varthabharthi


ಸಂಪಾದಕೀಯ

ದೇಶಾದ್ಯಂತ ದಂಗೆ ಎದ್ದ ರೈತರು

ವಾರ್ತಾ ಭಾರತಿ : 24 Sep, 2020

 ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಬಂಧಿಸಲಾಯಿತು. ದಲಿತರ ಪರವಾಗಿ ಧ್ವನಿಯೆತ್ತಿದ ಮಾನವ ಹಕ್ಕು ಹೋರಾಟಗಾರರನ್ನು ಅರ್ಬನ್ ನಕ್ಸಲರೆಂದು ಗುರುತಿಸಿ ಜೈಲಿಗೆ ತಳ್ಳಲಾಯಿತು. ಇದೀಗ ರೈತರ ಸರದಿ. ದೇಶಾದ್ಯಂತ ಸರಕಾರದ ನೀತಿಯ ವಿರುದ್ಧ ರೈತರು ದಂಗೆಯೆದ್ದಿದ್ದಾರೆ. ಅನ್ನ ಕೊಡುವ ರೈತರನ್ನೂ ಇದೀಗ ಭಯೋತ್ಪಾದಕರ ಸಾಲಿಗೆ ನಿಲ್ಲಿಸಲು ಸರಕಾರ ಹೊರಟಿದೆ. ಮುಂದಿನ ದಿನಗಳಲ್ಲಿ ರೈತರೆಲ್ಲ ‘ಗ್ರಾಮೀಣ ನಕ್ಸಲ’ರಾಗಿ ಗುರುತಿಸಲ್ಪಟ್ಟು ಬಂಧನಕ್ಕೊಳಗಾದರೆ ಅಚ್ಚರಿಯೇನೂ ಇಲ್ಲ. ಸಂಸದರಿರುವುದು ರೈತರ ಪರವಾಗಿ, ಕಾರ್ಮಿಕರ ಪರವಾಗಿ ಮಾತನಾಡುವುದಕ್ಕೆ. ದುರದೃಷ್ಟವಶಾತ್ ಹಾಗೆ ಮಾತನಾಡಿದ ಎಂಟು ಸಂಸದರನ್ನು ಸರಕಾರ ಅಮಾನತು ಮಾಡಿದೆ. ಇದೀಗ ಸಂಸದರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ವಿರೋಧ ಪಕ್ಷಗಳು ಒಂದಾಗಿ ಕಲಾಪಗಳನ್ನು ಬಹಿಷ್ಕರಿಸಿವೆ. ಸರಕಾರಕ್ಕೆ ಇದು ಇನ್ನಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ವಿರೋಧ ಪಕ್ಷಗಳ ಗೈರು ಹಾಜರಿಯ ನಡುವೆಯೇ ಸಾಲು ಸಾಲಾಗಿ ಜನ ವಿರೋಧಿ ಕಾಯ್ದೆಗಳನ್ನು ಅನುಮೋದಿಸುತ್ತಿದೆ. ಇತ್ತ ಕರ್ನಾಟಕ ಸರಕಾರವೂ ಕೇಂದ್ರದ ಆಜ್ಞೆಯನ್ನು ಶಿರಸಾವಹಿಸಿ ಜಾರಿಗೆ ತರಲು ಹೊರಟಿದೆ. ರಾಜ್ಯದ ರೈತರು ಹಾಗೂ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಗಳ ನಡುವೆಯೇ ಕರ್ನಾಟಕ ಭೂಸುಧಾರಣೆಗಳ ಎರಡನೇ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಸರಕಾರ ಹೇಳುತ್ತಿದೆ. ಈ ಮೂಲಕ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದು ಎಂದು ಘೋಷಿಸಲಾಗಿದೆ.

