varthabharthi


ಅನುಗಾಲ

ಯಕ್ಷಗಾನ ಸಾಹಿತ್ಯ ಸಂಧಾನ: ಡಾ.ಎಂ. ಪ್ರಭಾಕರ ಜೋಶಿಯವರ ಕೃಷ್ಣಸಂಧಾನ-ಪ್ರಸಂಗ ಮತ್ತು ಪ್ರಯೋಗ

ವಾರ್ತಾ ಭಾರತಿ : 1 Oct, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮಹತ್ವದ ವಿಚಾರವೆಂದರೆ ಈ ಘನ ಪ್ರಬಂಧವು ಒಂದು ಪ್ರಸಂಗದ ಸುತ್ತ ಹಲವಾರು ಗಹನವಾದ ವಿಚಾರಗಳನ್ನು, ಕ್ಷೇತ್ರಗಳನ್ನು, ಸಮಸ್ಯೆಗಳನ್ನು ಚರ್ಚಿಸುತ್ತದೆ. ಪ್ರಸಂಗದ ಉಗಮ, ಇತಿಹಾಸ, ಪರಂಪರೆ ಮತ್ತು ವೈಶಿಷ್ಟ್ಯವನ್ನು ಅಪೂರ್ವವಾದ ನಿದರ್ಶನಗಳೊಂದಿಗೆ ಲೇಖಕರು ವಿವರಿಸುತ್ತಾರೆ. ವಿದ್ಯಾರ್ಥಿಯೊಬ್ಬ ನಡೆಸುವ ಕಲಿಕೆಯ ಭಾಗದಂತಿರುವ ಅಧ್ಯಯನಕ್ಕೂ ಜೋಶಿಯವರಂತಹ ಪಕ್ವ ಚಿಂತನೆಯ ವಿದ್ವಾಂಸರೊಬ್ಬರು ನಡೆಸುವ ಆತ್ಮವಿಶ್ವಾಸಪೂರ್ಣ ಅಧ್ಯಯನಕ್ಕೂ ಇರುವ ವ್ಯತ್ಯಾಸವು ಈ ಕೃತಿಯುದ್ದಕ್ಕೂ ಗೋಚರಿಸುತ್ತದೆ. ಹಾಗೆಂದು ತಮ್ಮ ಸಂಶೋಧನೆಯ ವಿಚಾರಧಾರೆಯೇ ಸರಿಯೆಂಬ ಹಠವು ಎಲ್ಲೂ ಕಾಣುವುದಿಲ್ಲ.ಸಾ
ಮಾನ್ಯವಾಗಿ ಯಕ್ಷಗಾನ ಕಲಾವಿದರು ತಮ್ಮ ಕಲಾಭಿವ್ಯಕ್ತಿಯಲ್ಲಿ ಎಷ್ಟೇ ಶ್ರೇಷ್ಠರಾದರೂ ಒಳ್ಳೆಯ ಬರಹಗಾರರಾಗಿಲ್ಲದಿರುವುದು ಒಂದು ವಿಚಿತ್ರ; ಆದರೂ ನಿಜ. ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆ ಈ ಎರಡೂ ಪ್ರಕಾರಗಳಲ್ಲಿ ಅದ್ವಿತೀಯರೆಂದೆನಿಸಿಕೊಂಡ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ವಾಗ್ವಿಸ್ಮಯವನ್ನು ಕಂಡು ಬೆರಗಾದವರು ಅವರ ಬರಹವನ್ನು ಗಮನಿಸಿದರೆ ನಿರೀಕ್ಷೆಗಳೆಲ್ಲ ತಲೆಕೆಳಗಾಗುತ್ತವೆ. ಪ್ರಸಿದ್ಧ ಅರ್ಥಧಾರಿಗಳಾಗಿದ್ದ ದೇರಾಜೆ ಸೀತಾರಾಮಯ್ಯನವರು ಹಲವು ಕೃತಿಗಳನ್ನು ಬರೆದಿದ್ದಾರೆ. ಆದರೆ ಅವರ ಅರ್ಥಗಾರಿಕೆಯ ಶ್ರೇಷ್ಠತೆಯೊಂದಿಗೆ ಮತ್ತು ಕನ್ನಡದ ಸಾಹಿತ್ಯದ ಇತರ ಮೌಲಿಕ ಕೃತಿಗಳೊಂದಿಗೆ ಹೋಲಿಸಿದಾಗ ಅವೂ ಪೇಲವವಾಗಿ ಕಂಡರೆ ಅಚ್ಚರಿಯಿಲ್ಲ. ಇನ್ನು ಅನೇಕ ಶ್ರೇಷ್ಠ ಕಲಾವಿದರು ಹೊಳೆಯದ ತಾರೆಯಾಗುವುದಕ್ಕಿಂತ ಉಳಿದ ಆಕಾಶವೇ ಲೇಸೆಂಬಂತೆ ಏನನ್ನೂ ಬರೆಯದೇ ಬರೆದಿದ್ದರೆ ಒಳ್ಳೆಯ ಬರಹಗಾರರಾಗುತ್ತಿದ್ದರೇನೋ ಎಂಬ ಸಂಶಯಕ್ಕೆಡೆಮಾಡಿಕೊಟ್ಟು ಹೋದರು. ಈ ಕುರಿತು ಚರ್ಚೆ ಮತ್ತು ಅಧ್ಯಯನವಾದರೆ ಯಕ್ಷಗಾನಕ್ಕೂ ಸಾಹಿತ್ಯಕ್ಕೂ ಸುಖ.
