varthabharthi


ಅನುಗಾಲ

ದ್ವೇಷವೆಂಬ ಸಾಮಾಜಿಕ ಸೋಂಕು

ವಾರ್ತಾ ಭಾರತಿ : 22 Oct, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೊರೋನದ ಹಾವಳಿಯ ಒಂದು ಹಂತದಲ್ಲಿ ಸಮೂಹ ಸೋಂಕು (Community Transmission) ಎಂಬ ಅಪಾಯದ ಸ್ಥಿತಿಯಿದೆ. ಸೋಂಕು ಎಲ್ಲಿಂದ ಉದಿಸಿತೆಂದು ಗೊತ್ತಾಗದ ಸ್ಥಿತಿ. ಈ ದೇಶದಲ್ಲಿ ದ್ವೇಷವೂ ಇದೇ ಸ್ಥಿತಿಯಲ್ಲಿದೆ. ಇದರ ಬೇರು ಬಹಳ ಆಳಕ್ಕಿಳಿಯದಂತೆ ಮತ್ತು ಅದನ್ನು ನಾಶಮಾಡಬೇಕಾದ ಅಹಿಂಸಾ ಚಳವಳಿಯನ್ನು ಶೋಧಿಸಬೇಕಾಗಿದೆ.

ಸದ್ಯ ಭಾರತದಲ್ಲಿ (ಇತರ ದೇಶಗಳಲ್ಲೂ ಇವೆಯಾದರೂ ನಮ್ಮಪಾಡು ನಮಗಿರಲಿ!) ಕೊರೋನಕ್ಕಿಂತಲೂ ಭಯಾನಕ ಪಿಡುಗು ದೇಶವನ್ನೇ ಬಾಧಿಸುತ್ತಿದೆ. ಯೋಚಿಸಬಲ್ಲ ಎಲ್ಲರು ಚಿಂತಿಸಬೇಕಾದ (ಮತ್ತು ಸಾಕಷ್ಟು ಚಿಂತಕರು ಗಮನ ಹರಿಸದೇ ಇರುವ) ಈ ಅಪಾಯಕಾರಿ ಬೆಳವಣಿಗೆಯೆಂದರೆ ದ್ವೇಷ. ಎಂದೂ ಭಾರತ ಈ ರೀತಿಯ ದ್ವೇಷಕ್ಕೆ ಒಳಗಾಗಿರಲಿಲ್ಲ ಎಂದರೆ ಅದಕ್ಕೆ ಸಮರ್ಥನೆ ಬೇಕಿಲ್ಲ. ದಿನನಿತ್ಯದ ವರದಿಗಳನ್ನು ಗಮನಿಸಿದರೆ ಸಾಕು.

ದೇಶದ ಅತೀ ದೊಡ್ಡ ಕೈಗಾರಿಕೋದ್ಯಮಿಗಳಲ್ಲೊಂದು ಟಾಟಾ ಕಂಪೆನಿ. ಅಂಬಾನಿ-ಅದಾನಿಗಳು ಹೊಸ ತೈಲನಿಕ್ಷೇಪಗಳಂತೆ ಎದ್ದುನಿಲ್ಲುವ ಮೊದಲೇ ವಿಶ್ವಾದ್ಯಂತ ಭಾರತದ ‘ಬ್ರಾಂಡ್ ಅಂಬಾಸಡರ್’ಗಳಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದುದು ಟಾಟಾ ಕಂಪೆನಿ. ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಹೊಂದಿದ ಈ ಕಂಪೆನಿ ಅತ್ಯಂತ ದುರ್ಭರ ಸಂದರ್ಭಗಳಲ್ಲೂ ತನ್ನ ಗೌರವವನ್ನು ಉಳಿಸಿಕೊಂಡೇ ಬಂದಿತ್ತು. ಕೆಲವು ವರ್ಷಗಳ ಹಿಂದೆ ಅಸ್ಸಾಮಿನ ಸಂಘಟನೆಯೊಂದಕ್ಕೆ ಟಾಟಾ ಟೀ ಕಂಪೆನಿಯು ದೇಣಿಗೆಯನ್ನು ನೀಡಿತ್ತೆಂಬ ಕಾರಣಕ್ಕೆ ಕಂಪೆನಿಯ ಅಧ್ಯಕ್ಷ ಕೃಷ್ಣಕುಮಾರ್ ಮತ್ತಿತರ ಉನ್ನತ ಅಧಿಕಾರಿಗಳು ಬಂಧನವನ್ನೆದುರಿಸಬೇಕಾಯಿತು. ಪ್ರಾದೇಶಿಕ/ಸ್ಥಳೀಯ ಹಿತ, ಅಗತ್ಯ, ಒತ್ತಡಕ್ಕನುಸಾರವಾಗಿ ಉದ್ಯಮಗಳು ಅನೇಕ ಬಾರಿ ಹೀಗೆ ದೇಣಿಗೆಯನ್ನು ನೀಡುತ್ತವೆಯಾದರೂ ಟಾಟಾ ಕಂಪೆನಿಯು ದೇಶದ ಜನಹಿತ ಮತ್ತು ಸಮಾಜಹಿತವನ್ನು ಲಕ್ಷಿಸಿ ಬಹಳಷ್ಟು ನೆರವನ್ನು ನೀಡಿತ್ತಾದರೂ ಸರಕಾರ ಅವರ ಇತಿಹಾಸವನ್ನು ನಿರ್ಲಕ್ಷಿಸಿ ಕಠಿಣ ಕಾನೂನು ಕ್ರಮವನ್ನು ಕೈಗೊಂಡಿತು. ಆದರೂ ಟಾಟಾ ಕಂಪೆನಿಯು ತನ್ನ ಸಾಂಸ್ಥಿಕ ಹೊಣೆಯನ್ನು ನಿರ್ವಹಿಸುತ್ತಲೇ ಬಂದಿದೆ. ಇತ್ತೀಚೆಗಿನ ಕೊರೋನ ಮತ್ತಿತರ ಹಾವಳಿಯ ಸಂಕ್ರಮಣ ಸ್ಥಿತಿಯಲ್ಲಿ ಟಾಟಾ ಸಂಸ್ಥೆಗಳು ಸಾವಿರಾರು ಕೋಟಿ ರೂ. ನೆರವನ್ನು ನೀಡಿವೆಯೆಂದು ವರದಿಯಾಗಿದೆ. ಕೇರಳದ ಕಾಸರಗೋಡಿನ ಬಳಿ ವೈದ್ಯಕೀಯ ಸೌಕರ್ಯವಿಲ್ಲವೆಂಬ ಕಾರಣಕ್ಕೆ ಟಾಟಾ ಸಂಸ್ಥೆ ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಿಕೊಟ್ಟ ವಿದ್ಯಮಾನ ಇನ್ನೂ ಹಸಿರು.

ಟಾಟಾ ಸಂಸ್ಥೆಯನ್ನು ಹೊಗಳುವುದಕ್ಕಾಗಿ ಕೊಟ್ಟ ವಿವರಣೆ ಇದಲ್ಲ. ಮಹೀಂದ್ರ, ಬಜಾಜ್ ಮುಂತಾದ ಕಂಪೆನಿಗಳೂ ಹೀಗೆ ನೆರವನ್ನು ನೀಡಿವೆ. ಅಂಬಾನಿ-ಅದಾನಿಗಳೆಂಬ ಯಮಳರು ನೆರವನ್ನು ನೀಡಿದರೆಂದು ವರದಿ ಯಾದರೂ ಅವರು ಅದಕ್ಕೂ ಮಿಕ್ಕಿದ ನೆರವನ್ನು, ಅನುಕೂಲವನ್ನು ಸರಕಾರದಿಂದ ಪಡೆದರು. ಸರಕಾರದ ನೀಲಿಗಣ್ಣಿನ ಉದ್ಯಮಗಳಿಗೂ ಮಾಧ್ಯಮಗಳಿಗೂ ಅನೇಕ ಕಂಪೆನಿಗಳು ಜಾಹೀರಾತಿನ ಮೂಲಕ ನೆರವಾದದ್ದು ಈಗಿನ ಟಿಆರ್‌ಪಿ ಹಗರಣದ ವಿವರಗಳಲ್ಲಿ ಅನಾವರಣಗೊಂಡಿವೆ. ಇವುಗಳ ಬಗ್ಗೆ ಹೇಳಲು ಈಗಿರುವ ಹಗರಣಗಳೇ ಸಾಕು. ವಿಮಾನ ನಿಲ್ದಾಣಗಳು, ರಫೇಲ್ ವ್ಯವಹಾರ ಮುಂತಾದ ಕೆಲವೇ ಸಂಗತಿಗಳು ಈ ನೆರವಿನ ಕರಾಳಮುಖವನ್ನು ಹೇಳಬಲ್ಲವು. ಅದರ ಬಗ್ಗೆ ಇಲ್ಲಿ ಹೆಚ್ಚು ಹೇಳುವುದು ಅಪ್ರಸ್ತುತ. ಏಕೆಂದರೆ ಅದು ಈ ಲೇಖನದ ಉದ್ದೇಶವಲ್ಲ. ಪದ್ಮಾವತ್ ಸಿನೆಮಾದ ಕುರಿತ ಹಗರಣ ಇನ್ನೂ ಮರೆಯುವಷ್ಟು ಹಳತಾಗಿಲ್ಲ. ಟಾಟಾ ಸಂಸ್ಥೆಯು ತನ್ನ ಮಾಲಕತ್ವದ ತಾನಿಷ್ಕ್ ಆಭರಣಗಳ ಸಂಸ್ಥೆಗಾಗಿ ಸುಮಾರು 49 ಸೆಕೆಂಡುಗಳ ಒಂದು ವೀಡಿಯೊ ಜಾಹೀರಾತನ್ನು ತಯಾರಿಸಿತು. ಜಾಹೀರಾತಿನಲ್ಲಿ ಯಾರನ್ನು ಉಲ್ಲೇಖಿಸಿದರೂ ಅದು ಮಾರುಕಟ್ಟೆಯ ಅಗತ್ಯಗಳಿಗೇ ಹೊರತು ನಿಜಜೀವನದ ಪ್ರತಿಫಲನಕ್ಕಲ್ಲ. ನಮ್ಮ ಕ್ರಿಕೆಟಿಗರು, ಸಿನೆಮಾ ತಾರೆಯರು ಜಾಹೀರಾತು ನೀಡಿದರೆಂದರೆ ಅವನ್ನು ಅವರು ನಿತ್ಯ ಬಳಸುತ್ತಾರೆಂದೇನೂ ಅಲ್ಲ. ಕೊರೋನದಡಿ ಎಲ್ಲರೂ ಸಾಬೂನಿನಲ್ಲಿ ಆಗಾಗ ಕೈತೊಳೆದುಕೊಳ್ಳುತ್ತಾರೆಂದರೆ ಅದು ಜಾಹೀರಾತಿಗಾಗಿ ಅಲ್ಲ. ಆದರೆ ತಾನಿಷ್ಕ್ ನ ಈ ಜಾಹೀರಾತಿನಲ್ಲಿ ಒಂದು ಅಂತರ್‌ಧರ್ಮೀಯ ಸಂಬಂಧದ ಗುಣಾತ್ಮಕ ಚಿತ್ರಣವಿತ್ತು. ಮುಸ್ಲಿಮ್ ಕುಟುಂಬಕ್ಕೆ ಮದುವೆಯಾಗಿ ಬಂದ ಸೊಸೆಯ ಸೀಮಂತವನ್ನು ಹಿಂದೂ ಸಂಪ್ರದಾಯದಲ್ಲೇ ಮಾಡಿ ಸಂತೋಷಪಡುವ ಒಂದು ಹೃದ್ಯ ಚಿತ್ರಣವಿತ್ತು. ಇದು ವಿವೇಕವುಳ್ಳ ಯಾರನ್ನೂ ಬಾಧಿಸಲು ಸಾಧ್ಯವಿರಲಿಲ್ಲ. ಆದರೆ ಸಹಜವಾಗಿಯೇ ಅವಿವೇಕಿಗಳೇ ಹೆಚ್ಚುಳ್ಳ ಈ ದೇಶದಲ್ಲಿ ಸಮಾಜದ ಕೆಲವೇ ಅವಿವೇಕಿ ಮತಿಭ್ರಾಂತ ಮತಾಂಧರು ಈ ಜಾಹೀರಾತಿನ ವಿರುದ್ಧ ಸಿಡಿದೆದ್ದರು. ಇದನ್ನು ‘ಲವ್ ಜಿಹಾದ್’ ಎಂದು ಪ್ರತಿಭಟಿಸಿದರು. ಸಾಮಾಜಿಕ ಸಹಿಷ್ಣುತೆಗೆ ಹೆಸರಾಗಿದ್ದ, ಆದರೆ ಈಗ ಮತಾಂಧತೆಯ ನೆಲೆವೀಡಾಗಿರುವ ಗುಜರಾತಿನ ಮತ್ತಿತರ ಕೆಲವೆಡೆ ತಾನಿಷ್ಕ್ ಅಂಗಡಿಗಳಿಗೆ ಹೋಗಿ ಬಾಗಿಲು ಮುಚ್ಚಿಸಿ ಅಥವಾ ಅವರಿಂದ ಕ್ಷಮಾಯಾಚನೆಯನ್ನು ಬರೆಸಿಕೊಂಡ ಘಟನೆಗಳು ನಡೆದವು. ದೇಶದ ಕಾನೂನು ವ್ಯವಸ್ಥೆಯು ಹೀಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲೇ ಇಲ್ಲ. ಬದಲಾಗಿ ಅಲ್ಲಿ ಹಲ್ಲೆಯಾಗಿದೆಯೆಂದು ವರದಿ ಮಾಡಿದ ಎನ್‌ಡಿಟಿವಿ ಸಂಸ್ಥೆ ಮತ್ತದರ ವರದಿಗಾರರ ಮೇಲೆ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಲಾಗಿದೆಯೆಂದು ಕ್ರಿಮಿನಲ್ ಪ್ರಕರಣಗಳನ್ನು ಸರಕಾರದ ಗೂಂಡಾ ಪಡೆಯಂತಿರುವ ಪೊಲೀಸರೇ ಸ್ವಯಿಚ್ಛೆಯಿಂದ ದಾಖಲು ಮಾಡಿದರು. ಇವೆಲ್ಲವುಗಳ ನಡುವೆ ಟಾಟಾ ಸಂಸ್ಥೆಯು ಈ ಜಾಹೀರಾತನ್ನು ವಾಪಸ್ ಪಡೆದು ಘನತೆಯಿಲ್ಲದವರೆದುರು ತನ್ನ ಘನತೆಯನ್ನು ಮೊೆಯಿತು. ಕೇಂದ್ರ ಸಚಿವರೂ ಸೇರಿದಂತೆ ಈ ದೇಶದ ರಾಜಕಾರಣದಲ್ಲಿ, ಸೇನೆಯೂ ಸೇರಿದಂತೆ ಕಾರ್ಯಾಂಗದಲ್ಲಿ, ನ್ಯಾಯಾಂಗದಲ್ಲಿ, ಸಿನೆಮಾ, ಕ್ರೀಡೆ, ಸಾಹಿತ್ಯ, ಕಲೆ ಮುಂತಾದ ಸಾರ್ವಜನಿಕ ಜೀವನದಲ್ಲಿ ಅಂತರ್‌ಧರ್ಮೀಯ ವಿವಾಹವಾದ ಲಕ್ಷಾಂತರ ಜನರಿದ್ದಾರೆ. ನಿಜಕ್ಕೂ ಆಗಬೇಕಾಗಿದ್ದದ್ದೆಂದರೆ ಅಂತರ್‌ಧರ್ಮೀಯ ವಿವಾಹ ಮಾಡಿಕೊಂಡವರು, ಅವರ ಕುಟುಂಬಸ್ಥರು ಮತ್ತು ಬೆಂಬಲಿಗರು ಒಕ್ಕೊರಲಿನಲ್ಲಿ ಜಾಹೀರಾತನ್ನು ಬೆಂಬಲಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಉಚ್ಚ, ಸರ್ವೋಚ್ಚ ನ್ಯಾಯಾಲಯಗಳೂ ನ್ಯಾಯದೇವತೆಯಂತೆ ಕಣ್ಣಿಗೆ ಪಟ್ಟಿಕಟ್ಟಿಕೊಂಡವು; ಕಿವಿಗೆ ಹತ್ತಿತುಂಬಿಕೊಂಡವು. ರಾಮಾಯಣದ ಸಂದರ್ಭದಲ್ಲಿ ಋಷಿಮುನಿಗಳು ಮಾಡುತ್ತಿದ್ದ ಯಜ್ಞಯಾಗಗಳ ಕುಂಡಕ್ಕೆ ರಕ್ಕಸರು ರಕ್ತವನ್ನು ಸುರಿದು ಮಾಂಸವನ್ನೂ ಸತ್ತ ಪ್ರಾಣಿಗಳನ್ನೂ ಎಸೆದು ಅವನ್ನು ಭಂಗಗೊಳಿಸುತ್ತಿದ್ದರಂತೆ. ಅಂತಹ ಕೇಡನ್ನು ನಿವಾರಿಸುವುದಕ್ಕೆ ದೇವರೇ ಬರಬೇಕಿತ್ತು. ಆದ್ದರಿಂದ ಇಂತಹ ಭಗ್ನಗೊಳಿಸುವಿಕೆ ಈ ದೇಶದ ಪರಂಪರೆಯೆಂದು ಮತ್ತು ಬೇಕಾದರೆ ದೇವರೇ ಬರಲಿ ಎಂಬಂತೆ ಈ ಎಲ್ಲ ಶ್ರೇಷ್ಠರು, ಜ್ಯೇಷ್ಠರು ಸುಮ್ಮನಾದರೇನೋ?

