varthabharthi


ಅನುಗಾಲ

ದಿಕ್ಕೆಟ್ಟ ದೇಶ

ವಾರ್ತಾ ಭಾರತಿ : 8 Oct, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಜಿಎಸ್‌ಟಿಯಂತಹ ಹಣಕಾಸು ಹಂಚಿಕೆಯಲ್ಲಿ ಮೇಲುಗೈ ಸಾಧಿಸಿದ ಕೇಂದ್ರ ಸರಕಾರವು ಇತ್ತೀಚೆಗೆ ಕೃಷಿಸಂಬಂಧಿತ ಮಸೂದೆಗಳನ್ನು ರಾಜ್ಯಗಳ ಮೇಲೆ ಹೇರಿ ರಾಜ್ಯಗಳೊಂದಿಗಿನ ತನ್ನ ಸಂಬಂಧದಲ್ಲೂ ತನ್ನ ಸರ್ವಾಧಿಕಾರದ ಪಾರಮ್ಯವನ್ನು ಮೆರೆದಾಗ ನಮ್ಮ ಸಂವಿಧಾನದ ಆಯುಷ್ಯ ಮುಗಿಯುತ್ತಿದೆಯೇನೋ ಎಂದು ಅತಂಕವಾಗುತ್ತಿದೆ. ಇವುಗಳ ನಡುವೆ ಕೇಂದ್ರಾಧಿಕಾರದ ಮೂಲಕ ಸರ್ವಾಧಿಕಾರವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಂಚು ಕೃಷಿಮಸೂದೆಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಅನುಕೂಲವಾಗುವಂತೆ ಅದರದ್ದೇ ಪಕ್ಷದ ಆಳ್ವಿಕೆಯಿರುವ ರಾಜ್ಯ ಸರಕಾರಗಳು ಶಿರಬಾಗಿ ನಿಲ್ಲುತ್ತಿರುವುದು ಇನ್ನೂ ಭಯಾನಕ ಸ್ಥಿತಿಯ ನಿರ್ಮಾಣಕ್ಕೆ ಮುನ್ನುಡಿಯಂತಿದೆ.


ಪ್ರಧಾನಿಯವರು ‘‘ಮೇರೇ ದೇಶ್‌ವಾಸಿಯೋ’’ ಅಥವಾ ‘‘ಮಿತ್ರೋ..’’ ಎಂದು ತಮ್ಮ ಭಾಷಣ ಆರಂಭಿಸುವಾಗೆಲ್ಲ ಜನಜೀವನದ ಯಾವ ಕ್ಷೇತ್ರಕ್ಕೆ ಇನ್ನೇನು ಅನಾಹುತ ಕಾದಿದೆಯೋ ಎಂಬಂತೆ ಈ ದೇಶದ ವರ್ತಮಾನ (ದು)ಸ್ಥಿತಿಯೆಲ್ಲ ಮತ್ತೆ ನೆನಪಾಗುತ್ತದೆ. ಭವ್ಯ-ದಿವ್ಯ ಸಂಸ್ಕೃತಿಯೆಂಬ ಗುಣಗಾನದ ಭಾರತ ಈಗ ಹೇಗಿದೆಯೆಂದು ಪರಿತಪಿಸುವಂತಾಗುತ್ತದೆ. ಜಗತ್ತೇ ಕೊರೋನದಡಿ ತಲ್ಲಣಿಸುತ್ತಿರುವಾಗ ಈ ದೇಶ ಎಲ್ಲವನ್ನೂ ರಾಜಕೀಯಗೊಳಿಸಿ ಸುಳ್ಳು ವೈಭವದ ಗಿಲೀಟನ್ನು ಸಾರ್ವಜನಿಕವಾಗಿ ತೆರೆದಿಡುವಾಗ ಈ ದೇಶಕ್ಕೆ ಭವಿಷ್ಯವೇ ಇಲ್ಲವೇನೋ ಎನ್ನಿಸುತ್ತದೆ. ಉತ್ತರಪ್ರದೇಶವೇ ಮುಂತಾದ ಯೋಗಿ ರಾಜ್ಯಗಳಲ್ಲಿ ‘ಗೂಂಡಾರಾಜ್’, ‘ಪೊಲೀಸ್‌ರಾಜ್’ ನಮ್ಮ ಮಸಾಲಾ ಚಲನಚಿತ್ರಗಳಲ್ಲಿ ತೋರಿಸುವ ಕ್ರೌರ್ಯಗಳನ್ನು ನಾಚಿಸುವಂತೆ ಹಾಡಹಗಲೇ ಬತ್ತಲೆಯಾಗಿ ಮೆರೆಯುವಾಗ, ಸಿಎಎ ಇರಲಿ, ಎನ್‌ಆರ್‌ಸಿ ಇರಲಿ ಅಥವಾ ಯಾವುದೇ ರಾಜಕೀಯ, ಸೈದ್ಧಾಂತಿಕ, ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಸಿಬಿಐ, ಈಡಿ, ಎನ್‌ಐಎ, ಮುಂತಾದ ಕಾನೂನಾತ್ಮಕವಾದರೂ ಸ್ವಾಯತ್ತವಾಗಿರಬೇಕಾದ ಸಂಸ್ಥೆಗಳನ್ನು ಆಡಳಿತದ ಆಯುಧಗಳಂತೆ ಬಳಸುವಾಗ, ಜವಾಬ್ದಾರಿಯ ಸ್ಥಾನದಲ್ಲಿರುವವರು ಹೊಣೆಗೇಡಿ ರೌಡಿಗಳಂತೆ ದಿನವೂ ಅಟ್ಟಹಾಸದಲ್ಲಿ ನಿರತರಾಗಿರುವಾಗ, ಈ ದೇಶಕ್ಕೆ ಅವನತಿಯ ಹಾದಿ ಸುಗಮವಾದಂತೆ ಅನ್ನಿಸುತ್ತದೆ.

