varthabharthi


ಸಂಪಾದಕೀಯ

ಹಾಥರಸ್ ಅತ್ಯಾಚಾರ ಪ್ರಕರಣ: ಭಾರತಮಾತೆಯ ಪ್ರಶ್ನೆಗಳು

ವಾರ್ತಾ ಭಾರತಿ : 6 Oct, 2020

ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣವನ್ನು ದಿಲ್ಲಿಯಲ್ಲಿ ನಡೆದ ‘ನಿರ್ಭಯಾ’ ಪ್ರಕರಣಕ್ಕೆ ಕೆಲವು ಮಾಧ್ಯಮಗಳು ಹೋಲಿಸುತ್ತಿವೆ. ಆದರೆ ಹಾಥರಸ್ ಪ್ರಕರಣ ನಿರ್ಭಯಕ್ಕಿಂತ ಭೀಕರ ಮತ್ತು ಬರ್ಬರವಾದುದು. ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಯಾವುದೇ ಸಾಮಾಜಿಕ, ರಾಜಕೀಯ ಆಯಾಮಗಳಿರಲಿಲ್ಲ. ಅಪರಾಧಿಗಳನ್ನು ರಕ್ಷಿಸುವ ಯಾವ ಪ್ರಯತ್ನವೂ ನಡೆದಿರಲಿಲ್ಲ. ದೇಶಾದ್ಯಂತ ನಿರ್ಭಯಾ ಪ್ರಕರಣದ ವಿರುದ್ಧ ಜನರು ಬೀದಿಗಿಳಿದಾಗ ಅವರನ್ನು ತಡೆಯುವ ಪ್ರಯತ್ನವನ್ನು ಸರಕಾರ ಮಾಡಿರಲಿಲ್ಲ. ಆದುದರಿಂದಲೇ, ಪೊಲೀಸರು ಸಲೀಸಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತಾಯಿತು. ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿ ಶಿಕ್ಷೆಯೂ ಘೋಷಿಸಲ್ಪಟ್ಟಿತು. ಹಾಥರಸ್ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ‘ದಲಿತ ಮಹಿಳೆ’ ಎಂದು ಯಾಕೆ ಕರೆಯುತ್ತೀರಿ? ಎಂದು ಆಕ್ಷೇಪಿಸುವವರಿಗೆ ಇಲ್ಲಿ ಉತ್ತರವಿದೆ. ‘ನಿರ್ಭಯಾ’ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯಲಿಲ್ಲ ಯಾಕೆಂದರೆ, ಇಲ್ಲಿ ಕೊಲೆ ಮಾಡಿದ ಆರೋಪಿಗಳು ಯಾವುದೇ ಮೇಲ್ಜಾತಿ, ಮೇಲ್ವ ರ್ಗಕ್ಕೆ ಸೇರಿರಲಿಲ್ಲ. ಇದೇ ಸಂದರ್ಭದಲ್ಲಿ ಮೃತಪಟ್ಟ ಮಹಿಳೆ ದಲಿತ ಸಮುದಾಯಕ್ಕೆ ಸೇರಿದವಳೂ ಆಗಿರಲಿಲ್ಲ. ಬದಲಿಗೆ, ಆಕೆ ನಗರವಾಸಿ ಮತ್ತು ವಿದ್ಯಾವಂತಳಾಗಿದ್ದಳು.

