varthabharthi


ಸಂಪಾದಕೀಯ

ಮುಖವಾಡದ ಮರೆಯಲ್ಲಿ ದರೋಡೆ!

ವಾರ್ತಾ ಭಾರತಿ : 8 Oct, 2020

ಕೊರೋನ ಹರಡದಂತೆ ‘ಸ್ವಯಂ ಜಾಗೃತಿ’ಯನ್ನು ಹೇರಿಕೊಳ್ಳುವುದೇ ಸದ್ಯಕ್ಕೆ ಈ ಸೋಂಕನ್ನು ತಡೆಯಲು ನಮ್ಮ ಮುಂದೆ ಇರುವ ಔಷಧಿ. ಈಗಾಗಲೇ ಎರಡು ತಿಂಗಳ ಲಾಕ್‌ಡೌನ್ ಮೂಲಕವೂ ನಮಗೆ ಕೊರೋನವನ್ನು ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಕೊರೋನಕ್ಕೆ ಹೆದರಿ ಲಾಕ್‌ಡೌನ್ ಮುಂದುವರಿಸಿದರೆ ಜನರು ಹಸಿವಿನಿಂದಲೇ ಸಾಯುವ ಸ್ಥಿತಿ ನಿರ್ಮಾಣವಾದೀತು ಎನ್ನುವುದು ಸರಕಾರಕ್ಕೆ ಸಂಪೂರ್ಣ ಮನವರಿಕೆಯಾದ ಬಳಿಕ, ಲಾಕ್‌ಡೌನ್‌ನ್ನು ಹಂತಹಂತವಾಗಿ ಹಿಂದೆಗೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ಈಗಾಗಲೇ ಘೋಷಿಸಿದೆ. ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು, ಗರಿಷ್ಠ ಮಟ್ಟದಲ್ಲಿ ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು, ಸಾಧ್ಯವಾದಷ್ಟು ಗುಂಪು ಸೇರದೇ ಇರುವುದು....ಇತ್ಯಾದಿ ಇತ್ಯಾದಿ ನಿಯಮಗಳನ್ನು ಸರಕಾರ ಹೇರಿದೆ. ಹಾಗೆಯೇ, ರೋಗಲಕ್ಷಣಗಳು ಕಂಡು ಬಂದಾಗ ಅನುಸರಿಸಬೇಕಾದ ಕ್ರಮಗಳು, ಸ್ವಯಂ ಕ್ವಾರಂಟೈನ್‌ಗೆ ಒಳಗಾಗುವುದು, ಮೊದಲಾದ ಮುಂಜಾಗ್ರತೆಗಳನ್ನು ಹಲವು ವೈದ್ಯರು ತಮ್ಮ ಭಾಷಣಗಳಲ್ಲಿ, ಬರಹಗಳಲ್ಲಿ ತಿಳಿಸಿದ್ದಾರೆ. ಹಲವೆಡೆ ಈ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲೇ, ಸ್ವತಃ ರಾಜಕಾರಣಿಗಳೇ ಸರಕಾರದ ನಿಯಮಗಳನ್ನು ಉಲ್ಲಂಘಿಸಿ, ಮದುವೆ, ಮೆರವಣಿಗೆ, ಜಾತ್ರೆಗಳಲ್ಲಿ ಭಾಗವಹಿಸಿರುವ ಉದಾಹರಣೆಗಳು ನಮ್ಮ ಮುಂದಿರುವಾಗ, ಜನಸಾಮಾನ್ಯರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರಕಾರ ನಿರೀಕ್ಷಿಸುವುದು ಹೇಗೆ? ಇದೇ ಸಂದರ್ಭದಲ್ಲಿ ‘‘ಔಷಧಿ ಕಂಡು ಹಿಡಿಯುವವರೆಗೆ ಮಾಸ್ಕ್ ಅಥವಾ ಮುಖವಾಡವೇ ಕೊರೋನ ತಡೆಯುವುದಕ್ಕಿರುವ ಔಷಧಿ’ ಎನ್ನುವುದನ್ನೂ ಸರಕಾರ ಅಧಿಕೃತವಾಗಿ ಘೋಷಿಸಿದೆ ಹಾಗೂ ಮಾಸ್ಕ್ ಧರಿಸದವರಿಗೆ ನಗರಗಳಲ್ಲಿ ದುಬಾರಿ 1,000 ರೂಪಾಯಿ ದಂಡವನ್ನು ವಿಧಿಸಿದೆ. ಮಾಸ್ಕ್ ಧರಿಸದವರಿಗಾಗಿ ಇತರೆಡೆಗಳಲ್ಲೂ ಸುಮಾರು 500 ರೂಪಾಯಿ ದಂಡವನ್ನು ಸರಕಾರ ಘೋಷಿಸಿದೆ.

