varthabharthi


ವೈವಿಧ್ಯ

ನೌಖಾಲಿ ಪವಾಡ

ವಾರ್ತಾ ಭಾರತಿ : 2 Oct, 2020
ಎನ್.ಎಸ್. ಶಂಕರ್

     ಎನ್.ಎಸ್. ಶಂಕರ್

ಬಾಪು ಹೇಳಿದರು- ‘‘ನಾನು ಯಾರ ಮೇಲೂ ದೋಷ ಹೊರಿಸಲು ಬಂದಿಲ್ಲ. ಬಂಗಾಳದ ಹೆಣ್ಣುಮಕ್ಕಳ ಆಕ್ರಂದನ ನನ್ನನ್ನು ಎಳೆದುಕೊಂಡು ಬಂದಿದೆ. ಅವರ ಕಣ್ಣೀರು ಒರೆಸಲು ಬಂದಿದ್ದೇನೆ. ಹಿಂದೂ ಮುಸ್ಲಿಮರಿಬ್ಬರ ಸೇವೆಗಾಗಿ ದೇವರ ಸೇವಕನಾಗಿ ಬಂದಿದ್ದೇನೆ. ನಿಮ್ಮೆಲ್ಲರ ಹೃದಯದಲ್ಲಿ ತುಸು ಜಾಗ ಕೇಳಲು ಬಂದಿದ್ದೇನೆ. ಇಲ್ಲಿ ಈಗ ಹೇಗೆ ಮುಂದುವರಿಯಬೇಕೋ ಗೊತ್ತಿಲ್ಲ. ಆದರೆ ಮನುಷ್ಯನ ನೀಚಾತಿನೀಚ ಬರ್ಬರತೆಯ ಎದುರು, ನನ್ನ ಸಹಾಯ ಅಪೇಕ್ಷಿಸುವವರ ಮುಂದೆ ನಿಸ್ಸಹಾಯಕನಾಗಿ ಕೂರುವ ಬದಲು ನಾನು ಕಣ್ಣು ಮುಚ್ಚಿಕೊಳ್ಳುವುದೇ ವಾಸಿ...’’

''ನೀವು ದಿಲ್ಲಿಯಲ್ಲೇ ಕೂತು ಮುಹಮ್ಮದಲಿ ಜಿನ್ನಾ ಜೊತೆ ಮಾತುಕತೆ ಮಾಡಿ ಅಲ್ಲೇ ಇತ್ಯರ್ಥ ಮಾಡಿಕೊಳ್ಳುವುದು ಸುಲಭವಿತ್ತಲ್ಲ, ಇಲ್ಲಿವರೆಗೆ ಯಾಕೆ ಬರೋಕೆ ಹೋದಿರಿ?''- ಬಂಗಾಳದ ನೌಖಾಲಿ ಜಿಲ್ಲೆಗೆ ಕಾಲಿಟ್ಟು ಗಾಂಧೀಜಿ ಶಾಂತಿಯಾತ್ರೆ ಹೊರಟಾಗ, ಅಲ್ಲಿನ ಮುಸ್ಲಿಂ ಮುಖಂಡರಿಂದ ಅವರಿಗೆ ಎದುರಾದ ಪ್ರಶ್ನೆಯಿದು.

ಅದಕ್ಕೆ ಬಾಪು ಹೇಳಿದರು:

''ನಾಯಕರು, ಯಾವಾಗಲೂ ನಮ್ಮೆಲ್ಲರ- ಅಂದರೆ ಜನರ ಪ್ರತಿಬಿಂಬ. ನಮಗೆ ಶಾಂತಿ ಬೇಕು ಎಂದರೆ ಅವರೂ ಅದನ್ನೇ ಪ್ರತಿಪಾದಿಸುತ್ತಾರೆ. ನಾವು ಕಿತ್ತಾಡಿಕೊಂಡರೆ, ಅವರೂ ಅದಕ್ಕೇ ಇಂಬು ಕೊಡುತ್ತಾರೆ. ಈಗ ಮೊದಲು ನಾವು ನಮ್ಮನಮ್ಮಲ್ಲಿ ಪ್ರೀತಿ ಸೌಹಾರ್ದ ಸಾಧಿಸೋಣ. ಆಗ ಅವರಾಗಿಯೇ ಶಾಂತಿಮಂತ್ರ ಜಪಿಸುತ್ತಾರೆ. ನಿಮ್ಮ ಪಕ್ಕದ ಮನೆಯವನಿಗೆ ಏನೋ ಕಷ್ಟ ಅಂದರೆ ನೀವು ಕಾಂಗ್ರೆಸ್ ಅಥವಾ ಮುಸ್ಲಿಂ ಲೀಗ್ ಪಕ್ಷದ ಬಳಿಗೆ ಓಡುತ್ತೀರಾ? ಇಲ್ಲ ಅಲ್ಲವೇ? ನೀವೇ ಏನೋ ಒಂದು ಪರಿಹಾರ ಹುಡುಕುವುದಿಲ್ಲವೇ?...''

ಇದು ಗಾಂಧಿ ಮಾರ್ಗ. ಅವರು ಜೀವಮಾನವಿಡೀ ಮಾಡಿದ್ದೂ ಅದನ್ನೇ. ಬ್ರಿಟಿಷರ ಜೊತೆ ಕೂತು ಚೌಕಾಶಿ ಮಾಡುವುದರಿಂದ ದೇಶಕ್ಕೆ ಎಂದಿಗೂ ಸ್ವಾತಂತ್ರ್ಯ ಸಿಗುವುದಿಲ್ಲ, ಇಡೀ ಜನಸ್ತೋಮವೇ ಹುರಿಗೊಂಡು ಪ್ರಾಣಾರ್ಪಣೆಗೂ ಸಿದ್ಧರಾಗಿ ಎದ್ದು ನಿಂತಾಗ ಮಾತ್ರ ಬ್ರಿಟಿಷರು ತಲೆ ಬಾಗಿ ದೇಶ ಬಿಟ್ಟು ಹೊರಡುವರು ಎಂದು ಗಾಂಧೀಜಿಗೆ ಗೊತ್ತಿತ್ತು. ಆ ಕಾರಣಕ್ಕೇ ಅವರು ದಶಕಗಳ ಕಾಲ ದೇಶದ ಕೋಟಿ ಕೋಟಿ ಜನರನ್ನು ಸ್ವಾತಂತ್ರ್ಯಕ್ಕೆ ಸಜ್ಜುಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದು...

ದಕ್ಷಿಣ ಆಫ್ರಿಕಾದಲ್ಲಿ ತಾವು ಆವಿಷ್ಕರಿಸಿದ ಸತ್ಯಾಗ್ರಹ ಎಂಬ ಅಭೂತಪೂರ್ವ ಮಾನವೀಯ ಅಸ್ತ್ರವನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೂ ತಂದ ಬಾಪು, ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೂಡಿದ ಹೋರಾಟ, ಜಗತ್ತು ಆವರೆಗೆ ಕಂಡು ಕೇಳರಿಯದ ಸ್ವರೂಪದ್ದು. ಆದರೆ ಆ ಸಂಗ್ರಾಮದ್ದೇ ಒಂದು ತೂಕವಾದರೆ, ತಮ್ಮ ಜೀವಿತದ ಕಡೇ ಹದಿನೈದು ತಿಂಗಳು ಗಾಂಧೀಜಿ ಇಟ್ಟ ಹೆಜ್ಜೆಗಳದ್ದೇ ಒಂದು ತೂಕ.

ಹೌದು, ಆ ಹದಿನೈದು ತಿಂಗಳು ಅವರು ಮಾಡಿದ್ದೇನು?

ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಆದಿಯಾಗಿ ಎಲ್ಲ ಕಾಂಗ್ರೆಸ್ ಮುಖಂಡರು ಗಾಂಧೀಜಿಯವರನ್ನು ಬದಿಗೊತ್ತಿ ದೇಶ ವಿಭಜನೆಯ ಪ್ರಸ್ತಾವಕ್ಕೆ ತಾತ್ವಿಕ ಮುದ್ರೆ ಒತ್ತಿದ್ದರೂ, ದಿಲ್ಲಿಯಲ್ಲಿ ಮುಸ್ಲಿಂ ಲೀಗ್ ಪಕ್ಷದ ಜೊತೆಗೂಡಿ ಮಧ್ಯಂತರ ಸರಕಾರ ರಚಿಸಿದ್ದರೂ, ಪ್ರತ್ಯೇಕ ಪಾಕಿಸ್ತಾನದ ಒತ್ತಾಯವಿನ್ನೂ ಅಧಿಕೃತ ನಿರ್ಧಾರದ ನಿರ್ಣಾಯಕ ಹಂತ ತಲುಪಿರದಿದ್ದಾಗ, ಜಿನ್ನಾ ದೇಶದ ಮೇಲೆ ಒತ್ತಡ ಹೇರಲು 1946ರ ಆಗಸ್ಟ್‌ನಲ್ಲಿ 'ನೇರ ಕಾರ್ಯಾಚರಣೆಯ'-ಅಂದರೆ ಹೊಡಿ ಬಡಿ ಕೊಲ್ಲು ಹಾದಿ ಹಿಡಿದರು. ಆಗ ಬಂಗಾಳದಲ್ಲಿದ್ದುದು ಮುಸ್ಲಿಂ ಲೀಗ್ ನೇತೃತ್ವದ ಪ್ರಾಂತೀಯ ಸರಕಾರ. ಶಹೀದ್ ಸುಹ್ರವರ್ದಿ ಮುಖ್ಯಮಂತ್ರಿ. ಅವರು ಮತ್ತು ಇತರ ಮುಸ್ಲಿಂ ಲೀಗ್ ಮುಖಂಡರ ಸಕ್ರಿಯ ಪ್ರಚೋದನೆಯಿಂದಾಗಿಯೇ ಕೋಲ್ಕತವೂ ಸೇರಿದಂತೆ ಬಂಗಾಳ ಪ್ರಾಂತವಿಡೀ ಭಯಾನಕ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಅದರಲ್ಲೂ ಕೊಲೆ, ಸುಲಿಗೆ, ಅತ್ಯಾಚಾರ, ಬಲವಂತದ ಮತಾಂತರಗಳು ಹಳ್ಳಿ ಪ್ರಾಂತಗಳಿಗೂ ಹಬ್ಬಿದಾಗ ಗಾಂಧೀಜಿ ವಿಹ್ವಲಗೊಂಡರು. ''ಕೋಮು ಹಿಂಸಾಚಾರ ಹಳ್ಳಿಗಾಡಿಗೂ ಹಬ್ಬಿದರೆ ಇನ್ನು ಭಾರತಕ್ಕೆ ಉಳಿಗಾಲವಿಲ್ಲ'' ಎಂದುಕೊಂಡವರು ಇನ್ನು ಸುಮ್ಮನಿರಲಾರೆ ಎಂದು ತೀರ್ಮಾನಿಸಿ ಕೂಡಲೇ ಬಂಗಾಳಕ್ಕೆ ಹೊರಟು ನಿಂತುಬಿಟ್ಟರು. ಅವರ ನೋಟವಿದ್ದಿದ್ದು ನೌಖಾಲಿಯ ಕಡೆಗೆ. ಆಗ ನೆಹರೂ ಮುಂತಾದ ಮುಖಂಡರು ಗಾಂಧೀಜಿಯನ್ನು ತಡೆಯಲೆತ್ನಿಸಿದರು. ಅತ್ತ ಪಾಕಿಸ್ತಾನದ ಒತ್ತಾಯದ ನಡುವೆ ಅಧಿಕಾರ ಹಸ್ತಾಂತರದ ಹಾದಿಯಲ್ಲಿ ಅತ್ಯಂತ ಕ್ಲಿಷ್ಟ ಸವಾಲುಗಳಿದ್ದವು. ಆಗ ಸರಕಾರದ ಮುಂದಾಳುಗಳಿಗೆ ಬಾಪುಜಿ ಮಾರ್ಗದರ್ಶನವಿಲ್ಲದೆ ದಿಕ್ಕು ತೋಚುತ್ತಿರಲಿಲ್ಲ. ಅಲ್ಲಿ ಹೋಗಿ ಏನು ಮಾಡುತ್ತೀರಿ ಬಾಪು? ಇಲ್ಲೇ ನಿಮ್ಮ ಅಗತ್ಯ ನಮಗಿದೆ ಎಂದರೂ ಕೇಳದೆ ''ನಾನು ಅಲ್ಲಿ ಹೋಗಿ ಏನು ಮಾಡುವೆನೋ ನನಗೇ ಗೊತ್ತಿಲ್ಲ. ಆದರೆ ಹೋಗದಿದ್ದರೆ ನನ್ನ ಜೀವದಲ್ಲಿ ಜೀವ ನಿಲ್ಲುವುದಿಲ್ಲ'' ಎಂದು ಬಾಪು 1946ರ ಅಕ್ಟೋಬರ್ 28ರಂದು ಹೊರಟೇಬಿಟ್ಟರು. ಆಗ ತಾನೇ ಅವರಿಗೆ 77 ವರ್ಷ ತುಂಬಿತ್ತು. ಜೊತೆಗೆ ಆರೋಗ್ಯವೂ ತುಸು ಶಿಥಿಲವಾಗಿತ್ತು.

ನೌಖಾಲಿ ಎಂಬುದು ಪೂರ್ವ ಬಂಗಾಳದ ಜಿಲ್ಲೆ. ನೌಖಾಲಿ ಹಾಗೂ ಟಿಪ್ಪೆರಾ ಜಿಲ್ಲೆಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳು. ಇಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 80ಕ್ಕೂ ಹೆಚ್ಚು. ದೇಶ ವಿಭಜನೆ ಕಾಲದಲ್ಲಿ ಪಾಕಿಸ್ತಾನಕ್ಕೆ (ನಂತರ 1972ರ ಯುದ್ಧದಲ್ಲಿ ಬಾಂಗ್ಲಾದೇಶಕ್ಕೆ) ಸೇರಿಹೋದ ಪ್ರದೇಶವಿದು.

''ಇಲ್ಲಿ ಹಿಂದೂಗಳು ಅಲ್ಪಸಂಖ್ಯಾತರು; ಹೆಚ್ಚಿನ ಸಂತ್ರಸ್ತರು ಅವರೇ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿರಾ? ಬಿಹಾರದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಮೇರೆ ಮೀರಿದ ಹಿಂಸಾಚಾರ ನಡೆಯುತ್ತಿದೆ, ಅಲ್ಲಿಗೇಕೆ ಹೋಗಲಿಲ್ಲ'' ಎಂಬ ಪ್ರಶ್ನೆ ಅವರಿಗೆ ಆರಂಭದಲ್ಲೇ ಎದುರಾಯಿತು. ವಿಚಿತ್ರವೆಂದರೆ ಕೋಲ್ಕತಾದಲ್ಲಿ ಅವರಿಗೆ ''ಮುಸ್ಲಿಮರಿಗೆ ತುಸುವೇ ಹೆಚ್ಚುಕಮ್ಮಿಯಾದರೂ ಓಡಿಬರುತ್ತೀರಲ್ಲ?'' ಎಂಬ ಆಕ್ಷೇಪ ಕೇಳಿಬಂದಿತ್ತು!...

ನೌಖಾಲಿ ಪ್ರಕೃತಿ ಸೌಂದರ್ಯ ಹಾಗೂ ಹಸಿರು ತುಂಬಿದ ನಾಡು. ಆದರೆ ಬಾಪುಜಿ ಮತ್ತು ಅವರ ತಂಡ ಕಂಡಿದ್ದು ಸುಟ್ಟು ಕರಕಲಾದ ಮನೆಗಳು, ಊರು ಬಿಟ್ಟು ಓಡಿಹೋದ ಮಂದಿ, ದುರಂತದ ದುಃಖ ದುಮ್ಮಾನದ ಕಥೆಗಳು ಮತ್ತು ಭಯಭೀತಿಯ ವಾತಾವರಣವನ್ನು.

ಬಾಪು ಹೇಳಿದರು- ''ನಾನು ಯಾರ ಮೇಲೂ ದೋಷ ಹೊರಿಸಲು ಬಂದಿಲ್ಲ. ಬಂಗಾಳದ ಹೆಣ್ಣುಮಕ್ಕಳ ಆಕ್ರಂದನ ನನ್ನನ್ನು ಎಳೆದುಕೊಂಡು ಬಂದಿದೆ. ಅವರ ಕಣ್ಣೀರು ಒರೆಸಲು ಬಂದಿದ್ದೇನೆ. ಹಿಂದೂ ಮುಸ್ಲಿಮರಿಬ್ಬರ ಸೇವೆಗಾಗಿ ದೇವರ ಸೇವಕನಾಗಿ ಬಂದಿದ್ದೇನೆ. ನಿಮ್ಮೆಲ್ಲರ ಹೃದಯದಲ್ಲಿ ತುಸು ಜಾಗ ಕೇಳಲು ಬಂದಿದ್ದೇನೆ. ಇಲ್ಲಿ ಈಗ ಹೇಗೆ ಮುಂದುವರಿಯಬೇಕೋ ಗೊತ್ತಿಲ್ಲ. ಆದರೆ ಮನುಷ್ಯನ ನೀಚಾತಿನೀಚ ಬರ್ಬರತೆಯ ಎದುರು, ನನ್ನ ಸಹಾಯ ಅಪೇಕ್ಷಿಸುವವರ ಮುಂದೆ ನಿಸ್ಸಹಾಯಕನಾಗಿ ಕೂರುವ ಬದಲು ನಾನು ಕಣ್ಣು ಮುಚ್ಚಿಕೊಳ್ಳುವುದೇ ವಾಸಿ...''

ಅಲ್ಲಿ ಎಷ್ಟು ದಿನ ಇರಬೇಕೆಂದು ಗಾಂಧೀಜಿ ಯಾವ ಗಡುವನ್ನೂ ಹಾಕಿಕೊಂಡಿರಲಿಲ್ಲ. ಒಡೆದುಹೋದ ಮನುಷ್ಯ ಮನುಷ್ಯರ ಹೃದಯಗಳನ್ನು ಬೆಸೆಯಲು ವರ್ಷಗಳೇ ಹಿಡಿದರೂ ಪರವಾಗಿಲ್ಲವೆಂದು ಮನಸ್ಸು ಗಟ್ಟಿ ಮಾಡಿಕೊಂಡಿದ್ದರು. ''ಮಾಡು ಇಲ್ಲವೇ ಮಡಿ ತತ್ವ ಇಲ್ಲಿ ಪರೀಕ್ಷೆಗೊಳಗಾಗಲಿದೆ: ಮಾಡು- ಎಂದರೆ ಹಿಂದೂಗಳೂ ಮುಸ್ಲಿಮರೂ ಅಣ್ಣತಮ್ಮಂದಿರಾಗಿ ಬದುಕುವುದನ್ನು ಕಲಿಯಬೇಕು; ಇಲ್ಲವೇ ಮಡಿ- ಆ ಪ್ರಯತ್ನದಲ್ಲಿ ನನ್ನ ಪ್ರಾಣ ಹೋಗಬೇಕು.'' ಅವರೇ ಒಂದು ಪತ್ರದಲ್ಲಿ ಬರೆದಂತೆ ಇದು ಅವರ ಜೀವನದ ಅತ್ಯಂತ ಕಠಿಣ ಅಗ್ನಿಪರೀಕ್ಷೆಯಾಗಿತ್ತು. ಯಾಕೆಂದರೆ ಅಲ್ಲಿ ಯಾವುದೂ ಸುಲಭವಾಗಿರಲಿಲ್ಲ. ಅವರ ವ್ಯಕ್ತಿತ್ವದ ಅತ್ಯುಜ್ವಲ ಪ್ರಭೆಯೂ ಇಲ್ಲಿ ನಿಷ್ಪ್ರಯೋಜಕವಾಗಿತ್ತು. ಆಳುವ ಮುಸ್ಲಿಂ ಲೀಗ್ ಸರಕಾರ ಮತ್ತು ಒಟ್ಟಾರೆ ಮುಸ್ಲಿಂ ಸಮುದಾಯ ಗಾಂಧೀಜಿಯನ್ನು ತಮ್ಮ ಶತ್ರು ಎಂದು ತಿಳಿದಿತ್ತು. ಇಂಥ ಸಂಪೂರ್ಣ ಪ್ರತಿಕೂಲ ಹವೆಯಲ್ಲಿ ಗಾಂಧಿ ಹೆಜ್ಜೆ ಹಾಕಿದರು. 'ಇಲ್ಲಿ ಜನ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ನೆಲ ಅಮಾಯಕರ ನೆತ್ತರಿನಿಂದ ತೊಯ್ದಿದೆ. ಅದರ ಮೇಲೆ ನಾನು ಚಪ್ಪಲಿ ಮೆಟ್ಟಿ ನಡೆಯುವುದೇ?'' ಎಂದು ಬರಿಗಾಲಲ್ಲಿ ಕಾಲ್ನಡಿಗೆ ಯಾತ್ರೆ ಹೊರಟ ಅವರ ಹಾದಿಯಲ್ಲಿ ಜನ ಕಲ್ಲು, ಮುಳ್ಳು, ಕಕ್ಕಸ್ಸು ಹಾಕಿದರು! ಗಾಂಧೀಜಿ ಬದಿಯ ಗಿಡದ ಟೊಂಗೆ ಮುರಿದು ಗುಡಿಸಿಕೊಂಡು ಸಾಗಿದರು! ''ಊರಿಗೆ ಒಬ್ಬ ಪ್ರಾಮಾಣಿಕ ಹಿಂದೂ, ಒಬ್ಬ ಪ್ರಾಮಾಣಿಕ ಮುಸ್ಲಿಂ ಸಿಕ್ಕಲಿ ಸಾಕು; ಅವರಿಬ್ಬರೂ ಒಟ್ಟಿಗೇ ಬಾಳಲಿ. ಹಿಂದೂಗಳ ಕಡೆಯಿಂದ ಗಲಭೆ ಆರಂಭವಾದರೆ ಈ ಪ್ರಾಮಾಣಿಕ ಹಿಂದೂ ಉಪವಾಸ ಮಾಡಲಿ, ಮುಸ್ಲಿಮರಿಂದ ದಂಗೆ ಶುರುವಾದರೆ ಆ ಮುಸ್ಲಿಂ ಉಪವಾಸ ಕೂರಲಿ. ಗಲಭೆ ನಿಲ್ಲುವವರೆಗೂ, ಅವರು ಪ್ರಾಣವನ್ನು ಒತ್ತೆಯಿಟ್ಟು ಅಹಿಂಸಾತ್ಮಕ ಹೋರಾಟ ನಡೆಸಬೇಕು''- ಇದು ಯಾತ್ರೆಯ ಆರಂಭದಲ್ಲೇ ಗಾಂಧೀಜಿ ಕೊಟ್ಟ ಸೂತ್ರ. ಆದರೆ ಮುಸ್ಲಿಂ ಲೀಗಿನ ಅಸಹಕಾರದಿಂದ ಇದು ಕೊನೆಗೂ ಕೈಗೂಡಲೇ ಇಲ್ಲ. ಅದಕ್ಕೇ ಬಾಪು ತಾವೇ ಬರಿಗಾಲಲ್ಲಿ ಹಳ್ಳಿಯಿಂದ ಹಳ್ಳಿಗೆ, ಮನೆಯಿಂದ ಮನೆಗೆ ನಡೆದರು; ದ್ವೇಷದಿಂದ ಬೆಂದ ಮನಗಳಿಗೆ ಪ್ರೀತಿಯ, ವಿವೇಕದ ಮುಲಾಮು ಲೇಪಿಸಿದರು. ಆ ಮೂಲಕ ಹನಿಹನಿಯಾಗಿ ಇಡೀ ದೇಶದ ಉದ್ವೇಗವನ್ನು ತಣಿಸಿದರು.