ಬಯೋಪಿಕ್‌ಗಳ ಈ ಕಾಲದಲ್ಲಿ ಧೋನಿ, ಸಚಿನ್, ಮುಂತಾದ ಕ್ರಿಕೆಟ್ ಪಟುಗಳಲ್ಲದೆ ಮಿಲ್ಖಾ ಸಿಂಗ್, ಮೇರಿಕೋಂ ಮುಂತಾದ ಇತರ ಶ್ರೇಷ್ಠ ಕ್ರೀಡಾಪಟುಗಳ ಕುರಿತು ಸಿನೆಮಾಗಳು ಬಂದಿವೆ. ಅಷ್ಟೇ ಅಲ್ಲ ದೇಶದ ಪ್ರಧಾನಿ ಮೋದಿಯವರ ಕುರಿತಂತೆ ವಿವೇಕ್ ಒಬೆರಾಯ್ (ಈತ ಈಗ ಬೆಂಗಳೂರಿನ ಡ್ರಗ್ ಹಗರಣದಲ್ಲಿ ಆರೋಪಿಗಳಲ್ಲೊಬ್ಬರಾದ ಮತ್ತು ಪೊಲೀಸರಿಂದ ತಲೆತಪ್ಪಿಸಿಕೊಂಡಿರುವ ತನ್ನ ಭಾವಮೈದ ಆದಿತ್ಯ ಆಳ್ವರನ್ನು ಅಡಗಿಸಿಟ್ಟ ಸಂಶಯದಲ್ಲಿ ತನ್ನ ಮುಂಬೈ ಮನೆಯನ್ನು ತಲಾಷ್ ಮಾಡಿಸಿಕೊಂಡವರು!) ಮುಖ್ಯಪಾತ್ರದಲ್ಲಿ ಅಭಿನಯಿಸಿದ ಬಯೋಪಿಕ್ ಕೂಡಾ ಬಂದಿದೆ. ಆದ್ದರಿಂದ ಇಂತಹ ಹೊಸ ಸಂಪ್ರದಾಯದ ಚಲನಚಿತ್ರಗಳನ್ನು ಕಲ್ಪನೆಯ ಕೂಸುಗಳಾಗಿ ಕಾಣಬೇಕೇ ಹೊರತು ಅವು ಪೂರ್ಣ ನಿಜ ಹೇಳುತ್ತವೆಂದಲ್ಲ. ವಿಶ್ವಕ್ರಿಕೆಟಿನಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮರೆಯಲಾಗದ ಹೆಸರು. 800 ವಿಕೆಟುಗಳ ಸರದಾರ. ಸದ್ಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದಿನ ಬೌಲಿಂಗ್ ತರಬೇತುದಾರ. ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ನಾಯಕನಾಗಿ ಮುರಳೀಧರನ್ ಕುರಿತಂತೆ ಸಿನೆಮಾವೊಂದು ತಯಾರಾಗುವುದರಲ್ಲಿತ್ತು. ತಕ್ಷಣ ಲೋಕದೆಲ್ಲೆಡೆಯ ತಮಿಳರ ಪೈಕಿ ಕೆಲವು ಮತಭ್ರಾಂತರು ಎಚ್ಚತ್ತುಕೊಂಡರು. (ಮುರಳೀಧರನ್ ಭಾರತದಲ್ಲಿ ಕ್ರಿಕೆಟ್ ಆಡುವಾಗ ಈ ಮಂದಿ ನಿದ್ರೆಗುಳಿಗೆ ಸೇವಿಸಿದಂತೆ ಮಲಗಿದ್ದರು. ಕಳೆದ ಕೆಲವು ವರ್ಷಗಳಿಂದ ಆತ ಐಪಿಎಲ್‌ನಲ್ಲಿ ತರಬೇತಿ ನೀಡುವಾಗಲೂ ಅವರು ನಿದ್ರಿಸಿಯೇ ಇದ್ದರು.) ಶ್ರೀಲಂಕಾದಲ್ಲಿ ತಮಿಳರ ಹತ್ಯೆ ನಡೆಯುತ್ತಿದ್ದಾಗ ಈತ ತನ್ನ ದೇಶವನ್ನು ಪ್ರತಿನಿಧಿಸಿ ಕ್ರಿಕೆಟ್ ಆಡಿದನೆಂಬ ಆರೋಪದಲ್ಲಿ ಆತನ ಕುರಿತ ಸಿನೆಮಾದಲ್ಲಿ ವಿಜಯ್ ಸೇತುಪತಿ ಅಭಿನಯಿಸಬಾರದೆಂದು ಪ್ರತಿಭಟಿಸಿದರು. ಇಂತಹ ಪ್ರತಿಭಟನೆಗೆ ಯೋಚಿಸಬಲ್ಲ ತಮಿಳು ಸಿನೆಮಾ ನಿರ್ಮಾಪಕ-ನಿರ್ದೇಶಕ ಭಾರತೀರಾಜಾ ಸೇರಿದಂತೆ ಕೆಲವರು ಬೆಂಬಲ ನೀಡಿದ್ದು ಶೋಚನೀಯ. ಇದೀಗ ಮುರಳೀಧರನ್ ಈ ವಿವಾದಗಳಿಗೆ ಕೊನೆ ಹಾಡುವುದಕ್ಕಾಗಿ ವಿಜಯ್ ಸೇತುಪತಿಗೆ ಈ ಸಿನೆಮಾದಲ್ಲಿ ಅಭಿನಯಿಸದಂತೆ ಮನವಿ ಮಾಡಿದ್ದು ಆತ ತನ್ನ ಪಾತ್ರದಿಂದ ಹಿಂದೆ ಸರಿದಿದ್ದಾರೆ.

ಇಂತಹ ನೂರಾರು ಪ್ರಕರಣಗಳು ಈ ದೇಶದಲ್ಲಿ ಅನುದಿನ ನಡೆಯುತ್ತಿವೆ. ಅಸಂಖ್ಯ ಮಂದಿ ಹಸಿವಿನಿಂದ ಮತ್ತು ಕೊರೋನದಿಂದ ಸಾಯುತ್ತಿದ್ದರೆ, ಕೆಲವೇ ಮೂಲಭೂತವಾದಿಗಳು ಭಗ್ನಸಂತೋಷಿಗಳಾಗುತ್ತಿದ್ದಾರೆ. ಒಂದು ಕೈಯಲ್ಲಿ ಸೀಮೆ ಎಣ್ಣೆ, ಪೆಟ್ರೋಲ್ ಮತ್ತಿತರ ರಾಷ್ಟ್ರೀಯ ಉರಿಉತ್ಪನ್ನಗಳನ್ನೂ, ಇನ್ನೊಂದು ಕೈಯಲ್ಲಿ ಬೆಂಕಿಪೊಟ್ಟಣದಂತಹ ಗುಡಿಕೈಗಾರಿಕಾ ಸರಕುಗಳನ್ನೂ ಹಿಡಿದು ಫೋಟೊ ತೆಗೆಸಿಕೊಳ್ಳುವ ದೇವದೇವತೆಗಳನ್ನು ನೀವು ದೇಶದೆಲ್ಲೆಡೆ ಕಾಣಬಹುದು. ಬ್ರಾಹ್ಮಣರನ್ನು ಟೀಕಿಸಿದರೆಂಬ ಕಾರಣಕ್ಕೆ ದಲಿತ ವಕೀಲರೊಬ್ಬರನ್ನು ಕೊಂದ ಘಟನೆ ಗುಜರಾತಿನಲ್ಲೇ ನಡೆದಿದೆ. ಇಂತಹವರಿಗೆ ಮಂಗಲ್‌ಪಾಂಡೆಯಿಂದ ನಾಥೂರಾಮ್ ಗೋಡ್ಸೆಯವರೆಗೆ ಬ್ರಾಹ್ಮಣ ಹೋರಾಟಗಾರರು ಆದರ್ಶವಂತೆ! ಉರಿಸುವುದು ಸುಲಭ ಮತ್ತು ಆರಿಸುವುದು ಕಷ್ಟವೆಂಬ ದಿವ್ಯಮಂತ್ರವನ್ನು ಇವರು ಬಲ್ಲರು. ಬೀಟಿನ ಪೊಲೀಸರಂತೆ ಇಂತಹ ಮಂದಿ ಅಲೆಯುತ್ತಿರುತ್ತಾರೆ. ಬಲಿಪಶುಗಳನ್ನು ಅರಸುತ್ತಾರೆ. ಅದು ವೀಡಿಯೊ ಜಾಹೀರಾತಿರಬಹುದು, ಸಿನೆಮಾ ನಟನೆಯಿರಬಹುದು, ಅಂತೂ ತಮ್ಮ ದುರ್ಬುದ್ಧಿಗೆ ವೇದಿಕೆಯಾದರೆ ಸಾಕು. ಕಾನೂನು ಕೈಗೆಟಕುವಂತಿರಬೇಕು ಎಂಬುದನ್ನು ಇಂತಹ ಮಂದಿ ಕಾನೂನನ್ನು ಯಾರು ಬೇಕಾದರೂ ಕೈಗೆತ್ತಿಕೊಳ್ಳಬಹುದು ಎಂದು ಅರ್ಥವಿಸಿದ್ದಾರೆ. ಈ ದೇಶದಲ್ಲಿ ಕಾನೂನನ್ನು ಯಾರು ಬೇಕಾದರೂ ಕೈಗೆತ್ತಿಕೊಳ್ಳುವಂತಿಲ್ಲ. ಕಂಪೆನಿಗಳು ನಡೆಸುವ ಸ್ಪರ್ಧೆಯಲ್ಲಿ (ಅದರ ರಹಸ್ಯಪಾಲನೆಗಾಗಿ) ಕಂಪೆನಿಯ ಉದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಭಾಗವಹಿಸಬಾರದೆಂಬ ನಿಯಮವಿರುತ್ತದೆ. ಆದರೆ ಇಲ್ಲಿ ತದ್ವಿರುದ್ಧವಾಗಿ ಆಳುವವರ ಪರ ನಿರುದ್ಯೋಗಿಗಳು ಮತ್ತು ಅವರ ವಿಶ್ವಕುಟುಂಬಸ್ಥರು ಕಾನೂನನ್ನು ಕೈಗೆತ್ತಿಕೊಳ್ಳಬಹುದು. ಉತ್ತರ ಪ್ರದೇಶದಲ್ಲಿ ನಡೆಯುವ ಕಾನೂನು ಪರಿಪಾಲನೆಯೆಂಬ ನಾಟಕದಲ್ಲಿ ಭಾಗವಹಿಸುವವರು ಯಾರೆಂಬುದು ಗುಟ್ಟೇನಲ್ಲ. ಶಾಸಕನೊಬ್ಬನು ಪೊಲೀಸ್ ಠಾಣೆಗೆ ನುಗ್ಗಿ ತನ್ನ ಬೆಂಬಲಿಗ ಆರೋಪಿಯನ್ನು ತೋಳ್ಬಲದಿಂದ ಬಿಡಿಸಿಕೊಂಡು ಹೋಗುತ್ತಾನೆ. ಪೊಲೀಸರೇನೂ ಸುಮ್ಮನೆ ಕುಳಿತಿಲ್ಲ. ಅವರು ಎರಡು ಕೈಗಳಲ್ಲಿ ಆ ಶಾಸಕನಿಗೆ ಸೆಲ್ಯೂಟು ಹೊಡೆದಿದ್ದಾರೆ. ದಿಲ್ಲಿಯ ಗಲಭೆಗಳಿಗೆ ನೇರ ಕುಮ್ಮಕ್ಕು ನೀಡಿದ ರಾಜಕಾರಣಿಯೊಬ್ಬ ನ್ಯಾಯಾಂಗಕ್ಕೆ ನೇರ ಸವಾಲು ಹಾಕಿ ನಿಂತಿದ್ದಾನೆ. ನೀವು ಮಾಡಲಾಗದ್ದನ್ನು ನಾವು ಮಾಡುತ್ತೇವೆ ಎಂದು ಪೊಲೀಸರಿಗೂ ಆಶ್ವಾಸನೆ ನೀಡಿದ್ದಾನೆ. ಇದಕ್ಕೆ ಪ್ರತಿಯಾಗಿ ಅಲ್ಲಿನ ಪೊಲೀಸರೂ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭಯದಿಂದ ಎಂಬಂತೆ ಆಳುವವರ ಎಲ್ಲ ಅಕ್ರಮಗಳಲ್ಲೂ ಪಾಲುದಾರರಾಗುತ್ತಿದ್ದಾರೆ. ಒಂದು ಕಾಲಕ್ಕೆ ಭಯಾನಕ ಹಿಂಸೆ ನಡೆಯುತ್ತಿದ್ದ ದೇಶವಿದು. ಆಗ ಮೊಘಲರಾಗಲೀ ಬ್ರಿಟಿಷರಾಗಲೀ ಈ ದೇಶವನ್ನು ಆಳುತ್ತಿರಲಿಲ್ಲ. ಅದನ್ನೇ ಪುರಾಣವೆಂದರು; ದಿಗ್ವಿಜಯವೆಂದರು. ಶತ್ರುಸಂಹಾರವೆಂದರು. ಕಮಲ್ ಹಾಸನ್ ನಟಿಸಿದ ‘ದಶಾವತಾರಂ’ ಎಂಬ ತಮಿಳು ಸಿನೆಮಾ ನೋಡಿದವರಿಗೆ ಆ ಕಾಲದಲ್ಲೇ ಶೈವ-ವೈಷ್ಣವರ ನಡುವೆ ನಡೆದಿರಬಹುದಾದ ಹಿಂಸಾತ್ಮಕ ಹೋರಾಟ ಹೇಗಿತ್ತೆಂದು ಊಹಿಸಬಹುದು. ರಾಮಾನುಜಾಚಾರ್ಯರು ತಮಿಳುನಾಡಿನಿಂದ ಕರ್ನಾಟಕದ ಮೇಲುಕೋಟೆಗೆ ಓಡಿಬಂದದ್ದು ಯಾವ ಅನ್ಯಧರ್ಮೀಯ ಕಾರಣಕ್ಕೂ ಅಲ್ಲ. ಅದಕ್ಕೂ ಮೊದಲೇ ಶಂಕರಾಚಾರ್ಯರ ಕಾಲದಲ್ಲಿ ವೈದಿಕರಿಗೂ ಬೌದ್ಧರಿಗೂ ನಡೆಯಿತೆನ್ನಲಾದ ಕಲಹವೂ ಅಹಿಂಸಾತ್ಮಕವಾದದ್ದೇನೂ ಅಲ್ಲ. ಕಳಿಂಗದಲ್ಲಿ ಅಶೋಕನಿಂದ ಹತರಾದವರೂ ಅನ್ಯಧರ್ಮೀಯರೇನೂ ಆಗಿರಲಿಲ್ಲ. ಆದರೂ ಅವೆಲ್ಲವೂ ರಾಜಸತ್ತೆಯ ಪರಿಣಾಮವಾದ್ದರಿಂದ ಪ್ರಜಾತಂತ್ರ ಬಂದಮೇಲಾದರೂ ಇವೆಲ್ಲವನ್ನೂ ಮೀರಿ ಸಾಮಾಜಿಕ ಸಹಿಷ್ಣುತೆ ಇಲ್ಲಿಯ ಸ್ಥಾಯೀಭಾವವಾಗಬಹುದೆಂಬ ಆಶಯವನ್ನು ಜನರಿಟ್ಟುಕೊಂಡೇ ಬದುಕಿದರು. ಗಾಂಧಿಯಂತಹವರು ಹೇಳಿಕೊಟ್ಟ ಬದುಕನ್ನು ಮುಂದುವರಿಸಬೇಕೆಂದು ಇಂದಿನ ತಲೆಮಾರಿನ ವಿವೇಕಿಗಳು ಆಸೆಪಡುತ್ತಾರಾದರೂ ಅದನ್ನು ಮೀರಿ ದ್ವೇಷವನ್ನೇ ಬದುಕಿನ ಸ್ಥಾಯೀಭಾವವಾಗಿ ಕಾಣುವ ಜನರು ಹೆಚ್ಚುತ್ತಿದ್ದಾರೆ.

ಕೊರೋನದ ಹಾವಳಿಯ ಒಂದು ಹಂತದಲ್ಲಿ ಸಮೂಹ ಸೋಂಕು (Community Transmission) ಎಂಬ ಅಪಾಯದ ಸ್ಥಿತಿಯಿದೆ. ಸೋಂಕು ಎಲ್ಲಿಂದ ಉದಿಸಿತೆಂದು ಗೊತ್ತಾಗದ ಸ್ಥಿತಿ. ಈ ದೇಶದಲ್ಲಿ ದ್ವೇಷವೂ ಇದೇ ಸ್ಥಿತಿಯಲ್ಲಿದೆ. ಇದರ ಬೇರು ಬಹಳ ಆಳಕ್ಕಿಳಿಯದಂತೆ ಮತ್ತು ಅದನ್ನು ನಾಶಮಾಡಬೇಕಾದ ಅಹಿಂಸಾ ಚಳವಳಿಯನ್ನು ಶೋಧಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)