varthabharthi


ಸಂಪಾದಕೀಯ

ಹಸಿವನ್ನು ಗೆಲ್ಲುವ ಮೂಲಕ ರೋಗಗಳನ್ನು ಗೆಲ್ಲೋಣ

ವಾರ್ತಾ ಭಾರತಿ : 19 Oct, 2020

ಭಾರತದಲ್ಲಿ ಹಸಿವು ಸುದ್ದಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಸ್ವಾತಂತ್ರೋತ್ತರ ಭಾರತದ ಎಲ್ಲ ಸರಕಾರಗಳೂ ಈ ಹಸಿವಿನ ವಿರುದ್ಧ ಸಮರ ಸಾರುತ್ತಲೇ ಬಂದಿವೆಯಾದರೂ, ಪ್ರತಿಬಾರಿಯೂ ಈ ಸಮರದಲ್ಲಿ ಹಸಿವೇ ಗೆದ್ದಿದೆ. ಇಂದಿರಾಗಾಂಧಿಯ ‘ಗರೀಬಿ ಹಠಾವೋ’ ದಿಂದ ಹಿಡಿದು ವಾಜಪೇಯಿಯ ‘ರೋಟಿ ಔರ್ ಕಪ್ಡಾ’ದವರೆಗೆ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಹಸಿವನ್ನು ಗರಿಷ್ಠ ಮಟ್ಟದಲ್ಲಿ ಬಳಸಿವೆ. ಹಸಿವನ್ನು ಬಳಸಿಕೊಂಡು ಚುನಾವಣೆಯಲ್ಲಿ ಮತ ಪಡೆಯುವುದು ಕಷ್ಟ ಎಂದು ಅರಿತುಕೊಂಡ ಬಿಜೆಪಿ, ಮನುಷ್ಯನ ಭಾವನಾತ್ಮಕವಾದ ಇತರ ದಾಹಗಳನ್ನು ಚುನಾವಣೆಯಲ್ಲಿ ಬಳಸಿಕೊಂಡಿತು. ‘ಅನ್ನ’ ಹಂಚಿ ಚುನಾವಣೆ ಗೆಲ್ಲುವುದಕ್ಕಿಂತ ದ್ವೇಷ ಹಂಚಿ ಗೆಲ್ಲುವುದು ಸುಲಭ ಎನ್ನುವುದನ್ನು ರಾಜಕೀಯ ಪಕ್ಷಗಳು ಕಂಡುಕೊಂಡ ದಿನದಿಂದ ರಾಜಕೀಯ ಪ್ರಣಾಳಿಕೆಯಲ್ಲಿ ‘ಹಸಿವು’ ಕೆಳ ತಳ್ಳಲ್ಪಟ್ಟಿತು. ಬಡವರಿಗೆ ಕಡಿಮೆ ದರದಲ್ಲಿ ಅನ್ನಕೊಟ್ಟಿದ್ದೇನೆ ಎಂದವರು ಚುನಾವಣೆಯಲ್ಲಿ ಸೋತು, ‘ರಾಮಮಂದಿರ, ಪಾಕಿಸ್ತಾನ, ಪಟೇಲ್ ಪ್ರತಿಮೆ’ ಇತ್ಯಾದಿಗಳನ್ನು ಘೋಷಿಸಿದವರು ಗೆಲ್ಲತೊಡಗಿದಂತೆ ಸರಕಾರ, ಬಡವರಿಗಾಗಿ ಮೀಸಲಿಟ್ಟ ಹಣವನ್ನು ಹಂತ ಹಂತವಾಗಿ ಕಡಿತ ಮಾಡುತ್ತಾ ಬಂತು. ಪರಿಣಾಮವಾಗಿ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ದೇಶದಲ್ಲಿ ತಲೆಯೆತ್ತಿದೆ.

