varthabharthi


ಸಂಪಾದಕೀಯ

ಕೊರೋನ ಕಾಲದಲ್ಲಿ ಹಬ್ಬಗಳ ಹಿರಿಮೆಗಳನ್ನು ಹೆಚ್ಚಿಸುವ ಬಗೆ

ವಾರ್ತಾ ಭಾರತಿ : 13 Oct, 2020

ಈ ದೇಶದಲ್ಲಿ ಹಬ್ಬಗಳು ಕೇವಲ ಸಂಭ್ರಮಗಳಾಗಿ ಮಾತ್ರ ಉಳಿದುಕೊಂಡಿಲ್ಲ. ಹಬ್ಬಗಳು ಯಾವಾಗ ಬರುತ್ತವೆೆ ಎಂದು ಸಂಭ್ರಮದಿಂದ ನಿರೀಕ್ಷಿಸುವವರಿಗಿಂತ ಈ ಹಬ್ಬಗಳು ಒಮ್ಮೆ ಮುಗಿದರೆ ಸಾಕು ಎಂದು ಗೊಣಗಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಬದುಕಿನ ವೌಲ್ಯಗಳನ್ನು ಎತ್ತಿ ಹಿಡಿದು, ಮನುಷ್ಯನನ್ನು ನವೀಕರಿಸಬೇಕಾದ ಹಬ್ಬಗಳು ಇಂದು ಮನುಷ್ಯ ಮನುಷ್ಯರ ನಡುವೆ ಅಸಮಾಧಾನಗಳನ್ನು, ದ್ವೇಷಗಳನ್ನು ಹುಟ್ಟಿಸಿ ಹಾಕಲು ಬಳಸಲ್ಪಡುತ್ತಿವೆ. ಹಬ್ಬಗಳು ಖಾಸಗಿ ಬದುಕಿನ ಭಾಗವಾಗದೇ, ಸಾರ್ವಜನಿಕ ಆಚರಣೆಯಾದಾಗ ಅವು ರಾಜಕೀಯಗೊಳ್ಳುತ್ತವೆ. ಯಾವಾಗ ಹಬ್ಬಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತದೆಯೋ ಆಗ ಅವು ಸಮಾಜವನ್ನು ಸದೃಢಗೊಳಿಸುವ ಬದಲಿಗೆ ದುರ್ಬಲಗೊಳಿಸುತ್ತವೆ. ಆದುದರಿಂದಲೇ, ಗಣೇಶೋತ್ಸವ-ರಮಝಾನ್ ಜೊತೆ ಜೊತೆಯಾಗಿ ಕಾಲಿಟ್ಟಾಗ, ಪೊಲೀಸ್ ಇಲಾಖೆ ಒಮ್ಮೆಲೆ ಚುರುಕಾಗುತ್ತದೆ. ‘ಶಾಂತಿ ಸಭೆ’ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಬೀದಿಯಲ್ಲಿ ಪೊಲೀಸರ ಸಂಖ್ಯೆ ಎಂದಿಗಿಂತ ಹೆಚ್ಚುತ್ತದೆ. ಹಬ್ಬಗಳು ಸಾರ್ವಜನಿಕಗೊಳ್ಳುವುದರಿಂದ ಪರಿಸರ ಮಾಲಿನ್ಯ ಇನ್ನೊಂದು ಬಹುದೊಡ್ಡ ಸಮಸ್ಯೆೆ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನಮ್ಮ ಕೆರೆಗಳು, ನದಿಗಳು ದೈನೇಸಿ ಸ್ಥಿತಿಯನ್ನು ತಲುಪಿರುತ್ತವೆ. ಗಣೇಶ ವಿಗ್ರಹಗಳನ್ನು ನಿರ್ಮಿಸಲು ಬಳಸಿರುವ ರಾಸಾಯನಿಕಗಳು ಜಲಚರಗಳ ಸಾವಿಗೆ ಕಾರಣವಾಗುತ್ತವೆ. ಗಣೇಶ ವಿಗ್ರಹಗಳನ್ನು ವಿಸರ್ಜಿಸಿದ ಕೆರೆಗಳನ್ನು ಶುದ್ಧೀಕರಿಸುವುದಕ್ಕಾಗಿಯೇ ಸರಕಾರ ಪ್ರತಿವರ್ಷ ಹಲವು ಕೋಟಿ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ. ಈ ಕಾರಣದಿಂದ ಗಣೇಶೋತ್ಸವ ಆಗಮಿಸುತ್ತಿದ್ದಂತೆಯೇ ಪ್ರತಿವರ್ಷ ಜಿಲ್ಲಾಡಳಿತಗಳು ಎಚ್ಚರಿಕೆಯ ಆದೇಶಗಳನ್ನು ನೀಡುತ್ತವೆ. ಗಣೇಶನೇ ಪ್ರಕೃತಿಯ ಪ್ರತಿರೂಪ. ಆತನ ಹಬ್ಬವನ್ನು ಆಚರಿಸುವಾಗ ಪ್ರಕೃತಿಗೆ ಹಾನಿಯಾಗದಂತೆ ನೋಡಿಕೊಂಡು, ಪ್ರಕೃತಿಗೆ ಪೂರಕವಾದ ರೀತಿಯಲ್ಲಿ ಆಚರಿಸುವುದು ನಮ್ಮ ಹೊಣೆಗಾರಿಕೆ. ಆ ಮೂಲಕ ಆ ಹಬ್ಬದ ಹಿರಿಮೆಯನ್ನು ನಾವು ಎತ್ತಿ ಹಿಡಿಯಬೇಕು. ಆದರೆ ಪ್ರತಿಷ್ಠೆಯ ಜಿದ್ದಿಗೆ ಬಿದ್ದು ಹಬ್ಬದ ವೌಲ್ಯಗಳಿಗೆ ಧಕ್ಕೆಯನ್ನು ತರುತ್ತೇವೆ. ಅಕ್ಟೋಬರ್ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆಗಮಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ದೀಪಾವಳಿ. ಈ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷ ಪರಿಸರ ಮಾಲಿನ್ಯ ಚರ್ಚೆಗೀಡಾಗುತ್ತದೆ. ದೀಪಾವಳಿಯೆಂದರೆ ಹಣತೆಗಳ ಹಬ್ಬ. ಬೆಳಕು ಇಲ್ಲಿ ಪ್ರಧಾನವೇ ಹೊರತು, ಗಿವಿಗಡಚಿಕ್ಕುವ ಶಬ್ದಗಳಲ್ಲ. ಸರಕಾರ ‘ಹಣತೆಗಳ ಮೂಲಕ ಹಬ್ಬ ಆಚರಿಸಿ’ ಎಂದು ಮನವಿ ಮಾಡುತ್ತಲೇ ಬಂದಿದೆಯಾದರೂ, ಜನರು ಅದಕ್ಕೆ ಗಿವಿಗೊಡದೆ ಪಟಾಕಿಗಳನ್ನು ಸಿಡಿಸುವ ಮೂಲಕ ವಾಯುಮಾಲಿನ್ಯ, ಶಬ್ದ ಮಾಲಿನ್ಯಗಳಿಂದ ದೀಪಾವಳಿಯ ಬೆಳಕಿನ ಮಹತ್ವವನ್ನು ಕುಗ್ಗಿಸುತ್ತಾ ಬಂದಿದ್ದಾರೆ.

ಕೊರೋನ ಸಂದರ್ಭದಲ್ಲಿ ಹಬ್ಬಗಳನ್ನು ಆಚರಿಸುವ ನಮ್ಮ ಮುಂದೆ ಇನ್ನಷ್ಟು ಹೊಣೆಗಾರಿಕೆಗಳಿವೆ. ಈಗಾಗಲೇ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಹಬ್ಬದ ಸಂದರ್ಭದಲ್ಲಿ ಮಾರ್ಗ ಸೂಚಿಗಳನ್ನು ಪಾಲಿಸಲು ಕರೆ ನೀಡಿದ್ದಾರೆ. ಅಷ್ಟೇ ಅಲ್ಲ ‘‘ಕೊರೋನದಂತಹ ಸಾಂಕ್ರಾಮಿಕ ರೋಗಗಳು ಜಗತ್ತನ್ನು ಕಂಗೆಡಿಸುತ್ತಿರುವ ಈ ಸಂದರ್ಭದಲ್ಲಿ ಯಾವ ದೇವರೂ ಆಡಂಬರವನ್ನು ಮೆಚ್ಚಲಾರ’’ ಎಂದಿದ್ದಾರೆ. ‘‘ಜೀವವನ್ನು ಪಣಕ್ಕಿಟ್ಟು ಹಬ್ಬಗಳನ್ನು ಆಚರಿಸಬೇಡಿ’’ ಎಂದೂ ಅವರು ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿ ಮೀಲಾದುನ್ನಬಿ, ನವರಾತ್ರಿ, ದೀಪಾವಳಿಗಳನ್ನು ಆಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಹಲವರು ಸರಕಾರವನ್ನು ಮನವಿ ಮಾಡಿದ್ದಾರೆ. ಕೆಲವರು ಹಬ್ಬಗಳನ್ನು ಆಚರಿಸುವುದನ್ನು ‘ಪ್ರತಿಷ್ಠೆ’ಯಾಗಿ ತೆಗೆದುಕೊಂಡಿದ್ದಾರೆ. ಇದರ ಹಿಂದೆ ಕೆಲವು ಸ್ಥಾಪಿತ ಹಿತಾಸಕ್ತಿಗಳೂ ಕೆಲಸ ಮಾಡುತ್ತಿವೆ. ಈ ಹಿಂದೆ ಕೊರೋನ ಸಂದರ್ಭದಲ್ಲಿ ರಮಝಾನ್, ಬಕ್ರೀದ್ ಹಬ್ಬಗಳನ್ನು ಮನೆಯಲ್ಲೇ ಆಚರಿಸಿ ಮುಸ್ಲಿಮರು ಮಾದರಿಯನ್ನು ಮೆರೆದಿದ್ದಾರೆ. ಸರಕಾರವೂ ಈ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ರಮಝಾನ್ ಹಬ್ಬದ ಸಂದರ್ಭದಲ್ಲಿ ನಮಾಝಿಗೂ ಮಸೀದಿಗೆ ಕಾಲಿಡದೆ ಕೊರೋನ ಜಾಗೃತಿಯನ್ನು ಮೆರೆದಿದ್ದಾರೆ. ಜೊತೆಗೆ, ಹಬ್ಬವನ್ನು ಇನ್ನೊಬ್ಬರಿಗೆ ನೆರವು ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ. ರಮಝಾನ್, ಮೀಲಾದುನ್ನಬಿ, ನವರಾತ್ರಿ, ದೀಪಾವಳಿ ಮೊದಲಾದ ಹಬ್ಬಗಳನ್ನು ಆಚರಿಸುವುದು ಮನುಕುಲದ ಉದ್ಧಾರಕ್ಕಾಗಿ. ಆದರೆ ಹಬ್ಬಗಳಿಂದಲೇ ಕೊರೋನ ರೋಗ ಇನ್ನಷ್ಟು ಉಲ್ಬಣಿಸಿದರೆ, ಆ ಹಬ್ಬಗಳು ಪ್ರತಿಪಾದಿಸುವ ಸಂದೇಶಗಳಿಗೆ ನಾವು ಅಗೌರವವನ್ನು ತಂದುಕೊಟ್ಟಂತಾಗುತ್ತದೆ. ಅದು ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದಂತೆ. ಇದರ ಅರ್ಥ ಹಬ್ಬಗಳನ್ನು ಆಚರಿಸಬಾರದು ಎಂದಲ್ಲ. ಎಲ್ಲರೂ ತಮ್ಮ ತಮ್ಮ ಕುಟುಂಬ ಸಮೇತ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಲೂ ಅವಕಾಶವಿದೆ. ದೀಪಾವಳಿಯಲ್ಲಿ ಪಟಾಕಿಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎನ್ನುವುದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಯಾಕೆಂದರೆ, ಕೊರೋನ ಮತ್ತು ಉಸಿರಾಟದ ತೊಂದರೆಗೆ ನೇರ ಸಂಬಂಧವಿದೆ. ಪಟಾಕಿಯ ಗಂಧಕ ಹೊಗೆ ಅನಾರೋಗ್ಯ ಪೀಡಿತರಿಗೆ ಇನ್ನಷ್ಟು ಹಾನಿಯನ್ನುಂಟು ಮಾಡಬಹುದು. ಆದುದರಿಂದ ಹಣತೆಗಳನ್ನು ಮಾತ್ರ ಹಚ್ಚಿ, ಲೋಕಕಲ್ಯಾಣಕ್ಕಾಗಿ ನಾವೆಲ್ಲರೂ ಪ್ರಾರ್ಥಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಸುಟ್ಟು ಬೂದಿಯಾಗುವ, ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪಟಾಕಿಗೆ ತೆರುವ ಹಣವನ್ನು ನಾವು ಕೊರೋನ ಸಂತ್ರಸ್ತರಿಗೆ ವ್ಯಯಿಸಿ ಹಬ್ಬಗಳನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳುವ ಅವಕಾಶವಿದೆ. ಕೊರೋನ ಲಾಕ್‌ಡೌನ್ ಕಾರಣದಿಂದಾಗಿ ಲಕ್ಷಾಂತರ ಜನರು ಬೀದಿಗೆ ಬಿದ್ದಿದ್ದಾರೆ. ಆಹಾರ, ಔಷಧಿಗಳಿಗೆ ಹಣವಿಲ್ಲದೆ ಕಂಗಾಲಾಗಿದ್ದಾರೆ. ಹಸಿವು ಜಾಗತಿಕ ಸಮಸ್ಯೆಯಾಗಿ ವ್ಯಾಪಿಸುತ್ತಿದೆ. ಹೀಗಿರುವಾಗ ನಾವು ಹಬ್ಬದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದು ಅಪರಾಧ. ಆ ಹಣವನ್ನು ಬಡವರಿಗೆ ತಲುಪಿಸುವ ಕೆಲಸ ನಾವು ಮಾಡಬೇಕಾಗಿದೆ. ಬಡವರ ಕಣ್ಣುಗಳಲ್ಲಿ ಬೆಳಗುವ ಸಂತೋಷಗಳೇ ನಾವು ಈ ಬಾರಿ ದೀಪಾವಳಿಯ ದಿನ ಹಚ್ಚುವ ಹಣತೆಗಳಾಗಿವೆ. ಇದೇ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣಗಳು ಲಕ್ಷಾಂತರ ಬಡಮಕ್ಕಳನ್ನು ಶಿಕ್ಷಣವಂಚಿತರನ್ನಾಗಿಸಿದೆ. ಶ್ರೀಮಂತರು, ಮಧ್ಯಮವರ್ಗದ ಜನರನ್ನಷ್ಟೇ ಈ ಅವಧಿಯಲ್ಲಿ ಆನ್‌ಲೈನ್ ಶಿಕ್ಷಣ ತಲುಪುತ್ತಿದೆ. ಬಡವರು ಮೊಬೈಲ್ ಇಲ್ಲದೆ ಪರದಾಡುವಂತಾಗಿದೆ. ಹಲವು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಬಾರಿ, ಅದ್ದೂರಿ ಹಬ್ಬದ ಹಣವನ್ನು ಅಂತಹ ಮಕ್ಕಳಿಗೆ ಮೊಬೈಲ್ ಇನ್ನಿತರ ಸವಲತ್ತುಗಳನ್ನು ಒದಗಿಸುವುದಕ್ಕೆ ಬಳಸಬೇಕು. ಮೀಲಾದುನ್ನಬಿ ಕಾರ್ಯಕ್ರಮದ ಹೆಸರಲ್ಲಿ ಅನಗತ್ಯ ಮೆರವಣಿಗೆಗಳನ್ನು, ಸಮಾವೇಶಗಳನ್ನು ಹಮ್ಮಿಕೊಳ್ಳದೆ ಅದಕ್ಕೆ ಬಳಸುವ ಹಣವನ್ನು ಪ್ರವಾದಿ ಮುಹಮ್ಮದರ ಹೆಸರಿನಲ್ಲಿ ಬಡಮಕ್ಕಳ ಸಹಾಯಕ್ಕಾಗಿ ವಿನಿಯೋಗಿಸಬೇಕು. ಪ್ರವಾದಿಯ ಹುಟ್ಟು ದಿನ ಈ ಮೂಲಕ ಇನ್ನಷ್ಟು ಅರ್ಥಪೂರ್ಣವಾಗಲಿದೆ. ಸಾಂಕ್ರಾಮಿಕ ರೋಗಗಳು ಬಂದಾಗ ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಪ್ರವಾದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರವಾದಿಯ ಹುಟ್ಟುದಿನವನ್ನು ಆಚರಿಸುವ ಸಂದರ್ಭದಲ್ಲಿ, ಅದು ಕೊರೋನ ಹಬ್ಬಲು ಕಾರಣವಾದರೆ, ನಾವೇ ಪ್ರವಾದಿಯವರ ವೌಲ್ಯಗಳಿಗೆ ಅಪಚಾರ ಎಸಗಿದಂತಾಗುತ್ತದೆ. ಆದುದರಿಂದ, ಮಾನವೀಯತೆಯನ್ನು ಮೆರೆಯುವುದೇ ಕೊರೋನ ಕಾಲದ ಹಬ್ಬಗಳ ನಿಜವಾದ ಸಂಭ್ರಮವಾಗಲಿ. ಆ ಮೂಲಕ ನಾವು ಹಬ್ಬಗಳ ಹಿರಿಮೆಗಳನ್ನು ಹೆಚ್ಚಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)