varthabharthi


ಕರ್ನಾಟಕ

ಸಿಟಿ ಸ್ಕ್ಯಾನಿಂಗ್ ವರದಿ ಪಾಸಿಟಿವ್ ಇದ್ದಲ್ಲಿ ಕೋವಿಡ್ ಸೋಂಕಿತರೆಂದೇ ಪರಿಗಣಿಸಿ: ಆರೋಗ್ಯ ಇಲಾಖೆ ಸುತ್ತೋಲೆ

ವಾರ್ತಾ ಭಾರತಿ : 17 Oct, 2020

ಬೆಂಗಳೂರು, ಅ.17: ಕೊರೋನ ವೈರಸ್ ಲಕ್ಷಣಗಳು, ಶ್ವಾಸಕೋಶ ಸೋಂಕು ಉಂಟಾದವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದು, ಸಿಟಿ ಸ್ಕ್ಯಾನಿಂಗ್‍ನಲ್ಲಿ ವರದಿ ಪಾಸಿಟಿವ್ ಕಂಡುಬಂದರೆ ಅಂತಹ ರೋಗಿಗಳನ್ನು ಕೋವಿಡ್-19 ಸೋಂಕಿತರೆಂದೇ ಪರಿಗಣಿಸಿ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸಾಕಷ್ಟು ರೋಗಿಗಳಿಗೆ ಶ್ವಾಸಕೋಶ ಸೋಂಕು ಉಂಟಾಗಿರುತ್ತದೆ. ಸಿಟಿ ಸ್ಕ್ಯಾನಿಂಗ್ ಮಾಡಿದಾಗ ಸೋಂಕು ಖಚಿತವಾಗುತ್ತದೆ. ಆದರೆ, ಕೊರೋನ ಪತ್ತೆಯಲ್ಲಿ ಶ್ರೇಷ್ಠ ನಿಖರತೆ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿರುವ ಆರ್ಟಿ-ಪಿಸಿಆರ್‍ನಲ್ಲಿ ವರದಿ ನೆಗೆಟಿವ್ ಬರುತ್ತಿದೆ.

ನೆಗೆಟಿವ್ ಬಂದಿದೆ ಎಂದು ಕೋವಿಡ್ ಹೊರತಾದ ಚಿಕಿತ್ಸೆಗೆ ಮುಂದಾದರೆ ಆಗ ಅವರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇತರ ಚಿಕಿತ್ಸೆಗಳು ಪರಿಣಾಮಕಾರಿಯಾಗದೇ ಇರಬಹುದು. ಈ ರೀತಿಯ ಪ್ರಕರಣಗಳು ರಾಜ್ಯದಲ್ಲಿ ನಿರಂತರವಾಗಿ ವರದಿಯಾಗುತ್ತಿರುವುದರಿಂದ ಆರೋಗ್ಯ ಇಲಾಖೆ ಈ ಸೂಚನೆ ನೀಡಿದೆ. ಸೋಂಕಿತರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿರುವ ಹಲವು ದೃಷ್ಟಾಂತಗಳು ರಾಜ್ಯದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿವೆ. ಆದರೆ, ಸಿಟಿ ಸ್ಕ್ಯಾನಿಂಗ್‍ನಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಇದೇ ಆಧಾರದ ಮೇಲೆ ಕೋವಿಡ್-19 ಚಿಕಿತ್ಸೆ ನೀಡಲು ಸುತ್ತೋಲೆ ಹೊರಡಿಸಲಾಗಿದೆ.

ಐಸಿಎಂಆರ್ ಪ್ರಕಾರ, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮೂಲಕ ಕೋವಿಡ್ ಪಾಸಿಟಿವ್ ಪತ್ತೆ ನಿಖರತೆ ಶೇ.50.6ರಿಂದ ಶೇ.84ರಷ್ಟಿದೆ. ಇನ್ನು ಕೋವಿಡ್ ಪತ್ತೆಯಲ್ಲಿ ಆರ್ಟಿ-ಪಿಸಿಆರ್‍ಗಿಂತಲೂ ಹೆಚ್ಚು ನಿಖರತೆಯನ್ನು ಸಿಟಿ ಸ್ಕ್ಯಾನಿಂಗ್ ಪರೀಕ್ಷೆ ಹೊಂದಿವೆ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ.

ರಾಜ್ಯ ಮತ್ತು ದೇಶದಲ್ಲಿ ಕೋವಿಡ್-19 ಸೋಂಕು ಮತ್ತು ಪರೀಕ್ಷೆ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ತಪ್ಪು ನೆಗೆಟಿವ್ ವರದಿಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ, ಕೋವಿಡ್-19ನಂತೆಯೇ ಲಕ್ಷಣಗಳಿರುವ ಕೊರೋನ ಶಂಕಿತ ಪ್ರಕರಣಗಳನ್ನು ಸಿಟಿ ಸ್ಕ್ಯಾನಿಂಗ್ ಮತ್ತು ಲ್ಯಾಬ್ ಪರೀಕ್ಷೆ ಮೂಲಕ ಪತ್ತೆ ಮಾಡಿ ಕೋವಿಡ್-19 ಪಾಸಿಟಿವ್ ಕೇಸ್ಗಳಂತೆಯೇ ಚಿಕಿತ್ಸೆ ನೀಡಬೇಕು. ಈ ಮೂಲಕ ಸೋಂಕು ಹರಡುವಿಕೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವುದನ್ನು ತಡೆಯಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)