ಬುಲೆಟ್ ಟ್ರೈನ್‌ಗೆ ಬಿರುಸಿನಿಂದ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ರಾಮಮಂದಿರಕ್ಕೆ ಅಡಿಪಾಯ ಹಾಕಲಾಗಿದೆ. ಕೃಷ್ಣ ಮಂದಿರ ವಿವಾದವನ್ನು ಮುನ್ನೆಲೆಗೆ ತರಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಇವೆಲ್ಲವೂ ಈ ದೇಶವನ್ನು ವಿಶ್ವಗುರುವನ್ನಾಗಿಸಲಿದೆ ಎಂದು ಜನರನ್ನು ನಂಬಿಸುವುದಕ್ಕೆ ಮಾಧ್ಯಮಗಳನ್ನು ಹಗಲು ರಾತ್ರಿ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಇಂದು ಭಾರತ ವಿಶ್ವದಲ್ಲಿ ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ತೋರಿಸಿದೆ. ಕಳೆದ ವರ್ಷ ಭಾರತ ಹಸಿವಿನ ಸೂಚ್ಯಂಕದಲ್ಲಿ 102ನೇ ಸ್ಥಾನದಲ್ಲಿದ್ದರೆ, ಈ ವರ್ಷ 94ನೇ ಸ್ಥಾನಕ್ಕೇರಿದೆ. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ನಮ್ಮದೇ ನೆರೆಯ ಪಾಕಿಸ್ತಾನ 88ನೇ ರ್ಯಾಂಕ್‌ನ್ನು ಹೊಂದಿದೆ. ಪಾಕಿಸ್ತಾನದಲ್ಲಿರುವುದಕ್ಕಿಂತ ಹಸಿದವರ ಸಂಖ್ಯೆ ಸರಾಸರಿಯಾಗಿ ಭಾರತದಲ್ಲಿ ಹೆಚ್ಚಿದ್ದಾರೆ. ಬಾಂಗ್ಲಾದೇಶಕ್ಕಿಂತಲೂ ಭಾರತದ ಸಾಧನೆ ಕಳಪೆಯಾಗಿದೆ ಎಂದು ಅಂತರ್‌ರಾಷ್ಟ್ರೀಯ ಮಟ್ಟದ ವರದಿ ಹೇಳಿದೆ. ಯುಪಿಎ ಆಡಳಿತ ಕಾಲದಲ್ಲಿ ಭಾರತದ ಅಪೌಷ್ಟಿಕತೆ ಶೇ. 45ನ್ನು ದಾಟಿತ್ತು. ಇದೀಗ ನರೇಂದ್ರ ಮೋದಿಯ ನೇತೃತ್ವದಲ್ಲಿ ಹಸಿವು ತನ್ನ ದಿಗ್ವಿಜಯವನ್ನ್ನು ವಿಸ್ತರಿಸಿದೆ.

 ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಪ್ರದರ್ಶನ ಹೊರ ಬೀಳುತ್ತಿದ್ದಂತೆಯೇ, ವಿವಿಧ ತಜ್ಞರು, ಅಪೌಷ್ಟಿಕತೆಯ ಕುರಿತಂತೆ ಸರಕಾರದ ನಿರ್ಲಕ್ಷವನ್ನು ಟೀಕಿಸಲು ಆರಂಭಿಸಿದ್ದಾರೆ. ಎಂದಿನಂತೆಯೇ ಸರಕಾರ ತನ್ನ ವೈಫಲ್ಯಕ್ಕೆ ‘ಕೊರೋನ’ವನ್ನು ದೂರುತ್ತಿದೆ. ಆದರೆ ಸತ್ಯ ಅದರಾಚೆಗೆ ಇದೆ. ಕಳೆದ ಹತ್ತು ವರ್ಷಗಳಿಂದ ಸರಕಾರದ ಎಲ್ಲ ಕಾರ್ಯಕ್ರಮಗಳು ಶ್ರೀಮಂತರನ್ನು ಕೇಂದ್ರೀಕರಿಸಿಕೊಂಡಿದೆ. ಕಾರ್ಪೊರೇಟ್ ವಲಯದ ಏಳಿಗೆಯೇ ದೇಶದ ಏಳಿಗೆ ಎಂದು ಬಲವಾಗಿ ನಂಬಿರುವ ಸರಕಾರ, ದೇಶದ ಬಡವರು ಅಭಿವೃದ್ಧಿಯ ಭಾಗವಾಗಿದ್ದಾರೆ ಎನ್ನುವುದನ್ನು ಮರೆತು ಬಿಟ್ಟಿದೆ. ಬೃಹತ್ ಯೋಜನೆಗಳನ್ನು ಘೋಷಿಸಿ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವುದು, ಆ ಮೂಲಕ ಈ ದೇಶದಲ್ಲಿ ಅವರಿಂದ ಬಂಡವಾಳ ಹೂಡುವಂತೆ ಮಾಡುವುದನ್ನೇ ತನ್ನ ಅಭಿವೃದ್ಧಿಯ ಮಾನದಂಡವನ್ನಾಗಿಸಿದೆ.

