varthabharthi


ಅನುಗಾಲ

ಎಲ್ಲರಿಗೂ ನಮಸ್ಕಾರವೆಂಬ ಲಲಿತ ಗಂಭೀರ ಪ್ರಬಂಧವು

ವಾರ್ತಾ ಭಾರತಿ : 24 Sep, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಣಗುಟ್ಟುವ ವಾತಾವರಣದಲ್ಲಿ ನಡೆಯುವ ಆಟ ಏನು ಸ್ಫೂರ್ತಿ ನೀಡಬಹುದು? ಆದರೆ ಅಸಂಗತವಾದರೂ ನಿಜವೆಂಬಂತೆ ಯೋಜಕರು ಇದಕ್ಕೂ ಕೃತಕ ಸದ್ದಿನ, ಕೈಚಪ್ಪಾಳೆಯ, ಪ್ರಾಯಃ ಮನುಷ್ಯನನ್ನು ಅನುಕರಿಸಿ ಅಣಕಿಸುವ ಎಲ್ಲ ತಂತ್ರಗಳನ್ನೂ ತುಂಬಿಟ್ಟಿದ್ದಾರೆ. ಇದರಿಂದಾಗಿ ಬೌಂಡರಿ, ಸಿಕ್ಸರ್‌ಗಳು ಹೊಡೆಯಲ್ಪಟ್ಟಾಗ ಅದಕ್ಕೆ ಸೂಕ್ತವಾದ ಶಬ್ದನಿರ್ಮಾಣವಾಗಿದೆ- ಸಿನೆಮಾದಲ್ಲಿನ ‘ಮೂಡ್ ಮ್ಯೂಸಿಕ್’ ಇದ್ದಹಾಗೆ. ಇಂತಹ ತಾಂತ್ರಿಕ ಸಮಾಧಾನಗಳನ್ನು ಹೊಂದುವ ಕ್ರಿಕೆಟಿಗರಿಗೆ ನಿಜವಾದ ಪ್ರತಿಫಲವೆಂದರೆ ವೃದ್ಧಿಸುವ ಅವರ ಬ್ಯಾಂಕ್ ಬ್ಯಾಲೆನ್ಸ್! ಯಾರೂ ಇಲ್ಲದಲ್ಲಿ ಎಲ್ಲರೂ ಇದ್ದಾರೆಂದುಕೊಳ್ಳುವ, ಏನೂ ಇಲ್ಲದಲ್ಲಿ ಎಲ್ಲವೂ ಇದೆಯೆನ್ನುವ ಎಲ್ಲರಿಗೂ ನಮಸ್ಕಾರದ ಈ ತಂತ್ರ/ಸಂದರ್ಭ ಭಾರತೀಯ ತತ್ವಶಾಸ್ತ್ರದಲ್ಲೇ ಹಳತಿನ ಹೊಸ ಹೆಜ್ಜೆಯಾಗಬಹುದು.

ಭಾರತವು ವಿಶ್ವಕ್ಕೆ ಕೊಟ್ಟ ಕಾಣಿಕೆಯೆಂದರೆ ‘ಶೂನ್ಯ’ ಎಂದು ಹೇಳಲಾಗುತ್ತಿದೆ. ಇದನ್ನು ಗಂಭೀರವಾಗಿ ಬಳಸಲಾಗುತ್ತಿದೆಯಾದರೂ ಒಮ್ಮಿಮ್ಮೆ ವ್ಯಂಗ್ಯವಾಗಿಯೂ ಬಳಸಲಾಗುತ್ತಿದೆ. ಯಾರೇ ಏನೇ ಮಾಡಲಿ ಅದನ್ನು ನಕಲು ಮಾಡುವುದು ಮತ್ತು ಅಜ್ಞಾನಿಗಳೆದುರು, ಮುಗ್ಧರೆದುರು ಅದು ನಮ್ಮದೆನ್ನುವುದು, ಅದನ್ನು ನಾವೇ ಮಾಡಿದ್ದೆನ್ನುವುದು ಭಾರತೀಯ ಪರಂಪರೆಯಾಗುತ್ತಿದೆ ಮತ್ತು ಇದನ್ನು ಸರಕಾರ ಸೇರಿದಂತೆ ಎಲ್ಲರೂ ಕೃಪೆಯಿಂದ ಪೋಷಿಸುವುದು ನಡೆಯುತ್ತಿದೆ. ಬೇಂದ್ರೆಯವರ ಪದ್ಯದಂತೆ ಇನ್ನೊಂದು ಪದ್ಯ ಬರೆಯುವುದು, ಮಾಸ್ತಿಯವರ ಕಥೆಯಂತೆ ಇನ್ನೊಂದು ಕಥೆ ಬರೆಯುವುದು ಸ್ವಂತವಾಗಲಾರದು. ಪರಂಪರೆಯ ಮುಂದುವರಿಕೆಯೆಂದು ಎಷ್ಟೇ ಸಮರ್ಥಿಸಿದರೂ ಕೊನೆಗೂ ಅದು ಪರ್ಯಾವಸಾನವಾಗುವುದು ಮಂದೆಯಲ್ಲಿ ಒಂದಾಗುವುದರಲ್ಲಿ. ಮುಂದುಗಡೆ ಬೇಂದ್ರೆ, ಮಾಸ್ತಿ ಇದ್ದೇ ಇರುತ್ತಾರೆ.

