varthabharthi


ಸಿನಿಮಾ

"ಭೂಮಿಯಲ್ಲಿನ ಈ ಜೀವನ ಸಾವಿನ ನಂತರದ ಉತ್ತಮ ಜೀವನಕ್ಕಾಗಿ ಎಂದು ನಾನು ಅರಿತೆ"

ಮನರಂಜನಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿದ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಸನಾ ಖಾನ್

ವಾರ್ತಾ ಭಾರತಿ : 9 Oct, 2020

Photo: twitter(@sanaak21)

ಹೊಸದಿಲ್ಲಿ : 'ಜೈ ಹೋ' ನಟಿ, ಬಿಗ್ ಬಾಸ್ ಸೀಸನ್ 6ರಲ್ಲಿ  ಭಾಗವಹಿಸಿದ್ದ ಸನಾ ಖಾನ್ (33) ತಾವು  ಮನರಂಜನಾ ಕ್ಷೇತ್ರವನ್ನು ಧಾರ್ಮಿಕ ಕಾರಣಗಳಿಗಾಗಿ ತೊರೆಯುತ್ತಿರುವುದಾಗಿ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ  ತಿಳಿಸಿದ್ದಾರೆ. ಹಲವಾರು ಚಲನಚಿತ್ರ ಹಾಗೂ ಟಿವಿ ಸರಣಿಗಳಲ್ಲೂ ಕಾಣಿಸಿಕೊಂಡಿದ್ದ ಸನಾ ಖಾನ್ ತಮಗೆ ಮನರಂಜನಾ ಕ್ಷೇತ್ರ ಖ್ಯಾತಿ, ಹೆಸರು, ಗೌರವ ಹಾಗೂ ಹಣವನ್ನು ಒದಗಿಸಿದ್ದರೂ ಸಂಪತ್ತು ಹಾಗೂ ಖ್ಯಾತಿ ಮಾತ್ರ ಜೀವನದ ಗುರಿಯಾಗಿರಬಾರದೆಂದು ತಾವು ಅರಿತಿರುವುದಾಗಿ ಹಾಗೂ ಇನ್ನು ಮುಂದೆ "ಮಾನವ ಜನಾಂಗದ ಸೇವೆಗೈಯ್ಯುವುದಾಗಿ ಹಾಗೂ ಸೃಷ್ಟಿಕರ್ತನ ಆದೇಶವನ್ನು ಪಾಲಿಸುವುದಾಗಿ,'' ಅವರು ಬರೆದಿದ್ದಾರೆ.

ಅವರ ಇನ್‍ಸ್ಟಾಗ್ರಾಂ ಪೋಸ್ಟ್ ನ ಕೆಲ ಮುಖ್ಯಾಂಶಗಳು ಇಂತಿವೆ, "ಇಂದು ನಾನು ನನ್ನ ಜೀವನದ ಅತ್ಯಂತ ಮಹತ್ವದ ಘಟ್ಟದಲ್ಲಿ ನಿಂತಿರುವಾಗ ನಿಮ್ಮ ಜತೆ ಮಾತನಾಡುತ್ತಿದ್ದೇನೆ. ನಾನು ವರ್ಷಗಳ ಕಾಲ ಈ ಶೋಬಿಝ್ (ಚಲನಚಿತ್ರರಂಗದ) ಭಾಗವಾಗಿದ್ದೆ ಹಾಗೂ ಈ ಸಂದರ್ಭ ನನಗೆ ಹೆಸರು, ಖ್ಯಾತಿ, ಹಣ ಎಲ್ಲವೂ ದೊರೆತಿದೆ. ಇದಕ್ಕಾಗಿ ನನ್ನ ಅಭಿಮಾನಿಗಳಿಗೆ ನಾನು ಆಭಾರಿಯಾಗಿದ್ದೇನೆ. ಆದರೆ ಹೆಸರು ಮತ್ತು ಶ್ರೀಮಂತಿಕೆಯನ್ನು ಬೆಂಬತ್ತುವುದ್ದಕ್ಕಷ್ಟೇ ಮನುಷ್ಯ ಈ ಭೂಮಿಗೆ ಬಂದಿದ್ದಾನೆಯೇ ಎಂಬ  ಪ್ರಶ್ನೆ ಕಾಡಿದೆ.  ಕಷ್ಟದಲ್ಲಿರುವವರಿಗೆ ಹಾಗೂ  ಅಸಹಾಯಕರ ಸೇವೆ ಮಾಡುವುದು ಕೂಡ ಮನುಷ್ಯನ ಕರ್ತವ್ಯವಲ್ಲವೇ? ಯಾವುದೇ ಕ್ಷಣ ನಾವು ಸಾಯಬಹುದಲ್ಲವೇ? ನಾವಿಲ್ಲದ ನಂತರ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಬಹಳ ಸಮಯದಿಂದ ಉತ್ತರ ಹುಡುಕುತ್ತಿದ್ದೇನೆ. ಭೂಮಿಯಲ್ಲಿನ ಈ ಜೀವನ ಸಾವಿನ ನಂತರದ ಉತ್ತಮ ಜೀವನಕ್ಕಾಗಿ ಎಂದು ನಾನು ಅರಿತೆ. ಆದುದರಿಂದ ಸೃಷ್ಟಿಕರ್ತನ ಆದೇಶದಂತೆ ಬದುಕಬೇಕು ಹಾಗೂ ಹಣ, ಹೆಸರು ಮಾತ್ರ ಗುರಿಯಾಗಬಾರದು. ಇಂದಿನಿಂದ ನಾನು ಈ ಮನರಂಜನಾ ಕ್ಷೇತ್ರಕ್ಕೆ ಖಾಯಂ ಆಗಿ ಗುಡ್ ಬೈ ಹೇಳಿ ಜನರ ಸೇವೆಯಲ್ಲಿ ತೊಡಗಿಕೊಂಡು ಸೃಷ್ಟಿಕರ್ತನ ಆದೇಶವನ್ನು ಪಾಲಿಸುತ್ತೇನೆ, ಇದು ನನ್ನ ಅತ್ಯಂತ ಸಂತೋಷದ ಕ್ಷಣ, ಈ ಪಯಣದಲ್ಲಿ ನನಗೆ ಅಲ್ಲಾಹ್  ಸಹಾಯ ಮತ್ತು ಮಾರ್ಗದರ್ಶನ ನೀಡಲಿ'' ಎಂದು ಅವರು ಬರೆದಿದ್ದಾರೆ.

ಆಕೆಯ ಈ ಪೋಸ್ಟ್ ಓದಿ ಚಿತ್ರರಂಗದ ಆಕೆಯ ಅನೇಕ ಸ್ನೇಹಿತರು ಹಾಗೂ ಆಕೆಯ ಅಭಿಮಾನಿಗಳು ಆಕೆಗೆ ಶುಭ ಹಾರೈಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)