74ರ ಹರೆಯದ (ಜನನ: 1946) ಡಾ.ಎಂ.ಪ್ರಭಾಕರ ಜೋಶಿಯವರು ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ವಿಸ್ತಾರ ಓದುಗ. ಬಹುಶ್ರುತ ವಿದ್ವಾಂಸ. ನಿರರ್ಗಳ ಮಾತುಗಾರ. ತತ್ವಜ್ಞಾನಿ. ಇವೆಲ್ಲವುಗಳ ಜೊತೆಗೇ ಒಳ್ಳೆಯ ಬರಹಗಾರ. ಹಾಗೆಯೇ ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಹೆಸರು. ಕರಾವಳಿಯ ಮಾಮರದಲ್ಲಿ ಅರ್ಥಧಾರಿಯಾಗಿಯೂ ಸಾಹಿತಿಯಾಗಿಯೂ ವಸಂತಕ್ಕೆ ಕಾಯದೇ ಸರ್ವಋತುಗಳಲ್ಲೂ ಹಾಡುವ ಕೋಗಿಲೆ! ಈ ಕಾರಣಕ್ಕೆ ಪ್ರಭಾಕರ ಜೋಶಿಯವರು ಮಹತ್ವದ ಪ್ರತಿನಿಧಿಯಾಗುತ್ತಾರೆ.

ಜೋಶಿಯವರು ಹತ್ತಾರು ವಿಮರ್ಶಾಕೃತಿಗಳನ್ನು ಬರೆದದ್ದು ಮಾತ್ರವಲ್ಲ, ಅನೇಕ ಮೌಲಿಕ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಕರಾವಳಿಯ ಸಾಂಸ್ಕೃತಿಕ ಜಗತ್ತಿನಲ್ಲಿ ಅವರಿಲ್ಲದೆ ನಡೆಯುವ ಚಟುವಟಿಕೆಗಳು, ಸಂಘಟನೆಗಳು, ಅಪರೂಪ. ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರವೆಂಬಂತೆ ಅವರು ಸದಾ ಪ್ರಯಾಣದಲ್ಲೋ ಯಕ್ಷಗಾನ ತಾಳಮದ್ದಳೆ-ಸಭೆ, ಸಮಾರಂಭಗಳಲ್ಲೋ ಕ್ರಿಯಾಶೀಲರಾಗಿರುವವರು. ತನ್ನ ಸುತ್ತುಮುತ್ತಣ ಘಟನೆ-ವಿಘಟನೆಗಳ ಕುರಿತು ಚಿಂತಿಸುತ್ತ ಅಭಿಪ್ರಾಯಭಿನ್ನತೆಯಲ್ಲೂ ಸ್ನೇಹವನ್ನು ಕಾಪಾಡಿಕೊಂಡು ಬರುವ ಗೌರವಸ್ಥ. ಪಿಎಚ್.ಡಿ. ಮಹಾಪ್ರಬಂಧಗಳ ಬಗ್ಗೆ ಇಂದು ಅಷ್ಟೇನೂ ಗೌರವವುಳಿದಿಲ್ಲ; ಇದ್ದರೂ ಕುತೂಹಲವಂತೂ ಇಲ್ಲ. ಏಕೆಂದರೆ ಪದೋನ್ನತಿ ಅಥವಾ ಮಾನ್ಯತೆ, ಅಥವಾ ಸವಲತ್ತುಗಳ ಅನುಕೂಲಕ್ಕಾಗಿ ಬಹಳಷ್ಟು ಜನರು ಪಿಎಚ್.ಡಿ. ಪದವಿ ಪಡೆಯುತ್ತಾರೆ. ಜೀವನಾನುಕೂಲಕ್ಕಾಗಿ ಪಡೆಯುವ ಪದವಿಗೂ ಜ್ಞಾನಾಸಕ್ತಿಯಿಂದ ಪಡೆಯುವ ಪದವಿಗೂ ಜೀವ-ಜೀವನದ ನಡುವಣ ಅಂತರವಿದೆ.

