varthabharthi


ನಿಮ್ಮ ಅಂಕಣ

ಕಾಗದ ಬಂದಿದೆ

ವಾರ್ತಾ ಭಾರತಿ : 18 Oct, 2020

ಕಾಗಾದ ಬಂದಿದೆ ಪದುಮಾ ನಾಭನದು
ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ . . . .

ಹೀಗೆ ಪುರಂದರ ದಾಸರ ಭಕ್ತಿ ಗೀತೆ ಮಾನವನ ಅತಿಯಾಸೆಗೆ ಕಡಿವಾಣ ಹಾಕುವ ನೀತಿಯನ್ನು ಸಾರುತ್ತದೆ.

ಆಧುನಿಕ ಯುಗದ -

ಅಂಚೆಯ ಅಣ್ಣ ಬಂದಿಹನಣ್ಣಾ ಎಲ್ಲರ ಮನೆಮನೆಗೆ . . . . .

ಎನ್ನುವ ಹಳೆಯ ಕಾಲದ ಪಠ್ಯ ಪುಸ್ತಕದ ಒಂದು ಪದ್ಯ ಕೆಲವರಿಗೆ ಈಗಲೂ ನೆನಪಾಗಬಹುದು.

ಅದೇ ಕಾಗದ, ಓಲೆ, ಪತ್ರ, ಒಕ್ಕಣೆ, ಎಷ್ಟು ಸುಂದರ ಹಾಗೂ ಮಧುರವಾದ ಪದಗಳಿವು. ಕಾಗದ ಎಂದು ಕೇಳಿದ ಕೂಡಲೇ ಹಿಂದಿನ ಕಾಲದ ನೆನಪಾಗುತ್ತದೆ. ಮೊಬೈಲ್, ಸೋಷಿಯಲ್ ಮೀಡಿಯಾಗೂ ಮುಂಚೆ ಇದ್ದ ವ್ಯವಸ್ಥೆಯಲ್ಲಿ ಈ ಕಾಗದ ಎಂಬುದು ಅಂಚೆ ಮೂಲಕ ಬರುವುದೇ ಒಂದು ಸಂಭ್ರಮ. ಪ್ರತಿಯೊಬ್ಬರೂ ತಮ್ಮ ಬಂಧು ಬಳಗದವರಿಗೆ, ಕುಟುಂಬದವರಿಗೆ, ಸ್ನೇಹಿತರಿಗೆ ಯಾವುದೇ ಸುದ್ದಿ ತಿಳಿಸಬೇಕೆಂದರೂ ಇದ್ದುದು ಒಂದೇ ಮಾಧ್ಯಮ ಅದು ಕಾಗದ ಬರೆಯುವುದು. ಟ್ರಂಕಾಲ್ ಬುಕ್ ಮಾಡಬಹುದಾಗಿದ್ದರೂ ಎಲ್ಲೆಡೆ ಆ ಸೌಲ್ಯ ಇರುತ್ತಿರಲಿಲ್ಲ. ಜೊತೆಗೆ ಟ್ರಂಕಾಲ್ ದುಬಾರಿ ಕೂಡ. ಕಾಗದ ಬರೆಯುವುದೆಂದರೆ ಅದು ಒಂದು ವಿಶಿಷ್ಟವಾದ ಕೆಲಸ. ದಿನದ ಎಲ್ಲಾ ಕೆಲಸ ಕಾರ್ಯ ಮುಗಿಸಿ, ಸಮಯ ಹೊಂದಿಸಿಕೊಂಡು ಸಾವಧಾನವಾಗಿ ಕೂತು ಹಿಂದಿನ ಕಾಗದ ಬರೆದು ಅದಕ್ಕೆ ಉತ್ತರ ಬಂದದ್ದರ ಬಗ್ಗೆ ಮೆಲುಕು ಹಾಕಿ ನಂತರ ಯಾವ ಯಾವ ವಿಷಯ ಪ್ರಸ್ತಾಪವಾಗಬೇಕು, ಯಾವ ವಿಷಯ ಮೊದಲು ಬರೆಯಬೇಕು ಹೆಚ್ಚು ಮುಖ್ಯವಾದ ವಿಷಯಕ್ಕೆ ಪ್ರಾಮುಖ್ಯತೆ ಕೊಟ್ಟು ಅದರ ಕೆಳಗೆ ಗೆರೆ ಎಳೆದು ಗಮನ ಸೆಳೆದು ಹೀಗೆ ಕಾಗದ ಬರೆಯುವುದೇ ಒಂದು ರೋಚಕ ಕೆಲಸ ಎನಿಸುವಂತಹ ದಿನಗಳಿದ್ದವು.