ಈ ಕಾರಣದಿಂದಲೇ ಅದು ಬೃಹತ್ ಪಟೇಲ್ ಪ್ರತಿಮೆಯ ಮೂಲಕ, ಬುಲೆಟ್ ಟ್ರೈನ್‌ಗಳ ಮೂಲಕ ವಿಶ್ವವನ್ನು ಸೆಳೆಯಲು ಹೊರಟಿತು. ನೋಟು ನಿಷೇಧ, ಜಿಎಸ್‌ಟಿ, ಲಾಕ್‌ಡೌನ್ ಇವೆಲ್ಲವೂ ಭಾರತದ ಆರ್ಥಿಕತೆಯ ತಳಸ್ತರವನ್ನು ದುರ್ಬಲಗೊಳಿಸಿತು. ಗ್ರಾಮೀಣ ಉದ್ದಿಮೆಗಳು, ಮಧ್ಯಮಗಾತ್ರದ ಉದ್ದಿಮೆಗಳು, ಚಿಲ್ಲರೆ ವ್ಯಾಪಾರ ಎಲ್ಲವೂ ಸರಕಾರದ ತಪ್ಪು ನಿರ್ಧಾರಗಳಿಂದ ನಾಶವಾದವು. ಡಿಜಿಟಲೀಕರಣ, ಆಧಾರ್‌ಕಾರ್ಡ್ ಮೊದಲಾದ ಯೋಜನೆಗಳು ಬಡವರನ್ನು ಈ ದೇಶದ ಸವಲತ್ತುಗಳಿಂದ ವಂಚಿತರನ್ನಾಗಿಸಿದವು. ಊಟಕ್ಕೆ ರೇಷನ್ ಪಡೆಯುವುದೂ ಅವರಿಗೆ ದುಸ್ತರವಾಯಿತು. ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ರೇಷನ್ ಸಿಗದೇ ಸಾವನ್ನಪ್ಪಿದವರ ಕುರಿತ ವರದಿಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದವು. ಅದಾಗಲೇ ಸಾರ್ವಜನಿಕ ಆಹಾರ ವಿತರಣೆಯ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಸರಕಾರದ ಹೊಸ ಹೊಸ ನಿಯಮಗಳು ಬಡವರನ್ನೇ ನೇರವಾಗಿ ಕಾಡಿದವು.

ಇದೀಗ ಎಲ್ಲದಕ್ಕೂ ಕೊರೋನ ಕಾರಣವೆಂದು ಸರಕಾರ ಸಮಜಾಯಿಶಿ ನೀಡುತ್ತಿದೆ. ನೋಟು ನಿಷೇಧದ ದಿನಗಳಿಂದ, ತಳಸ್ತರದಲ್ಲಿ ಹೆಚ್ಚುತ್ತಿರುವ ಹಸಿವು ತೀವ್ರ ಚರ್ಚೆಯಾಗಿರುವುದನ್ನು ಸರಕಾರ ಮರೆ ಮಾಚುತ್ತಿದೆ. ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ ಇತ್ಯಾದಿಗಳು ಈ ಜಗತ್ತಿಗೆ ಹೊಸತೇನೂ ಅಲ್ಲ. ಈ ದೇಶದಲ್ಲಿರುವ ಬಡವರ ಕುರಿತಂತೆ ಕಾಳಜಿ ಹೊಂದಿ, ಸಾರ್ವಜನಿಕ ಆಹಾರ ವಿತರಣೆಯ ವ್ಯವಸ್ಥೆಯನ್ನು ಸಮರ್ಥವಾಗಿ ರೂಪಿಸಿಕೊಂಡಿದ್ದರೆ, ಹಸಿವನ್ನು ಎದುರಿಸುವುದನ್ನು ಆದ್ಯತೆಯಾಗಿ ಗುರುತಿಸಿಕೊಂಡಿದ್ದರೆ ಕೊರೋನ ಆಗಮಿಸಿದರೂ, ಈ ದೇಶ ಹೆದರಬೇಕಾಗಿರಲಿಲ್ಲ. ಲಾಕ್‌ಡೌನ್‌ನಿಂದ ದೇಶ ಹಸಿವಿನಿಂದ ಕಂಗಾಲಾಗಿರುವಾಗ, ಗೋದಾಮಿನಲ್ಲಿದ್ದ ಧಾನ್ಯಗಳನ್ನು ಸ್ಯಾನಿಟೈಸರ್ ತಯಾರಿಗೆ ಬಳಸಲು ಹೊರಟಿತೇ ಹೊರತು, ಜನರ ಹಸಿವನ್ನು ಇಂಗಿಸುವುದಕ್ಕೆ ಆದ್ಯತೆ ನೀಡಲಿಲ್ಲ. ಇಂದು ಕೊರೋನ ನಮ್ಮ ನಡುವಿನಿಂದ ಇಲ್ಲವಾದರೂ, ಹಸಿವು ಇನ್ನಷ್ಟು ಮಾರಕ ರೋಗಗಳನ್ನು ದೇಶದಲ್ಲಿ ಉತ್ಪಾದಿಸುವ ಸಾಧ್ಯತೆಗಳಿವೆ ಎನ್ನುವ ಎಚ್ಚರಿಕೆಯನ್ನು ಈಗಾಗಲೇ ತಜ್ಞರು ನೀಡಿದ್ದಾರೆ.

ಕೊರೋನ ಅತಿ ಬೇಗ ಇನ್ನೊಬ್ಬರಿಗೆ ಹರಡುವ ಸೋಂಕು ಹೊರತು, ಮಾರಣಾಂತಿಕ ಸೋಂಕಲ್ಲ ಎನ್ನುವುದನ್ನು ಈಗಾಗಲೇ ವೈದ್ಯರು ತಿಳಿಸಿದ್ದಾರೆ. ಕ್ಷಯ ಮತ್ತು ಕೊರೋನ ಇವೆರಡಕ್ಕೆ ಹೋಲಿಸಿದರೆ ಭಾರತದಂತಹ ದೇಶ ಹೆದರಬೇಕಾದುದು ಕ್ಷಯ ರೋಗಕ್ಕೆ. ಕ್ಷಯ ರೋಗದ ನಿರ್ಮೂಲನದಲ್ಲಿ ಈವರೆಗೆ ಸಾಧಿಸಲಾಗಿರುವ ಪ್ರಗತಿಯನ್ನು ಕೊರೋನ ವೈರಸ್ ಸಾಂಕ್ರಾಮಿಕ ರೋಗ ನಾಶ ಪಡಿಸುವ ಬೆದರಿಕೆಯನ್ನು ಒಡ್ಡಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ. ಭಾರತ ಮತ್ತು ದಕ್ಷಿಣ ಆಫ್ರಿಕ ಮುಂತಾದ ಅತಿ ಹೆಚ್ಚು ಕ್ಷಯರೋಗ ಪೀಡಿತ ದೇಶಗಳು ಕ್ಷಯ ರೋಗದ ಪತ್ತೆ ಮತ್ತು ಚಿಕಿತ್ಸೆಗಾಗಿ ಸಾಮಾನ್ಯವಾಗಿ ಬಿಡುಗಡೆ ಮಾಡುತ್ತಿರುವ ಹಣವನ್ನು ಕೊರೋನ ವಿರುದ್ಧದ ಹೋರಾಟಕ್ಕಾಗಿ ವ್ಯಯಿಸುತ್ತಿವೆೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಕೊರೋನ ಇಲ್ಲವಾದರೂ ಭಾರತದ ಆರೋಗ್ಯ ಸಮಸ್ಯೆ ಮುಗಿಯುವುದಿಲ್ಲ. ಭವಿಷ್ಯದಲ್ಲಿ ದೇಶಕ್ಕೆ ಕ್ಷಯ ರೋಗ ಎರಡು ಕಾರಣದಿಂದ ಬಹುದೊಡ್ಡ ಸಮಸ್ಯೆಯಾಗಲಿದೆ.