ಇವುಗಳ ನಡುವೆ ಪ್ರಭಾಕರ ಜೋಶಿಯವರು ಡಾಪ್ರಭಾಕರ ಜೋಶಿಯವರಾದದ್ದು ಯಾವ ಜೀವನಾನುಕೂಲಕ್ಕೂ ಅಲ್ಲ. ಅವರ ಈ ಮಹಾಪ್ರಬಂಧವು ತಮ್ಮ ಪಠ್ಯಾಧ್ಯಯನ ಕ್ಷೇತ್ರವಾದ ವಾಣಿಜ್ಯಶಾಸ್ತ್ರದಲ್ಲಿ ಅಲ್ಲ. ಬದಲಾಗಿ ‘ಕೃಷ್ಣಸಂಧಾನ-ಪ್ರಸಂಗ ಮತ್ತು ಪ್ರಯೋಗ’ ಎಂಬ ಯಕ್ಷಗಾನ ಪ್ರಸಂಗವೊಂದರ ಕುರಿತ ಗಂಭೀರ ಅಧ್ಯಯನಕ್ಕೆ ಅವರಿಗೆ 1997ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿಯನ್ನು ನೀಡಿತು; 1998ರಲ್ಲಿ ಇದನ್ನು ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರವು ಪ್ರಕಟಿಸಿತು. (ಇದು ನನ್ನ ಓದಿಗೆ ಇತ್ತೀಚೆಗಷ್ಟೇ ಸಿಕ್ಕಿತು!) ಪ್ರಸಂಗದ ಪೂರ್ಣಪಾಠವೂ ಸೇರಿದಂತೆ ಸುಮಾರು 375 ಪುಟಗಳಷ್ಟು ದೀರ್ಘವಾಗಿರುವ (ಪ್ರಾಯಃ ಅಕ್ಷರಗಳು ತೀರ ಚಿಕ್ಕವಾದ್ದರಿಂದ ಇಷ್ಟೇ ಪುಟಗಳಿಗೆ ಕೃತಿ ಸೀಮಿತವಾಗಿದೆ!) ಈ ಕೃತಿಯು ಹಲವಾರು ಉಪಯುಕ್ತ ಲಿಖಿತ ಮತ್ತು ಮೌಖಿಕ ಮಾಹಿತಿಗಳನ್ನೊಳಗೊಂಡಿದೆ. ಮಹಾಪ್ರಬಂಧಗಳ ಲಾಕ್ಷಣಿಕ ಸಹಜವಾಗಿಯೇ ಇಲ್ಲಿ ಪೀಠಿಕೆ, ವಸ್ತು, ಆಕರ, ಪ್ರಸಂಗ, ಪ್ರಯೋಗ, ಪಾತ್ರ, ಅರ್ಥ, ನಾಟ್ಯಗಳ ಪರಿಶೀಲನೆಗಳು ಮತ್ತು ಉಪಸಂಹಾರವಿದೆ. ಪ್ರಸಂಗವೇ ಯಕ್ಷಗಾನದ ಮೂಲಕ ಸಂವಹನಮೂಲವಾಗಿ ಪ್ರಯೋಗವಾಗುವುದರಿಂದ ಈ ಕೃತಿಯಲ್ಲಿ ರಂಗಸಾಧ್ಯತೆಗಳನ್ನೂ ಸಾಹಿತ್ಯಮಾಧ್ಯಮವಾಗಿ ವ್ಯಾಪ್ತಿಯನ್ನೂ ಚರ್ಚಿಸಿದ್ದು ಸಹಜವೇ ಆಗಿದೆ.