ಸ್ವತಃ ತಾವು ಹೀಗೆ ಹೊರಟಿದ್ದಷ್ಟೇ ಅಲ್ಲ, ತಮ್ಮ ತಂಡವನ್ನೇ ತುಂಡು ತುಂಡು ಮಾಡಿ ಒಬ್ಬೊಬ್ಬರೂ ಒಂದೊಂದು ಹಳ್ಳಿಗೆ ಹೋಗಿ ನೆಲೆಸಬೇಕು ಮತ್ತು ಶಾಂತಿಗಾಗಿ ಶ್ರಮಿಸಬೇಕು ಎಂದು ತಾಕೀತು ಮಾಡಿ ಕಳಿಸಿದರು. ಒಬ್ಬೊಬ್ಬ ಕಾರ್ಯಕರ್ತನೂ ಆಯಾ ಊರುಗಳಲ್ಲಿ ಹೆದರಿದ ಹಿಂದೂಗಳಿಗೆ ಧೈರ್ಯ ತುಂಬಬೇಕು, ಮುಸ್ಲಿಮರ ಪ್ರೀತಿ ಗೆದ್ದುಕೊಳ್ಳಬೇಕು ಮತ್ತು ಊರವರನ್ನೂ ತೊಡಗಿಸಿಕೊಂಡು ಊರಿಗೆ ಉಪಯೋಗವಾಗುವಂಥ ರಚನಾತ್ಮಕ ಚಟುವಟಿಕೆಗಳನ್ನು ನಡೆಸಬೇಕು- ಇದಿಷ್ಟು ಅವರ ಕರ್ತವ್ಯ ಎಂದು ಹೇಳಲಾಯಿತು. ''ನೀವಾಗಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಆದರೆ ಅಪಾಯ ಎದುರಾದಾಗ ಹಿಮ್ಮೆಟ್ಟದೆ ಸಹಜವಾಗಿ ಎದುರಿಸಿ, ಪ್ರಾಣ ಹೋದರೂ ಸರಿಯೇ''- ಇದು ಅವರಿಗೆ ಕಿವಿಮಾತು. ಖುದ್ದು ಗಾಂಧೀಜಿ ಮೊದಲಿಗೆ ಶ್ರೀರಾಮಪುರ ಎಂಬ ಪಟ್ಟಣದಲ್ಲಿ ಆರು ವಾರ ತಂಗಿ, ಮುಂದಕ್ಕೆ ದಿನಕ್ಕೊಂದು ಹಳ್ಳಿಯಂತೆ ಪರ್ಯಟನ ಕೈಗೊಂಡರು. ಪ್ರತಿ ಹಳ್ಳಿಯಲ್ಲೂ ಅಲ್ಲೇ ಒಬ್ಬರ ಮನೆಯಲ್ಲೇ ವಾಸ್ತವ್ಯ. ಸಿಕ್ಕಿದ್ದೇ ಆಹಾರ.

ಒಂದೂರಿನ ಮೌಲ್ವಿಯ ಮುಂದೆ ಕುರ್‌ಆನ್ ಗ್ರಂಥ ಹಿಡಿದ ಗಾಂಧಿ ಕೇಳಿದ್ದು- ''ಇಂಥ ದೌರ್ಜನ್ಯಕ್ಕೆ ಕುರ್‌ಆನ್‌ನಲ್ಲಿ ಎಲ್ಲಿದೆ ಸಮರ್ಥನೆ ತೋರಿಸಿ....'' ಇನ್ನೊಂದು ಊರಿನಲ್ಲಿ ಅಲ್ಲಿನ ಮುಸ್ಲಿಂ ಧರ್ಮಗುರು ''ಮತಾಂತರದಿಂದ ಕೊನೆ ಪಕ್ಷ ಕೆಲವರ ಜೀವ ಉಳಿದಿದೆಯಲ್ಲ'' ಎಂದು ಸಮರ್ಥಿಸಿಕೊಂಡಾಗ ಬಾಪು ಹೌಹಾರಿದರು. ''ನಾನು ದೇವರ ಬಳಿ ಹೋದರೆ, ಇಂಥ ಮನುಷ್ಯನಿಗೆ ಧರ್ಮಬೋಧನೆಯ ಜವಾಬ್ದಾರಿ ಹೇಗಾದರೂ ವಹಿಸಿದೆ ಭಗವಂತ ಎಂದು ಕೇಳುತ್ತೇನೆ'' ಎಂಬ ಉದ್ಗಾರವೆಳೆದರು!

