varthabharthi


ರಾಷ್ಟ್ರೀಯ

ಹತ್ರಸ್ ಗೆ ವರದಿಗಾರಿಕೆಗೆ ತೆರಳಿದ್ದ ಕೇರಳದ ಪತ್ರಕರ್ತನ ವಿರುದ್ಧ ದೇಶದ್ರೋಹ ಪ್ರಕರಣ

ವಾರ್ತಾ ಭಾರತಿ : 17 Oct, 2020

ಹೊಸದಿಲ್ಲಿ, ಅ. 17: ಹಾಥರಸ್ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರದ್ರೋಹದ ಪ್ರಕರಣದಲ್ಲಿ ಕೇರಳದ ಪತ್ರಕರ್ತ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮೂವರು ಸದಸ್ಯರನ್ನು ಉತ್ತರಪ್ರದೇಶ ಪೊಲೀಸರು ಹೆಸರಿಸಿದ್ದಾರೆ.

ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಅಕ್ಟೋಬರ್ 5ರಂದು ಹಾಥರಸ್ ಜಿಲ್ಲೆಗೆ ತೆರಳುತ್ತಿದ್ದ ಸಂದರ್ಭ ನಾಲ್ವರನ್ನು ಬಂಧಿಸಲಾಗಿತ್ತು ಹಾಗೂ ಅವರ ವಿರುದ್ಧ ವಿವಿಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹಾಥರಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಕುರಿತಂತೆ ಉತ್ತರಪ್ರದೇಶ ಸರಕಾರಕ್ಕೆ ಮಾನಹಾನಿ ಉಂಟು ಮಾಡಿರುವುದು ಹಾಗೂ ಜಾತಿ ಆಧಾರದಲ್ಲಿ ಗಲಭೆಗೆ ಪಿತೂರಿ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಇವರ ವಿರುದ್ಧ ಅಕ್ಟೋಬರ್ 4ರಂದು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿರುವುದು ತಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದರು.

ಪತ್ರಕರ್ತ ಸಿದ್ದೀಕ್ ಕಪ್ಪನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾದ ಅತೀ ಕುರ್ರಹ್ಮಾನ್, ಮಸೂದ್ ಅಹ್ಮದ್ ಹಾಗೂ ಅಲಂ ಈ ಪ್ರಕರಣದ ಆರೋಪಿಗಳು. ಈ ನಾಲ್ವರು ಆರೋಪಿಗಳು ಮಥುರಾ ಜೈಲಿನಲ್ಲಿ ಇದ್ದಾರೆ.

ನಾಲ್ವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಸ್ಥಳೀಯ ನ್ಯಾಯಾಲಯ ವಾರಂಟ್ ಜಾರಿಗೊಳಿಸಿದೆ ಎಂದು ಹಾಥರಸ್‌ನ ಪೊಲೀಸ್ ಅಧೀಕ್ಷಕ ವಿನೀತ್ ಜೈಸ್ವಾಲ್ ಹೇಳಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಚಾಂಡ್ಪಾ ಠಾಣಾಧಿಕಾರಿ ಲಕ್ಷಣ್ ಸಿಂಗ್ ಅವರು ಸಲ್ಲಿಸಿದ ವರದಿಯ ಆಧಾರದಲ್ಲಿ ನ್ಯಾಯಾಲಯ ಈ ವಾರಂಟ್ ಜಾರಿಗೊಳಿಸಿದೆ. ‘‘ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂಬ ವಾರಂಟ್ ಅನ್ನು ನಾವು ಮಥುರಾ ಕಾರಾಗೃಹ ಪ್ರಾಧಿಕಾರಕ್ಕೆ ನೀಡಿದ್ದೇವೆ. ಗಲಭೆಗೆ ಪಿತೂರಿ ನಡೆಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದು’’ ಎಂದು ಲಕ್ಷಣ್ ಸಿಂಗ್ ಹೇಳಿದ್ದಾರೆ.

ಈ ನಡುವೆ 2019 ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ರಹ್ಮಾನ್ ಅವರ ವಿರುದ್ಧ ಮುಝಪ್ಫರ್‌ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಹ್ಮಾನ್ ಮುಝಪ್ಫರ್‌ನಗರದ ನಿವಾಸಿ. ಪ್ರಕರಣಕ್ಕೆ ಸಂಬಂಧಿಸಿ ರಹ್ಮಾನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ವಾರಂಟ್ ಪಡೆದುಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)