ವಿಪರ್ಯಾಸವೆಂದರೆ, ಯಾವಾಗ ಸರಕಾರ ಈ ‘ದಂಡ’ವನ್ನು ಘೋಷಿಸಿತೋ, ಅಲ್ಲಿಂದ ಪೊಲೀಸರು ಜನರಿಂದ ದಂಡ ವಸೂಲಿಗೆ ತಮ್ಮ ‘ದಂಡ’ ಹಿಡಿದು ಬೀದಿಗಿಳಿದಿದ್ದಾರೆ. ಹಿಂದೆ, ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರ ‘ಕರ್ಫ್ಯೂ’ ವಿಧಿಸಿದಾಗ ಪೊಲೀಸರು ಅದರ ಉದ್ದೇಶವನ್ನು ಮರೆತು ಜನಸಾಮಾನ್ಯರ ಮೇಲೆ ದೌರ್ಜನ್ಯ ಎಸಗಿದಂತೆಯೇ, ಈಗ ‘ಮಾಸ್ಕ್’ ಹೆಸರಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಸಾಧಾರಣವಾಗಿ ಕರ್ಫ್ಯೂ ವಿಧಿಸುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಾಗ. ದುಷ್ಕರ್ಮಿಗಳು ಬೀದಿಗಿಳಿಯದಂತೆ ಮಾಡಲು ಕರ್ಫ್ಯೂ ಸಂದರ್ಭದಲ್ಲಿ ಪೊಲೀಸರು ತುಂಬಾ ಕಟುವಾಗಿ ವರ್ತಿಸಬೇಕಾಗುತ್ತದೆ. ಆದರೆ ಕೊರೋನದಂತಹ ಸಾಂಕ್ರಾಮಿಕ ರೋಗವನ್ನು ತಡೆಯಲು ಕರ್ಫ್ಯೂ ವಿಧಿಸಿದಾಗ, ಜನ ಸಾಮಾನ್ಯರ ಜೊತೆಗೆ ಕ್ರಿಮಿನಲ್‌ಗಳ ಜೊತೆ ವರ್ತಿಸಿದಂತೆ ಕಠೋರವಾಗಿ ವರ್ತಿಸುವುದು ತಪ್ಪು. ಕರ್ಫ್ಯೂ ಹೇರಿರುವುದರ ಹಿಂದಿರುವ ಮಾನವೀಯ ಉದ್ದೇಶವನ್ನೇ ಮರೆತು ಪೊಲೀಸರು ಕರ್ತವ್ಯ ನಿರ್ವಹಿಸಿದರು. ಪೊಲೀಸರ ಲಾಠಿ ಏಟಿನಿಂದ ಹಲವರು ಮೃತಪಟ್ಟಿದ್ದಾರೆ. ಇದೀಗ ‘ಮಾಸ್ಕ್ ಧರಿಸದವರಿಗೆ ದಂಡ’ ವಿಧಿಸುವ ಆದೇಶವನ್ನು ಸರಕಾರದ ಖಾಲಿ ಬೊಕ್ಕಸವನ್ನು ತುಂಬಿಸುವ ಮಾರ್ಗವೆಂದು ಪೊಲೀಸರು ಭಾವಿಸಿದ್ದಾರೆ. ಬೆಂಗಳೂರಿನಲ್ಲಿ ಮಾಸ್ಕ್‌ನ್ನು ಸರಿಯಾಗಿ ಧರಿಸಿಲ್ಲ ಎಂದು ಆರೋಪಿಸಿ ಪೊಲೀಸನೊಬ್ಬ ಕೂಲಿ ಕಾರ್ಮಿಕನೊಬ್ಬನಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆೆ. ‘ನಾನು ಎರಡು ದಿನದ ವೇತನವನ್ನು ದಂಡವಾಗಿ ಕಟ್ಟಿದೆ’ ಎಂದು ಕೂಲಿ ಕಾರ್ಮಿಕ ಮಾಧ್ಯಮಗಳ ಜೊತೆಗೆ ಅಳಲು ವ್ಯಕ್ತಪಡಿಸಿದ್ದಾನೆ.

