varthabharthi


ಸಂಪಾದಕೀಯ

ರಾಜಕೀಯ ಸಾಧಕನ ಸಮಯ ಸಾಧಕತನ!

ವಾರ್ತಾ ಭಾರತಿ : 10 Oct, 2020

ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಕಟ್ಟುವ ಶಕ್ತಿಯಿದ್ದೂ, ಅಂತಿಮವಾಗಿ ತಮ್ಮ ಹೋರಾಟವನ್ನು ಸಣ್ಣ ಬೆಲೆಗೆ ಮಾರಿ, ಅಡ್ಡದಾರಿಯ ಮೂಲಕ ಸಚಿವರಾಗಿ ರಾಜಕೀಯವಾಗಿ ಮುಗಿದು ಹೋದ ಹಲವು ನಾಯಕರು ನಮ್ಮ ಮುಂದಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಅವರನ್ನು ಈ ಸಂದರ್ಭದಲ್ಲಿ ನಾವು ನೆನೆಯಬಹುದು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ಫೆರ್ನಾಂಡಿಸ್, ಮುಂಬೈಯ ಕಾರ್ಮಿಕ ಚಳವಳಿಯ ಮೂಲಕ ವಿಸ್ಮಯ ಹುಟ್ಟಿಸುವಂತೆ ಬೆಳೆದರು. ಆದರೆ ತನ್ನೆಲ್ಲ ಸಿದ್ಧಾಂತ, ಚಿಂತನೆಗಳನ್ನು ವಾಜಪೇಯಿ ನೇತೃತ್ವದ ಸರಕಾರದ ಸಚಿವ ಸ್ಥಾನಕ್ಕಾಗಿ ಕೈ ಬಿಟ್ಟರು. ಫೆರ್ನಾಂಡಿಸ್‌ರಂತಹ ನಾಯಕರು ಎನ್‌ಡಿಎ ಸರಕಾರವನ್ನು ಬಳಸಿಕೊಂಡು, ಈ ದೇಶದ ಜಾತ್ಯತೀತ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಾರೆ ಎಂದು ಹಲವರು ಭಾವಿಸಿದ್ದರು. ಆದರೆ ಅಂತಿಮವಾಗಿ ಬಿಜೆಪಿಯೇ ಫೆರ್ನಾಂಡಿಸ್‌ರನ್ನು ಬಳಸಿ, ಎಸೆಯಿತು.

ಫೆರ್ನಾಂಡಿಸ್‌ರಂತಹ ನಾಯಕರು ಎನ್‌ಡಿಎ ಜೊತೆಗೆ ಕೈ ಜೋಡಿಸಿದ್ದರಿಂದ, ಎನ್‌ಡಿಎ ಮಾತ್ರವಲ್ಲ, ಬಿಜೆಪಿ ಕೂಡ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿತು. ಅಂತಿಮವಾಗಿ ಅವರ ರಾಜಕೀಯ ಬದುಕು ಬಿಜೆಪಿ ಹಾಕಿದ ಸಚಿವ ಸ್ಥಾನದ ಭಿಕ್ಷೆಯಿಂದಲೇ ಸಂತೃಪ್ತಿಗೊಂಡಿತು. ಜೊತೆಗೆ ಬಿಜೆಪಿಯ ಭ್ರಷ್ಟಾಚಾರದ ಕಳಂಕವನ್ನು ಅವರು ಮೈತುಂಬಾ ಅಂಟಿಸಿಕೊಂಡರು. ಗುಜರಾತ್ ದಂಗೆಯ ಸಂದರ್ಭದಲ್ಲಿ ಫೆರ್ನಾಂಡಿಸ್ ವೌನ ಪಾಲಿಸಿ, ಆ ರಕ್ತದಲ್ಲೂ ಪಾಲುದಾರರಾದರು. ಅಂತಿಮವಾಗಿ, ಯಾರಿಗೂ ಸಲ್ಲದವರಾಗಿ ರಾಜಕೀಯದ ಕಸದ ಬುಟ್ಟಿ ಸೇರಿದರು. ಇದೀಗ ದಲಿತ ನಾಯಕರೆಂದು ಕರೆಸಿಕೊಳ್ಳುತ್ತಿದ್ದ ರಾಮ್ ವಿಲಾಸ್ ಪಾಸ್ವಾನ್ ನಮ್ಮ ನಡುವಿನಿಂದ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಜಕೀಯ ನಾಯಕರಾಗಿ ಹೊರಹೊಮ್ಮಿದ್ದ ರಾಮ್ ವಿಲಾಸ್ ಪಾಸ್ವಾನ್, ಬಿಹಾರದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಸಂಘಟಿಸಿ ಪರ್ಯಾಯ ಶಕ್ತಿಯಾಗುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಆರ್‌ಜೆಡಿಯನ್ನು ಮಟ್ಟ ಹಾಕಲು ಸಾಧ್ಯವಾಗದೆ, ಹೇಗಾದರೂ ಸರಿ, ಅಧಿಕಾರ ಹಿಡಿಯಲೇಬೇಕು ಎನ್ನುವುದನ್ನೇ ರಾಜಕೀಯ ಸಿದ್ಧಾಂತವಾಗಿಸಿಕೊಂಡು ಅಂತಿಮವಾಗಿ ಗಾಳಿ ಬಂದತ್ತ ತೂರತೊಡಗಿದರು.

ಕಾಂಗ್ರೆಸ್ ವಿರುದ್ಧ ಬಂಡೆದ್ದು ಜನತಾದಳವನ್ನು ಸಂಘಟಿಸಿ ವಿ.ಪಿ. ಸಿಂಗ್ ಈ ದೇಶದ ಪ್ರಧಾನಿಯಾದಾಗ ಅಲ್ಲಿ ಕಾರ್ಮಿಕ ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡರು. ದೇವೇಗೌಡರ ನೇತೃತ್ವದ ಸರಕಾರದಲ್ಲಿ ಯೂ ಅವರು ಅವಕಾಶ ಗಿಟ್ಟಿಸಿಕೊಂಡರು. ದೇವೇಗೌಡರು ಕೆಳಗಿಳಿದು ಗುಜ್ರಾಲ್ ಪ್ರಧಾನಿಯಾದಾಗಲೂ ಇವರು ಸಚಿವರಾಗಿಯೇ ಉಳಿದರು. ಅಂತಿಮವಾಗಿ ಬಿಜೆಪಿ ಅಧಿಕಾರ ಹಿಡಿದಾಗ ಅಲ್ಲೂ ಕಾಣಿಸಿಕೊಂಡರು. ವಾಜಪೇಯಿ ಸರಕಾರದಲ್ಲಿ ಅವರು ಕಲ್ಲಿದ್ದಲು, ಗಣಿ ಇಲಾಖೆ ಸಚಿವರಾದರು. ಆ ಬಳಿಕ ವಾಜಪೇಯಿ ಸರಕಾರ ಬಿದ್ದು ಕಾಂಗ್ರೆಸ್ ಅಧಿಕಾರ ಹಿಡಿದಾಗ ಎನ್‌ಡಿಎಯಿಂದ ಯುಪಿಎಗೆ ವಾಪಸಾಗಿ ಮತ್ತೆ ಕ್ಯಾಬಿನೆಟ್ ಸಚಿವರಾದರು. ಅಂತಿಮವಾಗಿ, ಮೋದಿ ಸರಕಾರವನ್ನು ಸೇರಿಕೊಂಡು, ಸಾಧಕನಾಗಬೇಕಾದರೆ ಸಮಯ ಸಾಧಕನಾಗಬೇಕು ಎನ್ನುವ ರಾಜಕೀಯ ಸಿದ್ಧಾಂತಕ್ಕೆ ಪೂರ್ಣವಾಗಿ ಬದ್ಧರಾದರು.

ದುರ್ಬಲ ಸಮುದಾಯಕ್ಕೆ ಸೇರಿದ ನಾಯಕರು, ಅದರಲ್ಲೂ ದಲಿತರು ಆಳುವ ಸ್ಥಾನವನ್ನು ತನ್ನದಾಗಿಸಿಕೊಳ್ಳುವುದು ಈ ದೇಶದಲ್ಲಿ ಅಷ್ಟು ಸುಲಭವಿಲ್ಲ ಎನ್ನುವುದೇನೋ ನಿಜ. ಅಂತಹ ಸಂದರ್ಭದಲ್ಲಿ, ಹತ್ತು ಹಲವು ರಾಜಕೀಯ ತಂತ್ರಗಳ ಮೂಲಕ ಹೆಜ್ಜೆಯಿಡಬೇಕಾಗುತ್ತದೆ. ಮಾಯಾವತಿ, ಪಾಸ್ವಾನ್, ಅಠವಳೆಯಂತಹ ನಾಯಕರದು ಅಧಿಕಾರ ಹಿಡಿಯಲು ಅನುಸರಿಸಿದ 'ರಾಜಕೀಯ ತಂತ್ರ'ವೆಂದು ಹಲವರು ವ್ಯಾಖ್ಯಾನಿಸುವುದಿದೆ. ಅಂತಹ ತಂತ್ರಗಳ ಮೂಲಕ ಅಧಿಕಾರ ಹಿಡಿದು, ಸರಕಾರವನ್ನು ಶೋಷಿತ ಸಮುದಾಯದ ಪರವಾಗಿ ಆಡಳಿತ ನಡೆಸುವಂತೆ ನಿಯಂತ್ರಿಸುವ ಶಕ್ತಿಯನ್ನು ಇವರು ತನ್ನದಾಗಿಸಿಕೊಂಡಿದ್ದರೆ ಆ ವ್ಯಾಖ್ಯಾನವನ್ನು ಒಪ್ಪಿಕೊಳ್ಳಬಹುದು. ತಮ್ಮ ಬೆನ್ನಿಗಿರುವ ದಲಿತ ಶಕ್ತಿಯನ್ನು ಬಳಸಿಕೊಂಡು, ಸರಕಾರದೊಳಗೆ ನುಸುಳಿ, ಪ್ರಭುತ್ವವನ್ನು ಶೋಷಿತರ ಪರವಾಗಿ ಬದಲಾಯಿಸುವುದಾದರೆ ಆ ತಂತ್ರಗಾರಿಕೆಯನ್ನು ಗೌರವಿಸಬೇಕು ಕೂಡ. ಆದರೆ ಜಾರ್ಜ್ ಫೆರ್ನಾಂಡಿಸ್‌ರಿಂದ ಹಿಡಿದು, ಪಾಸ್ವಾನ್‌ವರೆಗೆ ನಡೆದದ್ದೇ ಬೇರೆ. ಬಿಜೆಪಿಯನ್ನು ಈ ಸಮಾಜವಾದಿ ನಾಯಕರು ಬಳಸಿಕೊಳ್ಳುವ ಬದಲು, ಬಿಜೆಪಿಯೊಳಗಿರುವ ಸಂಘಪರಿವಾರ ನಾಯಕರು ಈ ಸಮಾಜವಾದಿ ನಾಯಕರನ್ನು ತಮಗೆ ಪೂರಕವಾಗಿ ಬಳಸಿಕೊಂಡರು.