ಇತ್ತೀಚೆಗೆ ಚೀನಾದೊಂದಿಗೆ ಬಿಕ್ಕಟ್ಟು ತೀವ್ರವಾಗುತ್ತಿದ್ದಂತೆಯೇ ಸರ್ಜಿಕಲ್ ದಾಳಿಯಂತೆ ಚೀನಿ ಆ್ಯಪ್‌ಗಳನ್ನು ನಿಷೇಧಿಸಲಾಯಿತು. ಈಗ ದೇಶೀಯವಾಗಿ ರಚಿಸುತ್ತಿರುವ ಆ್ಯಪ್‌ಗಳು ಇವುಗಳ ಕಳಪೆ ಅನುಕರಣೆಗಳೇ ಆಗಿವೆ. ಅವನ್ನು ದೇಶಭಕ್ತಿಯ ಹೆಸರಿನಲ್ಲಿ, ಸ್ವಾವಲಂಬನೆಯ (ಸರಕಾರ ಸೃಷ್ಟಿಸಿದ ಅಧಿಕೃತ ಪದವಾದ ಆತ್ಮನಿರ್ಭರತೆಯ) ಹೆಸರಿನಲ್ಲಿ ಸಹಿಸಿಕೊಳ್ಳುತ್ತೇವೆ. ಆದರೆ ಚೀನಿ ಬ್ಯಾಂಕಿನಿಂದ ಸಾಲ ಪಡೆಯುವುದಕ್ಕೆ, ಚೀನಿ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಮ್ಮ ಅಭಿಮಾನ ಅಡ್ಡಿಯಾಗುವುದಿಲ್ಲ. ಈಗ ಪ್ರಚಲಿತವಿರುವ ಈ ಆತ್ಮನಿರ್ಭರತೆಯು ಚೀನಾಕ್ಕೆ ಮೀಸಲಾಗಿದೆಯೇ ಹೊರತು ಇತರ ದೇಶಗಳಿಗಲ್ಲವೆನ್ನುವುದು ಸದ್ಯದ ವಿದ್ಯಮಾನಗಳಿಂದ ಸ್ಪಷ್ಟವಾಗಿದೆ. ಭಾರತೀಯವೆಂಬುದಕ್ಕೆ ವಿಪರೀತಾರ್ಥ ನೀಡಬೇಕೆಂಬುದು ನನ್ನ ಹಂಬಲವಲ್ಲ. ಆದರೆ ನಮ್ಮ ಸರಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಮತ್ತು ವಿದ್ಯಾರ್ಥಿಗಳಿಲ್ಲದಾಗಲೂ ತಾವೇ ವಿಶ್ವಗುರುವೆಂದು ಘೋಷಿಸಿಕೊಳ್ಳುತ್ತಿರುವ ಸಂದರ್ಭಗಳಲ್ಲಿ ಇದು ಹಾಸ್ಯಾಸ್ಪದವೆಂದು ಅನ್ನಿಸುತ್ತಿದೆ. ಆದರೂ ನಾವು ನಮ್ಮ ಪ್ರತಿಷ್ಠೆಯ ಮತ್ತು ಅಜ್ಞರನ್ನು ನಂಬಿಸುವ ಸುಳ್ಳುಗುಳ್ಳೆಯಲ್ಲೇ ಬದುಕುತ್ತೇವೆ. ಆತ್ಮನಿರ್ಭರತೆಯು ನಡೆಯಬೇಕಾದ್ದು ಸ್ವಂತದಲ್ಲಿ. ಸ್ವಂತಿಕೆ ಇರಬೇಕಾದ್ದು ವೈವಿಧ್ಯದಲ್ಲಿ. ಈ ದೇಶದ, ಸಮಾಜದ ದುರಂತವಿರುವುದು ಅನುಕರಣೆಯಲ್ಲಿ. ಧ್ಯೇಯಗಳನ್ನು ಉದ್ದೇಶಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ. ಆದರೆ ಅವು ಫೋಟೊಪ್ರತಿಗಳನ್ನು ತಯಾರು ಮಾಡಿದಂತಾದರೆ ಸಾಧನೆ ಸೊನ್ನೆ. ಇದು ಕೃಷಿಯಿಂದ ಕ್ರೀಡೆಯವರೆಗೆ, ಸಾಹಿತ್ಯದಿಂದ ಸಂಸ್ಕೃತಿಯವರೆಗೆ, ರಾಜಕೀಯದಿಂದ ವಿಜ್ಞಾನದವರೆಗೆ ಕಾಣುವ ಸಂಗತಿ.

