varthabharthi


ಸಂಪಾದಕೀಯ

ಬಾಬರಿ ಮಸೀದಿ ಧ್ವಂಸ: ಪಾಕಿಸ್ತಾನದ ನಂಟು ತನಿಖೆಯಾಗಲಿ

ವಾರ್ತಾ ಭಾರತಿ : 3 Oct, 2020

ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟು ಸಿಬಿಐ ವಿಶೇಷ ನ್ಯಾಯಾಲಯ ಎಲ್ಲ ಪ್ರಮುಖ ಆರೋಪಿಗಳನ್ನು ನಿರ್ದೋಷಿಗಳು ಎಂದು ಬಿಡುಗಡೆ ಮಾಡಿದ್ದರೂ, ಬಾಬರಿ ಮಸೀದಿ ಧ್ವಂಸವಾಗಿರುವ ಬಗ್ಗೆ ಮತ್ತು ಅದನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಬಗ್ಗೆ ತೀರ್ಪಿನಲ್ಲಿ ಆತಂಕ ವ್ಯಕ್ತಪಡಿಸಿದೆ ಎನ್ನುವ ಅಂಶವನ್ನು ನಾವು ಗಂಭೀರವಾಗಿ ಸ್ವೀಕರಿಸಿಬೇಕಾಗಿದೆ. ‘ಬಾಬರಿ ಮಸೀದಿಯನ್ನು ಧ್ವಂಸಗೊಳಿಸದಂತೆ ತಡೆದವರನ್ನು’ ಆರೋಪಿಗಳೆಂದು ಗುರುತಿಸಲು ನ್ಯಾಯಾಲಯ ನಿರಾಕರಿಸಿದೆ ಅಷ್ಟೇ. ಇದೇ ಸಂದರ್ಭದಲ್ಲಿ ಮಾಡಿದ ತನಿಖೆಯನ್ನು, ನೀಡಿದ ಸಾಕ್ಷಗಳನ್ನೆಲ್ಲ ಸಂಪೂರ್ಣ ನಿರಾಕರಿಸಿ, ‘ನಿಮ್ಮ ತನಿಖೆಯ ದಾರಿ ಯಾವುದಾಗಿರಬೇಕಾಗಿತ್ತು’ ಎನ್ನುವುದರ ಕುರಿತಂತೆಯೂ ಸೂಚನೆಯನ್ನು ನೀಡಿದೆ. ಬಹುಶಃ ವಿಶೇಷ ನ್ಯಾಯಾಲಯ ಸೂಚಿಸಿದ ದಾರಿಯಲ್ಲಿ ತನಿಖೆ ಮುಂದುವರಿದಿದ್ದರೆ, ಆರೋಪಿಗಳಿಗೂ ಶಿಕ್ಷೆಯಾಗಿ, ಭಾರತ ಸಂವಿಧಾನದ ಆತ್ಮಕ್ಕೂ ಶಾಂತಿ ದೊರಕಿದಂತಾಗುತ್ತಿತ್ತೇನೋ. ತೀರ್ಪು ನೀಡುವ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯ ತನಿಖೆಯ ಕುರಿತಂತೆ ಒಂದು ವಿಷಯದಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