ಇನ್ನು ಶುರು ಮಾಡುವುದಂತೂ ಗೊತ್ತಿರಲೇ ಬೇಕು. ಮೊದಲು ಕಾಗದದ ಒಂದು ಮೂಲೆಯಲ್ಲಿ ಕ್ಷೇಮ, ಮಧ್ಯ ಭಾಗಕ್ಕೆ ಶ್ರೀ, ಇನ್ನೊಂದು ಬದಿಗೆ ದಿನಾಂಕ, ಪ್ರಾರಂಭದಲ್ಲಿ ತೀರ್ಥರೂಪ ತಂದೆ, ಅಣ್ಣ, ಚಿಕ್ಕಪ್ಪ, ಮಾವ ಹೀಗೆ ಹಿರಿಯರೆಲ್ಲರಿಗೂ ತಂದೆ ಸಮಾನವಾದ ಪದ ಬಳಕೆ. ಇನ್ನು ತಾಯಿ, ಅಕ್ಕ, ಚಿಕ್ಕಮ್ಮ ಹಿರಿಯ ಸ್ತ್ರೀ ಸಂಬಂಧಕ್ಕೆ ಮಾತೃಶ್ರೀ ಎಂದು ಪ್ರಾರಂಭಿಸಬೇಕು. ಇನ್ನು ದೊಡ್ಡವರು ಚಿಕ್ಕವರಿಗೆ ಬರೆಯಬೇಕಾದಾಗ ಚಿರಂಜೀವಿ ಅಥವಾ ಚಿ.ರಾ. ಎಂದು ಸಂಬೋಧಿಸಬೇಕು. ಮುಗಿಸುವಾಗ ಆಶೀರ್ವಾದದೊಂದಿಗೆ, ತಮ್ಮ ಆಶೀರ್ವಾದ ಬೇಡುವ, ತಮ್ಮ ನಂಬುಗೆಯ, ಹೀಗೆ ಒಂದು ಕಾಗದ ಬರೆಯುವಾಗ ಗಮನಿಸಬೇಕಾದ್ದು ಬಹಳ ಸಂಗತಿಗಳು. ಇನ್ನು ಸಿಹಿ ಸುದ್ದಿ ಹೊತ್ತ ಪತ್ರಕ್ಕೆ ನಾಲ್ಕೂ ಕಡೆ ಕುಂಕುಮ ಅಥವಾ ಅರಿಶಿಣದ ಬಣ್ಣ ಹಚ್ಚಿ ಶುಭ ಸೂಚಕ ಸಾರುವಂತಿರಬೇಕು. ಅದೇ ಅಶುಭ ವಾರ್ತೆ ಎಂದರೆ ಯಾವುದಾದರೂ ಕೆಟ್ಟ ಸುದ್ದಿ, ಸಾವಿನ ಸುದ್ದಿ ಬರೆಯುವಾಗ ಪತ್ರದ ಎಲ್ಲಾದರೂ ಒಂದು ಕಡೆ ಕಪ್ಪು ಮಸಿ ಹಚ್ಚಿರಬೇಕು. ಅರಿಶಿಣ ಅಥವಾ ಕುಂಕುಮ ಹಚ್ಚಬಾರದು. ಇದರ ಅರ್ಥ ಯಾವುದೇ ಪತ್ರ ನೋಡಿದ ಕೂಡಲೇ ಶುಭ ಅಥವಾ ಅಶುಭ ಅಂದರೆ ಸಿಹಿ ಸುದ್ದಿಯೋ ಕಹಿ ಸುದ್ದಿಯೋ ಎಂದು ಗೊತ್ತಾಗುತ್ತಿತ್ತು.

ಮನೆಯಲ್ಲಿ ಹಿರಿಕರಿದ್ದರಂತೂ ಅಶುಭ ಹೊತ್ತ ಪತ್ರ ಎನಿಸಿದರೆ ಮೈಲಿಗೆ ಬರಬಹುದೇನೋ ಎಂದು ಪತ್ರ ಓದುವ ಮುನ್ನ ಆತಂಕ, ಗಾಬರಿ ಪಡುತ್ತಿದ್ದರು. (ಮನೆಯಲ್ಲಿ ಯಾರಾದರೂ ಪತ್ರ ಓದಿ ಹೇಳಬೇಕಾಗಿತ್ತು. ಇತರರೆಲ್ಲ ಕೂತು ಕೇಳಬೇಕಿತ್ತು. ಇನ್ನು ತಮ್ಮ ದಾಯಾದಿಗಳು, ತಲೆಮಾರಿನವರಾದರೆ ಎಷ್ಟು ತಲೆಮಾರು ಕಳೆದಿದೆ, ಎಷ್ಟು ದಿನ ಮೈಲಿಗೆ ಇರಬೇಕು, ಮೂರು ದಿನ, ಹತ್ತು ದಿನ ಹೀಗೆ ಅವರ ಸಂಬಂಧದ ಮೇಲೆ ನಿಗದಿಯಾಗಿ ಅಷ್ಟೂ ದಿನಕ್ಕೆ ಬೇಕಾದ ಪದಾರ್ಥಗಳು, ಬಟ್ಟೆಬರೆ ಇತರ ಎಲ್ಲಾ ಸಾಮಾನುಗಳನ್ನು ಮನೆಯ ಒಂದು ಕೋಣೆ ಅಥವಾ ಮೂಲೆಯಲ್ಲಿರಿಸಿಕೊಂಡು ಅಷ್ಟು ದಿನಗಳು ಪ್ರತ್ಯೇಕವಾಗಿದ್ದು, ಹನ್ನೊಂದನೇ ದಿನ ಅಥವಾ ಮೈಲಿಗೆ ಹೋಗುವ ದಿನ ಇದ್ದ ಜಾಗ, ಪದಾರ್ಥಗಳನ್ನು ತೊಳೆದು ಬಳಿದು ಶುಚಿ ಮಾಡಿ ತಲೆಗೆ ಸ್ನಾನ ಮಾಡಿ ಸತ್ತವರ ಆತ್ಮಕ್ಕೆ ಶಾಂತಿ ಕೋರಿ ತಮ್ಮ ಕರ್ತವ್ಯ ಮಾಡುವುದು ಸಂಪ್ರದಾಯವಾಗಿತ್ತು.) ಆಗೆಲ್ಲ 15 ಪೈಸೆಯ ಕಾರ್ಡ್‌ನಲ್ಲಿ ಬರೆಯಲಾಗುತ್ತಿತ್ತು. ಮನೆಗೆ ಬರುವ ಕಾಗದಗಳನ್ನು ಹಿರಿಕರು ಒಂದು ಉದ್ದನೆಯ ತಂತಿಯ ಒಂದು ಕೊನೆಯಲ್ಲಿ ದೊಂಕಿಸಿ ಕಾಗದ ಬೀಳದಂತೆ ಇನ್ನೊಂದು ತುದಿಯಿಂದ ಕಾಗದಗಳನ್ನೆಲ್ಲ ಪೋಣಿಸುತ್ತಾ ಹೋಗುತ್ತಿದ್ದರು.