ನಿರ್ಭಯ ಪ್ರಕರಣದಲ್ಲಿ ಆರೋಪಿಗಳು ಹಿಂದು ಮುಂದಿಲ್ಲದ ವಲಸೆ ಕಾರ್ಮಿಕರಾಗಿರುವುದರಿಂದ, ಪೊಲೀಸರು ತಮ್ಮ ಕರ್ತವ್ಯವನ್ನು ಧೀರೋದಾತ್ತರಾಗಿ ನೆರವೇರಿಸುವುದಕ್ಕೆ ಸಾಧ್ಯವಾಯಿತು. ನಿರ್ಭಯಾ ಪ್ರಕರಣದಲ್ಲಿ ಏನು ಸಂಭವಿಸಿತೋ, ಅದು ಹಾಥರಸ್ ಪ್ರಕರಣದಲ್ಲಿ ಸಂಭವಿಸುತ್ತಿಲ್ಲ. ಕಾರಣ, ಇಲ್ಲಿ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಕೊಲೆಯಾದಾಕೆ ದಲಿತ ಸಮುದಾಯಕ್ಕೆ ಸೇರಿದ ಯುವತಿ. ಕೃತ್ಯ ಎಸಗಿದವರು ಮೇಲ್ಜಾತಿಗೆ ಸೇರಿದ ಜನರು. ಆರೋಪಿಗಳಿಗೆ ಶಿಕ್ಷೆಯಾಗುವುದು ಪಕ್ಕಕ್ಕಿರಲಿ, ಶಿಕ್ಷೆಯಾಗಬೇಕೆಂದು ಆಗ್ರಹಿಸಿದವರ ಮೇಲೆಯೇ ಉತ್ತರ ಪ್ರದೇಶ ಸರಕಾರ ಪ್ರಕರಣ ದಾಖಲಿಸಿಕೊಂಡಿದೆ. ನ್ಯಾಯಕ್ಕಾಗಿ ಬೀದಿಗಿಳಿದ ರಾಹುಲ್ ಗಾಂಧಿ, ಪ್ರಿಯಾಂಕಾ, ಚಂದ್ರಶೇಖರ್ ಆಝಾದ್‌ರಂತಹ ನಾಯಕರ ಮೇಲೆಯೇ ಮೊಕದ್ದಮೆಗಳು ದಾಖಲಾಗಿವೆ. ಈ ಅತ್ಯಾಚಾರದ ವಿರುದ್ಧ ಧ್ವನಿಯೆತ್ತಿದವರನ್ನು ಸರಕಾರದ ವಿರುದ್ಧ ನಡೆಯುತ್ತಿರುವ ಅಂತರ್‌ರಾಷ್ಟ್ರೀಯ ಸಂಚಿನ ಪಾಲುದಾರರು ಎಂದು ಬಿಂಬಿಸಲು ಯತ್ನಿಸುತ್ತಿದೆ. ಪೊಲೀಸರು ಅತ್ಯಾಚಾರಕ್ಕೆ ಸಂಬಂಧಿಸಿದ ತನಿಖೆಯನ್ನು ಕೈ ಬಿಟ್ಟು, ಈ ಅಂತರ್‌ರಾಷ್ಟ್ರೀಯ ಸಂಚಿನ ಕುರಿತ ತನಿಖೆಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ಪರವಾಗಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಸರಕಾರ ಮಾತ್ರವಲ್ಲ, ದಿಲ್ಲಿಯಲ್ಲಿರುವ ಬಿಜೆಪಿಯ ನಾಯಕರೂ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳಿರುವುದೇ ಆಡಳಿತ ಪಕ್ಷಗಳ ಜನವಿರೋಧಿ ನೀತಿಗಳನ್ನು ಪ್ರತಿಭಟಿಸುವುದಕ್ಕೆ. ಜನರ ಮೇಲೆ ಅನ್ಯಾಯ ನಡೆದಾಗ ಸರಕಾರವನ್ನು ಎಚ್ಚರಿಸುವುದಕ್ಕೆ. ಹಾಥರಸ್‌ನಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮಹಿಳೆಗೆ ನ್ಯಾಯ ನೀಡಲು ವಿಫಲವಾದಾಗ, ಅದರ ವಿರುದ್ಧ ಧ್ವನಿಯೆತ್ತುವುದು ವಿರೋಧ ಪಕ್ಷಗಳ ಹೊಣೆಗಾರಿಕೆಯಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಿದರೆ ಅದು ‘ರಾಜಕೀಯ’ವಾಗುವುದು ಹೇಗೆ? ಹಾಗಾದರೆ ಸಂತ್ರಸ್ತೆಗೆ ಆದ ಅನ್ಯಾಯವನ್ನು ನೋಡಿ ಸುಮ್ಮನಿರುವುದನ್ನು ಏನೆಂದು ಕರೆಯೋಣ? ಈ ವೌನವೂ ‘ರಾಜಕೀಯವೇ ಅಲ್ಲವೇ?’ ಹಾಥರಸ್ ಅತ್ಯಾಚಾರಕ್ಕೆ ಸಂಬಂಧಿಸಿ ನಡೆಯುತ್ತಿರುವ ಪ್ರತಿಭಟನೆ ‘ಸರಕಾರ ಉರುಳಿಸುವುದಕ್ಕೆ ನಡೆಯುತ್ತಿರುವ ಅಂತರ್‌ರಾಷ್ಟ್ರೀಯ ಸಂಚು’ ಎಂದು ಹೇಳುತ್ತಿರುವ ಉತ್ತರ ಪ್ರದೇಶದ ಸರಕಾರ, ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ನಡೆಯುತ್ತಿರುವ ಸಂಚಿನ ಕುರಿತಂತೆ ವೌನವಾಗಿದೆ. ಅಥವಾ ಆ ಸಂಚಿನಲ್ಲಿ ಪರೋಕ್ಷವಾಗಿ ಭಾಗಿಯಾಗಿದೆ.

