varthabharthi


ಸಂಪಾದಕೀಯ

ಪುರುಷರು ಯಾವಾಗ ಸ್ವಾವಲಂಬಿಗಳಾಗುವುದು?

ವಾರ್ತಾ ಭಾರತಿ : 5 Oct, 2020

‘‘ಪತ್ನಿ ಕೆಲಸ ಮಾಡುತ್ತಾಳೆಯೆ?’’

‘‘ಇಲ್ಲ, ಆಕೆ ಮನೆಯಲ್ಲೇ ಇರುತ್ತಾಳೆ’’

ಇ ಂತಹ ಪ್ರಶ್ನೋತ್ತರಗಳು ಭಾರತದಲ್ಲಿ ಸಾಮಾನ್ಯ. ಮಹಿಳೆಯ ಗೃಹ ನಿರ್ವಹಣೆ ನಮ್ಮ ಸಮಾಜದಲ್ಲಿ ಇಂದಿಗೂ ‘ಕೆಲಸದ ಮಾನ್ಯತೆ’ಯನ್ನು ಪಡೆದಿಲ್ಲ. ಹೊರಗಡೆ ಕಚೇರಿಯಲ್ಲಿ ದುಡಿದರಷ್ಟೇ ಕೆಲಸ, ಮನೆಯನ್ನು ನಿರ್ವಹಿಸುವ, ಮಕ್ಕಳನ್ನು ಲಾಲಿಸುವ, ಪಾಲಿಸುವ ಅಥವಾ ಅಡುಗೆ ಇತ್ಯಾದಿ ಕೆಲಸಗಳನ್ನು ಮಾಡುವ ಮಹಿಳೆಯನ್ನು ‘ಕೆಲಸವಿಲ್ಲದವಳು’ ಎನ್ನುವ ದೃಷ್ಟಿಯಲ್ಲೇ ನೋಡುತ್ತಾ ಬರಲಾಗುತ್ತಿದೆ. ಕುಟುಂಬ ಎನ್ನುವ ಸಂಘಟನೆಯ ತಳಪಾಯವೇ ಮನೆ ನಿರ್ವಹಿಸುವ ಮಹಿಳೆಯರಾಗಿದ್ದರೂ, ಆಕೆಯ ಕೆಲಸಕ್ಕೆ ಪಾವತಿ ಪಕ್ಕಕ್ಕಿರಲಿ, ಆ ಕೆಲಸಕ್ಕೆ ತಕ್ಕ ಘನತೆಯನ್ನು ಕೊಡುವ ಮನಸ್ಥಿತಿಯನ್ನು ನಮ್ಮ ಸಮಾಜ ಇನ್ನೂ ಬೆಳೆಸಿಕೊಂಡು ಬಂದಿಲ್ಲ. ಹೊರಗೆ ಕಚೇರಿಯಲ್ಲಿ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ ವೇತನಕ್ಕಾಗಿ ದುಡಿಯುವ ಮಹಿಳೆಯನ್ನು ಮಾತ್ರ ನಾವು ‘ಸ್ವಾವಲಂಬಿ’ ಎಂದು ಕರೆಯುತ್ತೇವೆ. ಆದರೆ ಭಾರತದ ಮಟ್ಟಿಗೆ ಇದು ಶೋಷಣೆಯ ಇನ್ನೊಂದು ಭಾಗವೇ ಆಗಿದೆ. ಹೊರಗೆ ದುಡಿಯುತ್ತಾಳೆ ಎನ್ನುವ ಕಾರಣಕ್ಕಾಗಿ ಆಕೆಗೆ ಮನೆಯ ಕೆಲಸದಲ್ಲಿ ವಿನಾಯಿತಿಯೇನೂ ದೊರೆಯುವುದಿಲ್ಲ. ಕಚೇರಿಯ ಕೆಲಸ ಮುಗಿಸಿ, ಮತ್ತೆ ಮನೆಯ ಕೆಲಸವನ್ನು ‘ವೇತನ’ವಿಲ್ಲದೆಯೇ ಆಕೆ ನಿರ್ವಹಿಸಬೇಕಾಗುತ್ತದೆ. ಮಕ್ಕಳ ಪಾಲನೆಯ ಮುಖ್ಯ ಭಾಗವನ್ನಂತೂ ಭಾರತದಲ್ಲಿ ಮಹಿಳೆ ನಿರ್ವಹಿಸುವುದು ಅನಿವಾರ್ಯ.

