varthabharthi


ಕರ್ನಾಟಕ

ರಾಜ್ಯದ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಕೇಂದ್ರ ಸರಕಾರ: ಸಿದ್ದರಾಮಯ್ಯ ವಾಗ್ದಾಳಿ

ವಾರ್ತಾ ಭಾರತಿ : 17 Oct, 2020

ಬೆಂಗಳೂರು, ಅ.17: ರಾಜ್ಯದಲ್ಲಿ ಕಳೆದ 50 ವರ್ಷಗಳಲ್ಲಿ ಬೀಳದ ಮಳೆ ಈ ಬಾರಿ ಆಗಿದೆ. ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರೂ ಯಾವುದೆ ಪ್ರಯೋಜನವಿಲ್ಲ. ಕೇಂದ್ರ ಸರಕಾರದಿಂದಲೂ ರಾಜ್ಯಕ್ಕೆ ಯಾವುದೆ ನೆರವು ಸಿಗುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯಕ್ಕೆ ಸಕಲ ನೆರವು ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ. ಆದರೆ, ಈವರೆಗೆ ಏನು ನೆರವು ಕೊಟ್ಟಿದ್ದಾರೆ ಅನ್ನೋದನ್ನು ತಿಳಿಸಲಿ. ರಾಜ್ಯ ಸರಕಾರ ಮನವಿಗಳನ್ನು ಮಾಡುತ್ತಿದೆ. ಆದರೆ, ಅದಕ್ಕೆ ಕೇಂದ್ರ ಸರಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ದೂರಿದರು.

ನಾವು ಕೊಡುವ ಸಲಹೆಗಳನ್ನು ಪಡೆಯುವುದಿಲ್ಲ, ನಮ್ಮ ಪತ್ರಗಳಿಗೆ ಸ್ಪಂದಿಸುವುದಿಲ್ಲ. ಕೇವಲ ಹಣ ಮಾಡೋದ್ರಲ್ಲಿ ತಲ್ಲೀನವಾಗಿದ್ದಾರೆ. ಜನರು ಆಸ್ತಿ ಪಾಸ್ತಿ ಕಳೆದುಕೊಂಡು ಜೀವ ಉಳಿದರೆ ಸಾಕು ಎನ್ನುವಂತಹ ಸ್ಥಿತಿಗೆ ತಲುಪಿದ್ದಾರೆ. ನೊಂದ ಜನರಿಗೆ ಸಾಂತ್ವನ ಹೇಳಬೇಕಿದ್ದ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಇತರ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಇವರಿಗೆ ಜನರ ಪ್ರಾಣಕ್ಕಿಂತ ಚುನಾವಣೆ ಮುಖ್ಯವೇ? ಎಂದು ಅವರು ಕಿಡಿಗಾರಿದರು.

ಜನರೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಕೇಂದ್ರ ಸರಕಾರದ ಎದುರು ಒತ್ತಾಯ ಮಾಡಿ, ರಾಜ್ಯಕ್ಕೆ ನೆರವು ತರುವ ಶಕ್ತಿ ಬಿಜೆಪಿಯವರಿಗೆ ಇಲ್ಲ. 25 ಜನ ಬಿಜೆಪಿ ಸಂಸದರು ಇದ್ದಾರೆ. ಆದರೆ, ಯಾವತ್ತಾದರೂ ಇವರು ಪ್ರಧಾನಿ ಎದುರು ನಿಂತು ರಾಜ್ಯದ ಪರವಾಗಿ ನೆರವು ಕೇಳಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯಕ್ಕೆ ಬರಬೇಕಿರುವ ಜಿಎಸ್‍ಟಿ ಪರಿಹಾರವನ್ನು ಕೇಳಲಿಲ್ಲ, ಸತತವಾಗಿ ಪ್ರವಾಹ, ನೆರೆ ಹಾವಳಿಯಿಂದ ಆಗಿರುವ ಹಾನಿಗೆ ಪರಿಹಾರ ಕೇಳಲಿಲ್ಲ. ಮುಖ್ಯಮಂತ್ರಿ, ಸಂಸದರಿಗೆ ಪ್ರಧಾನಿ ಎದುರು ಕೇಳುವ ಧೈರ್ಯ ಇಲ್ಲ. ಅದಕ್ಕೆ ಹೇಳುತ್ತಿದ್ದೇನೆ, ನಿಮಗೆ ಶಕ್ತಿ ಇಲ್ಲದಿದ್ದರೆ, ನಮ್ಮನ್ನು ಕರೆದುಕೊಂಡು ಹೋಗಿ ನಾವೇ ಪ್ರಧಾನಿ ಬಳಿ ಮಾತನಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಾಗಲಕೋಟೆ, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಅ.10ರಿಂದ 15ರವರೆಗೆ ಸತತ ಮಳೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ಜನರಿಗೆ ಪರಿಹಾರ ಸಿಕ್ಕಿಲ್ಲ, ಮನೆಗಳು ಬಿದ್ದು ಹೋಗಿವೆ, ಕೆರೆಗಳು ತುಂಬಿ ಕಟ್ಟೆಗಳು ಒಡೆದುಹೋಗಿ, ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಯನ್ನು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಆಗ ಮಾತ್ರ ರಾಜ್ಯಕ್ಕೆ ನ್ಯಾಯ ಸಮ್ಮತವಾದ ನೆರವು ಸಿಗಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕನ್ನಡದಲ್ಲಿ ಯಾರೋ ಬರೆದುಕೊಡುತ್ತಾರೆ, ಟ್ವೀಟ್ ಮಾಡುತ್ತಾರೆ. ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕನ್ನಡಿಗರ ಪರ ಇದ್ದಾರೆಂದು ಅರ್ಥವೇ? ಸಂಸದ ತೇಜಸ್ವಿಸೂರ್ಯ ಪಶ್ಚಿಮ ಬಂಗಾಳಕ್ಕೆ ಹೋಗಿ ಬೆಂಗಾಳಿಯಲ್ಲಿ ಮಾತನಾಡಿದ ತಕ್ಷಣ ಅಲ್ಲಿರುವ ಬೆಂಗಾಳಿಗರು ಈತನ ಮಾತು ಕೇಳುತ್ತಾರಾ ಎಂದರು.

