varthabharthi


ಕರ್ನಾಟಕ

ಜನರಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಪ್ರವಾಹ

ವಾರ್ತಾ ಭಾರತಿ : 18 Oct, 2020

ಬೆಂಗಳೂರು, ಅ. 17: ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ತಗ್ಗಿದೆ. ಆದರೆ, ಇಲ್ಲಿನ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ಹತ್ತು ಹೆಚ್ಚು ಜಿಲ್ಲೆಗಳ ಜನರಿಗೆ ಪ್ರವಾಹ ಭೀತಿ ದುಃಸ್ವಪ್ನವಾಗಿ ಕಾಡುತ್ತಿದೆ. ನೂರಾರು ಗ್ರಾಮಸ್ಥರು ಮನೆ, ಮಠ ಕಳೆದುಕೊಂಡು ಕಣ್ಣೀರಿಡುತ್ತಿದ್ದು, ಹೊಲ-ಮನೆ, ಬದುಕು ಎಲ್ಲವೂ ನೀರುಪಾಲಾಗಿವೆ.

ಇಡೀ ರಾಜ್ಯವೇ ಕೊರೋನ ವೈರಸ್ ಸೋಂಕಿನ ಆತಂಕದ ನಡುವೆಯೂ `ದಸರಾ ಉತ್ಸವ'ದ ಸಂಭ್ರಮದಲ್ಲಿದ್ದರೆ, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳು ನೂರಾರು ಗ್ರಾಮಸ್ಥರು ಜಲ ದಿಗ್ಬಂಧನದಲ್ಲಿ ಹಗಲು-ರಾತ್ರಿಗಳನ್ನು ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.. ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಹೆಲಿಕಾಪ್ಟರ್ ಬಳಕೆ ಮಾಡಲಾಗುವುದೆಂದು ಸರಕಾರ ಹೇಳುತ್ತಿದೆ. ಆದರೆ, ಈವರೆಗೂ ಯಾವುದೇ ಹೆಲಿಕಾಪ್ಟರ್ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ: `ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್‍ನಿಂದ ಭೀಮಾ ನದಿಗೆ 8ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆಯಿದ್ದು, ಇದು ಭೀಕರ ಪ್ರವಾಹದ ಮುನ್ಸೂಚನೆಯಾಗಿರುತ್ತದೆ. ಆದುದರಿಂದ ಜಿಲ್ಲೆಯ ಭೀಮಾ ಹಾಗೂ ಕಾಗಿಣಾ ನದಿ ತೀರದ ದಂಡೆಯ ಅಫಜಲಪೂರ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ ತಾಲೂಕಿನ ಗ್ರಾಮಸ್ಥರು ಕೂಡಲೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಸೂಚನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರವಾಹದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಈಗಾಗಲೆ 2 ಎನ್‍ಡಿಆರ್‍ಎಫ್ ತಂಡಗಳು ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯೋನ್ಮುಖವಾಗಿದೆ. ಅಲ್ಲದೆ, ಎಸ್‍ಡಿಆರ್‍ಎಫ್ ತಂಡ, ಪೊಲೀಸ್ ಹಾಗೂ ಅಗ್ನಿಶಾಮಕ ದಳ ತಂಡಗಳು ಕ್ಷೇತ್ರದಲ್ಲಿ 24 ಗಂಟೆ ಕಾಲ ಜನರ ಸಂರಕ್ಷಣೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸೇನೆ ಮತ್ತು ವಾಯುದಳದ ತಂಡಗಳು ಜಿಲ್ಲೆಗೆ ಆಗಮಿಸಲಿವೆ. ಹೀಗಾಗಿ ಸಾರ್ವಜನಿಕರು ಯಾವುದೇ ಭಯಕ್ಕೆ ಮತ್ತು ಅತಂಕಕ್ಕೆ ಒಳಗಾಗಬಾರದು. ರಕ್ಷಣಾ ಕಾರ್ಯಕ್ಕೆ ಜನರು ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಈ ಮಧ್ಯೆ ಉತ್ತರ ಕರ್ನಾಟಕ ಭಗದ ವಿಜಯಪುರ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಶಾಂತವಾಗಿದೆ. ಆದರೆ, ಮಹಾರಾಷ್ಟ್ರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಯ ಬಿಟ್ಟ ಪರಿಣಾಮ ಭೀಮಾನದಿ ಪ್ರವಾಹ ಹೆಚ್ಚಾಗಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ, ಕಡ್ಲೇವಾಡ, ಬ್ಯಾಡಗಿಹಾಳ, ಶಂಬೇವಾಡ, ಕುಮಸಗಿ, ಗ್ರಾಮದ ಸುತ್ತುವರೆದಿರುವ ಭೀಮಾನದಿಯ ನೀರು, ದೇವಣಗಾಂವ ಗ್ರಾಮದ ಬಸ್ ನಿಲ್ದಾಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಿದೆ.