ವಿವಿಧ ಕ್ಷೇತ್ರಗಳಲ್ಲಿ ಚಲಾವಣೆಯಲ್ಲಿರುವ ಈ ತಂತ್ರವನ್ನು ಸ್ವಲ್ಪ ಗಮನಿಸಬಹುದು. ಸಂಯುಕ್ತ ಅರಬ್ ಎಮಿರೇಟ್ಸ್ ದೇಶದಲ್ಲಿ ‘ಇಂಡಿಯನ್ ಪ್ರೀಮಿಯರ್ ಲೀಗ್’ ಎಂಬ ಅಂಕಿತನಾಮದಡಿ 20-20 ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಹೆಸರು ನಮ್ಮದಾದರೂ ಉಸಿರು ವಿದೇಶದ್ದು. ತನ್ನದಲ್ಲದ ಶಿಶುವನ್ನು ತನ್ನದೆಂದು ಬಣ್ಣಿಸಿ ನಾಮಕರಣ ಮಾಡುವ, ಅದರ ಆಟಪಾಟಗಳನ್ನು ನೋಡಿ ಸಂತಸಪಡುವ ಈ ಪ್ರವೃತ್ತಿ ವ್ಯಂಗ್ಯಾರ್ಥದಲ್ಲಿ ಭಾವನಾತ್ಮಕ ‘ವಸುಧೈವ ಕುಟುಂಬಕಂ’ ಆಗಬಹುದೇ ವಿನಾ ವ್ಯಾವಹಾರಿಕ ಸತ್ಯವಾಗಲಾರದು. ಇನ್ನೂ ಗಂಭೀರವಾಗಿ ಯೋಚಿಸಿದರೆ ಅದರಲ್ಲಿ ಭಾರತೀಯರೇ ಇದ್ದಾರೆಂದೇನಿಲ್ಲ. ವಿಶ್ವದ ಬಹುತೇಕ ಎಲ್ಲ ಕ್ರಿಕೆಟ್ ದೇಶಗಳ ಮಾರುಕಟ್ಟೆ ಮೌಲ್ಯದ ಆಟಗಾರರು ಅಲ್ಲಿದ್ದಾರೆ. ಇಲ್ಲೂ ನಮ್ಮ ಕ್ರೀಡಾಸ್ಫೂರ್ತಿರಹಿತ ರಾಜಕೀಯ ಕೆಲಸಮಾಡಿದೆ. ಪಾಕಿಸ್ತಾನದ ಆಟಗಾರರಿಗೆ ಈ ಕ್ರಿಕೆಟ್ ಉತ್ಸವದಲ್ಲಿ ಅವಕಾಶವಿಲ್ಲ. ಹೀಗಾಗಿ ಇದು ಭಾರತೀಯವೂ ಅಲ್ಲ, ಜಾಗತಿಕವೂ ಅಲ್ಲವೆಂದಾಗಿದೆ. ಹೆಚ್ಚೆಂದರೆ ಅದು ‘ಯುಎಇ ಕೃಪಾಪೋಷಿತ ಪ್ರೀಮಿಯರ್ ಲೀಗ್’ ಆಗಬಹುದು.