ಪ್ರಸಂಗದ ಪಾತ್ರಗಳನ್ನು ನಿರ್ವಹಿಸಿದ ಅನುಭವದಿಂದ ಲೇಖಕರು ಲೀಲಾಜಾಲವಾಗಿ ಪ್ರಸಂಗದ ನಾಡಿಮಿಡಿತವನ್ನು ಹಿಡಿದು ವಿಶ್ಲೇಷಿಸುವುದು ಸಾಧ್ಯವಾಗಿದೆ. ರಾಗ-ತಾಳ-ಲಯಕಾರಣವಾದ ಪದ್ಯಗಳ ಮುಖಾಂತರ ಲೇಖಕರು ವಿವಿಧ ಸಾಧ್ಯತೆಗಳನ್ನೂ ಪರಿಶೀಲಿಸಿದ್ದಾರೆ. ಯಕ್ಷಗಾನದಲ್ಲಿ ಅದರಲ್ಲೂ ತಾಳಮದ್ದಳೆ ಕ್ಷೇತ್ರದಲ್ಲಿ ಮಹಾಭಾರತದ ಕೃಷ್ಣಸಂಧಾನವು ತುಂಬ ಜನಪ್ರಿಯ ಪ್ರಸಂಗ; ಮಹಾಭಾರತವೆಂಬ ಪುರಾಣಾಧಾರಿತ. ಮಹಾಭಾರತದ ಕಥೆಯಲ್ಲೇ ತುಂಬಾ ಸತ್ವಯುತವಾದ ಮತ್ತು ಫಲವತ್ತಾದ ಭಾಗವಿದು. ವ್ಯಾಸಭಾರತದಿಂದ ಮೊದಲ್ಗೊಂಡು, ಪಂಪ (ವಿಕ್ರಮಾರ್ಜುನ ವಿಜಯ), ರನ್ನ (ಗದಾಯುದ್ಧ ಅಥವಾ ಸಾಹಸ ಭೀಮ ವಿಜಯ), ಕುಮಾರವ್ಯಾಸ (ಗದುಗು ಭಾರತವೆಂದು ಜನಪ್ರಿಯವಾಗಿರುವ ಕರ್ಣಾಟ ಭಾರತ ಕಥಾಮಂಜರಿ), ಪರಮದೇವ (ತುರಂಗ ಭಾರತ) ಮುಂತಾದ ಕೃತಿಗಳ ಮೂಲಕ ಸಮಾಜದೊಳಗೆ ಒಂದಾದ ಕಥೆಯಿದು. ಕೃಷ್ಣ ಸಂಧಾನವೆಂಬ ಹೆಸರಿಗೆ ತಕ್ಕುದಾಗಿ ಇಲ್ಲಿ ಕೃಷ್ಣನೇ ನಾಯಕ. ಇದನ್ನು ಲೇಖಕರು ಮಾಸ್ತಿಯವರ ಭಾರತ ತೀರ್ಥ, ವಿ.ಸೀಯವರ ಮಹಾಭಾರತದ ಕೃಷ್ಣ ಚಾರಿತ್ರ ಮುಂತಾದ ಕೃತಿಗಳ ಉಲ್ಲೇಖಗಳ ಮೂಲಕ ಸಾಧಿಸುತ್ತಾರೆ. (ಬೇಂದ್ರೆಯವರೂ ತಮ್ಮ ‘ಕನ್ನಡ ಸಾಹಿತ್ಯದ ನಾಲ್ಕು ನಾಯಕರತ್ನಗಳು’ ಕೃತಿಯಲ್ಲಿ ಕೃಷ್ಣನನ್ನು ನಾಯಕರತ್ನವಾಗಿ ಚರ್ಚಿಸಿದ್ದಾರೆ.) ಮಹತ್ವದ ವಿಚಾರವೆಂದರೆ ಈ ಘನ ಪ್ರಬಂಧವು ಒಂದು ಪ್ರಸಂಗದ ಸುತ್ತ ಹಲವಾರು ಗಹನವಾದ ವಿಚಾರಗಳನ್ನು, ಕ್ಷೇತ್ರಗಳನ್ನು, ಸಮಸ್ಯೆಗಳನ್ನು ಚರ್ಚಿಸುತ್ತದೆ. ಪ್ರಸಂಗದ ಉಗಮ, ಇತಿಹಾಸ, ಪರಂಪರೆ ಮತ್ತು ವೈಶಿಷ್ಟ್ಯವನ್ನು ಅಪೂರ್ವವಾದ ನಿದರ್ಶನಗಳೊಂದಿಗೆ ಲೇಖಕರು ವಿವರಿಸುತ್ತಾರೆ. ವಿದ್ಯಾರ್ಥಿಯೊಬ್ಬ ನಡೆಸುವ ಕಲಿಕೆಯ ಭಾಗದಂತಿರುವ ಅಧ್ಯಯನಕ್ಕೂ ಜೋಶಿಯವರಂತಹ ಪಕ್ವ ಚಿಂತನೆಯ ವಿದ್ವಾಂಸರೊಬ್ಬರು ನಡೆಸುವ ಆತ್ಮವಿಶ್ವಾಸಪೂರ್ಣ ಅಧ್ಯಯನಕ್ಕೂ ಇರುವ ವ್ಯತ್ಯಾಸವು ಈ ಕೃತಿಯುದ್ದಕ್ಕೂ ಗೋಚರಿಸುತ್ತದೆ. ಹಾಗೆಂದು ತಮ್ಮ ಸಂಶೋಧನೆಯ ವಿಚಾರಧಾರೆಯೇ ಸರಿಯೆಂಬ ಹಠವು ಎಲ್ಲೂ ಕಾಣುವುದಿಲ್ಲ.