‘‘ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆಯ ವ್ಯಕ್ತಿಗಳು ಭಾರತ ಪ್ರವೇಶಿಸಿರಬಹುದು ಹಾಗೂ ಕೋಮುಗಲಭೆ ಸೃಷ್ಟಿಸಲು ಅಯೋಧ್ಯೆಯಲ್ಲಿರುವ ವಿವಾದಿತ ರಾಮಜನ್ಮಭೂಮಿ-ಬಾಬರಿ ಮಸೀದಿಗೆ ಹಾನಿ ಮಾಡಿರಬಹುದು’’ ಎಂಬ ಬಗೆಗಿನ ಪ್ರಮುಖ ರಹಸ್ಯ ಮಾಹಿತಿಯ ಬಗ್ಗೆ ಸಿಬಿಐ ತನಿಖೆ ನಡೆಸಿಲ್ಲ ಎಂದು ಬುಧವಾರ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ. ‘‘ಬಾಬರಿ ಮಸೀದಿ ಧ್ವಂಸದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸದೇ ಇರುವುದು ಮೊಕದ್ದಮೆಯನ್ನು ದುರ್ಬಲಗೊಳಿಸಿದೆ’’ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ಹಿಂದೆಲ್ಲ ದೇಶದೊಳಗೆ ಎಲ್ಲೇ ಬಾಂಬ್ ಸ್ಫೋಟ ನಡೆಯಲಿ, ಕೆಲವೇ ಸೆಕೆಂಡುಗಳಲ್ಲಿ ಆರೋಪಿಗಳನ್ನು ಗುರುತಿಸಿ, ಮಾಧ್ಯಮಗಳ ಮೂಲಕ ಅವರಿಗೆ ಶಿಕ್ಷೆ ವಿಧಿಸಿಯೂ ಆಗಿ ಬಿಡುತ್ತಿತ್ತು. ‘ಪಾಕಿಸ್ತಾನದೊಳಗಿರುವ ಯಾವುದಾದರೂ ಒಂದು ಉಗ್ರ ಸಂಘಟನೆಯ ಪಾತ್ರ’ವನ್ನು ಉಲ್ಲೇಖಿಸಿದರೆ ಪೊಲೀಸರಿಗೆ ಮುಂದೆ ತನಿಖೆ ನಡೆಸುವ ಅಗತ್ಯವೇ ಬೀಳುತ್ತಿರಲಿಲ್ಲ. ಮುಂದೆ ವಿಚಾರಣೆಯ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಒಂದಿಷ್ಟು ಹುಡುಗರನ್ನು ಬಂಧಿಸಿ ವಿಚಾರಣೆ ನಡೆಸಿದರೆ, ‘ಉಗ್ರರು ವಶಕ್ಕೆ’ ಎಂಬ ತಲೆಬರಹಗಳೊಂದಿಗೆ ಸ್ಫೋಟಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿ ಬಿಡುತ್ತದೆ. ಅಲ್ಲಿಗೆ ಸ್ಫೋಟ ತನಿಖೆ ಸಂಪೂರ್ಣವಾಗಿ ಬಿಡುತ್ತದೆ.

ಬಹುಶಃ ಬಾಬರಿ ಮಸೀದಿ ಧ್ವಂಸದ ಬೆನ್ನಿಗೇ, ‘ಪಾಕಿಸ್ತಾನದ ಕೈವಾಡದಿಂದ ಮಸೀದಿ ಸ್ಫೋಟ’ ಎಂದು ಘೋಷಿಸಿ ಒಂದಿಬ್ಬರು ಮುಸ್ಲಿಮ್ ಹುಡುಗರನ್ನು ಬಂಧಿಸಿ ವಿಚಾರಣೆ ನಡೆಸಿದಂತೆ ನಾಟಕವಾಗಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರೆ, ಇಂದು ಅವರಿಗೆ ಮರಣದಂಡನೆ ಘೋಷಣೆಯಾಗಿ ಬಿಡುತ್ತಿತ್ತೇನೋ. ‘ಬಾಬರಿ ಮಸೀದಿ ಧ್ವಂಸಗೊಳಿಸುವ ಮೂಲಕ ಭಾರತದಲ್ಲಿ ಕೋಮುಗಲಭೆ ಸೃಷ್ಟಿಸುವ ಉದ್ದೇಶವನ್ನು ಪಾಕ್ ಬೇಹುಗಾರಿಕೆ ಸಂಸ್ಥೆ ಹೊಂದಿರಬಹುದು’ ಎನ್ನುವ ನ್ಯಾಯಾಲಯದ ಅನುಮಾನ ನಿರ್ಲಕ್ಷ ಮಾಡುವಂತಹದ್ದು ಖಂಡಿತ ಅಲ್ಲ. ಭಾರತದಲ್ಲಿ ಕೋಮುಗಲಭೆ ಸಂಭವಿಸಿ ಸಾವುನೋವು ಸಂಭವಿಸಿ, ದೇಶ ಆಂತರಿಕವಾಗಿ ವಿಚ್ಛಿದ್ರವಾಗುವುದು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಗುರಿಯೂ ಹೌದು. ಗಡಿಯಲ್ಲಿ ಎರಡೆರಡು ಬಾರಿ ಕಾಲುಕೆರೆದು ಜಗಳಕ್ಕಿಳಿದು ಸೋತು ಹಿಮ್ಮೆಟ್ಟಿದ ಪಾಕಿಸ್ತಾನ, ಭಾರತದ ಆಂತರಿಕ ಭದ್ರತೆಯನ್ನು ಅಲುಗಾಡಿಸಲು ಹಿಂಬಾಗಿಲ ಮೂಲಕ ಭಾರತವನ್ನು ಪ್ರವೇಶಿಸಿ ‘ಕೋಮುಗಲಭೆ’ಯನ್ನು ಸೃಷ್ಟಿಸಿ ಭಾರತವನ್ನು ಸಂಕಟಕ್ಕೆ ತಳ್ಳುವ ಎಲ್ಲ ಸಾಧ್ಯತೆಗಳಿವೆ. ಈಗ ಪ್ರಶ್ನೆಯಿರುವುದು, ಬಾಬರಿ ಮಸೀದಿ ಧ್ವಂಸಗೈದು ದೇಶದಲ್ಲಿ ಕೋಮುಗಲಭೆ ನಡೆಸುವುದಕ್ಕಾಗಿ ಪಾಕಿಸ್ತಾನ ಸಂಘಪರಿವಾರದೊಳಗೆ ತನ್ನ ದುಷ್ಕರ್ಮಿಗಳನ್ನು ತುಂಬಿರಬಹುದೆ? ನ್ಯಾಯಾಲಯ ಹೇಳಿದಂತೆ ಈ ನಿಟ್ಟಿನಲ್ಲಿ ಯಾಕೆ ಇನ್ನೊಮ್ಮೆ ಹೊಸದಾಗಿ ತನಿಖೆ ನಡೆಸಬಾರದು? ಕೋಮುಗಲಭೆಗಳು ಈ ದೇಶದ ಆರ್ಥಿಕ, ಸಾಮಾಜಿಕ ಬದುಕಿನ ಮೇಲೆ ನೇರ ದಾಳಿ ನಡೆಸುತ್ತವೆ.