ಆದರೆ ಕ್ರಿಕೆಟ್ ಎಂಬ ಬ್ರಿಟಿಷ್/ಕಾಮನ್‌ವೆಲ್ತ್ ಕ್ರೀಡೆಯನ್ನು ನಾವು ಹಣದ ಹೊಳೆ ಸುರಿಸುವ, ಹರಿಸುವ ಒರತೆಯಾಗಿ ಕಂಡಿದ್ದರಿಂದ ಅದನ್ನು ಭಾರತೀಕರಿಸಿದ್ದೇವೆ. ಇಂದು ಯಾವುದೇ ತೆರನಾದ ಕ್ರಿಕೆಟಿನಲ್ಲಿ ಎಷ್ಟು ಹಣ ಹರಿಯುತ್ತಿದೆಯೆಂದರೆ ಅದು ಕೆಲವು ದೇಶಗಳ ಒಟ್ಟಾರೆ ವ್ಯವಹಾರಕ್ಕಿಂತ ಹೆಚ್ಚಾಗಬಹುದು. ಇದಕ್ಕಿರುವ ಹಣದ ಹಿಂದೆ ಉದ್ಯಮಪತಿಗಳಿರುವುದರಿಂದ ಮತ್ತು ಅವರಿಗೂ ನಮ್ಮ ಮಾಧ್ಯಮೋದ್ಯಮಿಗಳಿಗೂ ಕೊಡುಕೊಳ್ಳುವ ಸಂಬಂಧವಿರುವುದರಿಂದ ಕೊರೋನದಂತಹ ರೋಗರುಜಿನಗಳ ನಡುವೆಯೂ ಈ ಕೂಟ ನಡೆಯುತ್ತದೆ. ಇದನ್ನು ಆಧರಿಸಿ ಬೆಟ್ಟಿಂಗ್ ಇತ್ಯಾದಿ ಆಸುಪಾಸಿನ ವ್ಯವಹಾರವಂತೂ ಒಂದು ಬಹಿರಂಗ ರಹಸ್ಯ. ಕಾನೂನನ್ನು ಜಾರಿಗೆ ತರುವವರಿಗೂ ಇದು ಗೊತ್ತಿಲ್ಲದ್ದೇನಲ್ಲವಾದರೂ ಅವರು ಒಂದು ಹಂತದ ವರೆಗೆ ಉಷ್ಟ್ರಪಕ್ಷಿಗಳಂತೆ ಜಾಣ ಕುರುಡು/ಕಿವುಡುಗಳನ್ನು ಅಭಿನಯಿಸಿ ಮೂಕರಾಗುತ್ತಾರೆ. ತಮ್ಮ ಹೆಸರು ಕೆಡುವ ಸೂಚನೆ ಬಂದರೆ ಮಾತ್ರ ಕಾರ್ಯೋನ್ಮುಖರಾಗುತ್ತಾರೆ.

ನಿಶ್ಚಿತಾರ್ಥವಾದ ವರ-ವಧುಗಳು ಹೇಳಿದಂತೆ ನಮ್ಮ ಆಟಗಾರರು ‘‘ಆಹಾ ಕ್ರಿಕೆಟ್ ಆಡುವುದಕ್ಕೆ ಎದುರು ನೋಡುತ್ತಿದ್ದೇವೆ’’ ಎಂದು ಮಾಧ್ಯಮಗಳಲ್ಲಿ ಹೇಳುತ್ತಿರುತ್ತಾರೆ. ಎಲ್ಲಿ ಈ ಕ್ರಿಕೆಟ್ ಕೂಟ ರದ್ದಾಗುತ್ತದೆಯೋ ಎಂಬ ಆತಂಕದಲ್ಲಿ ಕಿಸೆಮುಟ್ಟಿಕೊಂಡೇ ಈ ಮಾತುಗಳನ್ನು ಅವರು ಹೇಳುತ್ತಾರೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಪುರಾಣಗಳಲ್ಲಾದರೂ ಸೀತೆ, ದ್ರೌಪದಿ, ದಮಯಂತಿ ಮುಂತಾದ ಸುಂದರವಾದ ರಾಜ(ಜ್ಯ)ಲಕ್ಷ್ಮೀಯರ ಸ್ವಯಂವರಕ್ಕೆ ಲೋಕೋತ್ತರ ಶೌರ್ಯದ ಅರಸುಗಳು ಮಾತ್ರವಲ್ಲ ದೇವತೆಗಳೂ ಇಳಿದು ಬರುತ್ತಾರೆಂಬ ಉಲ್ಲೇಖವಿದೆ. ಪಂಥ-ಪರಾಕ್ರಮಗಳು ಅನುಷಂಗಿಕ. ಇತರ ದೇಶಗಳ ಆಟಗಾರರು ಇದರಲ್ಲಿ ಭಾಗವಹಿಸಿದ್ದರೆ ಅದು ಕ್ರಿಕೆಟ್ ಅಥವಾ ಭಾರತದ ಕುರಿತ ಗೌರವದಿಂದಾಗಿ ಇರಲಾರದು. ಬಹುತೇಕರು ವ್ಯವಹಾರಿಗಳು. ಕ್ರಿಕೆಟಿನಲ್ಲಿರುವ ಕಾಂಚಾಣವೇ ಅವರೆಲ್ಲರನ್ನೂ ಈ ಲೀಗಿಗೆ ಇಳಿಸಿದೆ.

