varthabharthi


ಸಂಪಾದಕೀಯ

ಇಂದಿನ ರೈತರೇ ಭವಿಷ್ಯದ ವಲಸೆ ಕಾರ್ಮಿಕರು!

ವಾರ್ತಾ ಭಾರತಿ : 29 Sep, 2020

ಮೋದಿ ಸರಕಾರವು ಹಠಾತ್ತನೆ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ದುಡಿಮೆಯನ್ನು ಕಳೆದುಕೊಂಡು ಹತಾಶರಾದ ನೂರಾರು ಕಾರ್ಮಿಕರು ಬಿರುಬಿಸಿಲಿನ ನಡುವೆ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ದೃಶ್ಯಗಳು ಭಾರತದ ಪಾಲಿಗೆ ಮರೆಯಲಾಗದ ಕೆಂಪು ನೆನಪು. ಭಾರತದ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರ ದೈನೇಸಿ ಸ್ಥಿತಿ ಆ ಮೂಲಕ ಅನಾವರಣಗೊಂಡಿತು. ಕೋವಿಡ್-19 ಸೃಷ್ಟಿಸಿದ ಆರೋಗ್ಯ ಬಿಕ್ಕಟ್ಟು ಹಠಾತ್ತನೆ ಮಾನವೀಯ ಬಿಕ್ಕಟ್ಟಾಗಿಯೂ ಪರಿವರ್ತನೆಗೊಂಡಿತು. ಕಾಲ್ನಡಿಗೆಯಲ್ಲಿ ಊರಿಗೆ ತೆರಳುತ್ತಿದ್ದ ಕಾರ್ಮಿಕರು ವಿಶ್ರಮಿಸಲೆಂದು ರೈಲ್ವೆ ಹಳಿಯಲ್ಲಿ ಮಲಗಿದ್ದಾಗ, ರೈಲು ಹರಿದು 16 ಮಂದಿ ಮೃತಪಟ್ಟ ದಾರುಣ ಘಟನೆಗೂ ಲಾಕ್‌ಡೌನ್ ಸಾಕ್ಷಿಯಾಯಿತು. ಇದೀಗ ರೈತ ವಿರೋಧಿ ವಿಧೇಯಕಗಳು ಸಾಲು ಸಾಲಾಗಿ ಜಾರಿಗೊಳ್ಳುತ್ತಿರುವಾಗ ಈ ವಲಸೆ ಕಾರ್ಮಿಕರ ಸಂಕಟಗಳನ್ನು ನಾವು ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ.

ಕಂಬಳಿ ಹುಳ ಅರಳಿ ಚಿಟ್ಟೆಯಾಗುವುದನ್ನು ನಾವು ನೋಡಿದ್ದೇವೆ. ಭಾರತದಲ್ಲಿ ರೈತ ನರಳಿ ವಲಸೆ ಕಾರ್ಮಿಕನಾಗುತ್ತಾನೆ. ಇಂದು ಯಾವೆಲ್ಲ ವಿಧೇಯಕಗಳು ಸಾಲು ಸಾಲಾಗಿ ಜಾರಿಗೊಳ್ಳುತ್ತಿವೆಯೋ ಅದರ ಅಂತಿಮ ಪರಿಣಾಮವೆಂದರೆ, ನಿಧಾನಕ್ಕೆ ರೈತ ರು ತನ್ನೆಲ್ಲ ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ಒಪ್ಪಿಸಿ, ಅವರ ಕೂಲಿ ಕಾರ್ಮಿಕರಾಗಿ ಪರಿವರ್ತನೆ ಹೊಂದುವುದು ಅಥವಾ ಹಳ್ಳಿಯಲ್ಲಿರುವ ತಮ್ಮ ಭೂಮಿಯನ್ನು ಉಳ್ಳವರಿಗೆ ಮಾರಿ, ಹಣ ಕಳೆದುಕೊಂಡು ಬಳಿಕ ನಗರಗಳಿಗೆ ವಲಸೆ ಹೋಗಿ ಅಲ್ಲಿ ಕಾರ್ಮಿಕರಾಗಿ ಹೆಸರು, ಊರು, ದೇಶ ಇಲ್ಲದ ಜನರಾಗಿ ಬದಲಾಗುತ್ತಾರೆ. ಹೌದು, ಇವರ ಪಾಲಿಗೆ ದೇಶ, ಸರಕಾರ ಯಾವುದೂ ಇಲ್ಲ. ಯಾಕೆಂದರೆ, ಇವರ ಬದುಕು, ಸಾವುಗಳು ಲೆಕ್ಕ ಇಟ್ಟುಕೊಳ್ಳುವಷ್ಟು ಅಗತ್ಯವಾದುದು ಅಲ್ಲ ಎನ್ನುವುದನ್ನು ಈಗಾಗಲೇ ಸರಕಾರ ಜಾಹೀರು ಪಡಿಸಿದೆ. ಕಳೆದ ವಾರ ಲೋಕಸಭೆಯಲ್ಲಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾಗ ಸಾವನ್ನಪ್ಪಿದ ಇಲ್ಲವೇ ಗಾಯಗೊಂಡ ಕಾರ್ಮಿಕರ ಬಗ್ಗೆ ಸರಕಾರದ ಬಳಿ ಯಾವುದೇ ದತ್ತಾಂಶವಿಲ್ಲವೆಂದು ತಿಳಿಸಿದ್ದರು. ಸರಕಾರದ ಈ ನಡವಳಿಕೆ, ವಲಸೆ ಕಾರ್ಮಿಕರ ಸಾವು ನೋವುಗಳಿಗೆ ತಾನು ಜವಾಬ್ದಾರನಲ್ಲ ಎನ್ನುವುದನ್ನು ಹೇಳುತ್ತದೆ.

