varthabharthi


ಕರ್ನಾಟಕ

ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಆರೋಪ: ನಟಿ ಕಂಗನಾ ವಿರುದ್ಧ ತುಮಕೂರಿನಲ್ಲಿ ಎಫ್ಐಆರ್

ವಾರ್ತಾ ಭಾರತಿ : 13 Oct, 2020

ತುಮಕೂರು, ಸೆ,13: ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರು ಕರೆದ ಆರೋಪ ಹೊತ್ತಿರುವ ನಟಿ ಕಂಗನಾ ರಾಣಾವತ್ ವಿರುದ್ಧ ನ್ಯಾಯಾಲಯದ ಆದೇಶದಂತೆ ಎಫ್ಐಆರ್ ದಾಖಲಾಗಿದೆ.

ಸೆಪ್ಟೆಂಬರ್ 21 ರಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ತನ್ನ ಟ್ವೀಟರ್ ಖಾತೆಯಲ್ಲಿ ರೈತರನ್ನು ಭಯೋತ್ಪಾದಕರೆಂದು ಕರೆದಿದ್ದರು. ಇದರ ವಿರುದ್ಧ ತುಮಕೂರು ತಾಲೂಕಿನ ಕದರನಹಳ್ಳಿ ತಾಂಡಾದ ವಕೀಲ ರಮೇಶ್ ನಾಯಕ್ ಮೊದಲು ಡಿಜಿ ಮತ್ತು ಐಜಿ ಅವರಿಗೆ ಇಮೇಲ್ ನಲ್ಲಿ ದೂರು ಸಲ್ಲಿಸಿದರು. ಆದರೆ ಪೊಲಿಸ್ ಅಧಿಕಾರಿಗಳು ದೂರು ದಾಖಲಿಸದ ಹಿನ್ನೆಲೆಯಲ್ಲಿ ಸ್ಥಳೀಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಐಪಿಸಿ ಕಲಂ 153(ಎ),504,108 ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದರು.

ತುಮಕೂರಿನ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿನೋದ ಬಾಲ ನಾಯಕ್ ಅವರು ನಟಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಲು ಅಕ್ಟೋಬರ್ 9ರ ಶುಕ್ರವಾರ ಸಂಜೆ ಆದೇಶ ನೀಡಿದ್ದರು. ಆದರೆ ನ್ಯಾಯಾಲಯದ ಆದೇಶದ ಪತ್ರಿ ಸೋಮವಾರ ಸಂಜೆ ತಲುಪಿದ್ದು, ಇಂದು ಐಪಿಸಿ ಕಲಂ 44,108,153,153(ಎ),504 ಅಡಿಯಲ್ಲಿ ಕೇಸು ದಾಖಲಾಗಿದೆ.

ಅಕ್ಟೋಬರ್ 14ರಂದು ದೂರುದಾರರಾದ ವಕೀಲ ರಮೇಶ್ ನಾಯಕ್ ಅವರಿಗೆ ಹೇಳಿಕೆ ನೀಡಲು ಈಗಾಗಲೇ ಸಮನ್ಸ್ ಜಾರಿಯಾಗಿದ್ದು, ದೂರುದಾರರ ಹೇಳಿಕೆ ನಂತರ ವಿಚಾರಣೆ ನಡೆಯಲಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)