 ಕೃಷಿ ವಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೋಡುವುದಕ್ಕೂ, ಯಡಿಯೂರಪ್ಪ ಅವರು ನೋಡುವುದಕ್ಕೂ ವ್ಯತ್ಯಾಸವಿದೆ. ನರೇಂದ್ರ ಮೋದಿಯವರ ಪಾಲಿಗೆ ಅಭಿವೃದ್ಧಿಯೆಂದರೆ ಎಲ್ಲವನ್ನೂ ಕಾರ್ಪೊರೇಟ್ ವಲಯಕ್ಕೆ ಒಪ್ಪಿಸುವುದು. ಅವರು ದೇಶವನ್ನು ನೋಡುವುದು ಅಂಬಾನಿಯ ಕಣ್ಣಿನ ಮೂಲಕ. ಅಲ್ಲಿ ರೈತರ ಹಿತಾಸಕ್ತಿಯ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ. ಮುಖ್ಯವಾಗಿ ಕೃಷಿ ವಲಯ ಮತ್ತು ಆಹಾರ ಭದ್ರತೆಯ ಕುರಿತಂತೆ ಮೋದಿ ಅವರಿಗೆ ಯಾವ ಜ್ಞಾನವೂ ಇಲ್ಲ. ಯಡಿಯೂರಪ್ಪ ಅವರ ಯೋಚನಾ ಲಹರಿ ಅದಕ್ಕಿಂತ ಭಿನ್ನವಾದುದು. ರೈತಹೋರಾಟಗಳ ಮೂಲಕವೇ ತನ್ನ ರಾಜಕೀಯ ಬದುಕನ್ನು ರೂಪಿಸಿಕೊಂಡು ಬಂದವರು ಯಡಿಯೂರಪ್ಪ. ಈ ಹಿಂದೆ ಪ್ರಮಾಣ ವಚನ ಮಾಡುವಾಗ ಸಾಂಕೇತಿಕವಾಗಿ ಹಸಿರು ಬಟ್ಟೆಯನ್ನು ಧರಿಸಿದ್ದರೇ ಹೊರತು, ಕೇಸರಿ ಬಟ್ಟೆಯನ್ನು ಅವರು ಧರಿಸಿರಲಿಲ್ಲ. ಸದ್ಯ ಕೇಂದ್ರ ಮತ್ತು ರಾಜ್ಯಗಳು ಜಾರಿಗೆ ಮಾಡಲು ಹೊರಟಿರುವ ಕಾಯ್ದೆ ರೈತರ ಪಾಲಿಗೆ ಯಾವ ರೀತಿಯಲ್ಲಿ ಹಾನಿಕರ ಎನ್ನುವುದು ಯಡಿಯೂರಪ್ಪ ಅವರಿಗೆ ತಿಳಿಯದ್ದೇನಲ್ಲ. ಒಂದು ವೇಳೆ, ಇಂದು ಯಡಿಯೂರಪ್ಪ ಅವರು ವಿರೋಧ ಪಕ್ಷ ಸ್ಥಾನದಲ್ಲಿ ನಿಂತಿದ್ದರೆ, ಇಂದು ಈ ಕಾಯ್ದೆಯ ವಿರುದ್ಧ ದೊಡ್ಡ ಆಂದೋಲನವನ್ನೇ ನಡೆಸುತ್ತಿದ್ದರೇನೋ? ಕೇಂದ್ರ ಬಿಜೆಪಿ, ರೈತ ವಿರೋಧಿ ಕಾನೂನನ್ನು ತನ್ನದೇ ಪಕ್ಷದ ಒಬ್ಬ ರೈತ ನಾಯಕನ ಕೈಯಲ್ಲಿ ಜಾರಿಗೆ ತರಲು ಹೊರಟಿರುವುದು ಕಾಲದ ವ್ಯಂಗ್ಯ. ಕರ್ನಾಟಕದ ರೈತರನ್ನು ಬಲಿ ಪಶುಗಳನ್ನಾಗಿಸಲು ಯಡಿಯೂರಪ್ಪರನ್ನು ದಿಲ್ಲಿಯ ಬಿಜೆಪಿ ನಾಯಕರು