‘ರಥಯಾತ್ರೆ’ಯ ಹೆಸರಲ್ಲಿ ದೇಶಾದ್ಯಂತ ಕೋಮುಗಲಭೆಗಳು ವಿಜೃಂಭಿಸಿದವು. ರಥಯಾತ್ರೆಯ ಉದ್ದೇಶವೇ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸುವುದು. ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕಾದರೆ ಬಾಬರಿ ಮಸೀದಿ ಇಲ್ಲವಾಗಲೇ ಬೇಕಾಗುತ್ತದೆ. ಬಾಬರಿ ಮಸೀದಿಯ ಧ್ವಂಸವನ್ನು ಹಲವು ಸಂಘಪರಿವಾರ ನಾಯಕರು ಈಗಾಗಲೇ ಹೆಮ್ಮೆಯಿಂದ ಸ್ಮರಿಸಿದ್ದಾರೆ. ಆ ದಿನವನ್ನು ಸಂಘಪರಿವಾರದ ಒಂದು ಗುಂಪು ‘ವಿಜಯೋತ್ಸವ’ವೆಂದು ಆಚರಿಸುತ್ತಿದೆ. ವರ್ಷದ ಹಿಂದೆ, ಕಲ್ಲಡ್ಕದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಮತ್ತೊಮ್ಮೆ ಅಭಿನಯಿಸಿ ತೋರಿಸಲಾಗಿತ್ತು. ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾಸಿಂಗ್ ಇತ್ತೀಚೆಗೆ ‘‘ನಾನೂ ಬಾಬರಿ ಮಸೀದಿ ಧ್ವಂಸದಲ್ಲಿ ಭಾಗವಹಿಸಿದ್ದೆ’’ ಎನ್ನುವ ಹೇಳಿಕೆಯನ್ನು ನೀಡಿದ್ದರು. ವಿಶೇಷ ನ್ಯಾಯಾಲಯ ವ್ಯಕ್ತಪಡಿಸಿರುವ ಆತಂಕದ ಹಿನ್ನೆಲೆಯಲ್ಲಿ, ಧ್ವಂಸದಲ್ಲಿ ಭಾಗವಹಿಸಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಎಲ್ಲರನ್ನು ವಶಕ್ಕೆ ತೆಗೆದುಕೊಂಡು, ಅವರಿಗೂ-ಪಾಕಿಸ್ತಾನದ ಬೇಹುಗಾರಿಕೆ ಇಲಾಖೆಗೂ ಇರುವ ನಂಟನ್ನು ತನಿಖೆ ಮಾಡಬೇಕಾಗುತ್ತದೆ.

ಅಡ್ವಾಣಿ ನೇತೃತ್ವದ ರಥಯಾತ್ರೆ ದೇಶಾದ್ಯಂತ ಕೋಮುಗಲಭೆಗಳ ಕಿಚ್ಚನ್ನು ಹರಡಿತು. ಅದುವೇ ಅಂತಿಮವಾಗಿ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾಯಿತು. ಭಾರತದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಿದ ಈ ರಥಯಾತ್ರೆಗೆ ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆಯೇನಾದರೂ ಹಣ ಹೂಡಿದೆಯೇ ಎನ್ನುವ ತನಿಖೆಯ ಅಗತ್ಯವನ್ನೂ ಪರೋಕ್ಷವಾಗಿ ವಿಶೇಷ ನ್ಯಾಯಲಯ ಹೇಳಿದಂತಾಯಿತು. ಈ ದೇಶದಲ್ಲಿ ಕೋಮುಗಲಭೆಗಳು ನಡೆಯಬೇಕು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬೇಕು, ಹಿಂದೂ-ಮುಸ್ಲಿಮರು ತಮ್ಮ ತಮ್ಮ ಧರ್ಮಗಳ ಹೆಸರಿನಲ್ಲಿ ಕಚ್ಚಾಡಬೇಕು. ಆ ಮೂಲಕ ಭಾರತ ವಿಚ್ಛಿದ್ರವಾಗಬೇಕು ಎನ್ನುವುದು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಬಾಬರಿ ಮಸೀದಿಯನ್ನು ಬಳಸಿಕೊಂಡೇ ಈ ದೇಶದಲ್ಲಿ ಸಂಘಪರಿವಾರ ಹಲವು ಕೋಮುಗಲಭೆಗಳನ್ನು ಸೃಷ್ಟಿಸಿತು. ಡಿಸೆಂಬರ್ 6ರಂದು ಬಾಬರಿ ಮಸೀದಿ ಸ್ಥಳದಲ್ಲಿ ಸಂಘಪರಿವಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ನ್ಯಾಯಾಲಯ ಹೇಳುವಂತೆ, ಪಾಕಿಸ್ತಾನಿ ಬೇಹುಗಾರಿಕೆ ಸಂಸ್ಥೆ ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದೆಯೆಂದಾದರೆ, ಆ ಸಮಾವೇಶದಲ್ಲಿ ಪಾಕಿಸ್ತಾನಿ ಉಗ್ರರು ಭಾಗವಹಿಸಿರಬೇಕು. ಗುಮ್ಮಟ ಏರಿ, ಗುದ್ದಲಿಗಳಿಂದ ಅದನ್ನು ಒಡೆದು ಹಾಕುತ್ತಿರುವವರೆಲ್ಲರನ್ನೂ ನಾವು ಪಾಕಿಸ್ತಾನಿ ಉಗ್ರರೆಂದೇ ಪರಿಗಣಿಸಬೇಕಾಗುತ್ತದೆ. ಐಎಸ್‌ಐ ಏಜೆಂಟರುಗಳಿಗೆ ಬೇಕಾದ ಹತ್ಯಾರುಗಳನ್ನು ಒದಗಿಸಿಕೊಟ್ಟವರೆಲ್ಲರೂ ಪಾಕಿಸ್ತಾನದ ಜೊತೆಗೆ ನಂಟನ್ನು ಹೊಂದಿರುವ ದೇಶದ್ರೋಹಿಗಳೇ ಆಗಿರುವ ಸಾಧ್ಯತೆಗಳಿವೆ.