ಹತ್ರಾಸ್‌ನಲ್ಲಿ ನಡೆದ ಅತ್ಯಾಚಾರ ಬರೇ ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ, ಭಾರತ ಮಾತೆಯ ಮೇಲೆ ನಡೆದ ದೌರ್ಜನ್ಯ. ಇಂದು ಆಕೆ ಬೀದಿಯಲ್ಲಿ ನಿಂತು ಸರಕಾರಕ್ಕೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಿದ್ದಾಳೆ. ಅವುಗಳಿಗೆ ಉತ್ತರಿಸಿ ಉತ್ತರ ಪ್ರದೇಶ ಸರಕಾರ ತನ್ನ ಮಾನವನ್ನು ಉಳಿಸಿಕೊಳ್ಳಬೇಕಾಗಿದೆ. ಹಾಥರಸ್ ದಲಿತ ಯುವತಿಯ ಸಾವಿಗೆ ಸಂಬಂಧಿಸಿ ತಕ್ಷಣ ದೂರು ದಾಖಲಿಸಿ, ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸುವುದಕ್ಕೆ ಪೊಲೀಸರು ಯಾಕೆ ಮುಂದಾಗಲಿಲ್ಲ? ಜನರು ಬೀದಿಗಿಳಿದು ಪ್ರಶ್ನಿಸಿದ ಬಳಿಕ ಪೊಲೀಸರು ಕಾಟಾಚಾರಕ್ಕೆ ದೂರು ದಾಖಲಿಸಿದರು. ಆ ಎಫ್‌ಐಆರ್‌ನಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿರುವ ಕುರಿತಂತೆ ಯಾವುದೇ ಉಲ್ಲೇಖವಿರಲಿಲ್ಲ. ಪ್ರಕರಣದಲ್ಲಿ ಅತ್ಯಾಚಾರವನ್ನು ದಾಖಲಿಸದಂತೆ ಪೊಲೀಸರನ್ನು ತಡೆದ ಕೈ ಯಾವುದು? ಅತ್ಯಾಚಾರ ನಡೆದಿರುವ ಕುರಿತಂತೆ ಇನ್ನೂ ಸರಿಯಾದ ನಿರ್ಧಾರಕ್ಕೆ ಬರದಿರುವಾಗ, ಆತುರಾತುರವಾಗಿ ಯುವತಿಯ ಮೃತದೇಹವನ್ನು ಪೊಲೀಸರು ಯಾಕೆ ಸುಟ್ಟು ಹಾಕಿದರು? ಕುಟುಂಬದ ಅನುಮತಿಯಿಲ್ಲದೆ, ಸಂತ್ರಸ್ತೆಯ ಮೃತದೇಹವನ್ನು ಸುಟ್ಟು ಹಾಕುವ ಅಧಿಕಾರ ಪೊಲೀಸರಿಗಿದೆಯೇ? ಈ ಮೂಲಕ ಇನ್ನೊಮ್ಮೆ ಯುವತಿಯ ಶವಪರೀಕ್ಷೆ ನಡೆಯದಂತೆ ಪೊಲೀಸರು ನೋಡಿಕೊಂಡರು.

ಇದು ಯಾರ ಅಗತ್ಯವಾಗಿತ್ತು? ಈ ಹಿಂದೆ ನಿರ್ಭಯಾ ಪ್ರಕರಣದಲ್ಲಿ, ಪ್ರತಿಭಟನಾಕಾರರನ್ನು ಯಾವುದೇ ಸರಕಾರ ತಡೆದಿರಲಿಲ್ಲ. ಹಾಗೆಯೇ ಸಂತ್ರಸ್ತೆಯ ವೈದ್ಯಕೀಯ ಜವಾಬ್ದಾರಿಯನ್ನು ಸಂಪೂರ್ಣ ಸರಕಾರವೇ ವಹಿಸಿಕೊಂಡಿತ್ತು. ಆದರೆ ಹಾಥರಸ್ ಪ್ರಕರಣದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರ ಮೂಲಕ ದಮನಿಸುವ ಕೆಲಸ ನಡೆಯಿತು. ಹಾಗೆಯೇ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡದಂತೆ ಮನೆಗೆ ಪೊಲೀಸ್ ಸರ್ಪಗಾವಲನ್ನು ಹಾಕಲಾಯಿತು. ಇದು ‘ಸಂತ್ರಸ್ತೆಯ ಕುಟುಂಬಕ್ಕೆ ಸರಕಾರ ನೀಡಿದ ಭದ್ರತೆಯೇ?’ ಅಥವಾ ಆರೋಪಿಗಳನ್ನು ರಕ್ಷಿಸಲು ‘ಸಂತ್ರಸ್ತೆಯ ಕುಟುಂಬವನ್ನು ಗೃಹ ಬಂಧನದಲ್ಲಿ ಇಡಲಾಯಿತೇ?’. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ, ಅವರ ನೋವಿಗೆ ಕಿವಿಯಾಗುವುದು ಮುಖ್ಯಮಂತ್ರಿಯ ಕರ್ತವ್ಯ. ಈ ಹಿಂದೆ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಹಲವು ರಾಜಕೀಯ ನಾಯಕರು ಭೇಟಿ ಮಾಡಿದ್ದರು. ಆದರೆ ಹಾಥರಸ್ ದಲಿತ ಸಂತ್ರಸ್ತೆಯ ಕುಟುಂಬವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಬಿಡಿ, ಯಾವುದೇ ಸಚಿವರೂ ಈವರೆಗೆ ಭೇಟಿ ಮಾಡಿಲ್ಲ ಯಾಕೆ? ಇನ್ನೂ ತನಿಖೆಯ ಹಂತದಲ್ಲಿರುವಾಗಲೇ, ಪೊಲೀಸ್ ಅಧಿಕಾರಿಗಳು ‘ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿಲ್ಲ’ ಎಂಬ ಹೇಳಿಕೆಯನ್ನು ನೀಡಿದರು. ಆದರೆ ಅಲಿಗಡದ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಯು ಸಿದ್ಧಪಡಿಸಿರುವ ಮೆಡಿಕೋ ಲೀಗಲ್ ತಪಾಸಣಾ ವರದಿಯು ಪೊಲೀಸರ ಹೇಳಿಕೆಯನ್ನು ಅಲ್ಲಗಳೆದಿದೆ. ಹಾಗಾದರೆ ನಿಜಕ್ಕೂ ಸಂಚು ನಡೆಯುತ್ತಿರುವುದು ಯಾರ ವಿರುದ್ಧ? ಸರಕಾರದ ವಿರುದ್ಧವೋ? ಅಥವಾ ಅನ್ಯಾಯಕ್ಕೊಳಗಾದ ದಲಿತ ಕುಟುಂಬದ ವಿರುದ್ಧವೋ?

 ಸಂತ್ರಸ್ತೆಯ ತನಿಖೆಗೆ ಒತ್ತಾಯಿಸಿ ಬೀದಿಗಿಳಿದ ನೂರಾರು ಪ್ರತಿಭಟನಾಕಾರರ ಮೇಲೆ ಸರಕಾರ ಮೊಕದ್ದಮೆ ದಾಖಲಿಸಿದೆ. ಆದರೆ ಇದೇ ಸಂದರ್ಭದಲ್ಲಿ, ವಶಕ್ಕೆ ತೆಗೆದುಕೊಂಡ ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನೂರಾರು ಮೇಲ್ಜಾತಿಯ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈವರೆಗೆ ಅವರ ಮೇಲೆ ಯಾವುದೇ ಮೊಕದ್ದಮೆಗಳನ್ನು ದಾಖಲಿಸಿಲ್ಲ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆರೋಪಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸುವುದು ತನಿಖೆಯನ್ನು ದಾರಿ ತಪ್ಪಿಸಿದಂತೆ. ಪೊಲೀಸರ ಸಮ್ಮುಖದಲ್ಲೇ ಈ ಪ್ರತಿಭಟನೆ ನಡೆದರೂ ಸರಕಾರ ಯಾಕೆ ಇವರ ಬಗ್ಗೆ ಮೃದುವಾಗಿದೆ? ಉತ್ತರ ಪ್ರದೇಶದ ಬಿಜೆಪಿ ಶಾಸಕನೋರ್ವ ‘‘ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಅತ್ಯಾಚಾರಗಳನ್ನು ತಡೆಯಲು ಸಾಧ್ಯ’’ ಎಂಬ ಹೇಳಿಕೆಯನ್ನು ನೀಡಿ, ಮತ್ತೆ ಸಂತ್ರಸ್ತೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆೆ. ಅವರ ಪ್ರಕಾರ ಸಂತ್ರಸ್ತೆ ‘ಉತ್ತಮ ಸಂಸ್ಕಾರ ಹೊಂದಿರಲಿಲ್ಲ’. ಇಂತಹದೊಂದು ಹೇಳಿಕೆಯನ್ನು ನೀಡಿ, ಆರೋಪಿಗಳನ್ನು ಸಮರ್ಥಿಸಿದ ಶಾಸಕನ ಮೇಲೆ ಈವರೆಗೆ ಸರಕಾರ ಯಾವುದೇ ಕ್ರಮವನ್ನು ಯಾಕೆ ತೆಗೆದುಕೊಂಡಿಲ್ಲ? ಉತ್ತರ ಪ್ರದೇಶದ ಇನ್ನೋರ್ವ ಬಿಜೆಪಿ ಮುಖಂಡ ‘‘ಆರೋಪಿಗಳು ಹೇಳಲಾಗಿರುವಷ್ಟು ತಪ್ಪಿತಸ್ಥರಲ್ಲ’’ ಎಂದಿದ್ದಾರೆೆ.

ಒಂದು ಹೆಣ್ಣು ಬರ್ಬರವಾಗಿ ಅತ್ಯಾಚಾರಕ್ಕೀಡಾಗಿ ಕೊಲ್ಲಲ್ಪಟ್ಟಿದ್ದರೂ, ಸರಕಾರದ ಭಾಗವಾಗಿರುವ ಒಬ್ಬ ರಾಜಕಾರಣಿಗೆ ಅದು ಮಹದಾಪರಾಧವಾಗಿ ಕಂಡಿಲ್ಲ ಯಾಕೆ? ಇದು ಅತ್ಯಾಚಾರ ಸಂತ್ರಸ್ತೆಯ ಸ್ಥಾನದಲ್ಲಿ ನಿಂತಿರುವ ‘ಭಾರತ ಮಾತೆ’ಯ ಪ್ರಶ್ನೆಗಳಾಗಿವೆ. ಹಾಥರಸ್ ಅತ್ಯಾಚಾರಕ್ಕೆ ಸಂಬಂಧಿಸಿ ಒಂದು ಸರಕಾರವೇ ಆರೋಪಿಗಳ ಬೆನ್ನಿಗೆ ನಿಂತಿದ್ದರೆ, ಅಂತಹ ಸರಕಾರವನ್ನು ಉರುಳಿಸುವುದು ದೇಶದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ, ಪ್ರತಿಭಟನೆ ಸರಕಾರವನ್ನು ಉರುಳಿಸುವ ಸಂಚೇ ಆಗಿದ್ದರೂ ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅತ್ಯಗತ್ಯವಾಗಿರುವ ಸಂಚಾಗಿದೆ. ಉತ್ತರಪ್ರದೇಶ ‘ಅತ್ಯಾಚಾರಿಗಳ ರಾಜಧಾನಿ’ ಎನ್ನುವ ಅಧಿಕೃತ ಬಿರುದನ್ನು ತನ್ನದಾಗಿಸುವ ಮುನ್ನವೇ, ಆದಿತ್ಯನಾಥ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಹೆಣ್ಣಿನ ಘನತೆಯನ್ನು ಮೇಲೆತ್ತ ಬೇಕಾಗಿದೆ. ಭಾರತವನ್ನು ಹೆಣ್ಣಿನ ಸ್ಥಾನದಲ್ಲಿಟ್ಟು ಪೂಜಿಸುವ ಬಿಜೆಪಿಯ ನಾಯಕರು ತಕ್ಷಣ ಭಾರತ ಮಾತೆಯ ಅಳಲಿಗೆ ಕಿವಿಯಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)