ಭ್ರಷ್ಟಾಚಾರವೆಂಬುದು ಈ ದೇಶದ ಜನರ ಅಪ್ರಾಮಾಣಿಕತೆಯ ಪರಿಣಾಮ. ಯಾವಾಗ ತಮ್ಮ ಅಭ್ಯುದಯಕ್ಕೆ ಶ್ರಮವಹಿಸಲು, ಸತ್ಯ-ಸತ್ವಗಳ ಅಭಿವ್ಯಕ್ತಿಯನ್ನು ಮನಸ್ಸು ಬುದ್ಧಿಪೂರ್ವಕವಾಗಿ ತಿರಸ್ಕರಿಸುತ್ತದೆಯೋ ಆಗ ಭ್ರಷ್ಟಾಚಾರ ತಾನಾಗಿ ತಾಂಡವವಾಡುತ್ತದೆ. ಇದಕ್ಕೆ ಕಾನೂನಿನ ಅಥವಾ ಪ್ರಭಾವದ ಮತ್ತು ಇನ್ನಿತರ ಸಮಜಾಯಿಷಿಕೆಗಳನ್ನು ನೀಡಿ ಸಮರ್ಥಿಸಲು ಬುದ್ಧಿವಂತ ಧೂರ್ತರ ಪಡೆಯೇ ವ್ಯವಸ್ಥಿತವಾಗಿ ಕೆಲಸಮಾಡುತ್ತದೆ. ಇತರ ದೇಶಗಳಲ್ಲಿ ಈ ಸಮಸ್ಯೆಯು ಇಲ್ಲವೇ ಎಂಬ ಪ್ರಶ್ನೆಯು ಇದಕ್ಕೆ ಉತ್ತರವಾಗಲಾರದು. ಇಂದಲ್ಲ ನಾಳೆ ಭ್ರಷ್ಟಾಚಾರವು ತಾನಾಗಿ ಅಳಿಯುತ್ತದೆ ಎಂಬ ನಿರೀಕ್ಷೆಯಿಂದಲೇ ಜನರು ಹೊಸ ಬೆಳಗನ್ನು, ಬೆಳಕನ್ನು ಸ್ವಾಗತಿಸುತ್ತಾರೆ. ಸದ್ಯ ಕೆಲವು ವರ್ಷಗಳಿಂದ ಈ ಪಿಡುಗಿಗೆ ಮತಾಂಧತೆಯೂ ಸೇರಿದೆ. ಇಂಡಿಯಾ ಅರ್ಥಾತ್ ಭಾರತದ ಅಂತಃಕರಣವನ್ನು ಹಿಸುಕಿ ಮತಾಧಾರಿತ ‘ಹಿಂದೂಸ್ಥಾನ’ ಅಥವಾ ‘ಹಿಂದೂದೇಶ’ವನ್ನಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಲೇ ಇದೆ. ದುರದೃಷ್ಟವೆಂದರೆ ಒಳ್ಳೆಯ ಯಾವ ಸಂದೇಶಕ್ಕೂ ಫಕ್ಕನೆ ತಲೆಬಾಗದ, ಒಲಿಯದ ಜನರು ದ್ವೇಷಸಂದೇಶಗಳಿಗೆ ತಕ್ಷಣದಲ್ಲೇ ತಲೆಬಾಗುತ್ತಾರೆ; ಒಲಿಯುತ್ತಾರೆ. ಇದು ನಮ್ಮ ರಾಜಕಾರಣಿಗಳಿಗೆ ಮತ್ತು ಅವರ ಸಮರ್ಥನೆಗೆ ನಿಂತ ದುಷ್ಟಬುದ್ಧಿಗಳಿಗೆ ಸುಗ್ರಾಸವಾಗಿದೆ. ಅಧಿಕಾರಕ್ಕೇರಿದ ಮಂದಿಗೆ ದೇಶದ, ದೇಶದ ಜನರ ಹಿತಕ್ಕಿಂತ ಅಧಿಕಾರದಲ್ಲಿ ಉಳಿಯುವುದೇ ಮುಖ್ಯ ಧ್ಯೇಯವಾದಾಗ ಅವರು ಈ ಬೆಂಕಿಯನ್ನು ಉರಿಸಲು ಮತ್ತು ಕಾಳ್ಗಿಚ್ಚಿನಂತೆ ಹಬ್ಬಿಸಲು ಎಲ್ಲ ಬಗೆಯ ಪ್ರಯತ್ನವನ್ನು ಮಾಡುತ್ತಾರೆ. ಇವುಗಳಲ್ಲಿ ರಾಜಕೀಯವಾದ, ಧಾರ್ಮಿಕವಾದ, ಸಾಮಾಜಿಕವಾದ ವಿಚಾರಗಳನ್ನು ತುಂಬಿಸುವ ಮತ್ತು ಸಂಘಶಕ್ತಿಯನ್ನು, ದೇಶಭಕ್ತಿಯನ್ನು ಮಣ್ಣುಗೂಡಿಸುವಂತಹ ಸಂಕುಚಿತ ಭಾವನೆಗಳನ್ನು ಪ್ರೇರೇಪಿಸುವ, ಕೆಲಸಗಳು ಆಳುವವರ ಪ್ರತ್ಯಕ್ಷ ಬೆಂಬಲದಿಂದಲೇ ನಡೆಯುತ್ತದೆ.

ಇವುಗಳಲ್ಲಿ ಸಂವಿಧಾನವನ್ನು ಕ್ಷೀಣಗೊಳಿಸುವ, ಅಶಕ್ತಗೊಳಿಸುವ ಪ್ರಯತ್ನವೇ ಮೊದಲನೆಯದ್ದು. ಇದು ಸಂವಿಧಾನದ ಮೂಲ ಮತ್ತು ವಿಕಸಿತ ಆಶಯಗಳನ್ನು ಸೋಲಿಸುವಂಥಾದ್ದು.

ಕೃಷಿಯಂತಹ ಒಂದು ಕ್ಷೇತ್ರದ ವಿಚಾರವನ್ನು ಸಂಕ್ಷಿಪ್ತವಾಗಿ ಚರ್ಚಿಸ ಬಹುದು: ಜಿಎಸ್‌ಟಿಯಂತಹ ಹಣಕಾಸು ಹಂಚಿಕೆಯಲ್ಲಿ ಮೇಲುಗೈ ಸಾಧಿಸಿದ ಕೇಂದ್ರ ಸರಕಾರವು ಇತ್ತೀಚೆಗೆ ಕೃಷಿಸಂಬಂಧಿತ ಮಸೂದೆಗಳನ್ನು ರಾಜ್ಯಗಳ ಮೇಲೆ ಹೇರಿ ರಾಜ್ಯಗಳೊಂದಿಗಿನ ತನ್ನ ಸಂಬಂಧದಲ್ಲೂ ತನ್ನ ಸರ್ವಾಧಿಕಾರದ ಪಾರಮ್ಯವನ್ನು ಮೆರೆದಾಗ ನಮ್ಮ ಸಂವಿಧಾನದ ಆಯುಷ್ಯ ಮುಗಿಯುತ್ತಿದೆಯೇನೋ ಎಂದು ಅತಂಕವಾಗುತ್ತಿದೆ. ಇವುಗಳ ನಡುವೆ ಕೇಂದ್ರಾಧಿಕಾರದ ಮೂಲಕ ಸರ್ವಾಧಿಕಾರವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಂಚು ಕೃಷಿಮಸೂದೆಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಅನುಕೂಲವಾಗುವಂತೆ ಅದರದ್ದೇ ಪಕ್ಷದ ಆಳ್ವಿಕೆಯಿರುವ ರಾಜ್ಯ ಸರಕಾರಗಳು ಶಿರಬಾಗಿ ನಿಲ್ಲುತ್ತಿರುವುದು ಇನ್ನೂ ಭಯಾನಕ ಸ್ಥಿತಿಯ ನಿರ್ಮಾಣಕ್ಕೆ ಮುನ್ನುಡಿಯಂತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯಗಳ ಸಂಬಂಧವು ಪರಸ್ಪರ ಪೂರಕವಾಗಿರಬೇಕೇ ವಿನಾ ಅರಸೊತ್ತಿಗೆ-ಸಾಮಂತರ ನಡುವಣ ಸಂಬಂಧವಾಗಿರಬಾರದು. ರಾಜ್ಯ ಸರಕಾರಗಳನ್ನು ಕೇಂದ್ರವು ಸಂವಿಧಾನದ ಅಶಯಗಳಿಗೆ ವಿರುದ್ಧವಾಗಿ ಕಿತ್ತೊಗೆದ ಸಂದರ್ಭದಲ್ಲಿ ಅದರ ಮಿತಿಯೇನೆಂಬುದನ್ನು ಸರ್ವೋಚ್ಚ ನ್ಯಾಯಾಲಯವು ಬೊಮ್ಮಾಯಿ ಪ್ರಕರಣದಲ್ಲಿ ಹೇಳಿದ್ದರೂ ಅದನ್ನು ಕೇಂದ್ರ ಸರಕಾರಗಳು ಅಸೂಯೆಯಿಂದೆಂಬಂತೆ ತಿರುಚಿ ತಮ್ಮಿಷ್ಟಬಂದಂತೆ ನಡೆದುಕೊಳ್ಳುತ್ತಿವೆ.

ಸದ್ಯ ಕೃಷಿಗೆ ಸಂಬಂಧಿಸಿದ ಕೇಂದ್ರದ ಈಚೆಗಿನ ನಿಲುವುಗಳನ್ನು ಪರಿಶೀಲಿಸಲು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸಂವಿಧಾನದ 1ನೇ ಭಾಗದ ಶೀರ್ಷಿಕೆಯು ‘ಸಂಘ ಮತ್ತು ಅದರ ರಾಜ್ಯಕ್ಷೇತ್ರ’ ಎಂದಿದೆ. ಆದ್ದರಿಂದ ಈ ದೇಶವು ತನ್ನ ರಾಜ್ಯಕ್ಷೇತ್ರಗಳ ಕೇಂದ್ರ/ಸಂಘಟನೆಯಂತೆ ಇರತಕ್ಕದ್ದು ಎಂಬುದನ್ನೇ ಅದು ಸೂಚಿಸುತ್ತದೆ. 1ನೇ ವಿಧಿಯು ‘‘1. (1) ಇಂಡಿಯಾ ಅರ್ಥಾತ್ ಭಾರತವು..’’ ಎಂದೇ ಆರಂಭವಾಗುತ್ತದೆ. ಸಂವಿಧಾನ ನಿರ್ಮಾಪಕರು ಈ ಪದಗಳನ್ನು ಕೇವಲ ಅಕ್ಷರಗಳ ಸಮುಚ್ಚಯವಾಗಿ ಪರಿಗಣಿಸದೆ ಮಹತ್ವವಾದ ಉದಾರವಾದಿ ಸಂಕೇತವಾಗಿ ಬಳಸಿದ್ದಾರೆ. ಇಂಡಿಯಾ ಎಂದರೆ ಒಂದು ವಿದೇಶಿ ಪದವಲ್ಲ; ಮತ್ತು ಭಾರತವೆಂಬುದು ಅದರಿಂದ ಪ್ರತ್ಯೇಕವಲ್ಲ. ಮೊದಲನೆಯದು ಭೌಗೋಳಿಕ ಕಲ್ಪನೆಯಾದರೆ ಇನ್ನೊಂದು ಸಾಂಸ್ಕೃತಿಕ ಭೂಮಿಕೆಯ ಸೃಷ್ಟಿ. ಇದು ರಾಜಕೀಯ ಸಾಂಗತ್ಯವಲ್ಲ. ಆದ್ದರಿಂದ ಇಂಡಿಯಾವನ್ನು ಭಾರತವಾಗಿ ಪರಿವರ್ತಿಸುವ ಪ್ರತ್ಯೇಕ ಸಂದರ್ಭವಾಗಲೀ, ಅಗತ್ಯವಾಗಲೀ ಉದ್ಭವಿಸುವುದಿಲ್ಲ.