ದುರ್ಬಳಕೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡ ಮೂರು ಕಾನೂನು ತಿದ್ದುಪಡಿಯನ್ನು ವಿರೋಧಿಸಿ ಕೇಂದ್ರ ಸಚಿವ ಹರ್‌ಸಿಮ್ರತ್ ಕೌರ್ ರಾಜೀನಾಮೆ ಯಡಿಯೂರಪ್ಪರಿಗೆ ಮಾದರಿಯಾಗಬೇಕಾಗಿತ್ತು. ಮುಖ್ಯಮಂತ್ರಿ ಕುರ್ಚಿಗಿಂತ ರೈತರ ಹಿತಾಸಕ್ತಿ ಮುಖ್ಯ ಎನ್ನುವುದನ್ನು ಅವರು ದಿಲ್ಲಿಯ ವರಿಷ್ಠರಿಗೆ ಘೋಷಿಸಬೇಕಾಗಿತ್ತು. ಈಗಾಗಲೇ ಬಿಜೆಪಿಯೊಳಗಿಂದಲೇ ಯಡಿಯೂರಪ್ಪ ಅವರು ಹತ್ತು ಹಲವು ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಸರಕಾರ ಸರಿಯಾಗಿ ಕಾರ್ಯನಿರ್ವಹಿಸದಂತೆ ಪಕ್ಷದೊಳಗಿರುವ ನಾಯಕರೇ ದಿಲ್ಲಿಯಲ್ಲಿ ಕೂತು ಸಂಚು ನಡೆಸುತ್ತಿದ್ದಾರೆ. ಜೊತೆಗೆ, ರಾಜ್ಯಕ್ಕೆ ಸಿಗಬೇಕಾದ ಪರಿಹಾರ ನಿಧಿ, ಅನುದಾನಗಳನ್ನು ಕೇಂದ್ರ ಸರಕಾರ ಹಿಡಿದಿಟ್ಟುಕೊಂಡಿದೆ. ಇಂತಹ ಹೊತ್ತಿನಲ್ಲಿ, ನಾಡಿನ ರೈತರನ್ನು ಬೀದಿ ಪಾಲು ಮಾಡುವಂತಹ ಕಾಯ್ದೆಗಳನ್ನು ಯಡಿಯೂರಪ್ಪ ಕೈಯಲ್ಲಿ ಜಾರಿಗೊಳಿಸಲು ಕೇಂದ್ರ ನಾಯಕರು ಹೊರಟಿದ್ದಾರೆ. ಇದು ಯಡಿಯೂರಪ್ಪ ಅವರ ರೈತ ಪರ ಹೋರಾಟದ ಇತಿಹಾಸಕ್ಕೆ ಕಳಂಕ ತರಲಿದೆ. ರಾಜ್ಯ ವಿರೋಧಿ, ರೈತ ವಿರೋಧಿ ಕೇಂದ್ರ ಸರಕಾರದ ನಿಲುವಿನ ವಿರುದ್ಧ ಪ್ರತಿಭಟಿಸಿ ರಾಜೀನಾಮೆ ನೀಡಿ ಹೊರ ಬಂದಿದ್ದರೆ, ಇಂದು ಯಡಿಯೂರಪ್ಪ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿ ಬಿಡುತ್ತಿದ್ದರು.

ಭೂ ಸುಧಾರಣೆ ಕಾಯ್ದೆ ಯಾಕೆ ಅನುಷ್ಠಾನಗೊಂಡಿತು, ಅದರ ಹಿಂದಿರುವ ಅಪಾರ ರೈತರ ಪರ ಕಾಳಜಿ ಮತ್ತು ಜಮೀನ್ದಾರಿ ಊಳಿಗಮಾನ್ಯ ಪದ್ಧತಿಯ ವಿರುದ್ಧದ ನಿಲುವು ಯಡಿಯೂರಪ್ಪ ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಭೂಸುಧಾರಣಾ ಕಾಯ್ದೆಯು ಕುಟುಂಬಗಳು ಹೊಂದಬಹುದಾದ ಭೂಮಿಯ ಮೇಲೆ ಮಿತಿ ಹೇರುತ್ತದೆ. ಹೆಚ್ಚುವರಿ ಭೂಮಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಭೂರಹಿತರಿಗೆ ಹಂಚಿಕೆ ಮಾಡಲು ಅವಕಾಶ ನೀಡುತ್ತದೆ. ಇಂದು ಕರಾವಳಿಯೂ ಸೇರಿದಂತೆ ರಾಜ್ಯಾದ್ಯಂತ ಕೆಳವರ್ಗದ ಜನರು ಭೂಮಿಯನ್ನು ಹೊಂದಿದ್ದರೆ ಅದಕ್ಕೆ ಕಾರಣ ಭೂಸುಧಾರಣೆ ಕಾಯ್ದೆ. ಇದರಿಂದ ಉಳುವವನಿಗೆ ಸ್ವಂತ ನೆಲ ಸಿಕ್ಕಿತು ಮಾತ್ರವಲ್ಲ, ಜಮೀನ್ದಾರರ ಶೋಷಣೆಗಳಿಗೂ ಕಡಿವಾಣ ಬಿತ್ತು. ಈ ಕಾಯ್ದೆ ಒಂದು ಆಂದೋಲನದ ರೂಪದಲ್ಲಿ ಜಾರಿಗೆ ಬಂತು. ನೂರಾರು ಹೋರಾಟಗಾರರು ಈ ಕಾಯ್ದೆಯ ಜಾರಿಯ ಸಂದರ್ಭದಲ್ಲಿ ತ್ಯಾಗ, ಬಲಿದಾನ ಗೈದಿದ್ದಾರೆ. ಇದೀಗ, ಒಂದು ಸುಗ್ರೀವಾಜ್ಞೆಯ ಮೂಲಕ ಕರ್ನಾಟಕ ಮತ್ತೆ 70 ರ ದಶಕದ ಹಿಂದಿನ ಕಾಲಘಟ್ಟಕ್ಕೆ ಮರಳಿದೆ. ಸುಗ್ರೀವಾಜ್ಞೆಯ ಮೂಲಕ ಸರಕಾರ ತಂದ ತಿದ್ದುಪಡಿ, ಕೃಷಿಕರಲ್ಲದವರು ತಮಗೆ ಬೇಕಾದಷ್ಟು ಕೃಷಿ ಭೂಮಿ ಕೊಂಡು ಇಷ್ಟಬಂದಂತೆ ಬಳಸಿಕೊಳ್ಳಲು ಅವಕಾಶ ನೀಡುತ್ತದೆ. ಈಗಾಗಲೇ ಸೋತು ಸುಣ್ಣವಾಗಿರುವ ರೈತರಿಗೆ ಹಣದ ಆಮಿಷ ಒಡ್ಡಿ ಅಥವಾ ಸಾಲದ ಹಗ್ಗಗಳಿಂದ ಕಟ್ಟಿ ಹಾಕಿ ಶ್ರೀಮಂತರು ರೈತರ ಭೂಮಿಯನ್ನು ಸುಲಭವಾಗಿ ತನ್ನದಾಗಿಸಿಕೊಳ್ಳಲಿದ್ದಾರೆ. ಬ್ಲಾಕ್‌ಮೇಲ್‌ಗಳ ಮೂಲಕ, ರೆಟ್ಟೆ ಬಲದ ಮೂಲಕವೂ ರೈತರ ಭೂಮಿಯನ್ನು ಶ್ರೀಮಂತರು ವಶಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಭೂಮಿ ಕಳೆದುಕೊಳ್ಳುವ ರೈತರು ಒಂದೋ ನಗರದಲ್ಲಿ ಕೂಲಿಕಾರ್ಮಿಕರಾಗಿ ಅಥವಾ ಕಾರ್ಪೊರೇಟ್ ಹೊಲದಲ್ಲಿ ಎತ್ತುಗಳಾಗಿ ದುಡಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಲಿದೆ.

