varthabharthi


ಸಂಪಾದಕೀಯ

ಕ್ಷಯ ಭಾರತದ ಪಾಲಿಗೆ ಕೋವಿಡ್‌ಗಿಂತಲೂ ಭೀಕರ

ವಾರ್ತಾ ಭಾರತಿ : 22 Oct, 2020

ಕೊರೋನ ಭಾರತದ ಅಳಿದುಳಿದ ಆರ್ಥಿಕತೆಯನ್ನು, ಆರೋಗ್ಯವನ್ನು ನಾಶ ಮಾಡಿದೆ. ಇಂದು ರಾಜಕಾರಣಿಗಳು ಹಗಲಿರುಳು ಕೊರೋನ ಜಾಗೃತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಕೊರೋನದ ಮರೆಯಲ್ಲಿ ಇನ್ನೊಂದು ಭೀಕರ ಕಾಯಿಲೆ ಭಾರತವನ್ನು ಆಹುತಿ ತೆಗೆದುಕೊಳ್ಳಲು ಹೊಂಚಿ ಹಾಕಿ ಕೂತಿದೆ. ಭಾರತದಂತಹ ದೇಶದಲ್ಲಿ ಮುಂದಿನ ದಿನಗಳಲ್ಲಿ ಕ್ಷಯ ರೋಗ ತೀವ್ರ ಪ್ರಮಾಣದಲ್ಲಿ ಹೆಚ್ಚಲಿದೆ ಎನ್ನುವ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ 2020ರ ಸಾಲಿನ ವಿಶ್ವ ಕ್ಷಯ (ಟ್ಯೂಬರಕ್ಯುಲೋಸಿಸ್) ವರದಿಯನ್ನು ಪ್ರಕಟಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 2019ರಲ್ಲಿ ಕ್ಷಯರೋಗ ಪೀಡಿತರಾದವರಲ್ಲಿ ಅತಿ ಹೆಚ್ಚು ಜನರು ದಕ್ಷಿಣ ಏಶ್ಯ (25 ಶೇ.) ಹಾಗೂ ಪಶ್ಚಿಮ ಪೆಸಿಫಿಕ್ ( ಶೇ.18) ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಪೂರ್ವ ಮೆಡಿಟರೇನಿಯನ್(8.2 ಶೇ.), ಅಮೆರಿಕ (2.9 ಶೇ.) ಹಾಗೂ ಯುರೋಪ್ (2.5 ಶೇ.) ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕ್ಷಯ ರೋಗ ಪ್ರಕರಣಗಳು ಪತ್ತೆಯಾಗಿವೆ. ಆದರೂ ಜಗತ್ತಿನ ಒಟ್ಟು ಕ್ಷಯರೋಗದ ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಭಾರತ ಸೇರಿದಂತೆ ಎಂಟು ದೇಶಗಳಲ್ಲಿ ವರದಿಯಾಗಿವೆ. ಭಾರತ (26 ಶೇ.), ಇಂಡೊನೇಶ್ಯ ( 8.5 ಶೇ.), ಚೀನಾ (8.4 ಶೇ.) ಫಿಲಿಪ್ಪೀನ್ಸ್ (6.0 ಶೇ.),ಪಾಕಿಸ್ತಾನ (5.7 ಶೇ.), ನೈಜೀರಿಯ (4.4 ಶೇ.), ಬಾಂಗ್ಲಾದೇಶ (3.6 ಶೇ.) ಹಾಗೂ ದಕ್ಷಿಣ ಆಫ್ರಿಕಾ ( 3.6 ಶೇ.) ಅತ್ಯಧಿಕ ಕ್ಷಯ ಪ್ರಕರಣಗಳು ಪತ್ತೆಯಾದ ದೇಶಗಳಾಗಿವೆ.ಇದೀಗ ಕೊರೋನ ವೈರಸ್ ಸೋಂಕಿನ ಹಾವಳಿಯು ಕ್ಷಯರೋಗದ ಪತ್ತೆ ಹಾಗೂ ಚಿಕಿತ್ಸೆಯ ಮೇಲೆ ಗಂಭೀರವಾದ ಪರಿಣಾಮವನ್ನುಂಟು ಮಾಡಿದೆ. ಜಗತ್ತಿನ ಗಮನ ಕೊರೋನ ಹಾವಳಿಯ ನಿಯಂತ್ರಣದಲ್ಲಿ ಕೇಂದ್ರೀಕೃತವಾಗಿರುವುದರಿಂದ ಕ್ಷಯ ರೋಗದ ತಡೆ ಅಥವಾ ಚಿಕಿತ್ಸೆಗಾಗಿನ ನಿಗದಿತ ಗುರಿಗಳನ್ನು ತಲುಪಲು ಸಾಧ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ.