 ಆದರೆ ಜನಪದೀಯವಾಗಿ ಇದನ್ನು ಸುಮಾರು ಎರಡು ಶತಮಾನಗಳಷ್ಟು ಹಿಂದೆ ಯಕ್ಷಗಾನ ಪ್ರಸಂಗವಾಗಿಸಿದಾಗ ಮತ್ತು ಸುಮಾರು ನೂರು ವರ್ಷಗಳ ಪ್ರಸಂಗೇತಿಹಾಸವನ್ನು ಹೊಂದಿದಾಗ ಇದು ಕೆಲವಾರು ಬದಲಾವಣೆಗಳನ್ನು ಹೊಂದುವುದು ಸಹಜ. ತನ್ನ ಸಂವಹನಾನುಕೂಲಕ್ಕಾಗಿ ಮತ್ತು ಸಾಮಾಜಿಕ ಪ್ರಸ್ತುತತೆಗಾಗಿ ಆಕರವಾಗಿ ಕುಮಾರವ್ಯಾಸ ಮತ್ತು ಪರಮದೇವರನ್ನೇ ಪ್ರಸಂಗಕರ್ತ ದೇವೀದಾಸ ಆಶ್ರಯಿಸಿದ್ದು ಕಂಡುಬರುತ್ತದೆ. ಬಹುಪಾಲು ಇದನ್ನು ಜೋಶಿಯವರು ಆರಂಭದಿಂದಲೂ ಗುರುತಿಸುತ್ತಾರೆ. ಜೊತೆಗೇ ಪ್ರಸಂಗಕರ್ತನು ಹೇಗೆ ಕುಮಾರವ್ಯಾಸ ಮತ್ತು ಪರಮದೇವನಿಂದ ಸ್ಫೂರ್ತಿಯನ್ನು, ಪ್ರಭಾವವನ್ನು ಪಡೆದಾಗಲೂ ಅವರ ಕೃತಿಗಳನ್ನು ತನ್ನ ಸಂದರ್ಭಗಳಿಗನುಗುಣವಾಗಿ ಬದಲಾಯಿಸಿಕೊಂಡು ಸ್ವಂತಿಕೆಯನ್ನು ಮೆರೆದಿದ್ದಾನೆಂಬ ವಿಚಾರವನ್ನು ಮನಗಾಣಿಸಿದ್ದಾರೆ.

ಸಾಮಾನ್ಯವಾಗಿ ಯಕ್ಷಗಾನ ಪ್ರಸಂಗಗಳು ರಂಗಪ್ರಯೋಗಗಳಾಗಿ ಜನಪ್ರಿಯ. ಕೃತಿಯಲ್ಲಿ ಜೋಶಿಯವರನ್ನು ಕೆದಕಿದ ಮುಖ್ಯ ಚಿಂತನೆಯೆಂದರೆ ಈ ಪ್ರಸಂಗವು ಇತರ ಪ್ರಸಂಗಗಳಿಗೆ ಹೋಲಿಸಿದರೆ ಕಡಿಮೆ ರಂಗಪ್ರದರ್ಶನಗಳನ್ನು ಕಂಡು, ತಾಳಮದ್ದಳೆಯಾಗಿ ಹೆಚ್ಚು ಯಶಸ್ಸನ್ನು ಕಂಡದ್ದು. ಯಕ್ಷಗಾನ ಬಯಲಾಟದ ರಂಗಪ್ರದರ್ಶನಗಳಲ್ಲಿ ಇರಬೇಕು ಎಂದು ನಿರೀಕ್ಷಿಸಲಾಗಿರುವ ಕಾಳಗಗಳಿಲ್ಲದೆ, ಶೃಂಗಾರ ಮತ್ತು ಹಾಸ್ಯವಿಲ್ಲದೆ, ಬಹುಸಂಖ್ಯೆಯ ಪಾತ್ರಗಳಿಲ್ಲದೆ, ಚಿಂತನಾಬಾಹುಳ್ಯದ, ಶಾಂತರಸ ಪ್ರಾಧಾನ್ಯದ ಕಥಾಭಾಗವಾಗಿರುವುದೂ ಸಂಬಂಧಗಳ ದ್ವಂದ್ವಮನಸ್ಥಿತಿಯ ಪುನರ್ವಾಖ್ಯಾನದ ಅರಸುವಿಕೆಯೇ ಮುಖ್ಯವಾಗಿರುವುದೂ ಇದಕ್ಕೆ ಕಾರಣ. (ಒಂದು ರೀತಿಯಲ್ಲಿ ಮುಂದಿನ ಕುರುಕ್ಷೇತ್ರ ಯುದ್ಧಕ್ಕೆ ಮುಖಾಮುಖಿಯಾಗುವ ವಿಶಾಲ ವೇದಿಕೆಯಿದು. ಶೇಕ್ಸ್ ಪಿಯರನ ದುರಂತ ನಾಟಕಗಳಲ್ಲೂ ಇಂತಹ ದೀರ್ಘ ಶ್ವಾಸೋಚ್ಚಾಸವಿದೆ. ಲೇಖಕರು ಒಂದುಕಡೆ ಹ್ಯಾಮ್ಲೆಟ್‌ನನ್ನು ಉಲ್ಲೇಖಿಸುತ್ತಾರೆ!) ಲೇಖಕರು ಬರಿಯ ಅಂಕೆ-ಸಂಖ್ಯೆಯ ಮಾಹಿತಿಯಲ್ಲಿ ತೃಪ್ತರಾಗದೆ ಅದನ್ನು ಅಗೆದು, ಬಗೆದು ಅದರ ಮೂಲಕಾರಣಗಳನ್ನು (ಸಂ)ಶೋಧಿಸುತ್ತಾರೆ ಮತ್ತು ಯಶಸ್ವಿಯಾಗಿ ನಿರೂಪಿಸುತ್ತಾರೆ. ಲೇಖಕರು ಸ್ವತಃ ಯಶಸ್ವೀ ಅರ್ಥಧಾರಿಯಾಗಿರುವುದರಿಂದ ಈ ಪ್ರಸಂಗದ ವಿವಿಧ ಪಾತ್ರಗಳನ್ನು ವಿಶಿಷ್ಟವಾಗಿ ಗುರುತಿಸಿದ್ದಾರೆ. ರಂಗಪ್ರಯೋಗಗಳಲ್ಲಿ ಆಯ್ಕೆಯಾಗುವ ಪದ್ಯಗಳು ತಾಳಮದ್ದಳೆಯಲ್ಲಿ ಆಯ್ಕೆಹೊಂದಬೇಕಿಲ್ಲವೆನ್ನುವುದು ಅವರು ಹೇಳುವ ಮುಖ್ಯ ಸಂಗತಿ.

ಹಾಗೆಯೇ ವಿವಿಧ ಪಾತ್ರಗಳು ಸ್ವಸಮರ್ಥನೆಗಾಗಿ ತೋರುವ ದೃಷ್ಟಿಕೋನಗಳನ್ನು ಯಕ್ಷಗಾನದ ಶ್ರೇಷ್ಠರ ಮಾತುಗಳಿಂದ ಬಿಂಬಿಸುವುದೂ ಅಲ್ಲದೆ ತಮ್ಮ ಅಭಿವ್ಯಕ್ತಿಗಳಿಂದ ನಿರೂಪಿಸುತ್ತಾರೆಯೇ ಹೊರತು ಇದೇ ಸರಿ ಎಂಬ ನಿಲುವನ್ನು ಓದುಗನ ಮೇಲೆ ಹೇರುವುದಿಲ್ಲ. ಕೆರೆಮನೆ ಶಂಭು ಹೆಗಡೆ ಮತ್ತಿತರ ಬಡಗುತಿಟ್ಟಿನ ಶ್ರೇಷ್ಠರು ಈ ಪ್ರಸಂಗವನ್ನು ರಂಗದಲ್ಲಿ ತರಲು ಹೇಗೆ ಸಫಲರಾದರು ಎಂಬುದನ್ನೂ ಲೇಖಕರು ನಿರ್ಮಮವಾಗಿ ಹೊಗಳುತ್ತಾರೆ. ಕೃತಿಯ ಇನ್ನೊಂದು ವಿಶಿಷ್ಟ ವಿವರಣಾ ವಿಧಾನವೆಂದರೆ ಇಲ್ಲಿನ ನಿರೂಪಣೆಯು ಮಾಮೂಲಾದ ಕಥಾನೀತಿಯ ಲಂಬಿಸುವಿಕೆಗಿಂತ ಹೆಚ್ಚಾಗಿ ವಿಮರ್ಶಾನೀತಿಯನ್ನವಲಂಬಿಸಿದೆ. ಅದರಲ್ಲೂ ನಾಲ್ಕನೇ ಅಧ್ಯಾಯವಾದ ಪ್ರಸಂಗ ಪರಿಶೀಲನೆಯು ಸುಮಾರು ಎಂಭತ್ತು ಪುಟಗಳ ಪ್ರಬುದ್ಧ ಶುದ್ಧಾಂಗ ವಿಮರ್ಶೆಯಾಗಿದೆ. ಕೃತಿಯಲ್ಲಿ ಕಾಣಿಸಿದಂತೆ ಇದು ಸಾಹಿತ್ಯಕ ಮತ್ತು ರಂಗದೃಷ್ಟಿಯ ಪರಾಮರ್ಶೆ. ಹಾಗೆಯೇ ಪ್ರಸಂಗದ ಬೆಳವಣಿಗೆ ಮತ್ತು