ಯಾವುದೇ ಕಾರಣಕ್ಕ್ಕೂ ಅವು ಕಳೆದು ಹೋಗುತ್ತಿರಲಿಲ್ಲ. ಯಾವುದೇ ವಿಳಾಸ, ಮಾಹಿತಿ ಬೇಕಾದರೂ ಅದರಲ್ಲಿ ಸಿಗುತ್ತಿತ್ತು. ಇನ್ನು ಕಾರ್ಡ್ ಬಿಟ್ಟರೆ ಇನ್ ಲ್ಯಾಂಡ್ ಲೆಟರ್‌ನ ಒಕ್ಕಣೆಯಲ್ಲಿ ಸಂಸಾರದ ಬವಣೆ ಕಷ್ಟ ಕಾರ್ಪಣ್ಯದ ಬಗ್ಗೆ ಬರೆಯುವುದು, ಗೆಳೆಯ ಗೆಳತಿಯರು ತಮ್ಮ ಕನಸಿನ ಲೋಕದ ಅನಾವರಣ, ಸ್ವಂತ ವಿಚಾರಗಳು, ಮನೆಯ ಪರಿಸ್ಥಿತಿ ಅದರ ಪರಿಣಾಮಗಳು, ಬೇಸರ, ಖುಷಿ ಜೊತೆಗೆ ತಮ್ಮ ವಿದ್ಯಾಭ್ಯಾಸ, ಆಸೆ ಆಕಾಂಕ್ಷೆಗಳು ಹೀಗೆ ತಮ್ಮ ಮನದ ಇಂಗಿತಗಳನ್ನು ಹಂಚಿಕೊಳ್ಳುವ ಪರಿ. ಇನ್ನು ಪ್ರೇಮಿಗಳಿಗೆ ಪತ್ರ ಬರೆಯುವುದೇ ಒಂದು ಸಡಗರ, ಸಂಭ್ರಮ. ದೂರದ ಊರುಗಳಲ್ಲಿದ್ದರಂತೂ ಮುಗಿದೇ ಹೋಯಿತು. ಪರಸ್ಪರ ಪತ್ರ ಬರೆದು ಅದು ತಲುಪುವ ಮುನ್ನ ಆತುರ, ಕಾತುರ ನಿರೀಕ್ಷೆ ಹೇಳತೀರದು.

ಮದುವೆ ನಿಶ್ಚಯವಾಗಿದ್ದರಂತೂ ಪರಸ್ಪರ ಹೇಳಿಕೊಳ್ಳಲು ಇನ್ ಲ್ಯಾಂಡ್ ಕವರ್ ಸಾಕಾಗುತ್ತಿರಲಿಲ್ಲ. ಮದುವೆಯಾದ ನವ ಮದುಮಕ್ಕಳು ತವರಿಗೆ ಬಂದರೆ ಅದರಲ್ಲೂ ಆಷಾಢಕ್ಕೆ ಕಡ್ಡಾಯವಾಗಿ ತವರು ಮನೆ ಸೇರುವ ಹೆಣ್ಣುಮಕ್ಕಳು ತನ್ನ ಗಂಡನ ಆಗಮನದ ನಿರೀಕ್ಷಣೆಯಂತೂ ಇರುವುದಿಲ್ಲ. ವಾರಕ್ಕೊಂದಾದರೂ ಪತ್ರ ಬರೆಯಬೇಕೆನ್ನುವ ಹಂಬಲ. ಅಂಚೆಯಣ್ಣನ ಕಾಯುವ ಪರಿ. ಅದನ್ನು ನೋಡಿ ಹಳ್ಳಿಗಳಲ್ಲಂತೂ ಸ್ನೇಹಿತೆಯರು, ಒಡಹುಟ್ಟಿದವರು ತುಂಟತನದಿಂದ ಅವರನ್ನು ಚುಡಾಯಿಸುವುದು, ಗೋಳು ಹೊಯ್ದುಕೊಳ್ಳುವುದು ಅದಕ್ಕೆ ನವ ವಧು ನಾಚಿ ನೀರಾಗುವುದು ತುಂಬು ಕುಟುಂಬದಲ್ಲಿ ನವ ಮದುವಣಗಿತ್ತಿಯ ಪಾಡು ಹೇಳತೀರದು. ಒಂದುಕಡೆ ಗಂಡನ ನಿರೀಕ್ಷೆ, ಪತ್ರದ ನಿರೀಕ್ಷೆ, ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದರೆ, ತಂಗಿ ತಮ್ಮಂದಿರು ಓಹೋ ಇವತ್ತೇನು ಅಕ್ಕ ತುಂಬಾ ಸಪ್ಪಗಿದ್ದೀಯಾ? ಊಟ ಕೂಡ ಸರಿಗೆ ಮಾಡಲಿಲ್ಲ ಬಾವನ ನೆನಪಾ, ಪತ್ರ ಕೂಡ ಬಂದಿಲ್ಲವಾ ಎಂದು ಹಾಸ್ಯ ಮಾಡುವುದು, (ಕಾಗದ ಬಂದಿದ್ದರೆ ಅಂಚೆಯಣ್ಣನ ಹತ್ತಿರ ಮೊದಲೇ ಪಡೆದು, ಅಕ್ಕನನ್ನು ಗೋಳುಹೊಯ್ದುಕೊಂಡು ಕಾಡಿಸಿ ಕೊಡುವುದು) ಇನ್ನು ಅಂಚೆ ಅಣ್ಣನನ್ನು ಪ್ರತಿ ದಿನ ಕಾಯುವುದು ಪತ್ರ ಬರದಿದ್ದಾಗ ಕೋಪ, ನಿರಾಸೆ ಅನುಭವಿಸುವುದು. ಹೀಗೆ ಒಂದು ಪತ್ರ ಬರವಣಿಗೆಯಲ್ಲಿ ಅದೆಷ್ಟೋ ವಿಚಾರಗಳೂ ಅಡಗಿರುತ್ತಿದ್ದವು.