ಲಾಕ್‌ಡೌನ್‌ನಿಂದಾಗಿ ಜನರು ಆರ್ಥಿಕವಾಗಿ ಜರ್ಜರಿತವಾಗಿದ್ದಾರೆ. ನಗರಗಳಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೂಲಿಕಾರ್ಮಿಕನೊಬ್ಬನಿಗೆ ಸರಿಯಾಗಿ ಮಾಸ್ಕ್ ಧರಿಸಿಲ್ಲ ಎಂದು ಸಾವಿರ ರೂಪಾಯಿ ದಂಡ ಹಾಕುವುದೆಂದರೆ ಹಗಲು ದರೋಡೆಯೇ ಸರಿ. ದಂಡದ ಉದ್ದೇಶ, ಜನರಲ್ಲಿ ಮಾಸ್ಕ್ ಕುರಿತಂತೆ ಜಾಗೃತಿಯನ್ನು ಮೂಡಿಸುವುದು. ಒಂದು ವೇಳೆ ಒಬ್ಬ ಮಾಸ್ಕ್‌ನ್ನು ಸರಿಯಾಗಿ ಧರಿಸಿಲ್ಲ ಎಂದರೆ ಆತನಿಗೆ ಆ ಕುರಿತಂತೆ ಮಾಹಿತಿ ಮತ್ತು ಎಚ್ಚರಿಕೆಯನ್ನು ನೀಡಬೇಕು. ಇದೇ ಸಂದರ್ಭದಲ್ಲಿ ಒಬ್ಬ ಮಾಸ್ಕ್ ಧರಿಸಿಲ್ಲವಾದರೆ, ಆತನಿಗೆ ದುಪ್ಪಟ್ಟು ಬೆಲೆಯಲ್ಲಿ ಪೊಲೀಸರೇ ಮಾಸ್ಕ್‌ನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ಅದರ ಬದಲಿಗೆ ಒಂದು ಸಾವಿರ ರೂಪಾಯಿ ಕಟ್ಟಿದಾಕ್ಷಣ ಕೊರೋನ ತನ್ನ ಕೆಲಸವನ್ನು ಮಾಡದೇ ಇರುತ್ತದೆಯೇ? ಲಾಕ್‌ಡೌನ್ ಸಂದರ್ಭದಲ್ಲಿ, ನಾಡಿನ ಹಲವು ರಾಜಕಾರಣಿಗಳು ಸುರಕ್ಷಿತ ಅಂತರವನ್ನು ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಸರಕಾರ ಎಷ್ಟು ದಂಡ ವಿಧಿಸಿದೆ? ಜನಸಾಮಾನ್ಯರೊಂದು, ರಾಜಕಾರಣಿಗಳಿಗೊಂಡು ಕಾನೂನು ಎಷ್ಟು ಸರಿ?

  ಇಷ್ಟಕ್ಕೂ ಮಾಸ್ಕ್ ಕುರಿತಂತೆ ವೈದ್ಯರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಯಾರು ಕೆಮ್ಮು, ನೆಗಡಿಯಂತಹ ಕಾಯಿಲೆಗಳಿಂದ ಬಳಲುತ್ತಾರೆಯೋ ಅವರಷ್ಟೇ ಮಾಸ್ಕ್ ಧರಿಸಿದರೆ ಸಾಕು ಎನ್ನುವುದು ಬಹುತೇಕ ವೈದ್ಯರ ಅಂಬೋಣವಾಗಿದೆ. ಆರೋಗ್ಯವಂತರು ಮಾಸ್ಕ್ ಧರಿಸಿ ತಿರುಗಾಡಬೇಕಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಇಡೀ ದಿನ ಮಾಸ್ಕ್ ಧರಿಸಿ ಓಡಾಡುವುದೂ ಅನಾರೋಗ್ಯಗಳಿಗೆ ಕಾರಣವಾಗಬಹುದು ಎಂದು ಕೆಲವು ವೈದ್ಯರು ಎಚ್ಚರಿಸಿದ್ದಾರೆ. ಎಲ್ಲರೂ ದಿನಕ್ಕೆ ಎರಡೆರಡು ಮಾಸ್ಕ್‌ಗಳನ್ನು ಧರಿಸುವ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಜನಸಾಮಾನ್ಯರು, ಕಾರ್ಮಿಕರು ಪೊಲೀಸರಿಗೆ ಹೆದರಿ ಬಳಸಿದ ಮಾಸ್ಕ್‌ಗಳನ್ನೇ ಶುಚಿಗೊಳಿಸದೆ ಮತ್ತೆ ಮತ್ತೆ ಬಳಸುವ ಸಾಧ್ಯತೆಗಳಿರುತ್ತವೆ. ಇದು ಕೊರೋನ ಮಾತ್ರವಲ್ಲ ಇನ್ನಿತರ ರೋಗಗಳನ್ನು ಜನರಿಗೆ ಅಂಟಿಸಬಹುದು. ಕೊರೋನದ ಭಯಕ್ಕಿಂತ ಪೊಲೀಸರ ಭಯಕ್ಕೆ ಜನರು ಮಾಸ್ಕ್ ಧರಿಸುವಂತಾದರೆ ಅದರಿಂದ ಇನ್ನಷ್ಟು ಅನಾಹುತಗಳಾಗಬಹುದೇ ಹೊರತು, ಜನರ ಆರೋಗ್ಯ ಸುಧಾರಿಸುವುದು ಅಸಾಧ್ಯ.