ಕಥೆಯ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತ ಕೃಷ್ಣನು ದೇವರಾಗಿ ತಾನೇನನ್ನು ಸಾಧಿಸಲಿದೆ ಮತ್ತು ಮನುಷ್ಯನಾಗಿ ತನ್ನ ವ್ಯಾಪ್ತಿ-ಮಿತಿಗಳೇನು, ಮತ್ತು ಧರ್ಮರಾಜನಂತಹ ಧರ್ಮಭೀರು ಸಾತ್ವಿಕ ಪಾತ್ರವೊಂದು ಕೊನೆಗೂ ಉಳಿಯುವುದು ಸೋದರಕಲಹದ ಅಪಕೀರ್ತಿ ಮಾತ್ರ ಎನ್ನುತ್ತಲೇ ಸಮರವಾಗಲಿ ನೀತಿಯಾಗಲಿ ಎಂಬ ಹಾಗೆ ಸಮಾನಾಂತರವಾದ, ಸಂಧಿಸಲಾಗದ ಎರಡೂ ಆಯ್ಕೆಗಳನ್ನು ಮುಂದಿಡುವುದು ಕಥೆಯ ಸಮಸ್ಯೆಗಳಲ್ಲೊಂದೆಂಬುದನ್ನು ಓದುಗನ ಮುಂದಿಡುತ್ತಾರೆ. ಈ ಅಧ್ಯಾಯದ ಕೊನೆಯಲ್ಲಿ ಈ ಕೃತಿಯ ತುಳು ಅನುವಾದವನ್ನೂ ಲೇಖಕರು ಚರ್ಚಿಸಿ ಬೆಳಕು ತೋರಿದ್ದಾರೆ.

ಪ್ರಾಯಃ ತುಳುವಿನಂತಹ ಉಪಭಾಷೆಗಳ ವಿಕಾಸದ ದೃಷ್ಟಿಯಿಂದ ಇಂದು ಅದು ಎಂದಿಗಿಂತ ಮಹತ್ವದ್ದಾಗಿದೆ. ದೀರ್ಘ ಪ್ರಬಂಧದಲ್ಲಿ ಪ್ರಸಂಗದ ಬಹಳಷ್ಟು ಪದ್ಯಗಳು ಸಂದರ್ಭೋಚಿತವಾಗಿ ಉಲ್ಲೇಖವಾಗಿವೆ. ಕುಮಾರವ್ಯಾಸ, ಪರಮದೇವರ ಕಾವ್ಯಕ್ಕೂ ಇದಕ್ಕೂ ಸಾಮ್ಯತೆ ಮತ್ತು ಭಿನ್ನತೆಯನ್ನು ಗುರುತಿಸುವ ಸಲುವಾಗಿ ಇವು ಅವಶ್ಯವಾಗಿವೆ. ಅಕಡಮಿಕ್ ಸಂಶೋಧನಾ ನೀತಿಗನುಗುಣವಾಗಿ ಅನೇಕ ಕಡೆ ಪುನರಾವರ್ತನೆಯಾಗಿರುವುದೂ ಇದೆ. ಪ್ರಾಯಃ ಒಂದು ಸ್ವತಂತ್ರವಾದ ವಿಮರ್ಶಾಕೃತಿಯಾಗಿ ಈ ಕೃತಿ ಪರಿಷ್ಕರಣೆ ಹೊಂದಿದಲ್ಲಿ ಇವುಗಳನ್ನು ಸಂಕ್ಷಿಪ್ತಗೊಳಿಸಬಹುದು ಎಂದು ಓದುಗರಿಗೆ ಅನ್ನಿಸಿದರೆ ತಪ್ಪಿಲ್ಲ. ಅದೇ ರೀತಿಯಲ್ಲಿ ಪ್ರಸಂಗಕರ್ತನು ದೂರದ ಗದುಗಿನ ಭಾರತ ಮತ್ತು ತುರಂಗಭಾರತಗಳನ್ನೇ ಆಶ್ರಯಿಸುವುದಕ್ಕೆ (ಮತ್ತು ಪಂಪ, ರನ್ನರನ್ನು ಆಧರಿಸದಿರುವುದಕ್ಕೆ) ಸಾಹಿತ್ಯಕ ಅಥವಾ ಇತರ ನಿರ್ಬಂಧಗಳಿದ್ದವೇ ಎಂಬುದರ ಕುರಿತು ಇನ್ನಷ್ಟು ಬೆಳಕನ್ನು ಚೆಲ್ಲಬಹುದಿತ್ತು.