ಇನ್ನು ಹಳ್ಳಿಗಳಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ದೂರದ ಊರುಗಳಲ್ಲಿ ಕೆಲಸದಲ್ಲಿರುವವರು ತಮ್ಮ ಪೋಷಕರಿಗೆೆ ಪತ್ರ ಬರೆದರೆ ಅದನ್ನು ಓದಲು ಬರದೆ ಅಕ್ಷರ ಬಲ್ಲವರ ಮರ್ಜಿಗೆ ಕಾದು ಅವರ ಸಮಯ ನೋಡಿ ಓದಿಸಿ ತಿಳಿದುಕೊಳ್ಳಬೇಕಿತ್ತು. ಅದಕ್ಕೆ ಉತ್ತರ ಬರೆಯಲೂ ಸಹ ಅವರ ಸಮಯ ಕಾದು ಬರೆಸಿ ಪೋಸ್ಟ್ ಮಾಡಿಸುವವರೆಗೂ ಬೇರೆಯವರ ಕೈ ಕಾಯುವಂತಹ ಸ್ಥಿತಿಯೂ ಇಲ್ಲದೆ ಇರಲಿಲ್ಲ. ಬಹಳ ಹಿಂದಿನ ಕಾಲದಲ್ಲಿ ಪಕ್ಷಿಗಳೇ ವಾಹಕಗಳಾಗಿದ್ದವು. ರಾಜರ ಕಾಲದಲ್ಲಿ ಪಕ್ಷಿಗಳ ಕಾಲಿಗೆ ಓಲೆ ಕಟ್ಟಿ ಹಾರಿ ಬಿಡಲಾಗುತ್ತಿತ್ತು. ಅರಮನೆಯಲ್ಲಿ ಓಲೆಕಾರರು ಇರುತ್ತಿದ್ದರು. ರಾಜರುಗಳ ಓಲೆಗಳನ್ನು ಕಾಲ್ನಡಿಗೆಯಲ್ಲಿ ತೆಗೆದುಕೊಂಡು ಹೋಗಿ ಮುಟ್ಟಿಸಬೇಕಿತ್ತು. ದಾರಿಯಲ್ಲಿ ಎಷ್ಟೋ ಬಾರಿ ದರೋಡೆ, ಕೊಲೆಗಳಾಗಿ ವಿಷಯ ಮುಟ್ಟಿಸುವುದೇ ದುಸ್ತರವಾಗುತ್ತಿತ್ತು. ಕುದುರೆ ಏರಿ ಓಲೆಕಾರ ರಾಜ್ಯ ರಾಜ್ಯಗಳಿಗೆ ಸಂದೇಶ ಮುಟ್ಟಿಸುವ ಕಾಲವೂ ಇತ್ತು. ಕಾಲಘಟ್ಟದಲ್ಲಿ ಎಲ್ಲವೂ ಅದಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತಾ ಇತ್ತೀಚಿನ ವಿದ್ಯುನ್ಮಾನ ಯುಗದಲ್ಲಿ ಮೊಬೈಲ್ ಒಂದಿದ್ದರೆ ಸಾಕು. ಅದರಿಂದ ಇಡೀ ಪ್ರಪಂಚದ ವಿಚಾರಗಳೇ ತಿಳಿಯುವುದರ ಜೊತೆಗೆ ಕ್ಷಣಾರ್ಧದಲ್ಲಿ ಎಷ್ಟೇ ದೂರದಲ್ಲಿದ್ದರೂ ಕೇವಲ ಮೆಸೇಜ್ ಮೂಲಕ ತಲುಪಬಹುದು. ಇನ್ನು ಒಕ್ಕಣೆಯೂ ಹೆಚ್ಚು ಬೇಕಿಲ್ಲ. ಅದರಲ್ಲೂ ಇತ್ತೀಚಿನ ಜನರೇಷನ್ ಇಂಗ್ಲಿಷ್ ಪದಗಳ ಒಂದು ಅಕ್ಷರ ಟೈಪ್ ಮಾಡಿದರೆ ಒಂದು ಪದದ ಅರ್ಥ ಕೊಡುತ್ತದೆ. ಇನ್ನು ಒಂದು ಸಿಂಬಲ್ ಹಾಕಿದರೆ ಸಾಕು ಖುಷಿ ಪಡುವ, ದುಃಖ ಪಡುವ ಅರ್ಥವನ್ನು ಹೇಳುತ್ತವೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡು ಅದಕ್ಕೆ ಎಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಷ್ಟು ಜನ ಒಪ್ಪಿತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ಎಂದು ಕ್ಷಣಾರ್ಧದಲ್ಲಿ ತಿಳಿಯಬಹುದಾದ ಕಾಲವಿದು.