ಸಮಾಜವಾದಿ ನಾಯಕರನ್ನು ಬಳಸಿಕೊಂಡೇ ಬಿಜೆಪಿ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಟ್ಟಿತು. ಬಹುಶಃ ತುರ್ತುಪರಿಸ್ಥಿತಿಯ ಹೋರಾಟದ ದಿನಗಳಲ್ಲೇ ಸಂಘಪರಿವಾರ ಈ ತಂತ್ರವನ್ನು ಅನುಸರಿಸಿಕೊಂಡು ಬಂದಿತ್ತು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುವ ನೆಪದಲ್ಲಿ ಜಯಪ್ರಕಾಶ್ ನಾರಾಯಣ್ ಜೊತೆಗೆ ಸಂಘಪರಿವಾರ ಗುರುತಿಸಿಕೊಂಡಿತು. ಆ ವರೆಗೆ ಗಾಂಧಿಯನ್ನು ಕೊಂದ ಕಳಂಕದಿಂದಾಗಿ ಸಾರ್ವಜನಿಕವಾಗಿ ಗುರುತಿಸಲು ಮುಜುಗರ ಪಡುತ್ತಿದ್ದ ಆರೆಸ್ಸೆಸ್, ಜೆಪಿ ಚಳವಳಿಯ ಮೂಲಕ ಮತ್ತೆ ದೇಶಾದ್ಯಂತ ಮುನ್ನೆಲೆಗೆ ಬಂತು. ಆದರೂ ರಾಜಕೀಯ ಪಕ್ಷವಾಗಿ ಅದು ಬೆಳೆದದ್ದು ಅಡ್ವಾಣಿಯ ರಕ್ತಸಿಕ್ತ ರಥಯಾತ್ರೆಯ ಮೂಲಕ. ಆ ರಕ್ತದ ಜೊತೆಗೆ ಗುರುತಿಸಲು ಪ್ರಗತಿಪರ, ಜೀವಪರ ಮನಸ್ಸುಗಳು ಹಿಂಜರಿಯುತ್ತಿದ್ದಾಗ, ಸಚಿವ ಸ್ಥಾನದ ಆಸೆಗಾಗಿ ಜಾರ್ಜ್ ಫೆರ್ನಾಂಡಿಸ್ ಸಹಿತ ಹಲವು ಸಮಾಜವಾದಿ ನಾಯಕರು ಬಿಜೆಪಿಯ ಜೊತೆಗೆ ಕೈ ಜೋಡಿಸಿದರು. ಈ ಸಮಾಜವಾದಿ ನಾಯಕರನ್ನು ಜೊತೆಗಿಟ್ಟುಕೊಂಡೇ ಬಿಜೆಪಿ ಮತ್ತು ಸಂಘಪರಿವಾರ ಜನವಿರೋಧಿ, ದಲಿತ ವಿರೋಧಿ ನೀತಿಗಳನ್ನು ಜಾರಿಗೊಳಿಸತೊಡಗಿತು.

ದಲಿತ ಸಮುದಾಯದಿಂದ ಬಂದ ರಾಷ್ಟ್ರಪತಿಯ ಕೈಯಲ್ಲೇ ಹಲವು ದಲಿತ ವಿರೋಧಿ ನೀತಿಗಳಿಗೆ ಸಹಿ ಹಾಕಿಸಿಕೊಂಡಿತು. ಪಾಸ್ವಾನ್‌ರಂತಹ ನಾಯಕರು ಕೇಂದ್ರ ಸರಕಾರದಲ್ಲಿರುವಾಗಲೂ ದಲಿತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಬಿಜೆಪಿಗೆ ಯಾವ ಅಡ್ಡಿಯೂ ಆಗಲಿಲ್ಲ. ಬದಲಿಗೆ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅಠವಳೆ, ಪಾಸ್ವಾನ್‌ರಂತಹ ನಾಯಕರನ್ನು ಬಿಜೆಪಿ ಬಳಸಿಕೊಂಡಿತು. ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಬೇಕಾಗಿದ್ದ ಪಾಸ್ವಾನ್, ಸರಕಾರದ ಪರವಾಗಿ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡಿದರು. ಅಂದರೆ, ತನ್ನ ಬೆನ್ನಿಗಿರುವ ದಲಿತ ಶಕ್ತಿಯನ್ನು ಅವರು ಅಧಿಕೃತವಾಗಿ ಅತಿ ಸಣ್ಣ ಬೆಲೆಗೆ ಬಿಜೆಪಿಗೆ ಮಾರಿಬಿಟ್ಟಿದ್ದರು. ಬೆರಳೆಣಿಕೆಯ ಸ್ಥಾನಗಳನ್ನು ಬಿಹಾರದಲ್ಲಿ ತನ್ನದಾಗಿಸಿಕೊಂಡಿರುವ ಪಾಸ್ವಾನ್, ಅದನ್ನೇ ಜೊತೆಗಿಟ್ಟುಕೊಂಡು ಬೇರೆ ಬೇರೆ ಸರಕಾರಗಳ ಜೊತೆಗೆ ಕೈ ಜೋಡಿ ಮಂತ್ರಿಯಾಗಿ ತನ್ನ ಕುಟುಂಬವನ್ನಷ್ಟೇ ಉದ್ದರಿಸಿದರು.