 
 ಕಳೆದ ಏಳು ದಶಕಗಳ ಉತ್ತರಾರ್ಧದ ಸಾಂವಿಧಾನಿಕ ಇಂಡಿಯಾ/ಭಾರತದಲ್ಲಿ ಇಂತಹ ಸಹಜ ಅಸ್ತಿತ್ವವನ್ನು ಅಳಿಸುವಲ್ಲಿ ಅಧಿಕಾರಸ್ಥರು ಮತ್ತು ರಾಜಕಾರಣಿಗಳು ಎಷ್ಟೇ ಪ್ರಯತ್ನಿಸಿದರೂ ತನ್ನ ಮೂಲ ಲಕ್ಷಣಗಳನ್ನು ಉಳಿಸಿಕೊಳ್ಳುವಲ್ಲಿ ಈ ದೇಶದ ಜನತೆ ಯಶಸ್ವಿಯಾಗಿದ್ದಾರೆ. ಜನತೆ ಎಂಬ ಪದವನ್ನು ಅರ್ಥಪೂರ್ಣವಾಗಿಯೇ ಓದಿಕೊಳ್ಳಬೇಕು. ಏಕೆಂದರೆ ಮುಂದಿನ ಚುನಾವಣೆಯನ್ನು ಗೆಲ್ಲಲು ಮತ್ತು ವೈಯಕ್ತಿಕವಾಗಿ ತಮ್ಮ ಸಾಂಸಾರಿಕ ಪೀಳಿಗೆಯನ್ನು ಬಲಿಷ್ಠಗೊಳಿಸಲು ಬಹಳಷ್ಟು ರಾಜಕಾರಣಿಗಳು ಪ್ರಯತ್ನಿಸಿದರೇ ವಿನಾ ಜನತೆಯ ಆಶೋತ್ತರಗಳನ್ನು ಈಡೇರಿಸಲು ಮನಸ್ಸುಮಾಡಲಿಲ್ಲ. ಇಂತಹ ಕೇಡಿಗರೊಂದಿಗೆ ತಮ್ಮ ಬೇಳೆಯನ್ನೂ ಬೇಯಿಸಿಕೊಳ್ಳುವ ಬೆಂಬಲಿಗ ಭ್ರಷ್ಟರು, ದುರುಳರು ಮತ್ತು ತಮ್ಮ ಮೆದುಳು, ಬುದ್ಧಿ ಮನಸ್ಸುಗಳನ್ನು ನಾಯಕರಿಗೆ ಅಡವಿಟ್ಟಂತಿರುವ ಇತರ ಮುಗ್ಧರೂ ದಡ್ಡರೂ ಈ ದೆವ್ವಪೂಜೆಯಲ್ಲಿ ತೊಡಗಿದರು. ದೇಶವೆಂಬ ಅಮೂರ್ತ ಭಾವುಕ ಕಲ್ಪನೆಯು ನಾಯಕರೆಂಬ ಮೂರ್ತ ದೇವರು, ದೈವಕ್ಕೆ ದಾರಿ ಮಾಡಿಕೊಟ್ಟಿದ್ದರೂ ಸಮಸ್ಯೆ ಯಿರಲಿಲ್ಲ. ಆದರೆ ದೇವರು, ದೈವಗಳ ಸ್ಥಾನದಲ್ಲಿ ಕೊಳ್ಳಿದೆವ್ವಗಳೇ ವಿಜೃಂಭಿಸುತ್ತಿವೆ.

ಇಂತಹ ಮಂದಿಯ ಸಂಖ್ಯೆ ಬೆಳೆಯುತ್ತಲೇ ಹೋದದ್ದು ಈ ದೇಶದ ದುರ್ದೈವ. ಸಂವಿಧಾನದ 246ನೇ ಅನುಚ್ಛೇದದ ಸಂಬಂಧ ಏಳನೆಯ ಅನುಸೂಚಿಯಲ್ಲಿ 3 ಪಟ್ಟಿಗಳ ಮೂಲಕ ಕೇಂದ್ರ ಮತ್ತು ರಾಜ್ಯಗಳ ಅಧಿಕಾರ ಹಂಚಿಕೆಯು ವಿಧಿಸಲ್ಪಟ್ಟಿದೆ. 