ನಿಜಕ್ಕೂ ಗಲಭೆಯಲ್ಲಿ ತೊಡಗಿದವರು ನೂರರಲ್ಲಿ ಒಬ್ಬರು ಮಾತ್ರ, ಉಳಿದ 99 ಮುಸ್ಲಿಮರು ಒಳ್ಳೆಯವರೇ ಎಂಬ ವಿವರಣೆ ಹಲವಾರು ಕಡೆ ಬಂತು. ಆಗ ಗಾಂಧೀಜಿ ಒಬ್ಬ ಕೆಟ್ಟವನನ್ನು ತಡೆಯದ ಆ 99 ಜನರನ್ನು ಒಳ್ಳೆಯವರೆಂದು ಕರೆಯಲು ಸಾಧ್ಯವಿಲ್ಲ. ಕೇಡನ್ನು ತಡೆಯದಿರುವುದೂ ಕೇಡಿಗೆ ಬೆಂಬಲ ಕೊಟ್ಟ ಹಾಗೆಯೇ ಎಂದು ತಲೆಯಾಡಿಸಿದರು. ಅವರು ಬಯಸಿದ್ದು ಅಂತಿಮ ತ್ಯಾಗಕ್ಕೂ ಸಿದ್ಧವಾಗಬಲ್ಲ ಬಲಶಾಲಿಗಳ ಅಹಿಂಸೆಯನ್ನು. ಆ ಹಾದಿಯಲ್ಲಿ ಪ್ರಾಣತ್ಯಾಗವೂ ಹಿರಿದಲ್ಲ.

ಹಿಂದೂಗಳು ಮತ್ತು ಮುಸ್ಲಿಮರ ಪರಂಪರೆ ಒಂದೇ. ಅವರು ಎದುರಿಸುವ ಸವಾಲು ಸಂಕಷ್ಟಗಳು, ತಲುಪಬೇಕಾದ ಗುರಿ- ಎಲ್ಲ ಒಂದೇ. ಮುಸ್ಲಿಂ ಕುಟುಂಬದಲ್ಲೇ ತುಸು ಹಿಂದೆ ಹೋದರೆ ಅವರ ಪೂರ್ವಿಕನೂ ಒಬ್ಬ ಹಿಂದೂವೇ ಆಗಿರುತ್ತಾನೆ. ಹೀಗಿರುವಾಗ ಅವರಿಬ್ಬರೂ ಸೌಹಾರ್ದದಿಂದಿರುವುದೇ ಅತ್ಯಂತ ಸಹಜವಾದದ್ದು ಎಂದು ನಂಬಿದ್ದರು ಬಾಪು.

ಹಿಂದೂ ಮುಸ್ಲಿಂ ಬಾಂಧವ್ಯದ ಬಗ್ಗೆ ಅವರು ಆಗಾಗ ಹೇಳಿದ ಮಾತುಗಳು:

►''ಭಾರತವೇ ತನ್ನ ಮಾತೃಭೂಮಿ ಅಂತ ಪ್ರತಿಯೊಬ್ಬ ಮುಸ್ಲಿಮನೂ ನಂಬಿಕೊಂಡಿದ್ದ ಕಾಲ ಇತ್ತು. ಖಿಲಾಫತ್ ಚಳವಳಿ ಸಮಯದಲ್ಲಿ ಅಲಿ ಸೋದರರು ನನ್ನ ಜೊತೆ ಕೆಲಸ ಮಾಡುವಾಗ, ಈ ಭಾರತ ಎಷ್ಟರ ಮಟ್ಟಿಗೆ ಹಿಂದೂಗಳದ್ದೋ, ಅಷ್ಟೇ ಮಟ್ಟಿಗೆ ಮುಸ್ಲಿಮರದ್ದೂ ಹೌದು ಅಂತ ಅವರ ಮಾತು ಮಾತಲ್ಲೂ ಸ್ಪಷ್ಟ ಆಗ್ತಾ ಇತ್ತು.... ಒಂದು ಧರ್ಮದವರು ಇನ್ನೊಂದು ಧರ್ಮದವರ ಪ್ರೀತಿ ಗೆಲ್ಲೋದಿಕ್ಕೆ ಪೈಪೋಟಿ ನಡೆಸುತ್ತಿದ್ದರು. ಯಾರ ಹೃದಯದಲ್ಲೂ ಅನುಮಾನ, ಅಪನಂಬಿಕೆ ಅನ್ನೋದು ಸುಳಿಯುತ್ತಿರಲಿಲ್ಲ. ಆ ಘನತೆ, ಹೃದಯ ವೈಶಾಲ್ಯ ಎಲ್ಲ ಎಲ್ಲಿ ಹೋಯ್ತು ಈಗ?...''

►''ಪ್ರಪಂಚದ ಯಾವುದೇ ಭಾಗದಲ್ಲಿ ಒಂದು ಧರ್ಮವೇ ಒಂದು ರಾಷ್ಟ್ರೀಯತೆ ಅನ್ನೋದಿಲ್ಲ. ಭಾರತದಲ್ಲೂ ಯಾವಾಗಲೂ ಹಾಗಿರಲಿಲ್ಲ. ಇಲ್ಲಿ ಶೈವರು ಮತ್ತು ವೈಷ್ಣವರ ನಡುವೆ ಭೀಕರ ಸಂಘರ್ಷಗಳಾಗಿವೆ. ಆದರೆ ಶೈವ ವೈಷ್ಣವ ಪಂಥಗಳು- ಎರಡು ಪ್ರತ್ಯೇಕ ರಾಷ್ಟ್ರಗಳೆಂದು ಯಾರೂ ಹೇಳುವುದಿಲ್ಲ. ಈ 'ಎರಡು ದೇಶಗಳು' ಎಂಬ ಸಿದ್ಧಾಂತವೇ ಪೊಳ್ಳು. ಭಾರತ ಅದೇಕೆ ಒಂದು ರಾಷ್ಟ್ರವಲ್ಲ? ಮೊಗಲರ ಕಾಲದಲ್ಲಿ ಒಂದು ದೇಶವಾಗಿರಲಿಲ್ಲವೇ? ಭಾರತದಲ್ಲಿ ಎರಡು ರಾಷ್ಟ್ರಗಳಿವೆಯೇ? ಎರಡಾದರೆ ಎರಡೇ ಏಕೆ? ಕ್ರೈಸ್ತರು ಮೂರನೇ ದೇಶ, ಪಾರ್ಸಿಗಳು ನಾಲ್ಕನೇ ದೇಶ... ಹಾಗೆ ಹೇಳಬಹುದಲ್ಲವೇ? ಚೀನಾದಲ್ಲಿರುವ ಮುಸ್ಲಿಮರು, ಇತರ ಚೀನೀಯರಿಗಿಂತ ಬೇರೆಯಾದ ಪ್ರತ್ಯೇಕ ದೇಶವೇ? ಇಂಗ್ಲೆಂಡಿನಲ್ಲಿರುವ ಮುಸ್ಲಿಮರು, ಇಂಗ್ಲಿಷರಿಗಿಂತ ಬೇರೆಯಾದ ದೇಶವೇ? ಪಂಜಾಬಿನ ಮುಸ್ಲಿಮರು, ಅಲ್ಲಿನ ಹಿಂದೂಗಳು ಮತ್ತು ಸಿಖ್ಖರಿಗಿಂತ ಹೇಗೆ ಭಿನ್ನ? ಅವರೆಲ್ಲರೂ ಅದೇ ನೀರು ಕುಡಿಯುವ, ಅದೇ ಗಾಳಿ ಉಸಿರಾಡುವ ಅದೇ ಮಣ್ಣಿನಲ್ಲಿ ಜೀವಿಸುವ ಪಂಜಾಬಿಗಳಲ್ಲವೇ?'' ►''ದೇವರ ಹೆಸರನ್ನು ಅರಬಿಕ್ ಭಾಷೆಯಲ್ಲಿ ಕರೆದರೆ ಅದೇನು ಪಾಪವೇ? ಹಿಂದೂ ಮುಸ್ಲಿಂ ಒಗ್ಗಟ್ಟು ನನ್ನ ಜೀವನದ ಧ್ಯೇಯ. ಭಾರತವೆಂಬುದು ಹಿಂದೂಗಳಿಗೆ ಮಾತ್ರ, ಪಾಕಿಸ್ತಾನ ಮುಸ್ಲಿಮರಿಗೆ ಮಾತ್ರ ಎಂದಾದರೆ ಎರಡೂ ದೇಶಗಳಲ್ಲಿ ಹರಿಯುವುದು ವಿಷದ ನದಿಗಳು ಮಾತ್ರ.