ಆದುದರಿಂದ, ನ್ಯಾಯಾಲಯ ಅನುಮಾನಿಸಿದಂತೆ ಬಾಬರಿ ಮಸೀದಿ ಧ್ವಂಸದಲ್ಲಿ ಪಾಕಿಸ್ತಾನದ ಕೈವಾಡವಿರುವುದೇ ಆಗಿದ್ದರೆ, ಅವುಗಳ ಧ್ವಂಸವನ್ನು ಬಹಿರಂಗವಾಗಿ ಸಂಭ್ರಮಿಸುತ್ತಿರುವ ಸಂಘಟನೆಗಳಿಗೂ, ವ್ಯಕ್ತಿಗಳಿಗೂ ಪಾಕಿಸ್ತಾನದ ಜೊತೆಗಿರುವ ಸಂಬಂಧದ ಕುರಿತಂತೆ ತನಿಖೆ ನಡೆಯಬೇಕಾಗುತ್ತದೆ. ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಸಂಜೋತಾ ರೈಲು ಸ್ಫೋಟಗಳಲ್ಲಿ ಕೇಸರಿ ಉಗ್ರವಾದಿ ಸಂಘಟನೆಗಳ ಪಾತ್ರ ಈಗಾಗಲೇ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉಗ್ರವಾದಿಗಳು ಪಾಕಿಸ್ತಾನದವರಿರಲಿ, ಭಾರತೀಯರಿರಲಿ, ಅವರಿಗೆ ದೇಶ, ಧರ್ಮವಿಲ್ಲ. ‘ವಿಚ್ಛಿದ್ರ’ಗೊಳಿಸುವುದೇ ಅವರ ಗುರಿ. ಆದುದರಿಂದ ವಿಶೇಷ ನ್ಯಾಯಾಲಯದ ಆತಂಕ, ಅನುಮಾನವನ್ನು ಗಂಭೀರವಾಗಿ ತೆಗೆದುಕೊಂಡು ಭಾರತದಲ್ಲಿರುವ ಕೇಸರಿ ಉಗ್ರರಿಗೂ-ಪಾಕಿಸ್ತಾನದಲ್ಲಿರುವ ಹಸಿರು ಉಗ್ರರಿಗೂ ಇರುವ ಸಂಬಂಧಗಳ ಕುರಿತಂತೆ ತನಿಖೆ ನಡೆಯುವ ಅಗತ್ಯವಿದೆ. ಬಾಬರಿ ಮಸೀದಿಯನ್ನು ಯಾರು, ಯಾಕೆ? ಧ್ವಂಸಗೊಳಿಸಿದರು ಎನ್ನುವ ಸತ್ಯ ಆಗಲಾದರೂ ಹೊರಬರಬಹುದೇನೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)