  ಕೇಂದ್ರ ಸರಕಾರ ಜಾರಿಗೆ ತಂದ ಯಾವುದೇ ಯೋಜನೆ ಅಂತಿಮವಾಗಿ ತನ್ನ ಗುರಿ ತಲುಪಲು ವಿಫಲವಾಗಿ ಜನಸಾಮಾನ್ಯರನ್ನು ಬೀದಿಪಾಲು ಮಾಡಿರುವ ಸಾಲು ಸಾಲು ಉದಾಹರಣೆಗಳು ನಮ್ಮ ಮುಂದಿವೆ. ನೋಟು ನಿಷೇಧದಿಂದ ಕಪ್ಪು ಹಣ ಹೊರಗೆ ಬರುತ್ತದೆ ಎಂದು ನರೇಂದ್ರ ಮೋದಿ ಘೋಷಿಸಿದರು. ಆದರೆ ಕಪ್ಪು ಹಣ ಪತ್ತೆಯಾಗಲಿಲ್ಲ. ಬದಲಿಗೆ ಇರುವ ಕಪ್ಪು ಹಣಗಳೆಲ್ಲ ಬಿಳಿಯಾದವು. ಜನಸಾಮಾನ್ಯರು ಬೀದಿಗೆ ಬಿದ್ದರು. ಗ್ರಾಮೀಣ ಉದ್ದಿಮೆಗಳು ನಾಶವಾದವು. ಇದಾದ ಬಳಿಕ ಜಿಎಸ್‌ಟಿ ತೆರಿಗೆ ದೇಶದ ವ್ಯವಹಾರ, ವಹಿವಾಟುಗಳಲ್ಲಿ ಕ್ರಾಂತಿಯನ್ನು ಸೃಷ್ಟಿಸುತ್ತದೆ, ಬೆಲೆ ಇಳಿಕೆಯಾಗುತ್ತದೆ ಎಂದು ನಂಬಿಸಲಾಯಿತು.ಆದರೆ ಇಂದು ಜಿಎಸ್‌ಟಿ ಕಾರಣದಿಂದ ವ್ಯಾಪಾರ ಕಷ್ಟಕರವಾಗಿದೆ ಮಾತ್ರವಲ್ಲ, ರಾಜ್ಯಗಳ ಪರಿಹಾರ ರೂಪದ ತೆರಿಗೆಯನ್ನು ಪಾವತಿಸದೆ ಕೇಂದ್ರ ಸರಕಾರ ವಂಚಿಸಿದೆ. ಇದೀಗ ಕೃಷಿವಲಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಇದು ರೈತರಿಗೆ ಒಳಿತನ್ನು ಮಾಡುತ್ತದೆ ಎಂದು ಮತ್ತೆ ಮೋದಿ ಅವರು ಭಾಷಣಗೈಯುತ್ತಿದ್ದಾರೆ. ಮೋದಿ ಅವರ ಈ ಹಿಂದಿನ ಎಲ್ಲ ಕ್ರಮಗಳ ಲಾಭವನ್ನು ಪಡೆದಿರುವುದು ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಕುಳಗಳು. ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ವಲಯದ ಕೈಗೆ ಒಪ್ಪಿಸುವ ಭಾಗವಾಗಿಯೇ ಮೂರು ತಿದ್ದುಪಡಿಗಳನ್ನು ತರಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಿಲ್ಲ. ಇದರ ವಿರುದ್ಧ ದೇಶಾದ್ಯಂತ ರೈತರು ದಂಗೆಯೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಉಗ್ರಗಾಮಿಗಳಾಗಿ ಜೈಲು ಸೇರುವ ಪ್ರಸಂಗಗಳು ಬಂದರೆ ಅಚ್ಚರಿಯಿಲ್ಲ. ದೇಶದ ಆರ್ಥಿಕತೆಯನ್ನು ಹಂತಹಂತವಾಗಿ ನಾಶ ಮಾಡಿದ ಸರಕಾರ ಇದೀಗ ದೇಶದ ಬೆನ್ನೆಲುಬು ಎಂದು ಗುರುತಿಸಲ್ಪಟ್ಟ ಕೃಷಿ ಕ್ಷೇತ್ರವನ್ನು ನಾಶ ಮಾಡಲು ಹೊರಟಿದೆ. ಸರಕಾರದ ಈ ನಿರ್ಧಾರ, ದೇಶದ ಆತ್ಮಕ್ಕೆ ಮಾಡುವ ಗಾಯವಾಗಿದೆ. ಈ ಗಾಯ ಉಲ್ಬಣಗೊಂಡರೆ, ದೇಶವನ್ನು ಕಾಪಾಡಲು ವಿತ್ತ ಸಚಿವೆ ಹೇಳಿದಂತೆ ‘ದೇವರೇ ಕೆಳಗಿಳಿದು ಬರಬೇಕಾಗುತ್ತದೆ’’.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)