ಇದೇ ಸಂದರ್ಭದಲ್ಲಿ ಹೊರಗೆ ದುಡಿಯುತ್ತಿರುವ ಹೆಚ್ಚಿನ ಮಹಿಳೆಯರು ವೇತನವನ್ನು ಪತಿಯ ಮೂಲಕವೇ ವೆಚ್ಚಮಾಡಬೇಕಾದ ಕೌಟುಂಬಿಕ ಅನಿವಾರ್ಯತೆಯಲ್ಲಿ ಸಿಲುಕಿಕೊಂಡಿರುತ್ತಾರೆ. ‘ಸ್ವಾವಲಂಬಿಯಾಗುವುದು’ ಎಂದರೆ ಮಹಿಳೆಯ ಪಾಲಿಗೆ ಎರಡೆರಡು ಕಡೆಗಳಲ್ಲಿ ದುಡಿಯುವುದು . 15 ಹಾಗೂ 59 ವರ್ಷದ ನಡುವಿನ ಶೇ.91.8ರಷ್ಟು ಮಹಿಳೆಯರು ತನ್ನ ಕುಟುಂಬದ ಸದಸ್ಯರಿಗಾಗಿ ಚಿಕ್ಕಾಸೂ ವೇತನವಿಲ್ಲದೆ ಮನೆಗೆಲಸಗಳನ್ನು ನಿರ್ವಹಿಸುತ್ತಿದ್ದಾರೆಂದು 2019ರ ರಾಷ್ಟ್ರೀಯ ಅಂಕಿ-ಅಂಶ ಕಾರ್ಯಾಲಯ (ಎನ್‌ಎಸ್‌ಒ)ದ ಸಮೀಕ್ಷೆಯೊಂದು ತಿಳಿಸಿದೆ. ಇನ್ನೊಂದೆಡೆ ಕೇವಲ ಶೇ. 20.6 ಪುರುಷರು ಮಾತ್ರವೇ ಇಂತಹ ವೇತನರಹಿತವಾದ ಮನೆಗೆಲಸದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೆಂಬುದನ್ನು ಸಮೀಕ್ಷಾ ವರದಿ ತಿಳಿಸಿದೆ. ಒಟ್ಟಾರೆಯಾಗಿ 2019ರಲ್ಲಿ ಆರು ವರ್ಷಗಳಿಗಿಂತ ಮೇಲ್ಪಟ್ಟ ಶೇ.79.8ರಷ್ಟು ಮಹಿಳೆಯರು ವೇತನರಹಿತ ಮನೆಗೆಲಸದಲ್ಲಿ ನಿರತರಾಗಿದ್ದರು. ಆದರೆ ಈ ಸಂಖ್ಯೆಯು ಪುರುಷರಲ್ಲಿ ಕೇವಲ ಶೇ.17.9 ಆಗಿದೆ. ಜನವರಿ ಹಾಗೂ ಡಿಸೆ ಂಬರ್ 2019ರ ನಡುವೆ ನಡೆಸಲಾದ ಭಾರತದಲ್ಲಿ ಸಮಯದ ಬಳಕೆ-2019 ಸಮೀಕ್ಷೆಯಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಶೇ.51.7 ಪುರುಷರು ಔದ್ಯೋಗಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಇದಕ್ಕೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಕೇವಲ ಶೇ. 18.3 ಆಗಿದೆ. ಇಂತಹದೊಂದು ಸಮೀಕ್ಷೆ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ. 6 ವರ್ಷಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ತಮ್ಮ ಕುಟುಂಬಗಳಿಗೆ ಸಮಯವನ್ನು ವಿನಿಯೋಗಿಸುವ ಕುರಿತಾಗಿ ಮಾಹಿತಿಯನ್ನು ಕಲೆಹಾಕಲು ಈ ಸಮೀಕ್ಷೆಯನ್ನು ನಡೆಸಲಾಗಿತ್ತು.