  
ಕೆಲವು ವಿಚಾರಗಳ ಕುರಿತು ಪ್ರಸಂಗಕರ್ತನು ಮಾತ್ರವಲ್ಲ, ಆತನು ಆಶ್ರಯಿಸಿದ ಕವಿಗಳೂ ಮೌನವಾಗಿದ್ದಾರೆ. ಮುಖ್ಯವಾಗಿ ಕೃಷ್ಣ, ಧರ್ಮರಾಯರ ನಿಲುವುಗಳನ್ನು ಸಮರ್ಥಿಸುವುದು ಕೆಲವು ಸಂದರ್ಭಗಳಲ್ಲಿ ಕಷ್ಟವಾಗಬಹುದು. ಧರ್ಮಜನ ಜೊತೆ ಏಕಮನಸ್ಕರಾದ ಆತನ ತಮ್ಮಂದಿರು ಮತ್ತು ದ್ರೌಪದಿ ಸಮರ-ಸಂಧಾನಗಳ ಬಗ್ಗೆ ಭಿನ್ನಮತವನ್ನು ವ್ಯಕ್ತಪಡಿಸುವುದು ಪಾಂಡವರ ಏಕಸೂತ್ರದ ಜಂಟಿ ವ್ಯಕ್ತಿತ್ವಕ್ಕೆ ಕವಿದ ಕಲೆಯಲ್ಲವೇ ಎಂದು ಅನ್ನಿಸದಿರಲಾರದು. ಈ ಕುರಿತು ವ್ಯಾಸರೂ ಮೌನವಾಗಿದ್ದರು. (ಕುಟ್ಟಿಕೃಷ್ಣ ಮಾರಾರ್ ಎಂಬ ಮಲೆಯಾಳಿ ವಿದ್ವಾಂಸರು 2004ರಲ್ಲಿ ತಮ್ಮ ‘ಭಾರತ ಪರ್ಯಟನಂ’ ಎಂಬ ಕೃತಿಯಲ್ಲಿ ಪಾತ್ರಗಳ ದ್ವಂದ್ವಗಳ ಕುರಿತು ವ್ಯಾಸಕವಿ ಮೌನವಾಗಿರುವ ಬಗ್ಗೆ ವ್ಯಾಸಮೌನಂ ಎಂಬ ವೈಚಾರಿಕ ತಳಹದಿಯಲ್ಲಿ ಚರ್ಚಿಸಿದ್ದಾರೆ. ಈ ಚರ್ಚೆ ಮುಖ್ಯವಾಗಿ ಕೃಷ್ಣ ಸಂಧಾನದ ಆಧಾರದಲ್ಲೇ ನಡೆದಿದೆಯೆಂಬುದು ಮುಖ್ಯ ಮತ್ತು ಇಲ್ಲಿ ಪ್ರಸ್ತುತವೂ ಹೌದು. ಪಾತ್ರಗಳು ತಮ್ಮ ಸೃಷ್ಟಿಕರ್ತನನ್ನೂ ಮೀರಿ ನಡೆದುಕೊಂಡಾಗ ಕವಿ ಮೌನವಾಗದೇ ಇನ್ನೇನಾದೀತು ಎಂಬ ಅರ್ಥದ ಸಮರ್ಥನೆಯಿದೆ.) (ಈ ಬಗೆಯ) ಜನಾಭಿಮುಖತೆ, ವಿಸ್ತರಣ, ಪ್ರತಿಕಾವ್ಯ ಸೃಷ್ಟಿ, ಪುನಸೃಷ್ಟಿಗಳು ಭಾರತೀಯ ಕಾವ್ಯಪರಂಪರೆಗೆ ಯಕ್ಷಗಾನದ ಕೊಡುಗೆಗಳು ಎಂದು ಲೇಖಕರು ಹೇಳುವಾಗ ಅವೆಲ್ಲವೂ ರಂಗಪರಂಪರೆಗೂ ಒದಗಿ ಬಂದ ಪರಿಕರಗಳು ಎಂಬುದನ್ನೂ ಸೇರಿಸಬಹುದಿತ್ತೇನೋ?

ಈ ಕೃತಿಯು ಯಕ್ಷಗಾನ ಕೃಷ್ಣನ ಆಶ್ರಯದ, ಭಂಗವಾಗದ ಶರಸೇತು. ಪ್ರಾಯಃ ಯಕ್ಷಗಾನದ ಒಳಗೂ ಹೊರಗೂ ಇರುವವರಿಗೆ ಸಂಪರ್ಕಸೇತು. ವಿದ್ವತ್ ಪ್ರಬಂಧಗಳಿಗೆ ಮಾರ್ಗಸೂಚಿ. ಜನಮನ್ನಣೆ ಪಡೆದು ಇನ್ನಷ್ಟು ವಿಸ್ತೃತವಾಗಿ ಚರ್ಚೆಯಾಗಬೇಕಾದ ಈ ಕೃತಿಗಾಗಿ ಜೋಶಿಯವರಿಗೆ ಅಭಿನಂದನೆಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)