ಆಗಸ್ಟ್ ತಿಂಗಳಲ್ಲಿಯೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶಗಳಿಗೆ ಹೋಗಬೇಕಿತ್ತು, ಆದರೆ ವಯಸ್ಸಾಗಿದೆ ಜೊತೆಗೆ ಕೊರೋನ ಸೋಂಕು ತೀವ್ರವಾಗಿದೆ ಅಂತ ನೆಪ ಹೇಳಿ ಹೋಗಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸಲಾಗದಷ್ಟು ವಯಸ್ಸಾಗಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಆರಾಮವಾಗಿರಲಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಿರಾದಲ್ಲಿ ಬಿಜೆಪಿಯವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಕೋವಿಡ್ ನಿಯಮಗಳಿಗೆ ವಿರುದ್ಧವಲ್ಲವೇ? ತಾವು ಜಾರಿಗೆ ತಂದಿರುವ ನಿಯಮಗಳನ್ನು ತಾವೇ ಧಿಕ್ಕರಿಸಿದ್ದಾರೆ, ಇನ್ನು ಬೇರೆಯವರಿಗೆ ಉಪದೇಶ ನೀಡಲು ಯಾವ ನೈತಿಕತೆ ಇದೆ?
ಆರೋಗ್ಯ ಸಚಿವರು ಆಗಾಗ ತಮ್ಮ ಪಕ್ಷದ ಸಭೆ ಸಮಾರಂಭಗಳನ್ನೂ ಗಮನಿಸಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಕುಸುಮಾ ಅವರು ನಾಮಪತ್ರ ಸಲ್ಲಿಸುವ ದಿನ ನಾನು 11.45ಕ್ಕೆ ನಾಮಪತ್ರ ಸ್ವೀಕರಿಸುವ ಕಚೇರಿಗೆ ಹೋಗಿದ್ದು, ನನ್ನ ವಿರುದ್ಧ 11.15ಕ್ಕೆ ಕೇಸ್ ದಾಖಲಿಸಲಾಗಿದೆ. ಇದು ಪೊಲೀಸ್ ಇಲಾಖೆಯ ದುರ್ಬಳಕೆಯಲ್ಲದೆ ಇನ್ನೇನು? ಇದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದ ಆರೋಪ. ಇಂಥಾ ಗೊಡ್ಡು ಬೆದರಿಕೆಗಳಿಗೆಲ್ಲ ನಾವು ಹೆದರಲ್ಲ ಎಂದು ಅವರು ಹೇಳಿದರು.

ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಅಂತ ನಾನು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಅನ್ನು ಬಿಜೆಪಿ ಸರಕಾರ ಮುಚ್ಚಲು ಹೊರಟಿದೆ. ದುಡ್ಡಿಲ್ಲ, ಕೊರೋನ ಇದೆ ಅಂತ ಜನರ ಎದುರು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗಾದ ಸರಕಾರ ಇದ್ದರೆಷ್ಟು, ಹೋದರೆಷ್ಟು? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯದ ಕುರಿತು ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಶಾಸಕರಿಗೆ ಭದ್ರತೆಯಿಲ್ಲ, ಹಾವೇರಿ ಹಾಗೂ ಮಂಗಳೂರು ಗೋಲಿಬಾರ್ ಮಾಡಿಸಿದ್ದು ಯಾರು? ಈ ಸರಕಾರದಲ್ಲಿ ಜನ ಸಾಮಾನ್ಯರಿಗೆ ರಕ್ಷಣೆ ಇದೆಯೇ ಎಂದು ಅವರು ಪ್ರಶ್ನಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)