ಮಾಹಿತಿ - ಮಾರ್ಗದರ್ಶನ
ಭೀಮ್ ಯುಪಿಐ ಬಳಕೆದಾರರು ತಮ್ಮ ದೂರುಗಳನ್ನು ಆನ್ಲೈನ್ನಲ್ಲಿ ದಾಖಲಿಸುವುದು ಹೇಗೆ?

ಹಣ ಪಾವತಿಯ ವಿಧಾನವಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಕೆಯು ಕಳೆದೆರಡು ವರ್ಷಗಳಲ್ಲಿ ಹೆಚ್ಚಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಬಳಿಕ ಯುಪಿಐ ಬಳಕೆಯು ಇನ್ನಷ್ಟು ವ್ಯಾಪಕಗೊಂಡಿದ್ದು,ಹೆಚ್ಚೆಚ್ಚು ಜನರು ಸಂಪರ್ಕರಹಿತ ಹಣಪಾವತಿ ವಿಧಾನಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಆಗಸ್ಟ್ನಲ್ಲಿ 1.62 ಶತಕೋಟಿಗಳಷ್ಟು ದಾಖಲೆಯ ಸಂಖ್ಯೆಯಲ್ಲಿ ಯುಪಿಎ ವಹಿವಾಟುಗಳು ನಡೆದಿವೆ. ಕಳೆದ ವರ್ಷದ ಆಗಸ್ಟ್ನಲ್ಲಿಯ 1.54 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಆಗಸ್ಟ್ನಲ್ಲಿ 2.98 ಲ.ಕೋ.ರೂ.ಗಳ ವಹಿವಾಟುಗಳು ನಡೆದಿವೆ.
ಗೂಗಲ್ ಪೇ,ಫೋನ್ಪೆ,ಅಮೆಝಾನ್ ಪೇ,ಭಾರತ ಇಂಟರ್ಫೇಸ್ ಫಾರ್ ಮನಿ (ಭೀಮ್) ಇತ್ಯಾದಿಗಳು ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಯುಪಿಐ ಆಧಾರಿತ ಮೊಬೈಲ್ ಆ್ಯಪ್ಗಳಾಗಿವೆ. ತಕ್ಷಣ ಹಣ ರವಾನೆಗೆ ಮತ್ತು ಬ್ಯಾಂಕ್ಖಾತೆಯಲ್ಲಿ ನೇರವಾಗಿ ಹಣ ಸ್ವೀಕೃತಿಗೆ ಬಳಕೆಯಾಗುವ ಜೊತೆಗೆ ವಿದ್ಯುತ್ ಬಿಲ್ ಪಾವತಿ,ಎಲ್ಪಿಜಿ ಬುಕ್ಕಿಂಗ್ ಮತ್ತು ಸಿಲಿಂಡರ್ ರಿಫಿಲ್ಗಳಿಗೆ ಹಣಪಾವತಿ,ಮೊಬೈಲ್ ರಿಚಾರ್ಜ್ ಇತ್ಯಾದಿಗಳಿಗೆ ಅನುಕೂಲ ಕಲ್ಪಿಸಿರುವುದರಿಂದ ಈ ಆ್ಯಪ್ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ.
ಯುಪಿಐ ಆಧಾರಿತ ಹಣಪಾವತಿಗಳು ಹೆಚ್ಚುವುದರೊಂದಿಗೆ ಸಂಕೀರ್ಣತೆಗಳೂ ಹೆಚ್ಚಾಗಿವೆ ಮತ್ತು ವಹಿವಾಟುಗಳು ತಪ್ಪು ಆಗಲೂಬಹುದು. ನೀವು ಭೀಮ್ ಆ್ಯಪ್ ಬಳಕೆದಾರರಾಗಿದ್ದರೆ ವಹಿವಾಟಿಗೆ ಸಂಬಂಧಿಸಿದ ಆನ್ಲೈನ್ ದೂರನ್ನು ಹೇಗೆ ಸಲ್ಲಿಸಬಹುದು ಎಂಬ ಮಾಹಿತಿಯಿಲ್ಲಿದೆ.