ವೇತನರಹಿತ ಚಟುವಟಿಕೆಗಳಲ್ಲಿ ಭಾರತದ ಜನತೆಯ ಒಟ್ಟಾರೆ ಪಾಲ್ಗೊಳ್ಳುವಿಕೆಯು ಶೇ.63.6 ಆಗಿದೆ ಹಾಗೂ ಸರಾಸರಿ ಓರ್ವ ವ್ಯಕ್ತಿಯು ದಿನದ 289 ನಿಮಿಷಗಳಲ್ಲಿ ವೇತನ ರಹಿತ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಗ್ರಾಮೀಣ ಪ್ರದೇಶಗಳಲ್ಲಿ ವೇತನದೊರೆಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರ ಪ್ರಮಾಣ ಶೇ.85 ಆಗಿದ್ದರೆ,ನಗರ ಪ್ರದೇಶಗಳಲ್ಲಿ ಶೇ.81.7 ಆಗಿದೆ. ಇದೇ ಶ್ರೇಣಿಯಲ್ಲಿ ನಗರದಲ್ಲಿ ಪುರುಷರ ಪಾಲುದಾರಿಕೆ ಪ್ರಮಾಣವು ಶೇ. 47.8 ಆಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಅದು ಶೇ.17.7 ರಷ್ಟಿದೆ. ಮಕ್ಕಳು ಬೆಳೆದು ದೊಡ್ಡವರಾದಂತೆಲ್ಲಾ ಅಧ್ಯಯನಕ್ಕಾಗಿ ಹೆಚ್ಚು ಸಮಯವನ್ನು ವ್ಯಯಿಸುವುದರಿಂದ ಮನೆಗೆಲಸದ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಸಮಯದಲ್ಲಿ ಇಳಿಕೆಯಾಗಿರುವುದನ್ನು ಕೂಡಾ ಈ ಅಧ್ಯಯನವು ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 6ರಿಂದ 14 ವರ್ಷದೊಳಗಿನ ವಯೋಮಾನದವರು 430 ನಿಮಿಷಗಳನ್ನು ಮನೆಗೆಲಸದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದಾಗ್ಯೂ 15ರಿಂದ 29 ವರ್ಷ ವಯೋಮಾನದವರಲ್ಲಿ ಈ ಪಾಲ್ಗೊಳ್ಳುವಿಕೆಯ ಪ್ರಮಾಣವು ಶೇ. 29.2 ಆಗಿದೆ.