ಇದು ದಶಕಗಳ ಸಮಸ್ಯೆ. ಇದೇ ಮೊದಲನೇಯದಲ್ಲ. ಈ ಗೊಂದಲ ನಮ್ಮನ್ನಾಳುವವರಿಗೆ ಏನೂ ಅಲ್ಲ. ಜನರಿಗೂ ಇದು ಏನೂ ಅಲ್ಲ. ಕ್ರಿಕೆಟ್ ಎಂದಾಕ್ಷಣ ಜೊಲ್ಲು ಹರಿಸುವ ಮಂದಿಗೆ ಅದರ ಮತ್ತು ಅದು ನಿರ್ಧರಿಸುವ, ಮಾನಾಪಮಾನಗಳ ಗೊಡವೆಯಿಲ್ಲ. ತಮಾಷೆಯೆಂದರೆ ಈ ಬಾರಿ ಕೊರೋನ ದಾಳಿಯಿಂದಾಗಿ ಈ ಕ್ರಿಕೆಟ್ ಪಂದ್ಯಗಳು ನಡೆಯುವ ಮೈದಾನಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಭಣಗುಟ್ಟುವ ವಾತಾವರಣದಲ್ಲಿ ನಡೆಯುವ ಆಟ ಏನು ಸ್ಫೂರ್ತಿ ನೀಡಬಹುದು? ಆದರೆ ಅಸಂಗತವಾದರೂ ನಿಜವೆಂಬಂತೆ ಯೋಜಕರು ಇದಕ್ಕೂ ಕೃತಕ ಸದ್ದಿನ, ಕೈಚಪ್ಪಾಳೆಯ, ಪ್ರಾಯಃ ಮನುಷ್ಯನನ್ನು ಅನುಕರಿಸಿ ಅಣಕಿಸುವ ಎಲ್ಲ ತಂತ್ರಗಳನ್ನೂ ತುಂಬಿಟ್ಟಿದ್ದಾರೆ. ಇದರಿಂದಾಗಿ ಬೌಂಡರಿ, ಸಿಕ್ಸರ್‌ಗಳು ಹೊಡೆಯಲ್ಪಟ್ಟಾಗ ಅದಕ್ಕೆ ಸೂಕ್ತವಾದ ಶಬ್ದನಿರ್ಮಾಣವಾಗಿದೆ- ಸಿನೆಮಾದಲ್ಲಿನ ‘ಮೂಡ್ ಮ್ಯೂಸಿಕ್’ ಇದ್ದಹಾಗೆ. ಇಂತಹ ತಾಂತ್ರಿಕ ಸಮಾಧಾನಗಳನ್ನು ಹೊಂದುವ ಕ್ರಿಕೆಟಿಗರಿಗೆ ನಿಜವಾದ ಪ್ರತಿಫಲವೆಂದರೆ ವೃದ್ಧಿಸುವ ಅವರ ಬ್ಯಾಂಕ್ ಬ್ಯಾಲೆನ್ಸ್! ಯಾರೂ ಇಲ್ಲದಲ್ಲಿ ಎಲ್ಲರೂ ಇದ್ದಾರೆಂದುಕೊಳ್ಳುವ, ಏನೂ ಇಲ್ಲದಲ್ಲಿ ಎಲ್ಲವೂ ಇದೆಯೆನ್ನುವ ಎಲ್ಲರಿಗೂ ನಮಸ್ಕಾರದ ಈ ತಂತ್ರ/ಸಂದರ್ಭ ಭಾರತೀಯ ತತ್ವಶಾಸ್ತ್ರದಲ್ಲೇ ಹಳತಿನ ಹೊಸ ಹೆಜ್ಜೆಯಾಗಬಹುದು.

 ಕ್ರಿಕೆಟ್ ಎಂದರೆ ಒಂದು ಜಗತ್ತು ಮಾತ್ರವಲ್ಲ ಬದುಕಿನ ದರ್ಶನವೂ ಹೌದೆಂದು ಗೊತ್ತಾಬೇಕಾದರೆ ಇಂತಹ ಸಂದರ್ಭಗಳಿಗೆ ಇತರ ಕ್ಷೇತ್ರಗಳು ಹೇಗೆ ಸ್ಪಂದಿಸಿವೆಯೆಂಬುದನ್ನು ಗಮನಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕಲೆ ಅದರಲ್ಲೂ ಸಂಗೀತ, ನೃತ್ಯ ಮತ್ತು ಅಪರೂಪವೆನಿಸುವ ಸಾಧನೆ, ಸಂಶೋಧನೆ, ಮಾಹಿತಿ ಇವುಗಳನ್ನು ಹಂಚಿಕೊಳ್ಳುವ ಸಂಪ್ರದಾಯವಿದೆ. ಯುಟ್ಯೂಬ್‌ನಂತಹ ಜಾಲತಾಣದಲ್ಲಿ ಏನನ್ನು ಬೇಕಾದರೂ ಕೇಳಿ ಆನಂದಿಸಬಹುದು. ಸ್ಮಾರ್ಟ್‌ಫೋನ್ ಮೊಬೈಲ್‌ನಂತಹ ಒಂದು ಪುಟ್ಟ ಆದರೆ ಪರಿಣಾಮಕಾರಿ ಸಾಧನದೊಳಗೆ ಅದು ಕರ್ಪೂರವು ಹತ್ತಿ ಉರಿದಂತೆ ಏನನ್ನೂ ಉಳಿಸದೆ ಅದೊಂದು ಕನಸು ಎನ್ನುವ ರೀತಿಯಲ್ಲಿ ಅದು ನಮ್ಮ ಅನುಭವಕ್ಕೆ ಬರಬಹುದು; ಬಂದು ನಿರ್ಗಮಿಸಬಹುದು; ಬೇಕೆಂದರೆ ಉಳಿಸಿಕೊಳ್ಳಬಹುದು. ಇದೂ ಆಮದಾದ ಸರಕು. ವಿದೇಶಗಳಲ್ಲಿ ಶಿಕ್ಷಣ, ಆರೋಗ್ಯ ಮುಂತಾದ ಅಗತ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ದಕ್ಷವಾಗಿ ಬಳಸುವ, ಸಮಯವನ್ನು ಉಳಿಸುವ, ಆರೋಗ್ಯವನ್ನು ರಕ್ಷಿಸುವ ಸಾಧನವಾಗಿ ಇದನ್ನು ವಿದ್ಯುನ್ಮಾನ ಜಾಲಗಳಲ್ಲಿ ಆರಂಭಿಸಲಾಯಿತು. ಇತ್ತೀಚೆಗೆ ಇದಷ್ಟೇ ಅಲ್ಲ, ಎಲ್ಲವನ್ನೂ ಹರಿಯಬಿಡುವ ಹೊಸ ಜಾಯಮಾನ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯವನ್ನು ಸಂತೆಯ ಸರಕಿನಂತೆ ಪ್ರದರ್ಶನಕ್ಕಿಡಲಾಗಿದೆ. ಏನನ್ನು ಬೇಕಾದರೂ ಹೇಳಬಹುದು, ಬರೆಯಬಹುದು; ಬೇಕಾದವರು ಕೇಳಬಹುದು, ಓದಬಹುದು. ಪುಸ್ತಕಗಳೂ ಉಚಿತವಾಗಿಯೂ, ಮಾರಾಟಕ್ಕೂ ಲಭ್ಯ. ಪುಸ್ತಕಗಳೇ ಅವಶೇಷಗಳಾಗಬಹುದೆಂಬ ಸಂಶಯದ ನಡುವೆ ಅವುಗಳ ಪುನರ್ಜನ್ಮ ನಿಜಕ್ಕೂ ವಿಸ್ಮಯಕಾರಿ; ಕೊಂಚ ಆತಂಕಕಾರಿಯೂ ಹೌದು. ಆನ್‌ಲೈನ್ ವ್ಯವಹಾರಗಳು ಈಗ ಎಂದಿಗಿಂತಲೂ ಸುಲಭ. ಇವುಗಳ ಒಟ್ಟು ಮೊತ್ತ ಭಾರೀ ಗಾತ್ರದ್ದಿರಬಹುದು. ಪ್ರಾಯಃ ತಾಂತ್ರಿಕ ಮುನ್ನಡೆಯಲ್ಲಿ ಇವು ಹಿಂದೆ ಸರಿಯುವ ಲಕ್ಷಣವಿಲ್ಲ; ಮುಂದೆ ಎಲ್ಲಿಗೆ ತಲುಪುತ್ತದೆಯೋ ಹೇಳಲಾಗದು.

ಇದಕ್ಕೆ ಹೊಸ ಸೇರ್ಪಡೆ ವೀಡಿಯೊ ಕಾನ್ಫರೆನ್ಸ್‌ಗಳು. ಕೇಳುವ ತಂತ್ರ ರೇಡಿಯೋ ಮೂಲಕ ಬಹಳ ಹಿಂದೆಯೇ ಒದಗಿಬಂದಿತ್ತು. ಈಗ ಕೇಳಿದರೆ ಸಾಲದು; ಕಾಣಬೇಕು. ಅದೂ ಕೋವಿಡ್‌ನಂತಹ ಪ್ರತ್ಯೇಕತಾ ಜಗತ್ತಿನಲ್ಲಿ ಪರಸ್ಪರ ಸಂಪರ್ಕಕ್ಕೆ ಈ ತಂತ್ರವನ್ನು ಬಳಸಲಾಗುತ್ತದೆ. ಇದರ ಮುಂದಣ ಹೆಜ್ಜೆಯಾಗಿ ಯೋಜಿಸಿದ ತಂತ್ರದ ಫಲ ವೆಬಿನಾರುಗಳು. ಇದು ತಾಂತ್ರಿಕವಾಗಿ ಮುನ್ನಡೆಯೆನಿಸಿದರೂ ಇದರ ವ್ಯಾವಹಾರಿಕ ಕೌಶಲ್ಯವು ಇದಕ್ಕಿಂತಲೂ ಗಾಢವಾದದ್ದು; ಗೂಢವಾದದ್ದು. ಅನಿವಾರ್ಯವಾಗಿ ಮಾಡುವ ವೆಬಿನಾರುಗಳೇ ಬೇರೆ; ಜನಪ್ರಿಯತೆಗಾಗಿ, ಸಾರ್ವಜನಿಕ ಹಣವನ್ನು ಪೋಲುಮಾಡುವುದಕ್ಕಾಗಿ, ಅಂಕಿ-ಅಂಶಗಳಿಗಾಗಿ ನಡೆಸುವ ವೆಬಿನಾರುಗಳೇ ಬೇರೆ. ಇದೊಂದು ಉದ್ಯಮ; ಜಾಹೀರಾತು. ಆದರೆ ಚೆನ್ನಾಗಿ ನಡೆದರೆ ಇದೂ ಒಂದು -ಪ್ರಾಯಃ ಹಿಂದಿಡಲಾಗದ- ಕ್ರಾಂತಿಕಾರಿ ಹೆಜ್ಜೆ.

ಆದರೆೆ ಸಾಹಿತ್ಯದಂತಹ ಏಕಾಂತ-ಲೋಕಾಂತಗಳ ಸಂವೇದನಾಶೀಲ ಭೂಮಿಕೆಯಲ್ಲಿ ಇದು ನೈರಾಶ್ಯದಾವಳಿಕೆ: ಸಾಹಿತಿಯೊಳಗೊಬ್ಬ ಮನುಷ್ಯನಿರುತ್ತಾನಲ್ಲ! ಅಂತಹ ಮನುಷ್ಯನಿಗೆ ಯಾವ ಹಂತದಲ್ಲೂ ಜನಪ್ರಿಯತೆ ಬೇಡವಾಗಿಲ್ಲ. ಭೂಮಂಡಲವೆಲ್ಲ ಸುತ್ತಿದವನಿಗೂ ಸ್ಥಳೀಯ ಮಾಧ್ಯಮಗಳಲ್ಲಿ ತನ್ನ ಈ ಪ್ರವೃತ್ತಿಪರ ಚಾಳಿಯು ವರದಿಯಾಗದಿದ್ದರೆ ನಿರಾಶೆಯಾಗುತ್ತದೆ. ಹಲವಾರು ತಿಂಗಳುಗಳಿಂದ ಕೊರೋನ ಹಾವಳಿಯಿಂದಾಗಿ ಜನಪ್ರಿಯ ಮಾಧ್ಯಮಗಳಲ್ಲಿ ಮುಖ ತೋರಿಸದೆ ನಿರಾಶರಾದವರಿಗೆ ಎಲ್ಲಿ ತಮ್ಮ ಜನಪ್ರಿಯತೆಯು ಕುಗ್ಗುತ್ತದೆಯೋ ತಾವೆಲ್ಲಿ ಅಪರೂಪದವರಾಗಿ, ಅಪರಿಚಿತರಾಗಿ, ಶೇಷಾಯುಷ್ಯವನ್ನು ಗುಹಾಂತರ್ಗತವಾಗಿ ಕಳೆಯಬೇಕಾಗುತ್ತದೆಯೋ ಎಂಬ ಭಯ ಆವರಿಸಿ ಇಂತಹ ತಂತ್ರ(ಜ್ಞಾನ)ದಲ್ಲಿ ಪಾಲ್ಗೊಳ್ಳುತ್ತಾರೆ. ಅದನ್ನೂ ಬಹುತೇಕ ಸರಿಯಾಗಿ ನಡೆಸುವುದಕ್ಕೆ ನಮ್ಮಲ್ಲಿ ತಾಂತ್ರಿಕ ನೈಪುಣ್ಯ ಒದಗಿಲ್ಲ. ತೆರೆ ತೆರೆದಾಗಲೂ ಮಾತನಾಡದೆ, ಧ್ವನಿ, ರಂಗ ಇವನ್ನು ಸಜ್ಜುಗೊಳಿಸುತ್ತ, ಬಹಿರಂಗವಾಗದಿರಬೇಕಾದ ತಯಾರಿಯನ್ನು ಎಲ್ಲರೆದುರೇ ಮಾಡುತ್ತ ಮನರಂಜನೆ ನೀಡುವ ಇಂತಹ ಸಂಯೋಜನೆಗಳು ಪ್ರತಿಷ್ಠಿತರ ಮುಖಭಂಗಕ್ಕೆ ಕಾರಣವಾದದ್ದೂ ಇವೆ. ಇವನ್ನೇ ಒಂದು ಶ್ರದ್ಧಾಕಾರ್ಯಕ್ರಮದಂತೆ ಮುಗಿಬೀಳುವ ಮಂದೆಯೂ ಮಂದಿಯೂ ಇದ್ದಾರೆ. ಜನರು ಅರ್ಥಮಾಡಿಕೊಳ್ಳದಿರುವ ಸಂಗತಿಯೆಂದರೆ ಇವನ್ನು ಯಾರು ಯಾವಾಗ ಬೇಕಾದರೂ ದಾಖಲಿಸಬಹುದು. ಇವನ್ನು ಯಾರು ಯಾವಾಗ ಬೇಕಾದರೂ ಕೇಳಿ(ಸಿ)ಕೊಳ್ಳಬಹುದು. ಇವಕ್ಕೆ ಒಂದು ಗೊತ್ತಾದ ಸಮಯ, ಸ್ಥಳ ಬೇಕಾಗಿಲ್ಲ. ಇಷ್ಟಕ್ಕೂ ಮಾತನಾಡುವವನಿಗೆ ತನ್ನನ್ನು ಯಾರು ಕೇಳುತ್ತಾರೆ, ನೋಡುತ್ತಾರೆ ಎಂದೆಲ್ಲ ಮುಖಾಮುಖಿ ಅರಿವನ್ನು ಖಾತ್ರಿಪಡಿಸುವ, ವಿಸ್ತರಿಸುವ ತಂತ್ರಜ್ಞಾನಗಳು ಇನ್ನೂ ರೂಢಿಯಾಗಬೇಕಷ್ಟೇ. ಈಗ ಸದ್ಯಕ್ಕೆ ಅದೊಂದು (ಬಾತ್‌ರೂಂ ಸಂಗೀತದಂತಲ್ಲದಿದ್ದರೂ) ಖಾಸಗಿ ಧ್ಯಾನೋತ್ಪತ್ತಿಯಾಗುತ್ತಿದೆ. ನನ್ನೊಬ್ಬ ಸ್ನೇಹಿತನಿಗೆ ತಾನೊಬ್ಬ ಹಿರಿಯ ಸಾಹಿತಿಯೆಂಬ ಭಾವವಿದೆ. ಕನ್ನಡಿಯೆದುರು ತಾನೊಬ್ಬನೇ ‘ಎಲ್ಲರಿಗೂ ನಮಸ್ಕಾರ’ ಎಂದು ಆರಂಭಿಸಿ ಆಕಾಶವಾಣಿ ಭಾಷಣದಂತೆ ಮಾತನಾಡುತ್ತಾನೆ. ಹಾಗೆ ತನ್ನನ್ನೇ ನೋಡಿ ಮಾತನಾಡುವಾಗ ಒಬ್ಬ ಹಿರಿಯ ಸಾಹಿತಿಯೆದುರು ತಾನು ಮಾತನಾಡುತ್ತೇನೆಂಬ ಆತ್ಮವಿಶ್ವಾಸ ಆತನಲ್ಲಿರುತ್ತದೆಯಂತೆ! ಕ್ರಿಕೆಟಿನಲ್ಲಿ ದುಡ್ಡಾದರೂ ಇದೆ; ವೆಬಿನಾರಿನಲ್ಲಿ ಭಾಷಣ ಮಾಡುವುದು, ಪದ್ಯ ಓದುವುದು ಬಿಟ್ಟಿಸೇವೆ ಎಂದು ಒಬ್ಬರು ಕೊರಗುತ್ತಿದ್ದರು. ನಾವವರನ್ನು ಬಿಟ್ಟಿದೇವರೆಂದು ಕೊಂಡಾಡಬಹುದು! (ಹಣ ಪಡೆದವರು ಪುಣ್ಯವಂತರು ಅನ್ನುವುದಕ್ಕಿಂತಲೂ ಬುದ್ಧಿವಂತರು ಅಂದುಕೊಳ್ಳಬಹುದು!)

ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವು ಕಲಸುಮೇಲೋಗರವಾಗಿ ಸದಾ ‘ಎಲ್ಲರಿಗೂ ನಮಸ್ಕಾರ’ ನಡೆಯುತ್ತಲೇ ಇರುತ್ತದೆ. ಯಾರ ಸರಕು ಎಷ್ಟು ವ್ಯಾಪಾರವಾಯಿತೆಂದು ಅವರಿಗೇ ಗೊತ್ತು! ಬದುಕೆಂಬುದು ಅನುಭವಗಳ ಒಂದು ದೊಡ್ಡ ಸಂತೆಯೆಂದು ಕಾರಂತರು, ಮಾಸ್ತಿ ಮುಂತಾದವರು ಹೇಳುತ್ತಿದ್ದರು. ನಾವೀಗ ಅಂತಹ ಸಂತೆಯಲ್ಲಿದ್ದೇವೆಂದು ತಿಳಿದುಕೊಳ್ಳಬಹುದು!.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)