ಭಾರತದಲ್ಲಿ ಕ್ಷಯವನ್ನು ಎದುರಿಸುವಲ್ಲಿ ಅಲ್ಪಪ್ರಮಾಣದಲ್ಲಿ ಯಶಸ್ವಿಯಾಗಿರುವುದು ಕೇರಳ ರಾಜ್ಯ. ಎಲ್ಲವೂ ಸರಿಯಾಗಿದ್ದರೆ 2020ರಲ್ಲಿ ಈ ರಾಜ್ಯದಲ್ಲಿ ಕ್ಷಯ ಮೂಲೋತ್ಪಾವನೆಯಾಗಬೇಕಾಗಿತ್ತು. ಪ್ರಸಕ್ತ ಕೇರಳದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ಕೇವಲ 67 ಟಿಬಿ ಪ್ರಕರಣಗಳು ಪತ್ತೆಯಾಗಿವೆ. ಆದರೆ ಅಖಿಲ ಭಾರತ ಮಟ್ಟದಲ್ಲಿ ಈ ಪ್ರಮಾಣವು ಪ್ರತಿ 1 ಲಕ್ಷ ಜನಸಂಖ್ಯೆಗೆ 138 ಆಗಿದೆ. 3.80 ಕೋಟಿ ಜನಸಂಖ್ಯೆಯ ರಾಜ್ಯವಾದ ಕೇರಳದಲ್ಲಿ 2018ನೇ ಇಸವಿಯಲ್ಲಿ ಕೇವಲ 352 ಕ್ಷಯದ ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ಕೇರಳ ಟಿಬಿ ಮುಕ್ತ ರಾಜ್ಯವಾಗುವ ಸೂಚನೆ ನೀಡಿತ್ತು. ಆದರೆ ಕೊರೋನ ಈ ಸಾಧನೆಗೆ ಇದೀಗ ಅಡ್ಡಿಯಾಗಿ ನಿಂತಿದೆ. 2020ರ ಫೆಬ್ರವರಿಯಲ್ಲಿ ಪ್ರಕಟವಾದ ವರದಿಗಳ ಪ್ರಕಾರ ಭಾರತದ ಶೇ.65ರಷ್ಟು ಟಿಬಿ ಪ್ರಕರಣಗಳು ಅಸ್ಸಾಂ, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ,ತಮಿಳುನಾಡು, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಹೀಗೆ ಈ ಒಂಭತ್ತು ರಾಜ್ಯಗಳಲ್ಲಿ ದಾಖಲಾಗಿವೆ. 2025ರೊಳಗೆ ಈ ರಾಜ್ಯಗಳಲ್ಲಿ ಕ್ಷಯ ರೋಗವನ್ನು ಮೂಲೋತ್ಪಾಟನೆಗೊಳಿಸಲು ಕೇಂದ್ರ ಸರಕಾರವು ನಿರ್ಧರಿಸಿದೆಯಾದರೂ, ಸೂಕ್ತ ಸಂಪನ್ಮೂಲದ ಕೊರತೆ ಈ ಗುರಿಯನ್ನು ವಿಫಲಗೊಳಿಸುವ ಸಾಧ್ಯತೆಗಳೇ ಅಧಿಕ. 2019 ಹಾಗೂ 2020ರ ಸಾಲಿನ ವಾರ್ಷಿಕ ಕ್ಷಯರೋಗದ ವರದಿಗಳ ಪ್ರಕಾರ 2018ರಲ್ಲಿ ಕರ್ನಾಟಕವು ಒಟ್ಟು 83,094 ಟಿಬಿ ಪ್ರಕರಣಗಳನ್ನು ದಾಖಲಿಸಿದ್ದು, 2019ರಲ್ಲಿ ಅದು 91,703ಕ್ಕೇರಿದೆ. 2019ರಲ್ಲಿ ಒಟ್ಟು ವಾರ್ಷಿಕ ಟಿಬಿ ದಾಖಲಾತಿಯ ಪ್ರಮಾಣವು ಪ್ರತಿಲಕ್ಷ ಜನರಿಗೆ 135 ಪ್ರಕರಣಗಳಾಗಿವೆ. ಟಿಬಿ-ಎಚ್‌ಐವಿ ಸಹಸೋಂಕಿನ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ 2018ರಲ್ಲಿ ಕರ್ನಾಟಕದಲ್ಲಿ ಅತ್ಯಧಿಕ ಟಿಬಿ ಸಾವಿನ ಪ್ರಕರಣ ಶೇ.6.2 ಪ್ರಮಾಣದಲ್ಲಿ ದಾಖಲಾಗಿದ್ದು, ಇದು ರಾಷ್ಟ್ರಮಟ್ಟದ ಟಿಬಿ ಸಾವಿನ ಪ್ರಮಾಣ(ಶೇ.4)ಕ್ಕಿಂತ ಅಧಿಕವಾಗಿದೆ.

  ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿರುವ ಇತರ ರಾಜ್ಯಗಳಲ್ಲಿನ ಕ್ಷಯಪೀಡಿತ ರೋಗಿಗಳ ಸಂಖ್ಯೆಯನ್ನು ಗಮನಿಸಿದರೆ ಕ್ಷಯ ರೋಗದ ಸಮಸ್ಯೆಯು ಎಷ್ಟೊಂದು ತೀವ್ರವಾಗಿದೆಯೆಂಬುದನ್ನು ಮನದಟ್ಟು ಮಾಡಿಕೊಡುತ್ತದೆ. 2019ರಲ್ಲಿ ಅಸ್ಸಾಮಿನಲ್ಲಿ 48,669, ಬಿಹಾರದಲ್ಲಿ 1,22,671 ಪ್ರಕರಣಗಳು ಹಾಗೂ ಮಧ್ಯಪ್ರದೇಶದಲ್ಲಿ 1,87,407 ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಮಹಾರಾಷ್ಟ್ರದಲ್ಲಿ 2,27,348, ರಾಜಸ್ಥಾನ 1,75,218, ಉತ್ತರಪ್ರದೇಶ 4,86,385 ಹಾಗೂ ಪಶ್ಚಿಮಬಂಗಾಳದಲ್ಲಿ 1,10,668 ಕ್ಷಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಜಾರ್ಖಂಡ್, ಛತ್ತೀಸ್‌ಗಡ ಸೇರಿದಂತೆ ಆರೋಗ್ಯಪಾಲನಾ ಕ್ಷೇತ್ರದಲ್ಲಿ ಹಿಂದುಳಿದಿರುವ ರಾಜ್ಯಗಳಲ್ಲಿಯೂ ಗಣನೀಯ ಸಂಖ್ಯೆಯ ಕ್ಷಯ ರೋಗದ ಪ್ರಕರಣಗಳು ವರದಿಯಾಗದೆ ಇರುವ ಸಾಧ್ಯತೆಗಳೂ ಇವೆ.