ಮಳೆ ಮತ್ತು ಪ್ರವಾಹದಿಂದಾಗಿ ವಿಜಯಪುರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಏಳು ಮಂದಿಯನ್ನು ರಕ್ಷಣಾ ತಂಡ ಸುರಕ್ಷಿತವಾಗಿ ರಕ್ಷಿಸಿದೆ. ಅದೇ ರೀತಿ ಪ್ರವಾಹದಿಂದಾಗಿ ಮರವೇರಿ ಕುಳಿತಿದ್ದ 110 ವರ್ಷದ ಅಜ್ಜಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ, ಮಳೆಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಬೆಳೆ ನೀರುಪಾಲಾಗಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎಂದು ಗೊತ್ತಾಗಿದೆ.

ಸಂಪರ್ಕ ಕಡಿತ: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಲಬುರಗಿಯ ಜೇವರ್ಗಿ ಬಳಿಯ ಕಟ್ಟಿಸಂಗಾವಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿಬರ್ಂಧಿಸಲಾಗಿದೆ. ಹೀಗಾಗಿ ಕಲಬುರಗಿ ಮತ್ತು ವಿಜಯಪುರ ನೇರ ಸಂಚಾರ ಸ್ಥಗಿತಗೊಂಡಿದೆ. ಅಫಜಲಪುರ ಮಾರ್ಗವಾಗಿ ದೇವಣಗಾಂವ ಸೇತುವೆ ಮೂಲಕ ಸಂಚರಿಸಬೇಕಾಗಿದೆ. ಭೀಮಾ ನದಿಯಲ್ಲಿ 7.80ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದ್ದು, ಕಟ್ಟಿಸಂಗಾವಿಯ ಹೊಸ ಸೇತುವೆ ಮುಳುಗದಿದ್ದರೂ ಸಂಚಾರ ಬಂದ್ ಮಾಡಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಅಪಾಯ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಅಗ್ನಿಶಾಮಕ ತಂಡದಿಂದ 10 ಜನರ ರಕ್ಷಣೆ: ಭೀಮಾ ನದಿ ಪ್ರವಾಹದಿಂದ ಅಫಜಲಪೂರ ತಾಲೂಕಿನ ನಡುಗಡ್ಡೆಯಾಗಿರುವ ಭೋಸಗಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 7 ಜನರನ್ನು ವಿಶ್ವನಾಥ ನೇತೃತ್ವದ ಅಗ್ನಿಶಾಮಕ ದಳದ ತಂಡವು ಫೈರ್ ಬೋಟ್ ಮುಖಾಂತರ ಅವರನ್ನು ರಕ್ಷಿಸಿ ಗ್ರಾಮದ ಎತ್ತರ ಪ್ರದೇಶದಲ್ಲಿ ಸರಕಾರದಿಂದ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದೆ.
ಅದಲ್ಲ, ಹಿರಿಯಾಳ ಗ್ರಾಮದಲ್ಲಿ ಇಬ್ಬರು ಮತ್ತು ಮಣ್ಣೂರಿನಲ್ಲಿ ಓರ್ವರನ್ನು ತಂಡ ಸಂರಕ್ಷಣೆ ಮಾಡಿದೆ. ಕಲಬುರಗಿಯ ಅಗ್ನಿಶಾಮಕ ಇಲಾಖೆ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ತಂಡದೊಂದಿಗೆ ಈ ಸಂದರ್ಭದಲ್ಲಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಸಂತ್ರಸ್ತರ ಸ್ಥಳಾಂತರಕ್ಕೆ ಅಗತ್ಯ ಮಾರ್ಗದರ್ಶನ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)