►ನಾನೊಬ್ಬ ಕ್ರೈಸ್ತ, ಹಿಂದೂ, ಮುಸ್ಲಿಂ, ಯಹೂದ್ಯ- ಇವೆಲ್ಲವೂ ಹೌದು.

**

ಗಾಂಧೀಜಿಯ ಶಾಂತಿಮಂತ್ರವನ್ನು ಧರಿಸಿ ಬೇರೆ ಬೇರೆ ಹಳ್ಳಿಗಳಲ್ಲಿ ನೆಲೆಸಿದ ಅವರ ತಂಡದ ಸದಸ್ಯರು ಸಾಧಿಸಿದ್ದೇನು?

ಮೊದಲ ಉದಾಹರಣೆ- ಬೀಬಿ ಅಮ್ತುಸ್ ಸಲಾಂ- ಗಾಂಧೀಜಿಯ ಮಾನಸಪುತ್ರಿ. ಜೀವನವಿಡೀ ಹಿಂದೂ ಮುಸ್ಲಿಂ ಸಾಮರಸ್ಯಕ್ಕಾಗಿ ದುಡಿದ ಮುಸ್ಲಿಂ ಹೆಣ್ಣುಮಗಳು. ಆಕೆ ಸಿರಂಡಿ ಎಂಬ ಹಳ್ಳಿಯಲ್ಲಿ ನೆಲೆಸಿದ್ದಾಗ ಅಲ್ಲಿನ ಹಿಂದೂ ಹೆಣ್ಣುಮಕ್ಕಳು ಬಂದು ತಮ್ಮ ಭಯಾನಕ ಅನುಭವಗಳನ್ನು ವಿವರಿಸಿದರು. ಕೊಲೆ, ಸುಲಿಗೆ, ಅತ್ಯಾಚಾರ, ಮತಾಂತರ, ಬಲವಂತದ ಮದುವೆ ಕಥೆಗಳು... ಆ ಊರಿನಲ್ಲಿ ಲೂಟಿಯಾದ ವಸ್ತುಗಳ ಪೈಕಿ ಊರಿನ ಧಾರ್ಮಿಕ ಆಚರಣೆಗಳಲ್ಲಿ ಬಳಕೆಯಾಗುತ್ತಿದ್ದ ಮೂರು ಕತ್ತಿಗಳನ್ನು ದೋಚಲಾಗಿತ್ತು.

ಅಮ್ತುಸ್ ಸಲಾಂ- ಆ ಕತ್ತಿಗಳನ್ನು (ಮತ್ತು ಲೂಟಿಯಾದ ಎಲ್ಲ ವಸ್ತುಗಳನ್ನು) ಹಿಂದೂಗಳಿಗೆ ವಾಪಸು ತಂದು ಒಪ್ಪಿಸುವವರೆಗೆ ತಾನು ಉಪವಾಸ ಮಾಡುವುದಾಗಿ ಪ್ರಕಟಿಸಿ ಆಹಾರ ತ್ಯಜಿಸಿಬಿಟ್ಟರು. ದಿನ ಕಳೆದಂತೆ ಊರಿನ ಮುಸ್ಲಿಮರ ಮನ ಕರಗಿ ಮೂರರಲ್ಲಿ ಎರಡು ಕತ್ತಿಗಳನ್ನು, ಜೊತೆಗೆ ಇತರ ವಸ್ತುಗಳನ್ನೂ ಒಂದೊಂದಾಗಿ ತಂದೊಪ್ಪಿಸಿದರು. ಆದರೆ ಮೂರನೇ ಕತ್ತಿಯನ್ನು- ಬಹುಶಃ ಯಾವುದೋ ಹಳ್ಳಕ್ಕೆ ಎಸೆದಿದ್ದರು- ಪೊಲೀಸರನ್ನೂ ಸೇರಿಸಿಕೊಂಡು ಎಷ್ಟು ಹುಡುಕಿದರೂ ಪತ್ತೆಯಾಗಲೇ ಇಲ್ಲ.