ಆ್ಯಪ್ ಪೇಜ್ನ ಮೇಲ್ಗಡೆಯ ಬಲಮೂಲೆಯಲ್ಲಿರುವ ಮೂರು ಗೆರೆಗಳನ್ನು ಸ್ಪರ್ಶಿಸಿದರೆ ನಿಮ್ಮೆದುರು ಪರ್ಯಾಯ ಆಯ್ಕೆಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. ಈ ಪಟ್ಟಿಯಲ್ಲಿ ‘ರೈಸ್ ಕಂಪ್ಲೇಂಟ್ ’ನ್ನು ಆಯ್ಕೆ ಮಾಡಿಕೊಳ್ಳಿ. ಈಗ ತೆರೆದುಕೊಳ್ಳುವ ಹೊಸ ಪೇಜ್ ಆ್ಯಪ್ನಲ್ಲಿ ನಿಮ್ಮ ಎಲ್ಲ ವಹಿವಾಟುಗಳನ್ನು ತೆರೆದಿಡುತ್ತದೆ ಮತ್ತು ನೀವು ಯಾವ ವಹಿವಾಟಿನ ಬಗ್ಗೆ ದೂರು ಸಲ್ಲಿಸಲು ಬಯಸಿದ್ದೀರೊ ಅದನ್ನು ಆಯ್ಕೆ ಮಾಡಿಕೊಳ್ಳಿ. ಸದ್ರಿ ವಹಿವಾಟಿನ ಮೇಲೆ ಟ್ಯಾಪ್ ಮಾಡಿದಾಗ ಆ್ಯಪ್ ಆ ವಹಿವಾಟಿನ ವಿವರಗಳನ್ನು ಒದಗಿಸುತ್ತದೆ. ಈಗ ಕೊನೆಯವರೆಗೆ ಸ್ಕ್ರೋಲ್ ಡೌನ್ ಮಾಡಿದರೆ ‘ಕಾಲ್ ಬ್ಯಾಂಕ್ ’ ಮತ್ತು ‘ರೈಸ್ ಕನ್ಸರ್ನ್ ’ ಎಂಬ ಎರಡು ಆಯ್ಕೆಗಳು ಕಂಡುಬರುತ್ತವೆ. ‘ರೈಸ್ ಕನ್ಸರ್ನ್ ’ಮೇಲೆ ಟ್ಯಾಪ್ ಮಾಡಿ ಅಲ್ಲಿ ಒದಗಿಸಿರುವ ಜಾಗದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಯನ್ನು ಉಲ್ಲೇಖಿಸಿ ಸಬ್ಮಿಟ್ ಮಾಡಿ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡಬೇಕಿದ್ದರೆ ‘ಕಾಲ್ ಬ್ಯಾಂಕ್ ’ನ್ನು ಆಯ್ಕೆ ಮಾಡಿಕೊಳ್ಳಿ. ಪರ್ಯಾಯವಾಗಿ ನೀವು ಶುಲ್ಕರಹಿತ ಸಂಖ್ಯೆ 1800 1201 740ಕ್ಕೆ ಕರೆ ಮಾಡಬಹುದು ಅಥವಾ https://bhimupi.org.in/get-touch ಗೆ ಭೇಟಿ ನೀಡಿ.
‘ಗೆಟ್ ಇನ್ ಟಚ್ ’ ಭೀಮ್ ಆ್ಯಪ್ ಬಳಕೆದಾರರು ಲಾಗಿನ್,ನೋಂದಣಿ,ವಹಿವಾಟು,ಕ್ಯಾಷ್ ಬ್ಯಾಕ್,ಪಿನ್ ಸೆಟಿಂಗ್,ಹಣ ಸ್ವೀಕೃತಿ, ಹಣ ರವಾನೆ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾದ ಕಸ್ಟಮರ್ ಕೇರ್ ಪ್ಲಾಟ್ಫಾರ್ಮ್ ಆಗಿದೆ. ಈ ಪ್ಲಾಟ್ಫಾರ್ಮ್ನಲ್ಲಿ ಇ-ಫಾರ್ಮ್ಗಳನ್ನು ತುಂಬುವ ಮೂಲಕ ಬಳಕೆದಾರರು ದೂರುಗಳನ್ನು ಸಲ್ಲಿಸಬಹುದು. ನೀವು ಭೀಮ್ ಸೇವೆಯ ಬಗ್ಗೆ ಮರುಮಾಹಿತಿಗಳನ್ನೂ ಒದಗಿಸಬಹುದು ಅಥವಾ ‘ಕ್ವೈರಿ’ ವಿಭಾಗಕ್ಕೆ ಭೇಟಿ ನೀಡಬಹುದು. ಈ ವಿಭಾಗವು ಆ್ಯಪ್ ಮತ್ತು ಅದರ ಬಳಕೆಗೆ ಸಂಬಂಧಿಸಿದಂತೆ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳನ್ನು ಒಳಗೊಂಡಿರುತ್ತದೆ. ಇನ್ಸ್ಟಂಟ್ ಚಾಟ್ ಕ್ವೈರಿಗಳಿಗಾಗಿ ಈ ಪೇಜ್ನಲ್ಲಿ ‘ಪಿಎಐ ’ ಎಂಬ ಚಾಟ್ ಬಾಟ್ ಕೂಡ ಇದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