1ನೇ ಪಟ್ಟಿಯು ಸಂಘಪಟ್ಟಿ (ಅಥವಾ ಕೇಂದ್ರದ ವ್ಯಾಪ್ತಿಯ ಪಟ್ಟಿ). ಇದರಲ್ಲಿ ಕೃಷಿಯ ಉಲ್ಲೇಖ ಹೀಗಿದೆ: (ಪಟ್ಟಿಯ ಕ್ರಮಾಂಕವನ್ನು ಆವರಣದೊಳಗೆ ನಮೂದಿಸಿದೆ.) ಕೃಷಿ ಆದಾಯವನ್ನು ಹೊರತುಪಡಿಸಿ ಇತರ ಆದಾಯದ ಮೇಲಿನ ತೆರಿಗೆಗಳು (82), ಕೃಷಿ ಭೂಮಿಯನ್ನು ಹೊರತುಪಡಿಸಿ ಇತರ ಸ್ವತ್ತಿಗೆ ಸಂಬಂಧಿಸಿದಂತೆ ಎಸ್ಟೇಟ್ ಡ್ಯೂಟಿ (87), ಕೃಷಿ ಭೂಮಿಯನ್ನು ಹೊರತುಪಡಿಸಿ, ಇತರ ಸ್ವತ್ತಿನ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಸುಂಕಗಳು (88). 2ನೇ ಪಟ್ಟಿ ರಾಜ್ಯಪಟ್ಟಿ ಎಂದಿದೆ. ಕೃಷಿ ಇತ್ಯಾದಿ (14), ಕೃಷಿ ಭೂಮಿಯ ವರ್ಗಾವಣೆ ಮತ್ತು ಪರಭಾರೆ; ಭೂಮೇಲ್ಪಾಟು ಮತ್ತು ಕೃಷಿಸಾಲಗಳು ಇತ್ಯಾದಿ (18), ಮಾರುಕಟ್ಟೆಗಳು ಮತ್ತು ಸಂತೆಗಳು (28) ಕೃಷಿ ಆದಾಯ ತೆರಿಗೆಗಳು (46), ಕೃಷಿ ಭೂಮಿಯ ಉತ್ತರಾಧಿಕಾರದ ಬಗ್ಗೆ ಸುಂಕಗಳು (47), ಕೃಷಿ ಭೂಮಿಯ ಬಗ್ಗೆ ಎಸ್ಟೇಟ್ ಡ್ಯೂಟಿ (48); 3ನೇ ಪಟ್ಟಿ ಸಮವರ್ತಿ ಪಟ್ಟಿ.

1ನೇ ಪಟ್ಟಿಯ ವಿಚಾರಗಳ ಕುರಿತು ಸಂಸತ್ತು ಕಾನೂನನ್ನು ರೂಪಿಸಬಹುದು. 2ನೇ ಪಟ್ಟಿಯ ವಿಚಾರಗಳ ಕುರಿತು ರಾಜ್ಯಗಳಿಗೆ ಕಾನೂನು ರೂಪಿಸುವ ಅಧಿಕಾರವನ್ನು ನೀಡಲಾಗಿದೆ. 3ನೇ ಪಟ್ಟಿಯ ವಿಚಾರಗಳ ಕುರಿತು ಕೇಂದ್ರ-ರಾಜ್ಯ ಎರಡೂ ಕಾನೂನನ್ನು ರೂಪಿಸಬಹುದು. 3ನೇ ಪಟ್ಟಿಯ ವಿಚಾರಗಳಲ್ಲಿ ರಾಜ್ಯ-ಕೇಂದ್ರ ಶಾಸನಗಳಲ್ಲಿ ತಾರತಮ್ಯ ಅಥವಾ ವಿರೋಧವಿದ್ದರೆ ಕೇಂದ್ರದ ಶಾಸನವೇ ಊರ್ಜಿತ ವಾಗುತ್ತದೆ. ಅಧಿಕಾರಹಂಚಿಕೆಯ ಪಟ್ಟಿಯನ್ನು ಗಮನಿಸಿದರೆ ಕೃಷಿ ಮಾತ್ರವಲ್ಲ ಮಾರುಕಟ್ಟೆಗಳು ರಾಜ್ಯಕ್ಷೇತ್ರದಲ್ಲಿದೆ. ಈ ಕಾರಣವಾಗಿಯೇ ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಕೃಷಿ ಮತ್ತು ಕೃಷಿಮಾರುಕಟ್ಟೆಗೆ ಸಂಬಂಧಿಸಿದ ಕಾನೂನುಗಳು (ಭೂಕಂದಾಯ ಕಾಯ್ದೆ-1964, ಭೂಸುಧಾರಣಾ ಕಾಯ್ದೆ- 1961, ಕೃಷ್ಯುತ್ಪನ್ನ ಮಾರುಕಟ್ಟೆ (ನಿಯಂತ್ರಣ) ಕಾಯ್ದೆ-1966 ಮುಂತಾದವುಗಳು ರೂಪುಗೊಂಡಿವೆ.

ಇಂತಹ ಸಂದರ್ಭದಲ್ಲಿ ಕೇಂದ್ರವು ತಂದ ಈ ಶಾಸನದ ಗುಣದೋಷಗಳೇನೇ ಇರಲಿ ಕೆಲವು ಮೂಲ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ: ಮೊದಲನೆಯದಾಗಿ, ಸಂಸತ್ತಿಗೆ ಇಂತಹ ಕಾನೂನನ್ನು ರೂಪಿಸುವ ಹಕ್ಕಿದೆಯೇ? ಇದು ರಾಜ್ಯಗಳ ಅಧಿಕಾರದ ಮೇಲೆ ದುರಾಕ್ರಮಣವಲ್ಲವೇ? ಕೇಂದ್ರಸರಕಾರದ ಆಳುವ ಪಕ್ಷವೇ ಅಧಿಕಾರದಲ್ಲಿರುವ ರಾಜ್ಯಗಳು ಬಾಯಿಮುಚ್ಚಿಕೊಂಡು ತಮ್ಮ ಮಾನಹರಣವನ್ನು ಸಹಿಸಿಕೊಂಡು ಕುಳಿತಿವೆ. ನಮ್ಮ ಸಂಸದರು, ಶಾಸಕರು, ಮತ್ತಿತರ ತುತ್ತೂರಿಗಳು ಕೇಂದ್ರದ ಪಾಠವನ್ನು ಉರುಹಾಕಿಕೊಂಡು ಅವನ್ನಿಲ್ಲಿ ಊದುತ್ತಿವೆ. ತಮ್ಮ ಅಧಿಕಾರ ವನ್ನು ಮರೆತಂತಿರುವ ಈ ರಾಜಕಾರಣಿಗಳ ಬಗ್ಗೆ ಒಂದು ಹನಿ ಕಣ್ಣೀರೇ ಗತಿ!

ಎರಡನೆಯದಾಗಿ, ಈಗಾಗಲೇ ಕರ್ನಾಟಕದಲ್ಲಿ (ಮತ್ತು ಇತರ ರಾಜ್ಯಗಳಲ್ಲಿಯೂ) ಕೃಷಿಮಾರುಕಟ್ಟೆಗೆ ಸಂಬಂಧಿಸಿದ ಕಾನೂನು ಇರುವಾಗ ಕೇಂದ್ರವು ಇಷ್ಟೊಂದು ತರಾತುರಿಯಲ್ಲಿ ಮೊದಲು ಸುಗ್ರೀವಾಜ್ಞೆಯ ಮೂಲಕ, ಆನಂತರ ಕೋವಿಡ್ ಅವಸರದಲ್ಲಿ ಕೃಷಿಕಾಯ್ದೆಗಳನ್ನು ತರುವ ಜರೂರೇನಿತ್ತು? ಇವು ಪ್ರತ್ಯಕ್ಷವಾಗಿ ಉದ್ಯಮಿಗಳನ್ನು ಪ್ರೋತ್ಸಾಹಿಸಿ ರೈತರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರವಾಗಿದೆ. (ಕರ್ನಾಟಕದಲ್ಲಿ ಕೃಷಿಭೂಮಿಯನ್ನು ಕೊಳ್ಳಲು ಕೃಷಿಯೇತರರಿಗಿದ್ದ ಅಡ್ಡಿ-ಆತಂಕಗಳನ್ನು ರಾಜ್ಯಸರಕಾರ ದೂರಮಾಡಿದೆ. ಅಲ್ಲಾದರೂ ಕೃಷಿಕರಿಗೆ ಮಾರುವ ಅಥವಾ ಮಾರದಿರುವ ಸ್ವಾತಂತ್ರ್ಯವಾದರೂ ಇದೆಯೆಂದು ಹೇಳಬಹುದು!) ನಮ್ಮ ವಿರೋಧಪಕ್ಷಗಳ ರಾಜಕಾರಣಿಗಳು ಈ ಕಾಯ್ದೆಗಳನ್ನು ಪ್ರಶ್ನಿಸುತ್ತಾರೆಂಬ ನಿರೀಕ್ಷೆಯಿತ್ತು. ಲೋಕಸಭೆಯಲ್ಲಿ ಅಂಗೀಕಾರವಾದ ಈ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಸೂದೆಯ ಪರವಾಗಿ ಬಹುಮತವಿಲ್ಲವೆಂಬ ಆಪಾದನೆಯ ನಡುವೆ ಮತಗಣಿಕೆಯನ್ನು ಬದಿಗೊತ್ತಿ ಸಂಶಯಾಸ್ಪದ ರೀತಿಯ ವಿಧಾನದಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಗಳ ವಿರುದ್ಧ ಆಳುವ ಪಕ್ಷದ ಅಂಗವಾಗಿದ್ದ ಅಕಾಲಿ ದಳವು ಪ್ರತಿಭಟಿಸಿ ಕೇಂದ್ರ ಮಂತ್ರಿಮಂಡಲದಿಂದ ತನ್ನ ಪ್ರತಿನಿಧಿಯನ್ನು ವಾಪಸ್ ಪಡೆಯಿತು. ಪಂಜಾಬ್, ಹರ್ಯಾಣ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರವಾದ ಪ್ರತಿಭಟನೆಯಿದ್ದರೂ ಕೇಂದ್ರಸರಕಾರವು ತನ್ನ ಆಡಳಿತ (ಕು)ತಂತ್ರದ ಮೂಲಕ ರೈತರನ್ನು ಹಾದಿತಪ್ಪಿಸುವ ಪ್ರಯತ್ನದಲ್ಲಿದೆ. ನಮ್ಮ ರೈತಾಪಿ ಜನರೂ ಅಷ್ಟೇ: ಇತ್ತೀಚೆಗಿನ ವರ್ಷಗಳಲ್ಲಿ ಗುಣಾವಗುಣ ಗಮನಿಸದೆ ಕುರುಡು ರಾಜಕೀಯ ನಿಷ್ಠೆಯನ್ನು ಪ್ರದರ್ಶಿಸಿ ತಮ್ಮ ಕಾಲಿಗೆ ತಾವೇ ಕಲ್ಲೆಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರು, ಅವಿದ್ಯಾವಂತರು ಎಂಬ ಅಂತರವಿಲ್ಲದೆ ಹಿಂದೆಂದೂ ರೈತರು ಇಷ್ಟು ಮೂರ್ಖತನದಲ್ಲಿ ವರ್ತಿಸಿದ್ದು ಇರಲಾರದು. ಇದರ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಕಂಡಾರು; ಅಷ್ಟು ಹೊತ್ತಿಗೆ ಕಾಲ ಮಿಂಚಿಹೋಗಿರುತ್ತದೆ.

ಈ ಮಸೂದೆಗಳು ರೈತಸ್ನೇಹಿಗಳೇ ಆಗಿದ್ದರೆ ರಾಜ್ಯಗಳ ಕೃಷ್ಯುತ್ಪನ್ನ ಮಾರುಕಟ್ಟೆ ಗಳನ್ನೇಕೆ ರದ್ದುಗೊಳಿಸಿಲ್ಲ? ಅವುಗಳ ಅಗತ್ಯವೇನು? ಯಾವ ರೈತನೂ ಇದನ್ನು ಪ್ರಸ್ತಾವಿಸಿಲ್ಲ. ಸೂಕ್ಷ್ಮವಾಗಿ ಈ ವಿಚಾರಗಳನ್ನು ಪ್ರಸ್ತಾವಿಸಲಾಗಿದೆ. ಇವು ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಧೋರಣೆಯೆಂದು ತಿಳಿದರೆ ತಪ್ಪು. ರೈಲ್ವೆ, ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ಮಾನಸ್ತಂಭಗಳಂತಿರುವ ಬೃಹತ್ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರ ಮಡಿಲಿಗೆ ಹಾಕುವ ಕಾರಸ್ಥಾನದಿಂದ ತೊಡಗಿ ಹಿಂದಿ ಭಾಷೆಯನ್ನು ಹೇರುವವರೆಗೆ ಬದುಕಿನ ಎಲ್ಲಾ ರಂಗಗಳಲ್ಲೂ ಕೇಂದ್ರಸರಕಾರವು ಜನತೆಯ ಕೊರಳು ಹಿಚುಕುವ ಯೋಜನೆಯನ್ನು ಹಾಕಿಕೊಂಡಿದೆ. ಹೀಗೆ ಮಾಡುವ ಮೂಲಕ ಸರ್ವಾಧಿಕಾರ ಸ್ಥಾಪನೆಯನ್ನು ಮಾಡಬಹುದು, ಅಥವಾ ಇಂಡಿಯಾ ಅರ್ಥಾತ್ ಭಾರತವನ್ನು ಹಿಂದೂದೇಶ/ಹಿಂದೂಸ್ಥಾನವನ್ನಾಗಿ ಮಾಡಬಹುದೆಂದು ಯಾರೇ ತಿಳಿದರೂ ತಪ್ಪಾಗುತ್ತದೆ. ಅಂತಹ ದೀರ್ಘ ಏಳುಬೀಳುಗಳ ಇತಿಹಾಸ ಈ ದೇಶಕ್ಕೆ ಸ್ವಾತಂತ್ರ್ಯೋತ್ತರ ಕಾಲ ಮಾತ್ರವಲ್ಲ ಸ್ವಾತಂತ್ರ್ಯಪೂರ್ವ ಕಾಲದಲ್ಲೂ ಇದೆ. ಅಷ್ಟರ ಮಟ್ಟಿಗೆ ಎಂತಹ ದೀರ್ಘ ಕತ್ತಲನ್ನೂ ಕಳೆದು ಬೆಳಕನ್ನು ಕಾಯಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)