ಆ ಹಳ್ಳಿಗೆ ಗಾಂಧೀಜಿ ಬರುವ ವೇಳೆಗೆ ಉಪವಾಸ ಅದಾಗಲೇ 25 ದಿನ ಮುಟ್ಟಿತ್ತು! ಅಮ್ತುಸ್ ಜೀವ ಕುಟುಕುತ್ತಿತ್ತು. ವೈದ್ಯರು, ಸಾವು ಬಾಗಿಲು ಬಡಿಯುತ್ತಿದೆ ಎಂದು ಆತಂಕದಿಂದ ಉಸುರಿದರು. ಆಕೆ ಮಲಗಿದ್ದ ಹಾಸಿಗೆ ಪಕ್ಕ ನಿರಂತರವಾಗಿ ಕುರ್‌ಆನ್ ಮತ್ತು ಭಗವದ್ಗೀತೆ ಪಠಣ ನಡೆದೇ ಇತ್ತು. ಊರ ಮುಸ್ಲಿಮರು ಹತಾಶರಾಗಿದ್ದರು; ನಿರಶನ ಕೊನೆಗೊಳ್ಳಲೆಂದು ಏನು ಬೇಕಾದರೂ ಮಾಡಲು ಸಿದ್ಧರಾಗುವ ಹಂತ ತಲುಪಿದ್ದರು. ಕಡೆಗೆ ಬಾಪು ಮಧ್ಯಸ್ಥಿಕೆಯಲ್ಲಿ ಅಮ್ತುಸ್ ಸಲಾಂ ಉಪವಾಸ ನಿಲ್ಲಿಸುವ ಮುನ್ನ, ಮುಸ್ಲಿಮರು, ತಮ್ಮ ಪ್ರಾಣ ತೆತ್ತಾದರೂ ಊರ ಹಿಂದೂಗಳ ಪ್ರಾಣ, ಮಾನ, ಸೊತ್ತು ಕಾಪಾಡುವ ಶಪಥ ಮಾಡಿ ಮುಚ್ಚಳಿಕೆ ಬರೆದುಕೊಟ್ಟಾಗಿತ್ತು...! ಅದಾದ ಮೇಲೆ ಮೂರನೇ ಖಡ್ಗದ ಹುಡುಕಾಟವೂ ಮುಂದುವರಿಯಿತು. (ಆದರೆ ಆ ಕತ್ತಿ ಕೊನೆಗೂ ಸಿಗಲೇ ಇಲ್ಲ). ಇದು ಒಟ್ಟು ನೌಖಾಲಿ ಪ್ರದೇಶದ ದ್ವೇಷಮಯ ವಾತಾವರಣ ತಿಳಿಯಾಗಲು ನಾಂದಿಯಾದ ಮೊದಲ ಘಟನೆ.

**

ಪ್ಯಾರೆಲಾಲ್ ನಯ್ಯರ್‌ರ (ಗಾಂಧೀಜಿ ಕಾರ್ಯದರ್ಶಿ) ತಂಗಿ ಡಾಕ್ಟರ್ ಸುಶೀಲಾ ನಯ್ಯರ್, ವೃತ್ತಿಯಿಂದ ವೈದ್ಯೆ; ಗಾಂಧೀಜಿಯವರ ವೈಯಕ್ತಿಕ ವೈದ್ಯೆ ಕೂಡ. (ಸ್ವತಂತ್ರ ಭಾರತದ ಮೊದಲ ಆರೋಗ್ಯ ಮಂತ್ರಿಯೂ ಹೌದು.) ತಂಡದ ಸದಸ್ಯೆಯಾಗಿ ಅವರು ತಂಗಿದ್ದ ಹಳ್ಳಿ- ಅಮಿಶಾಪಾರ.

ಸುಶೀಲಾ ಅಲ್ಲಿ ಸುತ್ತಮುತ್ತಲ ಹಳ್ಳಿ ಜನರಿಗೆಲ್ಲ ವೈದ್ಯಕೀಯ ಉಪಚಾರ ಒದಗಿಸುತ್ತಿದ್ದಾಗಲೇ ಗುಜರಾತಿನ ಸೇವಾಗ್ರಾಮ ಆಶ್ರಮದಿಂದ ಅವರಿಗೆ ತುರ್ತು ಕರೆ ಬಂತು. ಅವರು ಹೊರಡಲು ಅನುವಾದಾಗ ಆ ಪ್ರದೇಶದ ಮುಸ್ಲಿಂ ರೋಗಿಗಳೆಲ್ಲರೂ ''ನಾವು ಗುಣ ಆಗುವವರೆಗೂ ಬಿಟ್ಟು ಹೋಗಬೇಡಿ'' ಎಂದು ದುಂಬಾಲು ಬಿದ್ದರು! ಸರಿ, ಅವರ ಮಾತಿಗೆ ಬೆಲೆ ಕೊಟ್ಟು ಸುಶೀಲಾ ನಯ್ಯರ್ ಉಳಿದುಕೊಂಡಾಗ ಅವರೆಲ್ಲ ಕೃತಜ್ಞತೆಯಿಂದ ತಾವು ದೋಚಿಕೊಂಡು ಹೋಗಿದ್ದ ವಸ್ತುಗಳನ್ನೆಲ್ಲ ವಾಪಸು ತಂದು ಆಯಾ ಮಾಲಕರಿಗೆ ಒಪ್ಪಿಸಿದರು....! ಇಂಥ ಬೆಳವಣಿಗೆಗಳು ನಿಧಾನವಾಗಿ ಅಲ್ಲಿನ ವಾತಾವರಣದಲ್ಲಿ ಸಾಮರಸ್ಯದ ಗಾಳಿ ಬೀಸಲು ಅನುವಾದವು....

**

ಅಂತೂ ನಾಲ್ಕು ತಿಂಗಳಿಗೂ ಹೆಚ್ಚು ನೌಖಾಲಿ ಮತ್ತು ಟಿಪ್ಪೆರಾ ಜಿಲ್ಲೆಗಳಲ್ಲಿ ಕಳೆದ ಗಾಂಧಿ ಇನ್ನೂ ಎಷ್ಟು ಕಾಲ ಅಲ್ಲೇ ಉಳಿಯುತ್ತಿದ್ದರೋ, ಅಷ್ಟರಲ್ಲಿ ಅವರಿಗೆ ಬಿಹಾರಕ್ಕೆ ಬರಲೇಬೇಕೆಂಬ ಒತ್ತಾಯ ಬಂತು. ಬಿಹಾರದಲ್ಲಿ ಹಿಂದೂಗಳು ನಡೆಸಿದ ಹಿಂಸಾಕಾಂಡ ಎದೆ ನಡುಗಿಸುವಂತಿತ್ತು. ಪಾಟ್ನಾಕ್ಕೆ ಬಂದಿಳಿದ ಗಾಂಧೀಜಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ''ಇದು ಜಲಿಯನ್‌ವಾಲಾಬಾಗ್ ಹತ್ಯಾಕಾಂಡದಷ್ಟೇ ಘೋರವಾದ ನರಮೇಧ'' ಎಂದು ನಿಡುಸುಯ್ದರು. ಬಿಹಾರದಲ್ಲಿಯೂ ಮಾಡು ಇಲ್ಲವೇ ಮಡಿ ಎಂದು ಧುಮುಕಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ನೌಖಾಲಿಗೆ ಹಿಂದಿರುಗುವ ಸಲುವಾಗಿ ಗಾಂಧೀಜಿ ಕೋಲ್ಕತಕ್ಕೆ ಮರಳಿದರು. ಆದರೆ ಕೋಲ್ಕತದಲ್ಲೇ ಪರಿಸ್ಥಿತಿ ಉಲ್ಬಣಿಸಿದ್ದರಿಂದ ಬಾಪುಜಿ ಅಲ್ಲಿ ಶಾಂತಿ ತರಲು ಉಪವಾಸ ಹೂಡಬೇಕಾಯಿತು. ಆಗ ರಾಜಾಜಿ ''ಗೂಂಡಾಗಳ ವಿರುದ್ಧ ಉಪವಾಸ ಮಾಡಲು ಸಾಧ್ಯವೇ?'' ಎಂದು ಕೇಳಿದ್ದರು. ಅದಕ್ಕೆ ಗಾಂಧೀಜಿ ಹೇಳಿದ್ದು- ಗೂಂಡಾಗಳ ವಿರುದ್ಧ ಅಲ್ಲ, ನಾನು ಆ ಗೂಂಡಾಗಳ ಯಜಮಾನರ ಹೃದಯ ಮುಟ್ಟಲು ಯತ್ನಿಸುತ್ತೇನೆ... ಕೋಲ್ಕತದಲ್ಲಿ ಎಲ್ಲ ಧರ್ಮ ಗುಂಪುಗಳ ನೇತಾರರು ಬಂದು ಗಾಂಧೀಜಿ ಮುಂದೆ ಸ್ನೇಹ ಸಾಮರಸ್ಯದ ಶಪಥ ತೊಟ್ಟ ಮೇಲೆ ಗಾಂಧಿ ಅಲ್ಲಿಂದ ಹೊರಟು ದಿಲ್ಲಿಗೆ ಬಂದರು. ಅಲ್ಲಿ ಆ ವೇಳೆಗಾಗಲೇ ವಿಭಜನೆಯ ವಲಸೆ ರಣಭೀಕರ ಹಂತ ತಲುಪಿತ್ತು. ದಿಲ್ಲಿ ಅಗ್ನಿಕುಂಡವಾಗಿತ್ತು. ಕಡೆಗೆ ಅಲ್ಲಿಯೂ ಬಾಪು ತಮ್ಮ ಜೀವಿತದ ಕಟ್ಟಕಡೆಯ ಉಪವಾಸ ಸತ್ಯಾಗ್ರಹ ಹೂಡಿದರು. ಪರಿಣಾಮ ದಿಲ್ಲಿಯೇನೋ ಶಾಂತವಾಯಿತು. ಆದರೆ ಉಪವಾಸ ನಿಂತ ಹನ್ನೆರಡೇ ದಿನಕ್ಕೇ ಈ ಯುಗದ ಮಹಾತ್ಮ ಹಂತಕನ ಗುಂಡಿಗೆ ಬಲಿಯಾದರು....

