varthabharthi


ಬೆಂಗಳೂರು

ತಮ್ಮ ಮತ ಮಾರಾಟವಾಗಿದ್ದಕ್ಕೆ ಆರ್.ಆರ್.ನಗರ ಕ್ಷೇತ್ರದ ಜನರಲ್ಲಿ ಆಕ್ರೋಶ ಮೂಡಿದೆ: ಡಿ.ಕೆ.ಶಿವಕುಮಾರ್

ವಾರ್ತಾ ಭಾರತಿ : 18 Oct, 2020

ಬೆಂಗಳೂರು, ಅ.17: ತಾವು ಹಿಂದೆ ಚಲಾಯಿಸಿದ ಮತಗಳನ್ನು ಗೆದ್ದ ಅಭ್ಯರ್ಥಿ ಮಾರಾಟ ಮಾಡಿಕೊಂಡಿದ್ದಕ್ಕೆ ರಾಜರಾಜೇಶ್ವರಿ ಕ್ಷೇತ್ರದ ಮತದಾರರು ಆಕ್ರೋಶಗೊಂಡಿದ್ದು, ಮುಂದಿನ ತಿಂಗಳು 3ನೇ ತಾರೀಖಿನಂದು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರರು ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ವೀಕ್ಷಕರ ಸಭೆ ನಡೆಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.  ನಾವು ಕೊಟ್ಟ ಮತವನ್ನು ಮಾರಿಕೊಳ್ಳಲಾಗಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ ಎಂದರು.

ನಿಮ್ಮ ಕೈಯಲ್ಲಿ ಆಗಿಲ್ಲ ಅಂದ್ರೆ ಅಧಿಕಾರ ಬಿಡಿ: ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಭೇಟಿ ನೀಡಲು ತಮಗೆ ವಯಸ್ಸಾಗಿದೆ, ಕೋವಿಡ್ ಇದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣೀರು ಹಾಕಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, 'ಜನರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದರೆ, ಸಚಿವ ಸ್ಥಾನ ಬಿಡಬೇಕು. ಅಧಿಕಾರ ಬಿಟ್ಟು ಮನೆ ಸೇರಿಕೊಂಡರೆ ಉತ್ತಮ ಎಂದರು.

ನಿಮ್ಮ ಸ್ವಂತ ಹಿತಕ್ಕಾಗಿ ರಾಜ್ಯ ಹಾಗೂ ರಾಜ್ಯದ ಜನರನ್ನು ಬಲಿ ಕೊಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಈಗಾಗಲೇ ತಮ್ಮ ಕೈಲಾದ ಸಹಾಯ ಮಾಡಿ ಅಂತಾ ಸೂಚನೆ ನೀಡಿದ್ದೇವೆ. ಅವರಿಗೆ ಧೈರ್ಯ ತುಂಬಲು ಹೇಳಿದ್ದೇವೆ. ಮಿಕ್ಕ ಕೆಲಸ ಮಾಡುವುದು ಸರಕಾರದ ಕರ್ತವ್ಯ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಸಹಾಯ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರು ಇಲ್ಲಿಗೆ ಬರಲೂ ಇಲ್ಲ. ಯಾವ ಸಹಾಯವನ್ನು ಮಾಡಲೂ ಇಲ್ಲ. ಈ ಸರಕಾರದಲ್ಲಿ ಜೀವಕ್ಕೆ ರಕ್ಷಣೆ ಇಲ್ಲದಾಗಿದೆ. ಮಾಧ್ಯಮಗಳು ಜನರು ಹಾಗೂ ಸರಕಾರದ ನಡುವಣ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಯಾವ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಧ್ಯಮಗಳೆ ಜನರಿಗೆ ಮಾಹಿತಿ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)