ಮಾಸ್ಕ್ ಧರಿಸುವುದು ಜನರ ಸ್ವಯಂ ಆಯ್ಕೆಯಾಗಬೇಕು. ಈಗಾಗಲೇ ಕೊರೋನ ದುಷ್ಪರಿಣಾಮಗಳ ಕುರಿತಂತೆ ಅರಿವಿರುವ ಯಾರೇ ಆಗಿದ್ದರೂ ಮಾಸ್ಕ್ ಧರಿಸಿಯೇ ಧರಿಸುತ್ತಾರೆೆ. ಜೊತೆಗೆ ಸರಕಾರ ಮಾಸ್ಕ್‌ನ ಕುರಿತಂತೆ ಜನರಲ್ಲಿ ಇನ್ನಷ್ಟು ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕು. ಪೊಲೀಸರು ಲಾಠಿ ಹಿಡಿದು ಮಾಸ್ಕ್ ಧರಿಸುವಂತೆ ಒತ್ತಾಯಿಸದೇ, ಮಾನವೀಯ ರೀತಿಯಲ್ಲಿ ಜನರೊಂದಿಗೆ ವ್ಯವಹರಿಸಬೇಕು. ಈಗಾಗಲೇ ಮಾಸ್ಕ್ ದಂಡಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಜನರ ನಡುವೆ ತಿಕ್ಕಾಟ ನಡೆದಿದೆ. ಜನರ ಆಕ್ರೋಶ ಸರಕಾರದ ಕಿವಿಯನ್ನೂ ಮುಟ್ಟಿದೆ. ದಂಡ ಇಳಿಕೆಯ ಕುರಿತಂತೆ ಸರಕಾರ ನಿರ್ಧಾರ ತೆಗೆದುಕೊಂಡಿದೆಯಾದರೂ, ಈಗಾಗಲೇ ನೂರಾರು ಜನರು 1,000 ರೂಪಾಯಿ ದಂಡ ಕಟ್ಟಿದ್ದಾರೆ. ಕಟ್ಟಿದ ಶುಲ್ಕವನ್ನು ಅವರಿಗೆ ಸರಕಾರ ಮರು ಪಾವತಿ ಮಾಡುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಸರಕಾರ ದಂಡವನ್ನು ಇಳಿಸಲು ಮುಂದಾಗಿದೆಯಾದರೂ, ಪೊಲೀಸರು ಬಲವಂತವಾಗಿ ಜನಸಾಮಾನ್ಯರಿಂದ ದಂಡ ವಸೂಲಿಗೆ ಇಳಿಯಬಾರದು. ದಂಡದ ಬದಲಿಗೆ ದುಪ್ಪಟ್ಟು ಬೆಲೆಯಲ್ಲಿ ಮಾಸ್ಕ್ ವಿತರಿಸಿದರೆ ದಂಡದ ಉದ್ದೇಶವೂ ಸಾರ್ಥಕವಾಗುತ್ತದೆ. ಜನರೂ ಮಾಸ್ಕ್ ಧರಿಸುವಂತಾಗುತ್ತದೆ. ಇದೇ ಸಂದರ್ಭದಲ್ಲಿ ಈ ಹಿಂದೆ ಸುರಕ್ಷಿತ ಅಂತರವನ್ನು ಉಲ್ಲಂಘಿಸಿದ ಆರೋಪವಿರುವ ರಾಜಕಾರಣಿಗಳೆಲ್ಲರನ್ನೂ ಗುರುತಿಸಿ ಅವರ ಮೇಲೆ ಭಾರೀ ದಂಡ ಹೇರುವುದಕ್ಕೆ ಸರಕಾರ ಮುಂದಾಗಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)