ಇಡೀ ಅಧ್ಯಯನ ಏನನ್ನು ಹೇಳುತ್ತದೆಯೆಂದರೆ, ವೇತನ ರಹಿತವಾಗಿರುವ ಜೀವನಾವಶ್ಯಕ ಮನೆಗೆಲಸಗಳನ್ನು ಸಮಾಜ ಬಹುತೇಕ ಮಹಿಳೆಗೇ ಮೀಸಲಿಟ್ಟಿದೆ. ಪುರುಷರು, ಮಕ್ಕಳು ಈ ಮನೆಗೆಲಸಗಳ ಭಾಗವಾಗಬೇಕಾಗಿಲ್ಲ ಎನ್ನುವುದನ್ನು ಬದುಕಿನ ಸಂವಿಧಾನವಾಗಿಸಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಸ್ವಾವಲಂಬಿ’ಯಾಗಿರುವುದೆಂದರೆ, ಹೊರಗಿನ ಔದ್ಯೋಗಿಕ ಕೆಲಸಗಳನ್ನು ಮಾಡುವ ಮೂಲಕ ಹಣವನ್ನು ಸಂಪಾದಿಸುವುದು ಎನ್ನುವುದನ್ನು ಸಮಾಜ ಮೊದಲೇ ನಿರ್ಧರಿಸಿದೆ. ‘ಹಣ ಸಂಪಾದನೆ’ಯೇ ಬೇರೆ, ಮನೆಯ ‘ದುಡಿಮೆ’ಯೇ ಬೇರೆ ಎನ್ನುವ ಜನರ ಮನಸ್ಥಿತಿಯಿಂದ ಇದು ಬಹಿರಂಗವಾಗುತ್ತದೆ. ಹಣವನ್ನು ಸೃಷ್ಟಿಸದ ದುಡಿಮೆಯ ಕುರಿತಂತೆ ಕುಟುಂಬದ ತಾತ್ಸಾರ ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿವೆ. ಸಾಧಾರಣವಾಗಿ ಕುಟುಂಬಗಳಲ್ಲಿ ತಾಯಂದಿರುವ ಹೆಣ್ಣು ಮಕ್ಕಳಿಗಷ್ಟೇ ಮನೆಗೆಲಸಗಳನ್ನು ಕಲಿಸುತ್ತಾರೆ. ಇದೇ ಸಂದರ್ಭದಲ್ಲಿ ಗಂಡು ಮಕ್ಕಳಿಗೆ ಹೊರಗಿನ ಜವಾಬ್ದಾರಿಗಳನ್ನು ನೀಡುತ್ತಾರೆ. ಆದರೆ ತನ್ನ ಅಡುಗೆಯನ್ನು ತಾನೇ ಮಾಡಿಕೊಳ್ಳುವುದು, ತನ್ನ ಬಟ್ಟೆಯನ್ನು ತಾನೇ ಒಗೆಯುವುದು, ದೈನಂದಿನ ಮನೆಗೆಲಸಗಳನ್ನು ತಾನೇ ನಿರ್ವಹಿಸುವುದೂ ‘ಸ್ವಾವಲಂಬಿ’ತನದ ಭಾಗ ಎನ್ನುವುದನ್ನು ಕುಟುಂಬ ಇನ್ನೂ ಅರಿತುಕೊಂಡಿಲ್ಲ. ಆದುದರಿಂದಲೇ ಬಹುತೇಕ ಪುರುಷರು, ಬದುಕಿನ ಅತಿ ಅಗತ್ಯವಾದ ಕೆಲಸಗಳಿಗೆ ಪರಾವಲಂಬಿಗಳಾಗಬೇಕಾಗುತ್ತದೆ. ಅಂದರೆ, ಅಡುಗೆ, ಬಟ್ಟೆ ಬರೆಗಳ ನಿರ್ವಹಣೆ ಮೊದಲಾದ ಕೆಲಸ ಕಾರ್ಯಗಳು ಬದುಕಿನ ಆದ್ಯತೆಯ ವಿಷಯವಾಗಿದ್ದರೂ, ಪುರುಷರು ಈ ವಿಷಯದಲ್ಲಿ ಅನಕ್ಷರಸ್ಥರಾಗಿರುತ್ತಾರೆ. ಆದುದರಿಂದ, ಅನಿವಾರ್ಯವಾಗಿ ಅವರು ಮಹಿಳೆಯರಿಗೆ ಋಣಿಯಾಗಿರಬೇಕಾಗುತ್ತದೆ. ಆದುದರಿಂದ, ಮನೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲೇ, ಗಂಡು-ಹೆಣ್ಣು ಭೇದ ಮಾಡದೆ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಪ್ರಯತ್ನ ಮಾಡಬೇಕಾಗಿದೆ.