ಕೊರೋನ ಅತಿ ಶೀಘ್ರವಾಗಿ ಹರಡುವ ಸೋಂಕು. ಆದರೆ ಕ್ಷಯ ಮಾರಣಾಂತಿಕ ಸೋಂಕು. ಭಾರತದಂತಹ ಬಡ ದೇಶಗಳು ಕೊರೋನಕ್ಕಿಂತಲೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದುದು ಕ್ಷಯದಂತಹ ಮಾರಣಾಂತಿಕ ರೋಗಗಳ ಕುರಿತಂತೆ. ಆದುದರಿಂದ ಕೊರೋನ ಸೋಂಕಿನ ವಿರುದ್ಧದ ಹೋರಾಟದಿಂದಷ್ಟೇ ದೇಶದ ಆರೋಗ್ಯದ ಆತಂಕ ಮುಗಿಯುವುದಿಲ್ಲ. ನೋಟುನಿಷೇಧ, ಲಾಕ್‌ಡೌನ್ ಇತ್ಯಾದಿಗಳಿಂದ ದೇಶದ ಆರ್ಥಿಕತೆ ಸರ್ವನಾಶವಾಗಿದೆ. ನಿರುದ್ಯೋಗ ಹಲವು ಪಟ್ಟ್ಟು ಹೆಚ್ಚಾಗಿದೆ. ದೇಶದಲ್ಲಿ ಅಪೌಷ್ಟಿಕತೆ, ಹಸಿವು ತಾಂಡವವಾಡುತ್ತಿದೆ. ಬರೇ ಹಸಿವಿಗೇ ಜನರು ಪ್ರಾಣ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಸಿವಿಗೂ ಕ್ಷಯಕ್ಕೂ ನೇರ ಸಂಬಂಧವಿದೆ. ಅಪೌಷ್ಟಿಕತೆಯು ಕ್ಷಯ ರೋಗದ ತಾಯಿ. ಸರಕಾರ ಕ್ಷಯದಂತಹ ರೋಗಗಳಿಗೆ ವ್ಯಯ ಮಾಡುತ್ತಿದ್ದ ಹಣವನ್ನು ಕೊರೋನ ವಿರುದ್ಧದ ಹೋರಾಟಗಳಿಗೆ ಬಳಸುತ್ತಿದೆ. ಈ ಕಾರಣದಿಂದಾಗಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ, ಔಷಧೋಪಚಾರ ಸೂಕ್ತ ರೀತಿಯಲ್ಲಿ ದೊರಕುತ್ತಿಲ್ಲ ಎನ್ನುವ ಆರೋಪಗಳಿವೆ. ಇದರಿಂದಾಗಿ ಗುಣಮುಖ ಹಂತದಲ್ಲಿರುವ ರೋಗಿಗಳಲ್ಲಿ ರೋಗ ಉಲ್ಬಣಿಸುವ ಸಾಧ್ಯತೆಗಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕಾರ್ಮಿಕರು, ರೈತರ ಬದುಕಿನಲ್ಲಿ ಸುಧಾರಣೆಯಾಗದೇ ಕ್ಷಯ ರೋಗದ ಹಿಡಿತದಿಂದ ಪಾರಾಗುವುದು ಸುಲಭವಿಲ್ಲ. ದೇಶದ ಹಸಿವನ್ನು ನಿವಾರಿಸುವ ಮೂಲಕವಷ್ಟೇ ಕ್ಷಯ ರೋಗವನ್ನು ಪೂರ್ಣರೀತಿಯಲ್ಲಿ ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ, ಸರಕಾರ ಕೊರೋನದ ಮರೆಯಲ್ಲಿ ದೇಶವನ್ನು ಬಲಿ ಹಾಕಲು ಕಾಯುತ್ತಿರುವ ಕ್ಷಯ ರೋಗವನ್ನು ಎದುರಿಸಲು ಈಗಲೇ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ. ಕೊರೋನ ಗದ್ದಲದಲ್ಲಿ ಕ್ಷಯವನ್ನು ಮರೆತರೆ ದೇಶ ಅದಕ್ಕೆ ದುಬಾರಿ ಬೆಲೆಯನ್ನು ತೆರಬೇಕಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)