varthabharthi


ವಿಶೇಷ-ವರದಿಗಳು

ಕಾಂಗ್ರೆಸ್ ಅಭ್ಯರ್ಥಿ ಮಶ್ಕೂರ್ ಆಲಿಘರ್ ವಿವಿಯಲ್ಲಿ ಜಿನ್ನಾ ಭಾವಚಿತ್ರವಿರಿಸಿದ್ದರು ಎಂದು ಸುಳ್ಳು ಹೇಳಿದ 'ಆಜ್ ತಕ್'

ವಾರ್ತಾ ಭಾರತಿ : 17 Oct, 2020

ಹೊಸದಿಲ್ಲಿ: ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಮಶ್ಕೂರ್ ಉಸ್ಮಾನಿಯನ್ನು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದರ್ಭಾಂಗ ಜಿಲ್ಲೆಯ ಜಲೆ ಕ್ಷೇತ್ರದ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಬಿಜೆಪಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಒಂದು ಅಸ್ತ್ರ ಒದಗಿಸಿದಂತಾಗಿದ್ದು ಉಸ್ಮಾನಿ ಒಬ್ಬ 'ಜಿನ್ನಾ  ಬೆಂಬಲಿಗ' ಎಂದು ಬಿಜೆಪಿ ಆರೋಪಿಸಿದೆ.

ಉಸ್ಮಾನಿಯನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಜಿನ್ನಾ ಬೆಂಬಲಿಗನನ್ನು ಕಣಕ್ಕಿಳಿಸಿದೆ ಎಂಬ ಅರ್ಥ ನೀಡುವ ಕಾರ್ಯಕ್ರಮವನ್ನೂ 'ಆಜ್ ತಕ್' ಸುದ್ದಿ ವಾಹಿನಿ ಪ್ರಸಾರ ಮಾಡಿತ್ತು. ಚಾನೆಲ್ ಆ್ಯಂಕರ್ ರೋಹಿತ್ ಸರ್ದಾನ ತಮ್ಮ 'ದಂಗಲ್' ಶೋ ದಲ್ಲಿ ಈ ಕುರಿತು ಚರ್ಚಿಸಲು ಹಲವರನ್ನು  ಆಹ್ವಾನಿಸಿದ್ದರು. ಉಸ್ಮಾನಿ 2018ರಲ್ಲಿ ಮೊಹಮ್ಮದ್ ಆಲಿ ಜಿನ್ನಾ ಅವರ  ಭಾವಚಿತ್ರವನ್ನು ಆಲಿಘರ್ ಮುಸ್ಲಿಂ ವಿವಿಯಲ್ಲಿ ಇರಿಸಿದ್ದಾರೆಂದೂ ಈ ಕಾರ್ಯಕ್ರಮದಲ್ಲಿ ಕೆಲವು ಬಾರಿ ಹೇಳಿಕೊಳ್ಳಲಾಗಿದೆ.

ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಉಸ್ಮಾನಿಗೆ ಟಿಕೆಟ್ ನೀಡುವ ಕಾಂಗ್ರೆಸ್ ನಿರ್ಧಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿ "ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆಂಬುದು ಮುಖ್ಯವಲ್ಲ. ದೇಶ ವಿಭಜನೆಗೆ ಕಾರಣವಾದ ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷ ಈಗ ಜಿನ್ನಾ ಹೆಸರನ್ನು ಮುಂದಿಟ್ಟುಕೊಂಡು ಮತಗಳನ್ನು ಗಳಿಸಲು ಯತ್ನಿಸುತ್ತಿದೆ. ನನಗೆ ದುಃಖವಾಗುತ್ತಿದೆ,'' ಎಂದರು. ಇದಕ್ಕೆ ಸರ್ದಾನ ಪ್ರತಿಕ್ರಿಯಿಸಿ, "ನೀವು ನನ್ನ ಹೃದಯದಲ್ಲಿದ್ದುದನ್ನು ಹೇಳಿದ್ದೀರಿ. ಆದರೆ ನಿಮ್ಮ  ಹೃದಯದೊಳಕ್ಕೆ ಇಣುಕಿ ನೋಡಿ, ಅವರಿಗೆ ಟಿಕೆಟ್ ನೀಡಿದ್ದರಿಂದ ಅವರೊಬ್ಬ ದೊಡ್ಡ ದೇಶ ವಿರೋಧಿ ಎಂದು ಬಿಂಬಿಸಲು ನಿಮಗೆ ಸಾಧ್ಯವಾಗುವುದಲ್ಲವೇ?'' ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಮಾಹಿತಿ ನೀಡಿದ 'ಆಜ್ ತಕ್'

ವಾಸ್ತವವಾಗಿ ಜಿನ್ನಾ ಅವರ ಭಾವಚಿತ್ರ ಆಲಿಘರ್ ಮುಸ್ಲಿಂ ವಿವಿಯಲ್ಲಿ 1938ರಿಂದ ಇದೆ. ಅದನ್ನು ಆಜ್ ತಕ್ ಹೇಳಿದಂತೆ ಉಸ್ಮಾನಿ ಅಲ್ಲಿ ಇರಿಸಿಲ್ಲ. 2018ರಲ್ಲಿ ಹಿಂದು ಯುವ ವಾಹಿನಿ ಕಾರ್ಯಕರ್ತರು ವಿವಿ ಕ್ಯಾಂಪಸ್ಸಿಗೆ ನುಗ್ಗಿ ಆ ಭಾವಚಿತ್ರವನ್ನು ತೆಗೆದು ಹಾಕಿದ್ದರಲ್ಲದೆ ಘಟನೆಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದವು.

ಕ್ಯಾಂಪಸ್ಸಿನಲ್ಲಿರುವ ಜಿನ್ನಾ ಭಾವಚಿತ್ರ ಕುರಿತ ವಿವಾದದ ಕುರಿತು ಪ್ರತಿಕ್ರಿಯಿಸಿದ್ದ ಉಪಕುಲಪತಿ ತಾರಿಖ್ ಮನ್ಸೂರ್, "ಜಿನ್ನಾ ಅವರ ಭಾವಚಿತ್ರ 1938ರಿಂದ ಇದೆ ಹಾಗೂ ಬಾಂಬೆ ಹೈಕೋರ್ಟ್, ಸಾಬರಮತಿ ಆಶ್ರಮ ಸಹಿತ ಇತರ ಹಲವು ಸ್ಥಳಗಳಲ್ಲಿವೆ. ಇಲ್ಲಿಯ ತನಕ ಅದರ ಬಗ್ಗೆ ಯಾರಿಗೂ  ಚಿಂತೆಯಿರಲಿಲ್ಲ. ಇದೊಂದು ವಿಚಾರವೇ ಅಲ್ಲ,'' ಎಂದಿದ್ದರು.

ಕೃಪೆ: altnews.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)