ಕನಿಷ್ಟ ದಲಿತ ಸಮುದಾಯದ ಏಳಿಗೆಯ ಬಗ್ಗೆಯೂ ಅವರು ಚಿಂತಿಸಲಿಲ್ಲ. ಈ ನಿಟ್ಟಿನಲ್ಲಿ ಕಾನ್ಶೀರಾಂ ನಮಗೆ ಮಾದರಿಯಾಗಬೇಕು. ಬಹುಜನಸಮಾಜವನ್ನೇ ಒಗ್ಗೂಡಿಸಿ, ಅವರನ್ನು ರಾಜಕೀಯ ಶಕ್ತಿಯನ್ನಾಗಿಸಿ ಉತ್ತರ ಪ್ರದೇಶದಲ್ಲಿ ದಲಿತ ನಾಯಕಿಯೊಬ್ಬಳು ಮುಖ್ಯಮಂತ್ರಿಯಾಗುವಂತೆ ಅವರು ನೋಡಿಕೊಂಡರು. ಆದರೆ ಕಾನ್ಶೀರಾಂ ಕಟ್ಟಿದ ಕೋಟೆಯನ್ನು ಆಳಿದ ಮಾಯಾವತಿ ಬಹುಜನ ಸಮಾಜದ ವಿಶ್ವಾಸವನ್ನು ಹಂತಹಂತವಾಗಿ ಕಳೆದುಕೊಂಡು, ಇದೀಗ ಯಾವ ದಾರಿಯಲ್ಲಾದರೂ ಸರಿ, ಅಧಿಕಾರ ಹಿಡಿಯಬೇಕು ಎನ್ನುವ ರಾಜಕೀಯ ತಂತ್ರಗಳಿಗೆ ಮೊರೆ ಹೋದಂತಿದೆ. ಈ ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಪರಾಕಾಷ್ಠೆ ತಲುಪಿರುವ ಸಂದರ್ಭದಲ್ಲಿ ಅವರು ತಳೆದಿರುವ ವೌನವೇ ಎಲ್ಲವನ್ನೂ ಹೇಳುತ್ತದೆ. ಇಂತಹ ಸಮಯಸಾಧಕತನ ರಾಜಕೀಯದ ಮಧ್ಯೆ, ಮತ್ತೆ ಬಹುಜನರನ್ನು ಒಗ್ಗೂಡಿಸಿ ಚಳವಳಿ, ಹೋರಾಟಗಳ ದಾರಿ ಹಿಡಿದಿರುವ ದಲಿತ, ಅಲ್ಪಸಂಖ್ಯಾತ, ಶೂದ್ರ ಸಮುದಾಯದ ಹೊಸ ಯುವಕರು ಭಾರತಕ್ಕೆ ಅಳಿದುಳಿದ ಭರವಸೆಯಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)