varthabharthi


ರಾಷ್ಟ್ರೀಯ

ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತಂದ ಆರೋಪ: ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

ವಾರ್ತಾ ಭಾರತಿ : 17 Oct, 2020

ಮುಂಬೈ, ಅ. 17: ಧಾರ್ಮಿಕ ಸಾಮರಸ್ಯ ಕದಡುವ ಆರೋಪದಲ್ಲಿ ಬಾಲಿವುಡ್ ನಟಿ ಕಂಗನಾ ರಾಣವತ್ ಹಾಗೂ ಅವರ ಸಹೋದರಿ ರಂಗೋಲಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಕಂಗನಾ ರಾಣವತ್ ಅವರು ಸಮುದಾಯಗಳನ್ನು ವಿಭಜಿಸುತ್ತಿದ್ದಾರೆ ಹಾಗೂ ಕೋಮು ದ್ವೇಷ ಹರಡುತ್ತಿದ್ದಾರೆ ಎಂಬ ಖಾಸಗಿ ದೂರಿಗೆ ಪ್ರತಿಕ್ರಿಯಿಸಿ ನ್ಯಾಯಾಲಯ ಈ ಆದೇಶ ನೀಡಿದೆ. ದೂರನ್ನು ಮೇಲ್ನೋಟಕ್ಕೆ ಗಮನಿಸಿದಾಗ ಆರೋಪಿ ಅರಿವಿನಿಂದ ಅಪರಾಧ ಎಸಗಿರುವುದು ಕಂಡು ಬಂದಿದೆ. ಇಲೆಕ್ಟ್ರಾನಿಕ್ಸ್ ಮಾಧ್ಯಮ, ಟ್ವಿಟ್ಟರ್ ಹಾಗೂ ಸಂದರ್ಶನಗಳಲ್ಲಿ ನೀಡಲಾದ ಹೇಳಿಕೆಗಳು ಆರೋಪಕ್ಕೆ ಆಧಾರವಾಗಿದೆ. ಆರೋಪಿ ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮವನ್ನು ಬಳಸಿದ್ದಾರೆ. ಈ ಬಗ್ಗೆ ತಜ್ಞರಿಂದ ಕೂಲಂಕುಷ ತನಿಖೆ ನಡೆಸುವ ಅಗತ್ಯ ಇದೆ. ಅಲ್ಲದೆ, ಈ ಪ್ರಕರಣದಲ್ಲಿ ಶೋಧ ಹಾಗೂ ಮುಟ್ಟುಗೋಲಿನ ಅಗತ್ಯ ಕೂಡ ಇದೆ ಎಂದು ಮೆಟ್ರೋಪಾಲಿಟಿನ್ ದಂಡಾಧಿಕಾರಿ ಜಯದೇವ್ ಖುಲೆ ಹೇಳಿದ್ದಾರೆ.

ದೂರಿನ ಬಗ್ಗೆ ಗಮನ ಹರಿಸುವಂತೆ ನ್ಯಾಯಾಲಯ ಸಂಬಂಧಿತ ಪೊಲೀಸ್ ಠಾಣೆಗೆ ನಿರ್ದೇಶಿಸಿದೆ. ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ನಿರ್ದೇಶಕ ಹಾಗೂ ಫಿಟ್‌ನೆಸ್ ತರಬೇತುದಾರ ಮುನಾವರ್ ಅಲಿ ಸಯ್ಯದ್ ಅವರು ನ್ಯಾಯಾಲಯದಲ್ಲಿ ಈ ಮನವಿ ಸಲ್ಲಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)