ಇದು ನಾವು ಭಾರತೀಯರೆಲ್ಲರೂ ಬೆನ್ನಿಗೆ ಕಟ್ಟಿಕೊಂಡ ಪರಂಪರೆ ಎಂಬುದನ್ನು ಮರೆಯದಿರೋಣ. ಗಾಂಧೀಜಿ ತಮ್ಮ ಕಡೆ ದಿನಗಳಲ್ಲಿ ಸಾಧಿಸಿದ್ದೇನು? ಅದನ್ನು ಮನಃಪರಿವರ್ತನೆ ಎನ್ನದೆ ಇನ್ನೇನೆಂದು ಕರೆಯಲು ಸಾಧ್ಯ? ಹೋಗಲಿ,- ಆ ನೌಖಾಲಿ ಪವಾಡವನ್ನು- ಈಗೇಕೆ ನೆನಪಿಸಿಕೊಳ್ಳಬೇಕು?

ಯಾಕೆಂದರೆ ಅದು ಈಗಲೂ ನಮ್ಮನ್ನು ಆಳುತ್ತಿರುವ ಇತಿಹಾಸ. ಕೋಮು ವೈಷಮ್ಯ ಎಂಬುದು ಈಗಲೂ ನಾರುತ್ತ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ರಣಗಾಯ. ಇದಕ್ಕೆ ನಾವು ನಮ್ಮ ವಾಕ್ಪಟುತ್ವದಲ್ಲಿ, ವಾದಪ್ರಾವೀಣ್ಯದಲ್ಲಿ ಉತ್ತರ ಹುಡುಕೋಣವೇ? ಅಥವಾ ಬಾಪು ತೋರಿದ ಹಾದಿ ಹಿಡಿಯುವ ಧೈರ್ಯ ನಮಗಿದೆಯೇ? ''ಕೋಮುಗಲಭೆಗಳನ್ನು ಎದುರಿಸಬಲ್ಲ ಶಾಂತಿಪಡೆ ರಚಿಸಬೇಕು; ಪೊಲೀಸರು ಅಥವಾ ಮಿಲಿಟರಿಯನ್ನೂ ಅವಲಂಬಿಸದೆ ಆ ಪಡೆಯ ಸದಸ್ಯರು ದಿಟ್ಟವಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಶಾಂತಿ, ಸಾಮರಸ್ಯಕ್ಕಾಗಿ ಹೋರಾಡಬೇಕು'' ಎಂದು ಬಾಪು ಕಾಂಗ್ರೆಸ್‌ಗೆ ಸಲಹೆ ನೀಡಿದ್ದರು. ಅಂಥ ಮಾಡು ಇಲ್ಲವೇ ಮಡಿ ಮಾರ್ಗಕ್ಕೆ ಸ್ವತಃ ತಾವೇ ಉದಾಹರಣೆಯಾಗಿ ಬದುಕಿ ತೋರಿದ್ದರು.

ಅವರು ಸಾಧಿಸಿದ್ದ ಸ್ನೇಹ ಸಾಮರಸ್ಯಗಳು ಎಷ್ಟು ದೃಢವಾಗಿತ್ತೆಂದರೆ, ಇತ್ತ ಪಶ್ಚಿಮ ಪಾಕಿಸ್ತಾನದ (ಅಂದರೆ ಈಗಿನ ಪಾಕಿಸ್ತಾನ) ಗಡಿಯಲ್ಲಿ ವಿಭಜನೆಯ ಹಿಂಸಾಚಾರಗಳಿಗೆ ಸುಮಾರು ಇಪ್ಪತ್ತು ಲಕ್ಷ ಜೀವಗಳು ಆಹುತಿಯಾದರೆ, ಅತ್ತ ಪೂರ್ವ ಪಾಕಿಸ್ತಾನ ಪ್ರದೇಶದಲ್ಲಿ ಉದ್ದಕ್ಕೂ ಸಂಪೂರ್ಣ ಶಾಂತಿ ನೆಲೆಸಿತ್ತು! ಎಷ್ಟರ ಮಟ್ಟಿಗೆಂದರೆ ಮುಂದಿನ ಐವತ್ತು ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಕೋಮುಗಲಭೆ ನಡೆಯಲಿಲ್ಲ!...

ಅದಕ್ಕೇ ಲಾರ್ಡ್ ಮೌಂಟ್ ಬ್ಯಾಟನ್ ಹೇಳಿದ್ದು:

''ಈ ಕಡೆ ಪಂಜಾಬ್ ಪ್ರಾಂತದಲ್ಲಿ ನಮ್ಮ ಸೈನ್ಯದ ಐವತ್ತು ಸಾವಿರ ಯೋಧರು ಸಾಧಿಸಲಾಗದ ಶಾಂತಿಯನ್ನು ಅತ್ತ ಪೂರ್ವದಲ್ಲಿ ಏಕೈಕ ವ್ಯಕ್ತಿಯ ಸೈನ್ಯ (ಅಂದರೆ ಗಾಂಧೀಜಿ) ಸಾಧಿಸಿ ತೋರಿದೆ!....''

ಆ ಶಾಂತಿ ಕೂಡ ನಮ್ಮ ಪರಂಪರೆ ಎಂಬುದು ಮರೆತು ಹೋಗದಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)