ಒಂದು, ಕ್ಷಯ ರೋಗಕ್ಕಾಗಿ ಮೀಸಲಿಟ್ಟ ನಿಧಿ ಈಗಾಗಲೇ ಬೇರೆ ಬೇರೆ ಸೇವೆಗಳಿಗೆ ಹಂಚಿಹೋಗಿರುವುದರಿಂದ ಕ್ಷಯ ರೋಗಿಗಳಿಗೆ ಔಷಧಿ, ಚಿಕಿತ್ಸೆ ಸಮಸ್ಯೆಯಾಗಲಿದೆ. ಎರಡನೆಯದು ಅಪೌಷ್ಟಿಕತೆಯೇ ಕ್ಷಯ ರೋಗಕ್ಕೆ ಬಹುಮುಖ್ಯ ಕಾರಣವಾಗಿರುವುದರಿಂದ ಹೆಚ್ಚುತ್ತಿರುವ ಹಸಿವೂ ಕ್ಷಯ ರೋಗ ಉಲ್ಬಣಿಸುವುದಕ್ಕೆ ಕಾರಣವಾಗಲಿದೆ. ಇಂತಹ ಹೊತ್ತಿನಲ್ಲಿ ಅತ್ಯಧಿಕ ಪ್ರೊಟೀನ್‌ಯುಕ್ತ ಗೋಮಾಂಸದಂತಹ ಆಹಾರದ ವಿರುದ್ಧ ಸರಕಾರ ತಳೆದಿರುವ ದ್ವಂದ್ವ ನೀತಿಯಲ್ಲಿ ಬದಲಾವಣೆಯಾಗಬೇಕಾಗಿದೆ. ಗೋಮಾಂಸದಂತಹ ಆಹಾರ, ಹಸಿವಿನಿಂದ ಬಳಲುತ್ತಿರುವ ದೇಶೀಯ ಜನರಿಗೆ ಮೊದಲು ಸಿಗಬೇಕು. ಆ ಬಳಿಕ ವಿದೇಶಕ್ಕೆ ರಫ್ತು ಮಾಡಬೇಕು. ಗೋಮಾಂಸ ಸೇವನೆಯು ಆಹಾರ ಪದ್ಧತಿಯ ಬಹುಮುಖ್ಯ ಭಾಗ ಎನ್ನುವುದನ್ನು ಸರಕಾರ ಒಪ್ಪುವುದರಿಂದ ಅಪೌಷ್ಟಿಕತೆಗೆ ಒಂದಿಷ್ಟು ಕಡಿವಾಣ ಹಾಕಬಹುದು. ಬಡವರನ್ನು ಗುರುತಿಸುವ ಮಾನದಂಡದಲ್ಲಿಯೂ ಬದಲಾವಣೆಯಾಗಬೇಕಾಗಿದೆ. ಗೋದಾಮಿನಲ್ಲಿ ಹುಳುಹುಪ್ಪಟೆಗಳಿಗೆ ಆಹಾರವಾಗುತ್ತಿರುವ ಧಾನ್ಯಗಳು ಅರ್ಹರ ಮನೆಯನ್ನು ಸೇರುವಂತೆ ಮಾಡಲು ಆಹಾರ ವಿತರಣಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳು ಆಗಬೇಕಾಗಿದೆ. ಹಸಿವನ್ನು ಗೆಲ್ಲುವುದರಿಂದ ರೋಗಗಳನ್ನು ಗೆಲ್ಲಬಹುದು ಎನ್ನುವ ಸತ್ಯವನ್ನು ಸರಕಾರ ಆದಷ್ಟು ಬೇಗ ಮನವರಿಕೆ ಮಾಡಿಕೊಳ್ಳಬೇಕು. ಇಲ್ಲವಾದರೆ, ಮುಂದೊಂದು ದಿನ ಭಾರತ ವಿಶ್ವಗುರುವಾಗುವುದಿರಲಿ, ಕ್ಷಯದಂತಹ ರೋಗಗಳಿಂದ ವಿಶ್ವಕ್ಕೆ ಸಮಸ್ಯೆಯಾಗಿ ಪರಿವರ್ತನೆ ಹೊಂದಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)