varthabharthi


ಕರಾವಳಿ

ಸರಕಾರದ ವಿರುದ್ಧ ಆಕ್ರೋಶ: ಮಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಹೆದ್ದಾರಿ ತಡೆ

ವಾರ್ತಾ ಭಾರತಿ : 25 Sep, 2020

ಮಂಗಳೂರು, ಸೆ.25: ಭೂ ಮಸೂದೆ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಎದ್ದಿರುವ ರೈತ ಪರ ಹೋರಾಟದ ಭಾಗವಾಗಿ ಇಂದು ಮಂಗಳೂರಿನಲ್ಲಿ ಬಿಜೆಪಿಯೇತರ ಪಕ್ಷಗಳು, ರೈತ ಹಾಗೂ ಜನಪರ ಸಂಘಟನೆಗಳ ನೇತೃತ್ವದಲ್ಲಿ ಹೆದ್ದಾರಿ ರಸ್ತೆ ತಡೆ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಯಿತು.

ನಗರದ ಪ್ರಮುಖ ಹೆದ್ದಾರಿ ರಸ್ತೆಯಾಗಿರುವ ನಂತೂರು ಸರ್ಕಲ್ ಬಳಿ ರೈತ ಪರ ಹೋರಾಟಗಾರರು ಕೆಲ ನಿಮಿಷಗಳ ಕಾಲ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ವಾಹನಗಳ ಸಂಚಾರವನ್ನು ತಡೆದು ಸಾಂಕೇತಿಕ ರಸ್ತೆ ತಡೆ ನಡೆಸಿದರು.

ಬಳಿಕ ರಸ್ತೆ ಬದಿಯಲ್ಲೇ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ದೇಶದ ಬೆನ್ನೆಲುಬಾಗಿರುವ ರೈತರ ವಿರೋಧಿ ನಡೆಯ ಮೂಲಕ ಕೇಂದ್ರ ಸರಕಾರ ವರ್ತಿಸಿದೆ. ಲಾಕ್‌ಡೌನ್‌ನಿಂದ ಈಗಾಗಲೇ ತತ್ತರಿಸಿರುವ ಜನಸಮುದಾಯ ಸೇರಿದಂತೆ ರೈತ ವರ್ಗಕ್ಕೆ ಭೂ ಮಸೂದೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಮುಂದಾಗಿದೆ ಎಂದು ದೂರಿದರು.

ರೈತ ಸಂಘಟನೆಯ ಇನ್ನೋರ್ವ ನಾಯಕ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಮಾತನಾಡಿ, ಪ್ರಧಾನಿ ಮೋದಿಯ ಗುಣಗಾನ ಮಾಡುವವರು ಹೋರಾಟ ಮಾಡುತ್ತಿರುವ ರೈತರು ಎಪಿಎಂಸಿ, ಬಿಜೆಪಿ ವಿರೋಧಿಗಳು ಎನ್ನುತ್ತಿದ್ದಾರೆ. ರೈತರಾದ ನಾವು ಯಾವುದೇ ಪಕ್ಷದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿರುವುದು. ರೈತರ ಪರವಾಗಿರುವ ಕಾಯಿದೆಗೆ ತಿದ್ದುಪಡಿ ತಂದು ರೈತರನ್ನು ಬೀದಿಗೆಳೆದಿರುವವರಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ರೈತರು, ಬಡವರ ಹೆಸರಿನಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದವರು ಇದೀಗ ಬಂಡವಾಳಶಾಹಿಗಳ ಕಪ್ಪು ಹಣವನ್ನು ಬಿಳಿ ಮಾಡುವ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕಾರ್ಮಿಕ ಹಾಗೂ ರೈತ ವರ್ಗಕ್ಕೆ ಮಾರಕವಾಗಿರುವ ಕಾನೂನುಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸಲು ಸಾಧ್ಯವಿಲ್ಲ. ಕರಾಳ ಶಾಸನಗಳಿಂದಾಗಿ ರೈತರು, ಕಾರ್ಮಿಕರು, ಯುವಜನರು ಬೀದಿಗಿಳಿದಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಯವರು ಭ್ರಮೆಯಿಂದ ಹೊರಬರಬೇಕು. ಇದು ಅದಾನಿ, ಅಂಬಾನಿಯ ದೇಶವಲ್ಲ. ಇದು ಇಲ್ಲಿನ ದುಡಿಯುವ ವರ್ಗ, ರೈತ, ಕಾರ್ಮಿಕರು, ಯುವಜನರ ದೇಶ. ಯಾರೂ ಅಂಧ ಅನುಯಾಯಿಗಳಾಗದೆ, ವ್ಯಕ್ತಿ ಆರಾಧನೆ ಮೂಲಕ ದೇಶವನ್ನು ಬಲಿಯಾಗಲು ಬಿಡುವುದು ಬೇಡ ಎಂದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್‌ರೈ, ದಲಿತ ಹೋರಾಟ ಸಮಿತಿಯ ದೇವದಾಸ್, ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಜನಪರ ಹೋರಾಟಗಾರ ಪಿ.ವಿ. ಮೋಹನ್ ಮೊದಲಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು, ಪಕ್ಷಗಳ ಮುಖಂಡರಾದ ಬಿ. ಶೇಖರ್, ಸದಾಶಿವ ಉಳ್ಳಾಲ್, ಸೀತಾರಾಮ ಬೇರಿಂಜ, ವಾಸುದೇವ ಉಚ್ಚಿಲ್, ಯು.ಬಿ. ಲೋಕಯ್ಯ, ವಿ. ಕುಕ್ಯಾನ್, ಎಚ್.ವಿ.ರಾವ್, ಭಾರತಿ, ಜಯಂತಿ ಶೆಟ್ಟಿ, ಪ್ರಮೀಳಾ, ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ನವೀನ್ ಡಿಸೋಜ, ಎ.ಸಿ. ವಿನಯರಾಜ್, ಸಂತೋಷ್ ಕುಮಾರ್ ಶೆಟ್ಟಿ, ನೀರಜ್ ಪಾಲ್, ಜಗದೀಶ್, ಅಪ್ಪಿ, ದಿನೇಶ್ ಕುಂಪಲ, ರಾಮಣ್ಣ ವಿಟ್ಲ, ಬಾಬು ಪಿಲಾರ್, ಜೆಸಿಂತಾ ವಿಜಯಾ ಆಲ್ಫ್ರೆಡ್, ಸುಹೈಲ್ ಕಂದಕ್, ಸವಾದ್ ಸುಳ್ಯ ಮೊದಲಾದವರು ಭಾಗವಹಿಸಿದ್ದರು.

ಐಕ್ಯ ವೇದಿಕೆಯಡಿ ನಡೆದ ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ಬಜಾಲ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)