ಒಂದು ಫೋಟೊ ಕ್ಲಿಕ್ಕಿಸಿದರೆ ಸಾಕು ಅದು ತಕ್ಷಣವೇ ಬಹುಮಂದಿಗೆ ತಲುಪುವುದಲ್ಲದೆ ವೀಡಿಯೊ ಕಾಲ್ ಮಾಡಿದರೆ ಎಲ್ಲೇ ಇದ್ದರೂ ಮುಖಾಮುಖಿ ಮಾತನಾಡಬಹುದು. ಹತ್ತಾರು ಜನರಿಗೆ ತಲುಪುವ ವಿಷಯವನ್ನು ಕ್ಷಣದಲ್ಲಿ ಗ್ರೂಪ್ ಮೂಲಕ ತಲುಪಿಸಬಹುದು. ಅದೇ ರೀತಿ ಇನ್ಸ್‌ಸ್ಟಾಗ್ರಾಮ್, ಟ್ವಿಟರ್, ಇತ್ತೀಚೆಗಷ್ಟೇ ಬ್ಯಾನ್ ಆದ ಟಿಕ್ ಟಾಕ್ ನಂತಹುಗಳು ಸ್ವೇಚ್ಛೆಯಿಂದ ತಮಗನಿಸಿದ್ದನ್ನು ಹಂಚಿಕೊಳ್ಳುವ ಅವಕಾಶ ಇದ್ದು ಯುವ ಜನತೆಗೆ ಇದೊಂದು ಆಕರ್ಷಕ ಮಾಧ್ಯಮವಾಗಿತ್ತು. ಗ್ರೂಪ್ ಫೋಟೊ, ಸೆಲ್ಫಿ, ಟಿಕ್ ಟಾಕ್ ನಂತಹುಗಳಿಂದ ಎಷ್ಟೋ ಅನಾಹುತಗಳಿಗೂ ಎಡೆ ಮಾಡಿಕೊಟ್ಟ ಸುದ್ದಿಗಳನ್ನು ಓದಿದ್ದೇವೆ. ಹೀಗೆ ನಾಗಾಲೋಟದ ಇವತ್ತಿನ ಜಗತ್ತಿನಲ್ಲಿ ಯಾವುದಕ್ಕೂ ಸಮಯವೂ ಇಲ್ಲ, ನಿಧಾನವೂ ಇಲ್ಲ, ಎಲ್ಲವೂ ಬೇಗನೆ ಆಗಬೇಕು ಆಗುತ್ತದೆ ಕೂಡ.

ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆ ತನ್ನ ರಾಷ್ಟ್ರೀಯ ಅಂಚೆ ಸಪ್ತಾಹವನ್ನು ಅಕ್ಟೋಬರ್ 9 ರಿಂದ 15ರವರೆಗೆ ಆಚರಿಸುತ್ತಿದೆ. ಅಂಚೆಯಣ್ಣನಿಂದ ಹಿಡಿದು, ಹಳ್ಳಿಯಿಂದ ದಿಲ್ಲಿವರೆಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಅಂಚೆ ಕಾಲಕ್ಕೆ ತಕ್ಕಂತೆ ತನ್ನ ಕಾರ್ಯವೈಖರಿ, ವಿವಿಧ ಸೇವೆಗಳ ಮೂಲಕ ಆಧುನೀಕರಣದ ತಾಂತ್ರಿಕ ಯುಗದ ವೇಗದ ಗತಿಗೆ ತಕ್ಕಂತೆ ಅನೇಕ ಹೊಸ ಹೊಸ ಯೋಜನೆಗಳನ್ನು ರೂಪುಗೊಳಿಸುತ್ತಿದೆ. ಸ್ಪೀಡ್ ಪೋಸ್ಟ್, ಇಂಸ್ಟಂಟ್ ಮನಿಯಾರ್ಡರ್, ಡೈರೆಕ್ಟ್ ಪೋಸ್ಟ್, ಇ-ಪೋಸ್ಟ್, ಮೊಬೈಲ್ ಮನಿ ಟ್ರಾನ್ಸ್‌ಫರ್, ಲಾಜಿಸ್ಟಿಕ್ ಪೋಸ್ಟ್, ಅಂಚೆ ಚೀಟಿ ಸಂಗ್ರಹ, ಪೋಸ್ಟ್ ಕ್ರಾಸಿಂಗ್, ಅಂಚೆ ಜೀವವಿಮೆಯಲ್ಲದೆ ಇತರ ಉಳಿತಾಯ ಖಾತೆಗಳ ಸೌಲಭ್ಯಗಳು, ವಿವಿಧ ಲಾಭದಾಯಕ ಠೇವಣಿಗಳು ಮತ್ತಿತರ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸಿ ನಾಗಾಲೋಟದ ಜಗತ್ತಿಗೆ ತಕ್ಕಂತೆ ಕೆಲಸ ಮಾಡುತ್ತಿರುವುದು ಸ್ತುತ್ಯಾರ್ಹ. ಅದೇನೆ ಇರಲಿ ಹಿಂದಿನ ಕಾಲದ ಒಂದು ಕಾಗದ ಬರೆಯುವ, ಅದನ್ನು ಕಾತುರದಿಂದ ಓದುವ, ಅದರಿಂದಾಗುವ ಖುಷಿ ಸಂಭ್ರಮ ಈಗಿನ ಕ್ಷಣದಲ್ಲಿ ಸಿಗುವ ಸುದ್ದಿಗೆ ಸಿಗಲಾರದು. ಯಾವಾಗಲೂ ನಿರೀಕ್ಷೆಯೇ ಹೆಚ್ಚು ಖುಷಿ ಕೊಡುವ ವಿಚಾರ ಅಲ್ಲವೇ ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)