ಕವಾಗಿದೆ. ಏಕೆಂದರೆ ಸರಕಾರದ ಯೋಜನೆಗಳಿಗೆ ಎಲ್‌ಐಸಿಯು ವಾರ್ಷಿಕವಾಗಿ ರೂ. 3.5 ಕೋಟಿಯಿಂದ 4.5 ಕೋಟಿಯಷ್ಟು ಬಂಡವಾಳವನ್ನು ಕ್ರೋಡೀಕರಿಸುತ್ತಿರುವಾಗ ತನ್ನ ವ್ಯವಹಾರ ವಿಸ್ತರಣೆಗಾಗಿ ಶೇರುಗಳನ್ನು ಮಾರುವ ಅಗತ್ಯವೇ ಬರುವುದಿಲ್ಲ.

 ಸರಕಾರವು ಮುಂದೊಡ್ಡಿರುವ ಮೂರನೇ ಕಾರಣ ಎಲ್‌ಐಸಿಯ ಶೇರುಗಳನ್ನು ಮಾರುವ ಮೂಲಕ ಸಾರ್ವಜನಿಕರಿಗೆ ಅದರ ಒಡೆತನದಲ್ಲಿ ಪಾಲು ನೀಡಬಹುದೆಂಬುದಾಗಿದೆ. ಸಾರ್ವಜನಿಕ ರಂಗದ ಸಂಸ್ಥೆಯೆಂದರೆ ಸಾರ್ವಜನಿಕರೇ ಅದರ ಒಡೆಯರಾಗಿದ್ದಾರೆ. ಆದರೆ ಶೇರು ಮಾರುಕಟ್ಟೆಗೆ ಹೋಗುವುದರಿಂದ ಈ ಒಡೆತನ ನಿಜವಾಗಿಯೂ ಕುಂಠಿತಗೊಳ್ಳುತ್ತದೆ. ಏಕೆಂದರೆ ಶೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಶೇರುದಾರರು ಅಂದರೆ ವೈಯಕ್ತಿಕವಾಗಿ ಹಣ ಹೂಡುವವರ ಪ್ರಮಾಣ ಕೇವಲ ಶೇ. 3. ಅಂದರೆ ಕೇವಲ ಶೇ. 3ರಷ್ಟು ಜನರ ಕೈಗೆ ಒಡೆತನ ನೀಡುವುದು ನಿಜವಾದ ಸಾರ್ವಜನಿಕ ಒಡೆತನವೇ?

ಎಲ್‌ಐಸಿಯಂತಹ ಉತ್ತಮ ಆರ್ಥಿಕ ಸಂಸ್ಥೆಯ ಖಾಸಗೀಕರಣಕ್ಕೆ ಯಾವುದೇ ಸಮರ್ಥ ಕಾರಣವಿಲ್ಲ. ಅದಕ್ಕೆ ಇರುವ ಏಕೈಕ ಕಾರಣ ಸರಕಾರದ ನವ ಉದಾರೀಕರಣ ನೀತಿಗಳಿಗೆ ಹೊಂದಿರುವ ಬದ್ಧತೆ. ‘‘ಜನರ ಹಣ ಜನರ ಕಲ್ಯಾಣಕ್ಕಾಗಿ’’ ಎನ್ನುವ ಹಂತದಿಂದ ‘‘ಜನರ ಹಣ ಬಂಡವಾಳಗಾರರ ಲಾಭಕ್ಕಾಗಿ’’ ಎನ್ನುವ ಹಂತಕ್ಕೆ ಈ ಮಹಾನ್ ಸಂಸ್ಥೆಯನ್ನು ಸರಕಾರ ತೆಗೆದುಕೊಂಡು ಹೋಗುತ್ತಿದೆ. ಎಲ್‌ಐಸಿಯನ್ನು ಸಾರ್ವಜನಿಕ ವಲಯದಲ್ಲೇ ಉಳಿಸಿಕೊಳ್ಳಲು ಸೈದ್ಧಾಂತಿಕ ಸಂಘರ್ಷಕ್ಕಿಳಿದಿರುವ ನೌಕರರಿಗೆ ಸಾರ್ವಜನಿಕರು ಮತ್ತು ಪಾಲಿಸಿದಾರರು ಬೆಂಬಲ ನೀಡುವ ಮೂಲಕ ದೇಶದ ಆಸ್ತಿಯನ್ನು ಉಳಿಸುವ ದೇಶ ಪ್ರೇಮಿ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)