ಅಡುಗೆ ತಯಾರಿ, ಬಟ್ಟೆ ಬರೆ, ಪಾತ್ರೆಗಳನ್ನು ಶುಚಿಯಾಗಿರಿಸುವುದು, ಮನೆನಿರ್ವಹಣೆ ಮೊದಲಾದ ಕೆಲಸಗಳಿಗೆ ಇಬ್ಬರನ್ನು ತಯಾರಿ ಗೊಳಿಸಬೇಕು. ಹೀಗೆ ತಯಾರಿಗೊಳಿಸಿದಾಗ ಮಾತ್ರ, ಮುಂದೆ ಕೌಟುಂಬಿಕವಾಗಿ ಪತಿ-ಪತ್ನಿ ಮನೆಗೆಲಸಗಳನ್ನು ಹಂಚಿಕೊಂಡು ನಿರ್ವಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಮಹಿಳೆ ನಿರ್ವಹಿಸುವ ‘ವೇತನವಿಲ್ಲದ’ ಕೆಲಸಕ್ಕೆ ಗೌರವವನ್ನು ನೀಡುವ ಮನಸ್ಥಿತಿಯನ್ನು ಪುರುಷರು ಬೆಳೆಸಿಕೊಳ್ಳುತ್ತಾರೆ. ಮಹಿಳೆಯರ ಸ್ವಾವಲಂಬಿ ಬದುಕಿಗಿಂತ ಮೊದಲು, ಪುರುಷರ ಸ್ವಾವಲಂಬಿ ಬದುಕು ಚರ್ಚೆಗೆ ಬರಬೇಕಾಗಿದೆ. ಮನೆಗೆಲಸದಲ್ಲಿ ಪುರುಷರು ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗುತ್ತಾ ಹೋದ ಹಾಗೆಯೇ ಕುಟುಂಬ ಸದೃಢವಾಗುತ್ತಾ ಹೋಗುತ್ತದೆ. ವೇತನವಿಲ್ಲದ ಕೆಲಸವನ್ನು ಮಾಡಿದ ಬಳಿಕವೂ,ಪತ್ರಿಕೆ ಓದುವ, ಕ್ರೀಡೆಗಳಲ್ಲಿ ಭಾಗವಹಿಸುವ, ಸಮಾಜದಲ್ಲಿ ಬೆರೆಯುವ ಅವಕಾಶಗಳನ್ನು ಮಹಿಳೆ ಕಳೆದುಕೊಳ್ಳುತ್ತಿದ್ದಾಳೆ. ಹಣವನ್ನು ದುಡಿಯುವವನಿಗಷ್ಟೇ ಈ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕುಗಳಿವೆ ಎನ್ನುವ ಪೂರ್ವಾಗ್ರಹ ಇದಕ್ಕೆ ಕಾರಣ. ಒಂದು ವೇಳೆ, ಮಹಿಳೆ ಹೊರಗೆ ಕಚೇರಿಗಳಲ್ಲಿ, ಅಂಗಡಿಗಳಲ್ಲಿ ದುಡಿಯುತ್ತಾಳೆ ಎಂದಾದರೆ, ಪುರುಷ ಮನೆಗೆಲಸಗಳಲ್ಲಿ ಆಕೆಯ ಅರ್ಧಪಾಲನ್ನು ನಿರ್ವಹಿಸಬೇಕು. ಇಲ್ಲವಾದರೆ, ಅದು ಮಹಿಳೆಯ ಇನ್ನೊಂದು ಬಗೆಯ ಶೋಷಣೆಯಾಗುತ್ತದೆ. ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆ ಮಹಿಳೆಯದೆಷ್ಟೋ ಪುರುಷರದೂ ಅಷ್ಟೇ ಇದೆ. ಈ ನಿಟ್ಟಿನಲ್ಲಿ ಪತಿ-ಪತ್ನಿ ಸಮನ್ವಯವನ್ನು ಸಾಧಿಸಿದರೆ, ಬದುಕೆಂಬ ಬಂಡಿ ಸುಗಮವಾಗಿ ಸಾಗಲು ಸಾಧ್ಯ. ‘ಮನೆಯೇ ಮೊದಲ ಪಾಠಶಾಲೆ’ ಎನ್ನುವ ಮಾತೊಂದಿದೆ. ಆದುದರಿಂದ ಹೊರಗೆ ಹಣಕ್ಕಾಗಿ ನಿರ್ವಹಿಸುವ ಕೆಲಸಕ್ಕಿಂತಲೂ ಮನೆಯಲ್ಲಿ ಕುಟುಂಬ, ಮಕ್ಕಳಿಗಾಗಿ ನಿರ್ವಹಿಸುವ ಕೆಲಸ ಮಹತ್ವಪೂರ್ಣವಾದುದು, ವೌಲ್ಯ ಭರಿತವಾದುದು. ಇದನ್ನು ಪುರುಷ ಮತ್ತು ಮಹಿಳೆ ಸರಿಯಾಗಿ ಅರ್ಥೈಯಿಸಿಕೊಂಡು, ಹಂಚಿಕೊಂಡು ನಿರ್ವಹಿಸಿದರೆ ಕುಟುಂಬದ ಜೊತೆಗೆ ಸಮಾಜವೂ ಉದ್ಧಾರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)