ಸ್ವಯಂಸೇವಾ ಸಂಸ್ಥೆಯೊಂದರ ಕಾರ್ಯಕರ್ತರ ತಂಡವು ತಯಾರಿಸಿದ ವರದಿಯೊಂದು ಲಾಕ್‌ಡೌನ್ ಹೇರಲ್ಪಟ್ಟ ಮೊದಲ ಎರಡು ತಿಂಗಳುಗಳಲ್ಲಿ 971 ಮಂದಿ ಕಾರ್ಮಿಕರು ಊರಿಗೆ ಮರಳುತ್ತಿದ್ದಾಗ ಸಾವನ್ನಪ್ಪಿರುವುದನ್ನು ಬಹಿರಂಗಪಡಿಸಿದೆ ಮತ್ತು ಇವು ಕೊರೋನ ಸೋಂಕಿನಿಂದ ಸಂಭವಿಸಿದ ಸಾವುಗಳಲ್ಲವೆಂಬುದನ್ನು ದೃಢಪಡಿಸಿದೆ. ಈ ಪೈಕಿ ಶ್ರಮಿಕ್ ರೈಲುಗಳಲ್ಲಿ 96 ಸಾವುಗಳು ಸಂಭವಿಸಿದ್ದರೆ, 209 ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ ಹಾಗೂ ಹಸಿವು ಹಾಗೂ ಆರ್ಥಿಕ ಸಂಕಷ್ಟದಿಂದಾಗಿ 216 ಮಂದಿ ಸಾವನ್ನಪ್ಪಿದ್ದಾರೆಂಬುದನ್ನು ವರದಿ ತಿಳಿಸಿದೆ. ವಲಸೆ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಎದುರಿಸಿದ ಸಂಕಷ್ಟಗಳ ತೀವ್ರತೆಯೂ ಅತ್ಯಂತ ಘೋರವಾದುದಾಗಿತ್ತು.

1.04 ಕೋಟಿಗೂ ಅಧಿಕ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ವಾಪಸಾಗಿದ್ದಾರೆಂದು ರಾಜ್ಯ ಸರಕಾರದ ಅಂಕಿಅಂಶಗಳನ್ನು ಆಧರಿಸಿ ಕಾರ್ಮಿಕ ಸಚಿವಾಲಯವು ಸಂಸತ್‌ನಲ್ಲಿ ಹೇಳಿಕೆ ನೀಡಿದೆ. ಆದಾಗ್ಯೂ ಕರ್ನಾಟಕ, ಛತ್ತೀಸ್‌ಗಡ, ಒಡಿಶಾ ಸೇರಿದಂತೆ ಹಲವಾರು ರಾಜ್ಯಗಳ ದತ್ತಾಂಶಗಳು ಲಭ್ಯವಿಲ್ಲ. ಇತರ ಕೆಲವು ಅಂದಾಜುಗಳ ಪ್ರಕಾರ, ತಮ್ಮ ಊರುಗಳಿಗೆ ವಾಪಸಾದ ಕಾರ್ಮಿಕ ಸಂಖ್ಯೆಯು 2-3 ಕೋಟಿಯನ್ನು ದಾಟಿದೆ. ಎಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ, ನಗರದಿಂದ ಹಳ್ಳಿ ತಲುಪಿದ ಬಳಿಕ ಈ ಕಾರ್ಮಿಕರ ಸ್ಥಿತಿಯೇನಾಯಿತು? ಎನ್ನುವುದರ ಕುರಿತಂತೆಯೂ ಯಾರಲ್ಲೂ ಮಾಹಿತಿಯಿಲ್ಲ. ಊರು ಅವರನ್ನು ಯಾವ ರೀತಿಯಲ್ಲಿ ಸ್ವೀಕರಿಸಿದೆ? ಜಾತಿ, ವರ್ಗಗಳಿಂದ ನಿರ್ಲಕ್ಷಿಸಲ್ಪಟ್ಟ ಈ ಕಾರ್ಮಿಕರನ್ನು ಕೊರೋನ ಜೊತೆಗೆ ಸ್ವೀಕರಿಸುವಷ್ಟು ಉದಾರತನವನ್ನು ಹಳ್ಳಿಗಳು ಹೊಂದಿವೆಯೇ? ಎನ್ನುವ ಪ್ರಶ್ನೆಗಳಿಗೆ ಉತ್ತರಗಳೇ ಇಲ್ಲ. ವಲಸೆ ಕಾರ್ಮಿಕರು ಅತ್ತ ನಗರಕ್ಕೂ ಇತ್ತ ಊರಿಗೂ ಸಲ್ಲದಂತೆ ಬದುಕುತ್ತಿರುವವರು. ಆದುದರಿಂದಲೇ ಇವರು ಅಲ್ಲೂ ಇಲ್ಲೂ ಸರಕಾರದ ಸವಲತ್ತುಗಳಿಂದಲೂ ಸುಲಭವಾಗಿ ವಂಚಿತರಾಗುತ್ತಾರೆ.

ದೇಶದಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರಿದ್ದಾರೆಂಬ ಬಗ್ಗೆಯೂ ಸರಕಾರಕ್ಕೆ ಯಾವುದೇ ನಿಖರವಾದ ಅಂದಾಜಿಲ್ಲ. ಮೇ ತಿಂಗಳ ಕೊನೆಯ ವಾರದಲ್ಲಿ ಕೇಂದ್ರ ಸರಕಾರವು ಹೇಳಿಕೆಯೊಂದರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು ನಾಲ್ಕು ಕೋಟಿ ವಲಸೆ ಕಾರ್ಮಿಕರು ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದರು ಹಾಗೂ ಅವರ ಪೈಕಿ 75 ಲಕ್ಷಕ್ಕೂ ಅಧಿಕ ಮಂದಿ ರೈಲು ಹಾಗೂ ಬಸ್‌ಗಳಲ್ಲಿ ತಮ್ಮ ಊರುಗಳಿಗೆ ತೆರಳಿದ್ದಾರೆಂದು ತಿಳಿಸಿತ್ತು. ದೇಶದಲ್ಲಿ ಸುಮಾರು 6 ಕೋಟಿ ಅಂತರ್‌ರಾಜ್ಯ ವಲಸೆ ಕಾರ್ಮಿಕರು ಹಾಗೂ 8 ಕೋಟಿ ಅಂತರ್‌ಜಿಲ್ಲಾ ಕಾರ್ಮಿಕರಿದ್ದಾರೆಂದು 2017ರ ಆರ್ಥಿಕ ಸಮೀಕ್ಷೆ ಅಂದಾಜಿಸಿತ್ತು. ಬೇರೆ ರಾಜ್ಯಗಳಲ್ಲಿ ದುಡಿಯುತ್ತಿರುವ ಅಥವಾ ತವರು ರಾಜ್ಯಗಳಿಗೆ ಮರಳಿರುವ ವಲಸೆ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಡೋಲಾಯಮಾನವಾಗಿರುವಂತೆಯೇ, ಇನ್ನೊಂದೆಡೆ ಕೇಂದ್ರ ಸರಕಾರವು ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ‘ಕಾರ್ಮಿಕ ಸುಧಾರಣೆ ಾನೂನು’ಗಳನ್ನು ಜಾರಿಗೊಳಿಸುವ ಸನ್ನಾಹದಲ್ಲಿದೆ. ಇದೇ ಸಂದರ್ಭದಲ್ಲಿ, ಈ ದೇಶದ ರೈತ ವಿರೋಧಿ ವಿಧೇಯಕಗಳು ಒಂದೊಂದಾಗಿ ಹೊರ ಬಿದ್ದಿವೆ. ಇವು, ಈ ದೇಶದ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸ ಲಿವೆ.

ಜೊತೆಗೇ ಗ್ರಾಮೀಣ ಸಣ್ಣ ರೈತರ ಅಸ್ತಿತ್ವವನ್ನು ಬುಡ ಸಮೇತ ಕಿತ್ತು ಹಾಕಲಿದೆ. ನಮ್ಮ ನಗರಗಳ, ನಿರ್ಮಾಣ ಕಾಮಗಾರಿಗಳ ಅಡ್ಡಿಗಲ್ಲುಗಳಾಗಿರುವ ಈ ಕಾರ್ಮಿಕರ ಸ್ಥಿತಿ ಸುಧಾರಣೆಯಾಗದೆ ಇದ್ದರೆ, ಮೋದಿಯ ಆತ್ಮ ನಿರ್ಭರತೆ ಮಂತ್ರ ಬರೇ ಉಗುಳಾಗಿಯಷ್ಟೇ ಉಳಿಯುತ್ತದೆ. ರೈತರು ಮತ್ತು ಕಾರ್ಮಿಕರ ನಡುವಿನ ಅಂತರವನ್ನು ಇಲ್ಲವಾಗಿಸುವ, ಅರಳ ಬೇಕಾದ ರೈತರನ್ನು ನರಳುವಂತೆ ಮಾಡಿ, ಅವರನ್ನು ಕಾರ್ಮಿಕರಾಗಿ ಹಿಂಭಡ್ತಿ ನೀಡುವ ಕಾಯ್ದೆಗಳನ್ನು ಹಿಂದೆಗೆಯದೇ ಇದ್ದರೆ, ಮುಂದೊಂದು ದಿನ, ವಲಸೆ ಕಾರ್ಮಿಕರೇ ಪ್ರತ್ಯೇಕ ದೇಶವಾಗಿ ಒಡೆದು ಹೋಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)